
‘ಗ್ಯಾರಂಟಿ ವಿರೋಧಿ, ಬಡವರ ವಿರೋಧಿ’ ಬಿಜೆಪಿ – ಸಿಎಂ ವಾಗ್ದಾಳಿ..
ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಜೊತೆಗೆ ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ರಾಜ್ಯದ ಜನರಿಗೆ ನಮ್ಮ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ. ಜನರಿಗೆ ನಮ್ಮ ಮೇಲೆ ನಂಬಿಕೆ, ವಿಶ್ವಾಸ ಬಂದಿದೆ. ಈ ಹಿಂದೆಯೂ 2013ರಲ್ಲಿ ನಾವು ಕೊಟ್ಟಿದ್ದ 158 ಭರವಸೆಗಳನ್ನು ಈಡೇರಿಸಿದ್ದೆವು. ಈಗಲೂ ನಾವು ಈಗಾಗಲೇ 44 ಸಾವಿರ ಕೋಟಿ ರೂಪಾಯಿ ಹಣವನ್ನು ಗ್ಯಾರಂಟಿ ಯೋಜನೆಗಾಗಿ ಖರ್ಚು ಮಾಡಿದ್ದೇವೆ ಎಂದಿದ್ದಾರೆ.
ಬಿಜೆಪಿಯವರು ನಮ್ಮ ಮೇಲೆ ಸುಳ್ಳು ಆರೋಪ ಮಾಡ್ತಾರೆ. ಗ್ಯಾರಂಟಿ ಯೋಜನೆ ಜಾರಿ ಮಾಡೋಕೆ ಆಗಲ್ಲ ಅಂದ್ರು. ಗ್ಯಾರಂಟಿ ಯೋಜನೆ ಜಾರಿ ಮಾಡಿದ್ರೆ ರಾಜ್ಯ ಆರ್ಥಿಕವಾಗಿ ದಿವಾಳಿ ಆಗುತ್ತೆ ಎಂದರು. ಅಭಿವೃದ್ಧಿ ನಿಲ್ಲುತ್ತದೆ, ಖಜಾನೆ ಖಾಲಿ ಆಗುತ್ತೆ ಅಂದ್ರು. ಆ ಬಳಿಕ ಲೋಕಸಭಾ ಚುನಾವಣೆವರೆಗೆ ಮಾತ್ರ ಗ್ಯಾರಂಟಿ ಅಂದ್ರು. ಈಗಾಗಲೇ 52,900 ಕೋಟಿ ರೂಪಾಯಿ ಮೀಸಲು ಇಟ್ಟಿದ್ದೇವೆ. 68 ಸಾವಿರ ಕೋಟಿ ಅಭಿವೃದ್ಧಿ ಯೋಜನೆಗೆ ಮೀಸಲು ಇಟ್ಟಿದ್ದೇವೆ. 12 ಸಾವಿರ ಕೋಟಿ ರೂಪಾಯಿ ಮೀಸಲು ಈಡಲಾಗಿದೆ ಎಂದಿದ್ದಾರೆ.

ಬಿಜೆಪಿ ನಾಯಕರ ಆರೋಪ ಕೇವಲ ಸುಳ್ಳು. ಕಾಂಗ್ರೆಸ್ ಮೇಲೆ ವಿಶ್ವಾಸ ಕಡಿಮೆ ಮಾಡಲು ಬಿಜೆಪಿ ನಾಯಕರು ಸುಳ್ಳು ಆರೋಪ ಮಾಡ್ತಾರೆ. ಗ್ಯಾರಂಟಿ ಯೋಜನೆ ಕಂಡ್ರೆ ಬಿಜೆಪಿಯವರಿಗೆ ಆಗಲ್ಲ. ಗ್ಯಾರಂಟಿ ಯೋಜನೆಯನ್ನು ಏನಾದ್ರು ಮಾಡಿ ನಿಲ್ಲಿಸಬೇಕು ಎನ್ನುವುದು ಬಿಜೆಪಿ ಪಕ್ಷದ ಉದ್ದೇಶ. ಬಿಜೆಪಿ ಪಕ್ಷ ಬಡವರ ವಿರೋಧಿ. ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ, ಭಜರಂಗ ದಳದ ಕಾರ್ಯಕರ್ತರ ರೀತಿ ಮಾತನಾಡುತ್ತಿದ್ದಾರೆ. ಹತಾಶೆ, ಸೋಲಿನ ಭಯದಿಂದ ಮೋದಿ ಮಾತನಾಡುತ್ತಿದ್ದಾರೆ ಎಂದಿದ್ದಾರೆ.
ಸಂವಿಧಾನವೇ ನಮ್ಮ ಧರ್ಮ ಗ್ರಂಥ. ಸಾವರ್ಕರ್ ಹೇಳಿಕೆಗಳು ಇತಿಹಾಸದಲ್ಲಿ ದಾಖಲಾಗಿದೆ. ಬಿಜೆಪಿ ಮುಖಂಡರು ಸಂವಿಧಾನ ಬಗ್ಗೆ ಅನೇಕ ಮಾತನಾಡಿದ್ದಾರೆ. ಮೋಹನ್ ಭಾಗವತ್ ಸಹ ಸವಿಂಧಾನ ಬದಲಾವಣೆ ಮಾತನ್ನು ಆಡಿದ್ದಾರೆ. ಸಂವಿಧಾನದ ಬಗ್ಗೆ ಬಿಜೆಪಿಗೆ ಗೌರವ ಇಲ್ಲ. ಈ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟ ಎಂದು ಕರೆಯಬಹುದು. ದೇಶದಲ್ಲಿ ಸಾಮಾಜಿಕ ವ್ಯವಸ್ಥೆ, ಸರ್ವ ಜನಾಂಗದ ತೋಟ ಆಗಬೇಕು. ಇದಕ್ಕೆ ವಿರೋಧವಾಗಿರೋದು ಬಿಜೆಪಿ ಪಕ್ಷ. ಅವಕಾಶದಿಂದ ವಂಚಿತರಾದವರಿಗೆ ಎಲ್ಲರಿಗೂ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕು ಎಂದು ಪ್ರತಿಪಾದಿಸಿದ್ದಾರೆ.