ಕರಾವಳಿಯಲ್ಲಿ ಮೀನಗಾರಿಕೆ ದೊಡ್ಡ ಉದ್ಯಮ ಕ್ಷೇತ್ರ. ಸಾವಿರಾರು ಜನರ ಬದುಕು. ಆದರೆ ಪ್ರತಿ ವರ್ಷ ಜೂನ್, ಜುಲೈ ತಿಂಗಳ ಮಳೆಗಾಲ ಪ್ರಾರಂಭದ ಅವಧಿಯಲ್ಲಿ ಮೀನುಗಾರಿಕೆಯನ್ನ ಸ್ಥಗಿತಗೊಳಿಸಲಾಗುತ್ತದೆ. ಈ ಅವಧಿಯಲ್ಲಿ ಸಮುದ್ರದಲ್ಲಿ ಮೀನುಗಳು ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಗುವುದರಿಂದ 61 ದಿನಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯುವುದಿಲ್ಲ.
2021ನೇ ವರ್ಷದಲ್ಲಿ ಕೊರೊನಾ ಎರಡನೇ ಅಲೆ ಲಾಕ್ಡೌನ್ ಜಾರಿ ಹಾಗೂ ತೌಕ್ತೆ ಚಂಡಮಾರುತ ಎದುರಾದ ಹಿನ್ನಲೆಯಲ್ಲಿ ಮೇ ತಿಂಗಳ ಪ್ರಾರಂಭದಲ್ಲೇ ಮೀನುಗಾರಿಕೆ ಸ್ಥಗಿತಗೊಂಡಿತ್ತು. ಬಹುತೇಕ ಪರ್ಸಿಯನ್ ಬೋಟುಗಳು ಸಮುದ್ರಕ್ಕೆ ಇಳಿಯದೇ ದಡದಲ್ಲೇ ಲಂಗರು ಹಾಕಿ ನಿಂತಿರುವ ದೃಶ್ಯ ಕಾಣ್ತಿತ್ತು. ಹಾಗೆ ನೋಡುವುದಾದರೆ ಕಳೆದ ಎರಡು ವರ್ಷಗಳಿಂದ ಕರಾವಳಿ ಭಾಗದ ಮೀನುಗಾರರಿಗೆ ಮೀನುಗಾರಿಕೆ ನಡೆಸುವುದೇ ಸಾಧ್ಯವಾಗದಂತಾಗಿತ್ತು. ಕೊರೋನ ಮೊದಲನೇ ಅಲೆ, ಎರಡನೇ ಅಲೆಗಳಿಂದಾಗಿ ಮೀನುಗಾರಿಕೆ ನಡೆಸಲು ಕಾರ್ಮಿಕರಿಲ್ಲದೇ ಪರದಾಡುವಂತಾಗಿತ್ತು. ಬಳಿಕ ಸ್ಥಳೀಯ ಕಾರ್ಮಿಕರನ್ನೇ ಬಳಸಿಕೊಂಡು ಮೀನುಗಾರಿಕೆಗೆ ತೆರಳಿದರೆ ಮತ್ಸ್ಯಕ್ಷಾಮ ಎದುರಾಗಿತ್ತು. ಆದರೆ ಈಗಿನ ಸಮಯ ಹೇಗಿದೆಯೆಂದರೆ ಕರಾವಳಿ ಮೀನಾಗಾರಿಕೆ ಸಮೃದ್ಧವಾಗಿದೆ. ಹೇರಳ ಮೀನುಗಳು ಸಿಗುತ್ತಿದ್ದು, ಸಂಕಷ್ಟದಲ್ಲಿದ್ದ ಮೀನುಗಾರರ ಮುಖದಲ್ಲಿ ಮಂದಹಾಸ ಮೂಡಿದೆ.
ಟ್ರಾಲ್ಬೋಟ್ನವರಿಗೆ ಕಪ್ಪೆ ಬೊಂಡಾಸ್, ಕೋಲು ಬೊಂಡಾಸ್, ರಾಣಿ ಫಿಶ್ ಮೊದಲಾದ ವಿದೇಶಕ್ಕೆ ರಫ್ತಾಗುವ ಮೀನುಗಳು ಬೇಕಾದಷ್ಟು ಲಭಿಸಿವೆ. ಪರ್ಶಿಯನ್ ಬೋಟ್ಗಳಿಗೂ ಇಳುವರಿ ಉತ್ತಮವಾಗಿದೆ. ಮೀನು ಪ್ರಿಯರಿಗೆ ಸ್ಥಳೀಯವಾಗಿ ಅಗ್ಗದ ದರದಲ್ಲಿ ಹಲವು ಬಗೆಯ ಮೀನುಗಳು ಸಿಗುತ್ತಿವೆ. ಊರ ಜನರ ಮೀನಿನ ಹಸಿವು ನೀಗಿಸಿ ವಿದೇಶಗಳಿಗೆ ರಫ್ತಾಗಲು ಕೊಚ್ಚಿನ್, ಗೋವಾ ಮತ್ತು ಗುಜರಾತ್ಗಳಿಗೆ ಮೀನು ಸಾಗಾಟವಾಗುತ್ತಿವೆ.
ಜೂನ್-ಜುಲೈ ತಿಂಗಳ ಮೀನುಗಾರಿಕಾ ರಜಾವಧಿ ಮುಗಿದು ಆಗಷ್ಟ್ ಒಂದರಿಂದ ಮೀನಗಾರಿಕೆಗೆ ತೆರಳಬೇಕಾದ ಬೋಟುಗಳು ಡೀಸೆಲ್ ಸಬ್ಸಿಡಿಯ ಪಾಸ್ ಬುಕ್ ಸಿಗುವಾಗ ವಿಳಂಬವಾದರಿಂದ ಹೆಚ್ಚಿನ ಬೋಟ್ಗಳು ಆ.15ರ ಬಳಿಕವಾಗಿತ್ತು ಮೀನುಗಾರಿಕೆಗೆ ತೆರಳಿದ್ದು.
ಹಾಗೆ ತೆರಳಿದ ಬೋಟುಗಳು ರಾಶಿ ರಾಶಿ ಮೀನುಗಳನ್ನು ತುಂಬಿಸಿಕೊಂಡು ಮರಳುತ್ತಿವೆ. ಅಂಜಲ್, ಬೊಂಡಾಸ್, ಕಪ್ಪೆ ಬೊಂಡಾಸ್, ಮದ್ಮಲ್, ಫಿಶ್ ಮೀಲ್ಗೆ ಹೋಗುವ ಮುರಿ ಮೀನ್ ಸಹಿತ ಉತ್ತಮ ಮೀನುಗಾರಿಕೆಯ ಸುಗ್ಗಿಯಲ್ಲಿದ್ದಾರೆ ಮೀನುಗಾರರು ಸಮುದ್ರ ಪ್ರಶಾಂತವಾಗಿರುವುದರಿಂದ ಆಳ ಸಮುದ್ರದಲ್ಲಿ ಉತ್ತಮ ರೀತಿಯಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಇದೇ ರೀತಿಯಲ್ಲಿ ಕೊನೆಯ ತನಕ ಮುಂದುವರಿದರೆ ಈ ವರ್ಷ ಒಳ್ಳೆಯ ಲಾಭದಾಯಕ ವರ್ಷೌಆಗಲಿದೆ 2021. ಸರ್ಕಾರದಿಂದಲೂ ಮೀನುಗಾರರಿಗೆ ಒಳ್ಳೆಯ ರೀತಿಯಲ್ಲಿ ಸ್ಪಂದನೆ ಸಿಗುತ್ತಿದೆ.
ಜೊತೆಗೆ, ಬಂದರಿನಲ್ಲಿ ಮಂಜುಗಡ್ಡೆ ಅಂಗಡಿ, ಹೊಟೇಲ್, ಫಿಶ್ ಕಟ್ಟಿಂಗ್, ಟ್ರಾನ್ಸ್ಪೋರ್ಟ್ ಸಹಿತ ಎಲ್ಲ ಉದ್ಯಮಗಳ ಮುಖಗಳೂ ಮಂದಹಾಸ ಬೀರುತ್ತಿವೆ. ಕಾರ್ಮಿಕರೂ ಉತ್ತಮ ಸಂಬಳ ಎಣಿಸುತ್ತಾ ಖಷಿಯಾಗಿದ್ದಾರೆ. ಮೀನುಗಳ ಬೆಲೆ ಕಡಿಮೆಯಿದ್ದು ಟೆಂಪೋ, ಬೈಕ್ಗಳಲ್ಲಿ ಮನೆ ಮನೆಗೆ ಕೊಂಡೊಯ್ದು ಮೀನು ಮಾರುವವರಿಗೆ ಹಾಗೂ ಮಾರುಕಟ್ಟೆಗಳಲ್ಲಿ ಮಾರುವವವರ ಮುಖಗಳಲ್ಲೂ ಸಂತೃಪ್ತಿ ಕಾಣುತ್ತಿವೆ. ಮೀನು ಪ್ರಿಯರೂ ಇಷ್ಟದ ಮೀನುಗಳನ್ನು ಖರೀದಿಸಿ ಸಂತೋಷದಿಂದ ಪದಾರ್ಥ ಮಾಡುತ್ತಿದ್ದಾರೆ. ಅಂಜಲ್, ಮಾಂಜಿ ಜನರ ಇಷ್ಟದ ಮೀನುಗಳು. ಆದರೆ ಅವುಗಳ ದರ ದುಬಾರಿಯೆಂದು ಮಧ್ಯಮ ವರ್ಗ ಮತ್ತು ಬಡವರು ತೀರಾ ಅಪರೂಪವಾಗಿ ಅವುಗಳನ್ನು ಖರೀದಿಸುತ್ತಿದ್ದರು. ಆದರೆ, ಈಗ ಮೀನು ಸಾಮಾನ್ಯ ಬೆಲೆಗೆ ಸಿಗುತ್ತಿರುವ ಖುಷಿ ಹಲವರದ್ದಾಗಿದೆ. ಕೆಜಿಗೆ 700 ರೂ. ಇದ್ದ ಅಂಜಲ್ ದರ ಈಗ 350 ರೂ. ಆಸುಪಾಸಿಗೆ ಇಳಿದಿದೆ. 4 ಕೆಜಿಗಿಂತ ಕಡಿಮೆ ತೂಕದ ಅಂಜಲ್ ದರ ಇದಾಗಿದ್ದು, ದೊಡ್ಡ ಮೀನಿಗೆ ಬೇಡಿಕೆ ಹೆಚ್ಚಿದೆ. ಆದರೆ ಅದು ಹಿಂತಿನಂತಿಲ್ಲ. ಕೆಜಿಗೆ 400 ರೂ. ಇದ್ದ ಮಾಂಜಿ ಮೀನಿನ ದರ ಕೂಡ ಈಗ 250 ರೂ. ಆಸುಪಾಸಿನಲ್ಲಿದೆ. ಮೀನುಗಳು ಯಥೇಚ್ಛವಾಗಿ ಸಿಗುತ್ತಿರುವುದೇ ಈ ದರ ಇಳಿಕೆಗೆ ಕಾರಣ.