ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ – ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ -2023ರ ಕಾರ್ಯಚಟುವಟಿಕೆಗೆ ನೀಡಿದ್ದ ಅನುಮತಿಯನ್ನು ದುರುಪಯೋಗಗೊಂಡಿರುವ ಬಗ್ಗೆ ಹಾಗೂ ಚಿಲುಮೆ ಸಂಸ್ಥೆ ಮತದಾರರ ದತ್ತಾಂಶವನ್ನು ಅನಧಿಕೃತವಾಗಿ ಕದ್ದಿರುವ ಬಗ್ಗೆ ಪ್ರತಿಧ್ವನಿ ಮತ್ತು TheNewsMinute ಜಂಟಿ ತನಿಖಾ ವರದಿ ಪ್ರಕಟಿಸಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿ ಬಿಜೆಪಿ ಸರ್ಕಾರಕ್ಕೆ ಚಾಟಿ ಬೀಸಿದೆ.
ಮತದಾರರ ಜಾಗೃತಿ ಹೆಸರಲ್ಲಿ ಮತದಾರರ ಡಾಟಾ ಕಳ್ಳತನಕ್ಕೆ ಇಳಿದ ಬಿಜೆಪಿ ಸರ್ಕಾರಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹೈಜಾಕ್ ಮಾಡಲು ಮುಂದಾಗಿದೆ ಎಂದು ಕಿಡಿಕಾರಿದೆ.
ಅನುಮತಿ ಪತ್ರದಲ್ಲಿ ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಇರಬಾರದು ಎಂದಿದೆ. ಆದರೆ ಸಂಸ್ಥೆಯ ಮುಖ್ಯಸ್ಥ ಬಿಜೆಪಿಯ ಸಚಿವರ ಆಪ್ತನಾಗಿರುವುದನ್ನು ಬಿಜೆಪಿ ಸರ್ಕಾರ ಮುಚ್ಚಿಟ್ಟಿದೆ ಎಂದು ಆರೋಪಿಸಿದೆ.
‘ಮತದಾರರ ಜಾಗೃತಿ ಕಾರ್ಯಕ್ರಮ’ವನ್ನು ಉಚಿತವಾಗಿ ಮಾಡುತ್ತೇವೆ ಎನ್ನುತ್ತದೆ ಚಿಲುಮೆ ಸಂಸ್ಥೆ. ಆ ಕಾರ್ಯಕ್ರಮಕ್ಕೆ ದಿನಕ್ಕೆ ₹1,500 ವೇತನ ನೀಡಿ ಬಿಜೆಪಿ ಕಾರ್ಯಕರ್ತರನ್ನೇ ಬೂತ್ ಲೆವೆಲ್ ಆಫೀಸರ್‌ಗಳೆಂದು ನೇಮಿಸುತ್ತದೆ ಉಚಿತ ಕೆಲಸ ಮಾಡುವವರು ದುಬಾರಿ ವೇತನ ನೀಡುತ್ತಾರೆಂದರೆ ಅವರ “ಲಾಭಾಂಶ” ಯಾವುದು ಬೊಮ್ಮಾಯಿ ಅವರೇ ಎಂದು ಪ್ರಶ್ನಿಸಿದ್ದಾರೆ.
ಭ್ರಷ್ಟಾಚಾರ ಹಾಗೂ ವೈಫಲ್ಯಗಳ ಸರಮಾಲೆ ಹೊದ್ದಿರುವ ಬಿಜೆಪಿ ಸರ್ಕಾರ ಈಗ ಅಕ್ರಮದ ಮೂಲಕ ಚುನಾವಣೆಗೆ ಸಜ್ಜಾಗುತ್ತಿದೆ. ಬೆಂಗಳೂರು ಉಸ್ತುವಾರಿ ಹೊಂದಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ನಿಮ್ಮ ಇಷಾರೆ ಇಲ್ಲದೆ ಮತದಾರರ ಮಾಹಿತಿ ಕಳ್ಳತನಕ್ಕೆ ಅವಕಾಶ ನೀಡಲು ಅಸಾಧ್ಯ. ಈ ಹಗರಣದಲ್ಲಿ ನೇರವಾಗಿ ಸಿಎಂ ಕೈವಾಡವಿರುವುದು ಸ್ಪಷ್ಟ ಎಂದು ಆರೋಪಿಸಿದೆ.