ಚಂದ್ರಯಾನ 3 ಕುರಿತು ಅಪಹಾಸ್ಯ ರೀತಿಯ ಫೊಟೊ ಟ್ವೀಟ್ ಮಾಡಿದ್ದ ನಟ ಪ್ರಕಾಶ್ ರೈ ವಿರುದ್ಧ ದೂರು ದಾಖಲಾಗಿದೆ. ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಠಾಣೆಯಲ್ಲಿ ಹಿಂದೂ ಮುಖಂಡರು ದೂರು ದಾಖಲಿಸಿದ್ದು, ಪ್ರಕಾಶ್ ರೈ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಚಂದ್ರಯಾನ-3 ಭಾರತದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಆಗಸ್ಟ್ 23 ರ ಸಂಜೆ 6.04ಕ್ಕೆ ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆಗಲಿದ್ದು, ಇದರ ಯಶಸ್ಸಿಗಾಗಿ ದೇಶದ ವಿವಿಧ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರ ಕೂಡಾ ನಡೆಯುತ್ತಿದೆ. ಹೀಗಿರುವಾಗಲೇ, ಚಂದ್ರಯಾನ-3 ಬಗ್ಗೆ ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವಿವಾದದ ಕಿಡಿ ಹೊತ್ತಿಸಿದೆ.
“ಬ್ರೇಕಿಂಗ್ ನ್ಯೂಸ್: ಚಂದ್ರನ ಅಂಗಳದಿಂದ #ವಿಕ್ರಮ್ಲ್ಯಾಂಡರ್ ನಿಂದ ಬಂದ ಮೊದಲ ಫೋಟೋ.. ವಾವ್” ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ವ್ಯಕ್ತಿಯೊಬ್ಬರು ಎರಡು ಮಗ್‌ಗಳ ನಡುವೆ ಚಹಾವನ್ನು ಸುರಿಯುವ ವ್ಯಂಗ್ಯಚಿತ್ರ ಹಂಚಿಕೊಂಡಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದ್ದು, ನೆಟ್ಟಿಗರು ಪ್ರಕಾಶ್ ರೈ ವಿರುದ್ಧ ಮುಗಿ ಬಿದ್ದಿದ್ದಾರೆ.
ವಿವಾದಿತ ಟ್ವೀಟ್ ಮೂಲಕ ದೇಶಕ್ಕೆ ಅಪಮಾನ ಮಾಡುತ್ತಿರುವ ಪ್ರಕಾಶ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.