ಚಿಲುಮೆ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ – ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ -2023ರ ಕಾರ್ಯಚಟುವಟಿಕೆಗೆ ನೀಡಿದ್ದ ಅನುಮತಿಯನ್ನು ದುರುಪಯೋಗಗೊಂಡಿರುವ ಬಗ್ಗೆ ಹಾಗೂ ಚಿಲುಮೆ ಸಂಸ್ಥೆ ಮತದಾರರ ದತ್ತಾಂಶವನ್ನು ಅನಧಿಕೃತವಾಗಿ ಕದ್ದಿರುವ ಬಗ್ಗೆ ಪ್ರತಿಧ್ವನಿ ಮತ್ತು TheNewsMinute ಜಂಟಿ ತನಿಖಾ ವರದಿ ಪ್ರಕಟಿಸಿದ ಬೆನ್ನಲ್ಲೇ ಎಚ್ಚೆತ್ತಿರುವ ರಾಜು ಚುನಾವಣಾ ಆಯೋಗವು ಯಾವುದೇ ಸಂಸ್ಥೆಗೆ ಯಾವುದೇ ಸಮೀಕ್ಷೆ ನಡೆಸಲು ಅನುಮತಿ ನೀಡಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಮತದಾರರ ವೈಯಕ್ತಿಕ ವಿವರಗಳನ್ನು ಸಮೀಕ್ಷೆ ನಡೆಸಲು ಯಾವುದೇ ಸಂಸ್ಥೆಗೆ ಅನುಮತಿ ನೀಡಿರುವುದಿಲ್ಲ.
ಸರ್ಕಾರೇತರ ಸಂಸ್ತೆ ಚಿಲುಮೆಗೆ ಮತದಾರರ ಜಾಗೃತಿ ಅಭಿಯಾನದ ಬಗ್ಗೆ ಅರಿವು ಮೂಡಿಸಲು ನೀಡಿದ್ದ ಅನುಮತಿಯನ್ನು ದೂರು ಬಂದ ಕೂಡಲ್ಲೇ ಜಿಲ್ಲಾ ಚುನಾವಣಾಧಿಕಾರಿ, ಬಿಬಿಎಂಪಿ ರದ್ದು ಪಡಿಸಿರುತ್ತದೆ ಎಂದು ತಿಳಿಸಲಾಗಿದೆ.
ಬೂತ್ ಮಟ್ಟದ ಅಧಿಕಾರಿ ಗುರುತಿನ ಚೀಟಿ ದುರುಪಯೋಗ ಸಂಬಂಧ ಈಗಾಗಲೇ ಮಹದೇವಪುರ ವಿಧಾನಸಭಾ ಕ್ಷೇತ್ರದ ನೋಂದಣಾಧಿಕಾರಿ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ತನಿಖೆ ನಡೆಸಿ ಉಲ್ಲಂಘನೆಯಾಗಿದ್ದು ಕಂಡು ಬಂದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿಗೆ ಸೂಚಿಸಲಾಗಿದೆ.