ನವದೆಹಲಿ : ಸ್ಮಾರ್ಟ್ ಮೀಟರ್‌ಗಳ ಅಳವಡಿಕೆಯ ಕಾರ್ಯವನ್ನು ಸಮಯಕ್ಕೆ ಅನುಗುಣವಾಗಿ ವೇಗಗೊಳಿಸುವುದರ ಜೊತೆಗೆ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸಂಸದೀಯ ಸಮಿತಿಯು ವಿದ್ಯುತ್ ಸಚಿವಾಲಯಕ್ಕೆ ಸೂಚಿಸಿದೆ.

‘ವಿದ್ಯುತ್ ಸಚಿವಾಲಯದ 2026-27ನೇ ಸಾಲಿನ ಅನುದಾನದ ಬೇಡಿಕೆಗಳು ಕುರಿತ ಸಮಿತಿಯ ಹನ್ನೊಂದನೇ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಈ ವೇಳೆ ದೇಶಾದ್ಯಂತ ಸ್ಮಾರ್ಟ್ ಮೀಟರ್‌ಗಳ ಅಳವಡಿಕೆಯ ವೇಗವು ನಿರೀಕ್ಷಿತವಾಗಿಲ್ಲ, ಬಹಳ ಕಡಿಮೆಯಿರುವುದರಿಂದ, ಸಚಿವಾಲಯವು ರಾಜ್ಯವಾರು ಅಗತ್ಯ ಕ್ರಮಗಳನ್ನು ಕೈಗೊಂಡು ಸಮಯಕ್ಕೆ ಸರಿಯಾಗಿ ಸ್ಮಾರ್ಟ್ ಮೀಟರ್‌ಗಳ ವಿತರಣೆಯನ್ನು ತುರ್ತಾಗಿ ಪೂರ್ಣಗೊಳಿಸಬೇಕೆಂದು ತಿಳಿಸಿದೆ.
ಕಳೆದ ಮಾರ್ಚ್ 2025 ರ ವೇಳೆಗೆ ದೇಶದಲ್ಲಿ 25 ಕೋಟಿ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸುವ ಗುರಿಯನ್ನು ಸರ್ಕಾರ ಹೊಂದಿತ್ತು, ಆದರೆ ಫೆಬ್ರವರಿ 15, 2026 ರವರೆಗೆ ಕೇವಲ 5.83 ಕೋಟಿ ಸ್ಮಾರ್ಟ್ ಮೀಟರ್‌ಗಳನ್ನು ಮಾತ್ರ ಅಳವಡಿಸಲಾಗಿದೆ. ದೇಶದಲ್ಲಿ ಸ್ಮಾರ್ಟ್ ಮೀಟರ್‌ಗಳ ಅಳವಡಿಕೆಯ ಪ್ರಮಾಣ ದಿನಕ್ಕೆ ಸುಮಾರು 1,35,000 ಕ್ಕೆ ಏರಿದ್ದರೂ, ಮಾರ್ಚ್ 2028 ರವರೆಗಿನ ಪರಿಷ್ಕೃತ ಸಮಯದೊಳಗೆ ನಿಗದಿತ ಗುರಿ ಮತ್ತು ಅದಕ್ಕೆ ಬೇಕಾದ ಅಂಕಿ ಅಂಶಗಳನ್ನು ಹೊಂದಿಸುವ ಕೆಲಸವನ್ನು ಬೇಗನೇ ಮಾಡುವ ಮೂಲಕ ನಿಗದಿತ ಅಳವಡಿಕೆಯ ಗುರಿಯನ್ನು ಸಾಧಿಸಬೇಕಿದೆ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ : ನಮ್ಮ ಖಾಸಗಿ ಜೀವನದ ಬಗ್ಗೆ ಬೈಕೊಂಡ್, ಮಾತ್ನಾಡೋ ಜನ ಒಂದ್ ಅರ್ಥ ಮಾಡ್ಕೋಬೇಕು.. : ಮೌನ ಮುರಿದ ರಶ್ಮೀಕಾ..
ಅಲ್ಲದೆ, ಬಿಲ್ಲಿಂಗ್‌ನಲ್ಲಿನ ತಪ್ಪುಗಳು, ದತ್ತಾಂಶ ಬದಲಾವಣೆಯ ಸಮಯದಲ್ಲಿ ದೋಷಗಳು, ದತ್ತಾಂಶ ಗೌಪ್ಯತೆಯ ಬಗ್ಗೆ ಕಳವಳಗಳು ಹೆಚ್ಚಾಗಿವೆ. ಮೀಟರ್‌ಗಳ ವ್ಯತ್ಯಾಸಗಳು ಇತ್ಯಾದಿಗಳ ಬಗ್ಗೆ ದೇಶಾದ್ಯಂತ ಗ್ರಾಹಕರು ಆಗಾಗ್ಗೆ ದೂರುಗಳನ್ನು ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಸಮಿತಿಯು ಚಾಟಿ ಬೀಸಿದೆ.
ಈ ರೀತಿಯ ಸಮಸ್ಯೆಗಳು ಗ್ರಾಹಕರ ವಿಶ್ವಾಸವನ್ನು ಕುಗ್ಗಿಸುವ ಹಾಗೂ ವ್ಯವಸ್ಥೆಯ ಸುಧಾರಣೆಗೆ ಅಳವಡಿಲಾಗುತ್ತಿರುವ ಸ್ಮಾರ್ಟ್ ಮೀಟರಿಂಗ್‌ನ ಉದ್ದೇಶಗಳನ್ನೇ ದುರ್ಬಲಗೊಳಿಸುವ ಸಾಮರ್ಥ್ಯವನ್ನು ಈ ರೀತಿಯ ಸಮಸ್ಯೆಗಳು ಹೊಂದಿವೆ. ಗ್ರಾಹಕರ ಕಳವಳಗಳನ್ನು ದೂರ ಮಾಡಲು ಕಠಿಣ ನಿಯಮಗಳನ್ನು ಜಾರಿಗೆ ತರಬೇಕು. ಅಲ್ಲದೆ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸುವ ಮೊದಲು ಸೂಕ್ತ ಪರೀಕ್ಷೆ, ಪ್ರಮಾಣೀಕರಣ ಮತ್ತು ಗುಣಮಟ್ಟದ ಭರವಸೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಮಿತಿ ತಾಕೀತು ಮಾಡಿದೆ.

ಈ ನಿಟ್ಟಿನಲ್ಲಿ ಸುಧಾರಿತ ಮೀಟರಿಂಗ್ ಮೂಲಸೌಕರ್ಯ ಸೇವೆಯನ್ನು ನೀಡುವವರು ಮತ್ತು ಡಿಸ್ಕಾಮ್‌ಗಳ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕು. ಇದರ ಗುಣಮಟ್ಟದ ಮೇಲ್ವಿಚಾರಣೆಗೆ ಗಟ್ಟಿಯಾದ ನಿಯಮಗಳನ್ಬು ರೂಪಿಸಬೇಕು ಎಂದು ಸಮಿತಿಯು ವಿದ್ಯುತ್ ಸಚಿವಾಲಯದ ಕಿವಿ ಹಿಂಡಿದೆ.
ಈ ವಿಚಾರದಲ್ಲಿ ದೂರುಗಳಿದ್ದಲ್ಲಿ ಬಿಲ್ಲಿಂಗ್ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಬೇಕು. ಚೆಕ್ ಮೀಟರ್‌ಗಳ ಕಡ್ಡಾಯ ಅಳವಡಿಕೆ ಸೇರಿದಂತೆ ಪಾರದರ್ಶಕ ಹಾಗೂ ಜನಸ್ನೇಹಿ ವ್ಯವಸ್ಥೆಯ ಕಾರ್ಯವಿಧಾನಗಳನ್ನು ರೂಪಿಸಲು ಡಿಸ್ಕಾಮ್‌ಗಳಿಗೆ ನಿರ್ದೇಶನ ನೀಡಬೇಕೆಂದು ತಿಳಿಸಿದೆ.
ದತ್ತಾಂಶ ಮಾಲೀಕತ್ವ, ಪ್ರವೇಶ, ಸಂಗ್ರಹಣೆ ಮತ್ತು ಕುಂದುಕೊರತೆ ಪರಿಹಾರದ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ಒಳಗೊಂಡಂತೆ ಸ್ಮಾರ್ಟ್ ಮೀಟರಿಂಗ್ ಮಾಡಬೇಕು. ಅಲ್ಲದೆ ಗ್ರಾಹಕರ ದತ್ತಾಂಶ ಗೌಪ್ಯತೆ ಮತ್ತು ಸೈಬರ್ ಸುರಕ್ಷತೆಯನ್ನು ಗಟ್ಟಿಗೊಳಿಸಿಕೊಂಡು ಗ್ರಾಹಕರ ಭದ್ರತೆ ಹಾಗೂ ಜನಸ್ನೇಹಿ ವ್ಯವಸ್ಥೆಯನ್ನು ತನ್ನಿ ಎಂದು ಕೇಂದ್ರ ಸಂಸದೀಯ ಸಮಿತಿಯು ವಿದ್ಯುತ್ ಸಚಿವಾಲಯಕ್ಕೆ ಖಡಕ್ ಸೂಚನೆಗಳನ್ನು ನೀಡಿದೆ.
ದೇಶಾದ್ಯಂತ ಬಿಲ್ಲಿಂಗ್ ಮತ್ತು ಸಂಗ್ರಹಣಾ ಮಟ್ಟವು ಕ್ರಮವಾಗಿ ಶೇ. 87.60 ಮತ್ತು ಶೇ. 97 ರಷ್ಟಿದ್ದು, ಇದು ಆದಾಯ ಗಳಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮೀಟರಿಂಗ್, ಬಿಲ್ಲಿಂಗ್ ವ್ಯವಸ್ಥೆಗಳು ಮತ್ತು ಇಂಧನ ಲೆಕ್ಕಪತ್ರ ನಿರ್ವಹಣೆಯಲ್ಲಿನ ನ್ಯೂನತೆಗಳನ್ನು ಎತ್ತಿ ತೋರಿಸುತ್ತದೆ. ಈ ಎಲ್ಲವುಗಳನ್ನು ಕೂಡಲೇ ಸರಿಪಡಿಸಿಕೊಳ್ಳಿ ಎಂದು ಸಮಿತಿಯು ತಿಳಿಸಿದೆ.






