ಪಾಟ್ನಾ : ಗಂಗಾ ನದಿಯ ಮೇಲೆ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದ ಒಂದು ದಿನದ ನಂತರ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಅದರೊಂದಿಗೆ ಸೇತುವೆ ವಿನ್ಯಾಸವೇ ದೋಷಪೂರಿತವಾಗಿತ್ತು ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಸಿಎಂ ನಿತೀಶ್ ಕುಮಾರ್ ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
2022ರಲ್ಲಿಯೂ ಇದೇ ಸೇತುವೆ ಕುಸಿದು ಬಿದ್ದಿತ್ತು ಎನ್ನುವ ಮಾಹಿತಿಯನ್ನೂ ನೀಡಿದ್ದಾರೆ. ನಿನ್ನೆ ಕುಸಿದ ಸೇತುವೆ ಕಳೆದ ವರ್ಷವೂ ಕುಸಿದಿತ್ತು. ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಸೇತುವೆಯ ನಿರ್ಮಾಣ ಕಾರ್ಯ ಸರಿಯಾಗಿ ಆಗದ ಕಾರಣ ಮತ್ತೆ ಮತ್ತೆ ಕುಸಿಯುತ್ತಿದೆ. ಇಲಾಖೆಯು ಈ ಕುರಿತಾಗಿ ಪರಿಶೀಲನೆ ನಡೆಸಲಿದ್ದು, ಆ ಬಳಿಕ ಕ್ರಮ ಕೈಗೊಳ್ಳಲಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ. ಘಟನೆಯ ನಂತರ ನಿತೀಶ್ ಕುಮಾರ್ ತಕ್ಷಣವೇ ತನಿಖೆಗೆ ಆದೇಶ ನೀಡಿದ್ದಾರೆ. ಇದಕ್ಕೆ ಯಾರು ಕಾರಣ ಅನ್ನೋದನ್ನು ಗುರುತಿಸುವಂತೆಯೂ ಅವರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ನಿತೀಶ್ ಕುಮಾರ್ ಅವರು 2014ರಲ್ಲಿ ಸೇತುವೆಯನ್ನು ಉದ್ಘಾಟಿಸಿದ್ದರು.