ಪಂಜಾಬಿನಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷಕ್ಕಿಂತಲೂ ಪ್ರಭಾವಿ, ಜನಾನುರಾಗಿ, ಕಳೆದ ಬಾರಿ ಅವರಿಂದಾಗಿಯೇ ಪಕ್ಷ ಅಧಿಕಾರಕ್ಕೆ ಬಂತು ಎಂದು ಹೇಳಲಾಗುತ್ತಿತ್ತು. ಆದರೀಗ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷವನ್ನೂ ತ್ಯಜಿಸಿದ್ದಾರೆ. ಇನ್ನೊಂದೆಡೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರನ್ನು ಮಾಜಿ ಕ್ರಿಕೆಟಿಗ, ಸೆಲೆಬ್ರಿಟಿ, ಜಾಟ್ ಸಿಖ್ ಸಮುದಾಯದ ಪ್ರಭಾವಿ ನಾಯಕ ಎಂದು ಹೇಳಲಾಗುತ್ತಿತ್ತು. ನವಜೋತ್ ಸಿಂಗ್ ಸಿಧುವನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡದಿದ್ದರೆ ಅವರು ಕಾಂಗ್ರೆಸ್ ಪಕ್ಷಕ್ಕೆ ಸಮಸ್ಯೆ ತಂದೊಡ್ಡುತ್ತಾರೆ ಎಂದು ಕೂಡ ಹೇಳಲಾಗುತ್ತಿತ್ತು. ಇದೆಲ್ಲದರ ನಡುವೆ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಅವರನ್ನೇ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
ಹಿಂದೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ನವಜೋತ್ ಸಿಂಗ್ ಸಿಧು, ಸುನಿಲ್ ಜಾಖಡ್, ಅಂಬಿಕಾ ಸೋನಿ ಮತ್ತಿತರ ಹೆಸರುಗಳು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬಂದಿದ್ದವು. ಆದರೆ, ಕಡೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಯಾರೂ ಊಹೆ ಮಾಡದ ಚರಣಜಿತ್ ಸಿಂಗ್ ಅವರ ಹೆಸರನ್ನು ಘೋಷಣೆ ಮಾಡಿದ್ದರು. ರಾಹುಲ್ ಗಾಂಧಿ ಅವರ ನಡೆಯನ್ನು ಆಗ ‘ಮಾಸ್ಟರ್ ಸ್ಟ್ರೋಕ್’ ಎಂದು ವ್ಯಾಖ್ಯಾನಿಸಲಾಗಿತ್ತು. ಆಗ ಅದು ಅಚ್ಚರಿಯಾಗಿತ್ತು. ಈಗ ಅದೇ ರಾಹುಲ್ ಗಾಂಧಿ ಅದೇ ಚರಣಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ ಮತ್ತೊಂದು ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ. ಆದರೆ ಇದು ನಿರೀಕ್ಷಿತವಾದುದು.
ಯಾವಾಗ ಪಂಜಾಬ್ ಕಾಂಗ್ರೆಸಿನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಆಗಲು ಚರಣಜಿತ್ ಸಿಂಗ್ ಚನ್ನಿ ಮತ್ತು ನವಜೋತ್ ಸಿಂಗ್ ಸಿಧು ನಡುವೆ ಶೀತಲ ಸಮರ ಶುರುವಾಯಿತೋ ಅಂದಿನಿಂದಲೇ ಕಾಂಗ್ರೆಸ್ ಹೈಕಮಾಂಡ್ ಬಹಳ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಮೊದಲಿಗೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನವಜೋತ್ ಸಿಂಗ್ ಸಿಧು ಅವರನ್ನು ಬಹಳ ಜಾಣ್ಮೆಯಿಂದ ಮನವೊಲಿಸಲಾಗಿತ್ತು. ಅದಾದ ಮೇಲೆ ಈಗ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸುವ ವಿಷಯದಲ್ಲಿ ಇನ್ನಷ್ಟು ಜಾಗರೂಕತೆ ವಹಿಸಲಾಗಿದೆ.
ಚನ್ನಿ ಮತ್ತು ಸಿಧು ಇಬ್ಬರನ್ನೂ ಶತಾಯ ಗತಾಯ ವಿಶ್ವಾಸಕ್ಕೆ ತೆಗೆದುಕೊಂಡೇ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡಬೇಕೆಂದು ನಿಶ್ಚಿಯಿಸಿದ ರಾಹುಲ್ ಗಾಂಧಿ ಮೊದಲಿಗೆ ಇಬ್ಬರ ಜೊತೆಯಲ್ಲೂ ಮಾತನಾಡಿ ವಿಶ್ವಾಸ ಗಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಜನವರಿ 27ರಂದು ಜಲಂಧರ್ ನಲ್ಲಿ ವರ್ಚ್ಯುಯಲ್ ರ್‍ಯಾಲಿ ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ ಅವರು ‘ಪಂಜಾಬ್ ಸಿಎಂ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಕಾರ್ಯಕರ್ತರು ನಿರ್ಧರಿಸಲಿದ್ದಾರೆ’ ಎಂದು ಹೇಳಿದ್ದರು. ಅಲ್ಲದೆ ‘ಚರಣಜಿತ್ ಸಿಂಗ್ ಚನ್ನಿ ಹಾಗೂ ನವಜೋತ್ ಸಿಂಗ್ ಸಿಧು ಇಬ್ಬರಲ್ಲಿ ಯಾರದೇ ಹೆಸರನ್ನು ಪ್ರಕಟಿಸಿದರೂ ಇನ್ನೊಬ್ಬರು ಬೆಂಬಲಿಸುವ ಭರವಸೆ ನೀಡಿದ್ದಾರೆ’ ಎಂದು ಹೇಳಿದ್ದರು. ಇದರಿಂದ ರಾಹುಲ್ ಗಾಂಧಿ ಇಬ್ಬರ ಜೊತೆ ಸಮಾಲೋಚನೆ ನಡೆಸಿದ್ದಾರೆಂಬುದು ಸ್ಪಷ್ಟವಾಗುತ್ತದೆ.

ಜೊತೆಗೆ ಚರಣಜಿತ್ ಸಿಂಗ್ ಚನ್ನಿ ಅಥವಾ ನವಜೋತ್ ಸಿಂಗ್ ಸಿಧು ಪೈಕಿ ಒಬ್ಬರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಕಾರ್ಯಕರ್ತರ ಹೆಗಲಿಗೇರಿಸಿದ್ದು ಕೂಡ ಜಾಣ್ಮೆಯ ನಡೆ. ಈಗ ಕಾರ್ಯಕರ್ತರ ಅಭಿಪ್ರಾಯ ಆಧರಿಸಿ ಚರಣಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೇವೆಂದು ನವಜೋತ್ ಸಿಂಗ್ ಸಿಧು ಅವರ ಬಾಯಿ ಮುಚ್ಚಿಸುವುದು ಮಾತ್ರವಲ್ಲ. ಕಾರ್ಯಕರ್ತರ ದೃಷ್ಟಿಯಲ್ಲಿ ಚರಣಜಿತ್ ಸಿಂಗ್ ಚನ್ನಿ ಬಹಳ ಪ್ರಸಿದ್ಧಿ, ಮುಖ್ಯಮಂತ್ರಿಯಾಗಿ ಅವರ ಕಾರ್ಯವೈಖರಿ ಬಗ್ಗೆ ತೃಪ್ತಿ ಇದೆ ಎಂಬ ಸಂದೇಶವನ್ನು ಕೊಟ್ಡಂತಾಗಿದೆ.
ಆಮ್ ಆದ್ಮಿ ಪಕ್ಷ ಇಷ್ಟು ದಿನ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸುವಂತೆ ಕಾಂಗ್ರೆಸಿಗೆ ಸವಾಲು ಹಾಕುತ್ತಿತ್ತು. ಜೊತೆಗೆ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಿದ ಮೇಲೆ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಒಡಕು ಮೂಡಲಿದೆ. ಅದರ ಲಾಭ ನಮಗೆ ಆಗಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಲೋಧಿಯಾನದಲ್ಲಿ ರಾಹುಲ್ ಗಾಂಧಿ ಅವರು ಭಾನುವಾರ ಚರಣಜಿತ್ ಸಿಂಗ್ ಚನ್ನಿ ಅವರೇ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ಕೂಡಲೇ ನವಜೋತ್ ಸಿಂಗ್ ಸಿಧು ಸ್ವಾಗತಿಸಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ದ ಎಂದಿದ್ದಾರೆ. ಚರಣಜಿತ್ ಸಿಂಗ್ ಚನ್ನಿ ಅವರನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಇಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಒಟ್ಟಾರೆ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಎಡವಿ ಗೆಲುವನ್ನು ಕಳೆದುಕೊಳ್ಳುತ್ತದೆ ಎಂದು ಕಾಂಗ್ರೆಸ್ ಬಗ್ಗೆ ಭಾವಿಸಿದ್ದವರಿಗೆ ಭಾರೀ ನಿರಾಸೆ ಉಂಟಾಗಿದೆ. ರಾಹುಲ್ ಗಾಂಧಿ ಪಂಜಾಬ್ ವಿಷಯದಲ್ಲಿ ಪರಿಪಕ್ವ ನಿರ್ಧಾರ ಕೈಗೊಂಡಿದ್ದಾರೆ.
ಪಂಜಾಬಿನಲ್ಲಿ ಫೆಬ್ರವರಿ 20ಕ್ಕೆ ಎಲ್ಲಾ 117 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ ಆಗಲಿದೆ. ಮಾರ್ಚ್ 10ರಂದು ಉತ್ತರ ಪ್ರದೇಶ, ಉತ್ತರಖಂಡಾ, ಗೋವಾ ಮತ್ತು ಮಣಿಪುರದ ಮತ ಎಣಿಕೆ ದಿವಸವೇ ಅಂದರೆ ಮಾರ್ಚ್ 10ರಂದು ಪಂಜಾಬ್ ಫಲಿತಾಂಶ ಕೂಡ ಹೊರಬೀಳಲಿದೆ. ಆಗ ಚರಣಜಿತ್ ಸಿಂಗ್ ಚನ್ನಿ ಕಾರ್ಯವೈಖರಿ ಮತ್ತು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ಕಾಂಗ್ರೆಸ್ ನಡೆ ಎಷ್ಟು ಸೂಕ್ತವಾದುದು ಎಂದು ಗೊತ್ತಾಗುತ್ತದೆ.