2022ರ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಟೈಮ್ಸ್ ನೌ ಸಮೀಕ್ಷೆ ಹೇಳಿದೆ. ಚುನಾವಣೆಗೂ ಮುನ್ನ ಜನರ ನಾಡಿಮಿಡಿತ ಪರೀಕ್ಷೆಯಲ್ಲಿ ಬಿಜೆಪಿ 239-245 ಸ್ಥಾನ ಪಡೆದಿದ್ದು, ಯೋಗಿ ಮತ್ತೆ ಸಿಎಂ ಆಗ್ತಾರೆ ಅನ್ನೋ ಫಲಿತಾಂಶ ಹೊರಬಿದ್ದಿದೆ.
2022ರಲ್ಲಿ ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆಗೂ ಮುನ್ನ ಸೋಲು ಗೆಲುವಿನ ಲೆಕ್ಕಾಚಾರದ ಜೊತೆಗೆ ಗೆಲುವಿಗಾಗಿ ರಾಜಕೀಯ ಪಕ್ಷಗಳು ರಣತಂತ್ರ ಹೆಣೆಯುತ್ತಿವೆ. ಅದ್ರಲ್ಲೂ ಉತ್ತರಪ್ರದೇಶದ ಚುನಾವಣೆಯಂತೂ ಹೈವೋಲ್ಟೇಜ್ ಕಣವಾಗಿದೆ.
ಚುನಾವಣೆಗೂ ಮುನ್ನ ಟೈಮ್ಸ್ ನೌ ಜನರ ನಾಡಿಮಿಡಿತ ಪರೀಕ್ಷೆ ಮಾಡಿದೆ. ಉತ್ತರಪ್ರದೇಶದ 9 ಸಾವಿರ ಜನರಿಂದ ಅಭಿಪ್ರಾಯ ಸಂಗ್ರಹ ಮಾಡಿದ್ದು, ಸಮೀಕ್ಷೆಯಲ್ಲಿ ಬಿಜೆಪಿ ಮತ್ತೆ ಗದ್ದುಗೆ ಏರೋದು ಪಕ್ಕಾ ಆಗಿದೆ. ನವೆಂಬರ್ 6ರಿಂದ 10ರ ನಡುವೆ ನಡೆದಿದ್ದ ಸಮೀಕ್ಷೆಯಲ್ಲಿ ಜನ ಮತ್ತೆ ಸಿಎಂ ಯೋಗಿ ಆದಿತ್ಯನಾಥ್ಗೆ ಮಣೆ ಹಾಕಿದ್ದು, ಬಿಜೆಪಿಗೆ 239-245 ಸ್ಥಾನ ಸಿಗಲಿದೆ ಅಂತ ಸಮೀಕ್ಷೆ ಹೇಳಿದೆ.
ಯೋಗಿ ಮತ್ತೆ ಅಧಿಕಾರಕ್ಕೆ?
ಯುಪಿ ಚುನಾವಣೆ -2022ರ ಸಂಬಂಧ ಟೈಮ್ಸ್ ನೌ ಸಮೀಕ್ಷೆ ನಡೆಸಿದೆ. ಉತ್ತರಪ್ರದೇಶದ ಒಟ್ಟು ವಿಧಾನಸಭಾ ಸ್ಥಾನಗಳ ಸಂಖ್ಯೆ 403 ಇದ್ದು, ಸರ್ಕಾರ ರಚಿಸಲು ಪಕ್ಷಗಳಿಗೆ ಮ್ಯಾಜಿಕ್ ನಂಬರ್-202ರ ಅಗತ್ಯವಿದೆ. ಆದ್ರೆ ಟೈಮ್ಸ್ ನೌ ಸಮೀಕ್ಷೆಯಲ್ಲಿ ಬಿಜೆಪಿಗೆ 239-245 ಸ್ಥಾನ ಸಿಗುವ ಸಾಧ್ಯತೆ ಇದ್ದು, ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎನ್ನಲಾಗಿದೆ. ಇನ್ನು ಸಮಾಜವಾದಿ ಪಕ್ಷಕ್ಕೆ 119-125, ಬಿಎಸ್ಪಿಗೆ 28-32 ಸ್ಥಾನಗಳು ಹಾಗೂ ಕಾಂಗ್ರೆಸ್ಗೆ 5-8, ಇತರೆ 0-1 ಸ್ಥಾನ ಸಿಗಲಿದೆ ಅಂತ ಸಮೀಕ್ಷೆ ಹೇಳಿದೆ.

ಇನ್ನು ಯುಪಿಯಲ್ಲಿ ಪ್ರಮುಖವಾಗಿ ನಾಲ್ಕು ಪ್ರದೇಶಗಳಾಗಿ ವಿಭಜಿಸಿ ಸಮೀಕ್ಷೆ ನಡೆಸಲಾಗಿದೆ. ದೋಬ್, ಪೂರ್ವಾಂಚಲ, ಪಶ್ಚಿಮ ಉತ್ತರಪ್ರದೇಶ ಹಾಗೂ ಅವಧ್ ಪ್ರದೇಶದಲ್ಲಿ ಪ್ರತ್ಯೇಕ ಸಮೀಕ್ಷೆ ನಡೆದಿದೆ. ಇನ್ನು ಪ್ರದೇಶವಾರು ಯಾವ ಯಾವ ಪಕ್ಷಕ್ಕೆ ಎಷ್ಟೆಷ್ಟು ಸ್ಥಾನ ಅಂತ ನೋಡೋದಾದ್ರೆ?
ಬಿಜೆಪಿಗೆ ಬಹುಮತ ಫಿಕ್ಸ್?
ದೋಬ್ ಪ್ರದೇಶದ 71 ಸ್ಥಾನಗಳ ಪೈಕಿ ಬಿಜೆಪಿಗೆ 37-40 ಸ್ಥಾನ ಸಿಗಲಿದ್ರೆ, ಎಸ್ಪಿಗೆ 26-28, ಬಿಎಸ್ಪಿಗೆ 4-6, ಕಾಂಗ್ರೆಸ್ಗೆ 0-2 ಸ್ಥಾನ ಸಿಗಲಿದೆ ಅಂತ ಸಮೀಕ್ಷೆ ಹೇಳಿದೆ. ಪೂರ್ವಾಂಚಲನಲ್ಲಿ 92 ಸ್ಥಾನಗಳ ಪೈಕಿ ಬಿಜೆಪಿಗೆ 47-50, ಎಸ್ಪಿಗೆ 31-35 ಸ್ಥಾನಗಳು ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಪಶ್ಚಿಮ ಉತ್ತರಪ್ರದೇಶದಲ್ಲಿ ಬಿಜೆಪಿಗೆ 40-42 ಸ್ಥಾನಗಳು, ಸಮಾಜವಾದಿ ಪಕ್ಷಕ್ಕೆ 21-24, ಬಿಎಸ್ಪಿಗೆ 2-3 ಸ್ಥಾನಗಳು ಸಿಗುತ್ತದೆ ಅಂತ ಸಮೀಕ್ಷೆ ಹೇಳಿದೆ. ಅವಧ್ ಪ್ರದೇಶದಲ್ಲಿ ಬಿಜೆಪಿಗೆ 69-71 ಸ್ಥಾನಗಳು ಸಿಗುವ ಸಾಧ್ಯತೆ ಇದ್ದು, ಎಸ್ಪಿಗೆ 23-26, ಬಿಎಸ್ಪಿಗೆ 7-10 ಸ್ಥಾನ ಸಿಗಲಿದೆ ಅಂತ ಟೈಮ್ಸ್ ನೌ ಸಮೀಕ್ಷೆ ಹೇಳಿದೆ.
ಉತ್ತರಪ್ರದೇಶದ ಒಟ್ಟು ವಿಧಾನಸಭಾ 403 ಸ್ಥಾನಗಳ ಪೈಕಿ ಮ್ಯಾಜಿಕ್ ನಂಬರ್ 202ನ್ನ ಬಿಜೆಪಿ ನೀರಾಯಾಸವಾಗಿ ತಲುಪಲಿದ್ದು, 239-245 ಸ್ಥಾನ ಪಡೆಯಲಿದೆ. ಎರಡನೆಯ ಸ್ಥಾನದಲ್ಲಿ ಸಮಾಜವಾದಿ ಹಾಗೂ ಮೂರನೇ ಸ್ಥಾನಕ್ಕೆ ಬಿಎಸ್ಪಿ ಪಡೆದುಕೊಳ್ಳಲಿದೆ. ಆದ್ರೆ ಭಾರೀ ನಿರೀಕ್ಷೆಯಲ್ಲಿ ಯುಪಿ ಕದನಕ್ಕೆ ಇಳಿದಿರುವ ಕಾಂಗ್ರೆಸ್ಗೆ ಹೀನಾಯ ಪರಿಸ್ಥಿತಿ ಎದುರಾಗುತ್ತೆ ಅಂತ ಸಮೀಕ್ಷೆಯ ವರದಿಗಳು ಹೇಳ್ತಿವೆ