ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಕೇವಲ 7 ಜನರಿಗೆ ಮಾತ್ರ ಟಿಕೆಟ್ ಘೋಷಣೆ ಮಾಡಿತ್ತು. ಇದೀಗ ಕೇವಲ ನಾಲ್ಕು ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡು ಉಳಿದೆಲ್ಲಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ನಾಳೆ ಅಂತಿಮ ಚರ್ಚೆ ನಡೆಸಿ ಮೂರನೇ ಪಟ್ಟಿಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬಳ್ಳಾರಿ ಹಾಗು ಚಾಮರಾಜನಗರ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಮಾಡಲು ನಿರ್ಧಾರ ಮಾಡಲಾಗಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಬೆಳಗಾವಿ ಕ್ಷೇತ್ರಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃನಾಲ್ ಹೆಬ್ಬಾಳ್ಕರ್, ಬಾಗಲಕೋಟೆಗೆ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್, ಕಲಬುರಗಿ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ, ರಾಯಚೂರು ಕ್ಷೇತ್ರಕ್ಕೆ ಕುಮಾರ್ ನಾಯಕ್, ಬೀದರ್ಗೆ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ, ಕೊಪ್ಪಳದಿಂದ ರಾಜಶೇಖರ ಹಿಟ್ನಾಳ್, ಧಾರವಾಡದಿಂದ ವಿನೋದ್ ಅಸೂಟಿ, ಉತ್ತರ ಕನ್ನಡಕ್ಕೆ ಅಂಜಲಿ ನಿಂಬಾಳ್ಕರ್, ದಾವಣಗೆರೆಗೆ ಎಸ್.ಎಸ್ ಮಲ್ಲಿಕಾರ್ಜುನ್ ಪತ್ನಿ, ಶಾಮನೂರು ಶಿವಶಂಕರಪ್ಪ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಅಭ್ಯರ್ಥಿಗಳನ್ನಾಗಿ ಮಾಡಲಾಗಿದೆ.
ಉಡುಪಿ ಚಿಕ್ಕಮಗಳೂರು ಜಯಪ್ರಕಾಶ್ ಹೆಗ್ಡೆ, ದಕ್ಷಿಣ ಕನ್ನಡಕ್ಕೆ ಪದ್ಮರಾಜ್, ಚಿತ್ರದುರ್ಗ ಬಿ ಎನ್ ಚಂದ್ರಪ್ಪ, ಮೈಸೂರು ಎಂ ಲಕ್ಷ್ಮಣ್, ಬೆಂಗಳೂರು ಉತ್ತರಕ್ಕೆ ಪ್ರೊ. ರಾಜೀವ್ ಗೌಡ, ಬೆಂಗಳೂರು ಕೇಂದ್ರಕ್ಕೆ ಮಾಜಿ ಸಚಿವ ರೆಹಮನ್ ಖಾನ್ ಪುತ್ರ ಮನ್ಸೂರ್ ಅಲಿ ಖಾನ್, ಬೆಂಗಳೂರು ದಕ್ಷಿಣಕ್ಕೆ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿಗೆ ಟಿಕೆಟ್ ನೀಡಲಾಗಿದೆ. ಇನ್ನು ಕೋಲಾರದಿಂದ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ಹಾಗು ಚಾಮರಾಜನಗರಕ್ಕೆ ಮಹದೇವಪ್ಪ ಪುತ್ರ ಸುನೀಲ್ ಬೋಸ್ಗೆ ಟಿಕೆಟ್ ನೀಡುವುದರ ಬಗ್ಗೆ ಮತ್ತೊಂದು ಸುತ್ತಿನ ಸಭೆ ಮಾಡಲು ನಿರ್ಧಾರ ಮಾಡಲಾಗಿದೆ.
ಈಗಾಗಲೇ ನಿರೀಕ್ಷೆಯಂತೆ ಬೆಳಗಾವಿಯಿಂದ ಮೃನಾಲ್ ಹೆಬ್ಬಾಳ್ಕರ್, ಚಿಕ್ಕೋಡಿಯಿಂದ ಪ್ರಿಯಾಂಕಕಾ ಜಾರಕಿಹೊಳಿ, ಬೆಂಗಳೂರು ದಕ್ಷಿಣದಲ್ಲಿ ಸೌಮ್ಯಾ ರೆಡ್ಡಿ, ಬೀದರ್ನಲ್ಲಿ ಸಾಗರ್ ಖಂಡ್ರೆ, ಬಾಗಲಕೋಟೆಯಲ್ಲಿ ಸಂಯುಕ್ತಾ ಪಾಟೀಲ್, ದಾವಣಗೆರೆಯಲ್ಲಿ ಶಾಮನೂರು ಸೊಸೆಗೂ ಟಿಕೆಟ್ ನೀಡಲಾಗಿದೆ. ಆದರೆ ಚಾಮರಾಜನಗರ ಹಾಗು ಕೋಲಾರದಲ್ಲಿ ಸಚಿವರನ್ನೇ ಅಖಾಡಕ್ಕೆ ಇಳಿಸಿ ಗೆಲ್ಲುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ ಎನ್ನಲಾಗಿದೆ. ಆದರೆ ಕೋಲಾರದಲ್ಲಿ ಮುನಿಯಪ್ಪ ಹಾಗು ಚಾಮರಾಜನಗರದಲ್ಲಿ ಹೆಚ್.ಸಿ ಮಹದೇವಪ್ಪ ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ. ಅಳಿಯನ ಪರ ಮುನಿಯಪ್ಪ ಬ್ಯಾಟ್ ಬೀಸಿದ್ರೆ ಮಗನ ಪರ ಮಹದೇವಪ್ಪ ಒತ್ತಡ ಹಾಕುತ್ತಿದ್ದಾರೆ. ನಾಳಿನ ಸಭೆಯಲ್ಲಿ ಅವರಿಗೂ ಟಿಕೆಟ್ ಘೋಷಣೆ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.