
ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಸೈಟ್ ಹಗರಣದಲ್ಲಿ ಇವತ್ತು ಕೋರ್ಟ್‌ಗೆ ರಿಪೋರ್ಟ್ ಸಲ್ಲಿಕೆ ಆಗಲಿದೆ. ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ರಿಲೀಫ್ ಸಿಗುತ್ತಾ ಅನ್ನೋ ಕುತೂಹಲ ಹುಟ್ಟಿಸಿದೆ.
ಕೋರ್ಟ್ ನಿರ್ದೇಶನದಂತೆ ತನಿಖೆ ನಡೆಸಿರುವ ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್ ಇಂದು ಮುಡಾ ಫೈನಲ್ ರಿಪೋರ್ಟ್ ಅನ್ನು ಕೋರ್ಟ್‌ಗೆ ಸಲ್ಲಿಕೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲು ತಯಾರಿ ನಡೆದಿದೆ. ಮುಡಾ ಸೈಟ್ ಹಗರಣ ಸಂಬಂಧ ತನಿಖೆ ಪೂರ್ಣಗೊಳಿಸಿದ ಲೋಕಾಯುಕ್ತ ಎಸ್‌ಪಿ ವರದಿ ಸಲ್ಲಿಕೆ ಮಾಡಲಿದ್ದಾರೆ. ಅಂತಿಮ ವರದಿಯನ್ನು ಈಗಾಗಲೇ ಲೋಕಾಯುಕ್ತ ಹಿರಿಯ ಅಧಿಕಾರಿಗಳಿಗೆ ತನಿಖಾ ತಂಡ ಸಲ್ಲಿಸಿದೆ ಎನ್ನಲಾಗಿದೆ.
ಅಂತಿಮ ವರದಿ ಪರಿಶೀಲನೆ ನಡೆಸಿರುವ ಹಿರಿಯ ಅಧಿಕಾರಿಗಳು ಇಂದು ಕೋರ್ಟ್‌ಗೆ ಸಲ್ಲಿಸಲು ತಿಳಿಸಿದ್ದಾರೆ ಎನ್ನಲಾಗಿದೆ. ಮುಡಾ ಸೈಟ್ ಹಗರಣದಲ್ಲಿ ಸಿಬಿಐ ತನಿಖೆಗೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ತೀಚೆಗೆ ವಜಾ ಮಾಡಿತ್ತು.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ, ಸಿದ್ದರಾಮಯ್ಯ ಪತ್ನಿ ಪಾರ್ವತಿ ಬಿ.ಎಂ, ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ದೇವರಾಜ್ ವಿರುದ್ಧ ತನಿಖೆಗೆ ಕಳೆದ ಸೆಪ್ಟೆಂಬರ್‌ನಲ್ಲಿ ಲೋಕಾಯುಕ್ತ ತನಿಖೆಗೆ ಆದೇಶಿಸಿತ್ತು ಕೋರ್ಟ್.
ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಕೆಗೆ ಕೋರ್ಟ್ ಸೂಚಿಸಿತ್ತು. ಇಂದು ಅರ್ಜಿ ವಿಚಾರಣೆ ನಡೆಸಲಿರೋ ಜನಪ್ರತಿನಿಧಿಗಳ ವಿಶೇಷ ಕೋರ್ಟ್. ಅರ್ಜಿ ವಿಚಾರಣೆ ವೇಳೆ ಫೈನಲ್ ರಿಪೋರ್ಟ್ ಸಲ್ಲಿಸಲಿದ್ದಾರೆ ಮೈಸೂರು ಲೋಕಾಯುಕ್ತರು. ಸುಮಾರು ಮೂರು ಸಾವಿರ ಪುಟಗಳ ಫೈನಲ್ ರಿಪೋರ್ಟ್ ಸಲ್ಲಿಕೆಗೆ ಸಿದ್ದತೆ ನಡೆದಿದೆ.













