ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ರಚನೆ ಬೆನ್ನಲ್ಲೇ ಹಂಚಿಕೆಯಾದ ಖಾತೆ ಬಗ್ಗೆ ಸಚಿವ ಆನಂದ್ ಸಿಂಗ್ ಅಸಮಾಧಾನ ಮುಂದುವರಿದಿದೆ. ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರೇ ಖುದ್ದು ಸಂಧಾನಕ್ಕೆ ಪ್ರಯತ್ನಿಸಿದರೂ ಯಾಕೋ ಆನಂದ್ ಸಿಂಗ್ ತನ್ನ ಮುನಿಸು ಮರೆತಿಲ್ಲ. ಬದಲಿಗೆ ಖಾತೆ ಬದಲಾವಣೆ ಮಾಡಿಯೇ ತೀರಬೇಕು ಎಂದು ಪಟ್ಟು ಹಿಡಿದಿರುವ ಆನಂದ್ ಸಿಂಗ್ ಮುನಿಸು ಮುಂದುವರಿಸಿದ್ದಾರೆ.
ಅರಣ್ಯ ಅಥವಾ ಇಂಧನ ಖಾತೆಗೆ ಪಟ್ಟು ಹಿಡಿದಿರುವ ಆನಂದ್ ಸಿಂಗ್ ಸೈಲೆಂಟ್ ಸಮರ ಸಾರಿದ್ದಾರೆ. ಖಾತೆ ಬದಲಾವಣೆ ಮಾಡದೆ ಹೋದಲ್ಲಿ ಸರ್ಕಾರ ಮತ್ತಷ್ಟು ಸಮಸ್ಯೆಗಳಿಗೆ ಸಿಲುಕಬೇಕಾಗುತ್ತದೆ ಎಂದು ಬೊಮ್ಮಾಯಿಗೆ ಮುನ್ಸೂಚನೆ ನೀಡಿದ್ದಾರೆ. ಹೀಗೆ ಪಟ್ಟು ಹಿಡಿದ ಆನಂದ್ ಸಿಂಗ್ ನಡೆ ಬೊಮ್ಮಾಯಿಗೆ ತಲೆನೋವಾಗಿ ಪರಿಣಮಿಸಿದೆ.
ತನಗೆ ಬೊಮ್ಮಾಯಿ ಒಂದು ಇಲಾಖೆ ಜವಾಬ್ದಾರಿ ನೀಡಿದರೂ ಆನಂದ್ ಸಿಂಗ್ ಇನ್ನೂ ಅಧಿಕಾರ ಸ್ವೀಕರಿಸಿಲ್ಲ. ಯಾವುದೇ ಸಭೆಯನ್ನು ನಡೆಸಿಲ್ಲ. ನಾನು ಸಮ್ಮಿಶ್ರ ಸರ್ಕಾರ ಪತನ ಮಾಡಿ ಬಿಜೆಪಿ ಸರ್ಕಾರ ರಚನೆಗೆ ಕಾರಣಕರ್ತನಾಗಿದ್ದೇನೆ. ಇದರಿಂದ ಸಾಕಷ್ಟು ಕಷ್ಟಪಟ್ಟಿದ್ದೇನೆ. ಆದರೆ ನನ್ನ ಖಾತೆ ಬದಲಾವಣೆ ಮಾಡಲು ಬಿಜೆಪಿ ರಾಷ್ಟ್ರೀಯ ನಾಯಕರು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆನಂದ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.
ಖಾತೆ ಬದಲಾವಣೆ ಮಾಡಿದರೆ ಇತರರು ತಮ್ಮ ಬೇಡಿಕೆಗಳನ್ನು ಮುಂದಿಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಖಾತೆ ಬದಲಾವಣೆ ಮಾಡಲು ಸಾಧ್ಯವಿಲ್ಲ. ಕೊಟ್ಟ ಖಾತೆಯನ್ನು ನಿಭಾಯಿಸಿ ಮುಂದಿನ ದಿನಗಳಲ್ಲಿ ನೋಡೋಣ ಎಂದು ಆನಂದ್ ಸಿಂಗಿಗೆ ಬೊಮ್ಮಾಯಿ ಸೂಕ್ಷ್ಮವಾಗಿ ಹೇಳಿದ್ದಾರಂತೆ. ಇದನ್ನು ಒಪ್ಪಲು ರೆಡಿಯಿಲ್ಲದ ಆನಂದ್ ಸಿಂಗ್ ನಡೆ ಏನಾಗಿರಬಹುದು ಎಂಬ ಆತಂಕ ಸಿಎಂಗೆ ಕಾಡುತ್ತಿದೆ. ಇದೇ ಕಾರಣಕ್ಕೆ ಸಿಎಂ ಬೊಮ್ಮಾಯಿ, ಆನಂದ್ ಸಿಂಗಿಗೆ 3 ದಿನ ಸುಮ್ಮನಿರುವಂತೆ ಸೂಚಿಸಿದ್ದಾರೆ.
ನನಗೆ ಪರಿಸರ ಮತ್ತು ಪ್ರವಾಸ ಖಾತೆ ಬೇಡ. ಬದಲಿಗೆ ಪ್ರಬಲ ಖಾತೆಯೇ ಬೇಕು ಎಂದು ಆನಂದ್ ಸಿಂಗ್ ಭಾರೀ ಸರ್ಕಸ್ ಮಾಡುತ್ತಿದ್ದಾರೆ. ಇದಕ್ಕಾಗಿ ದೇವಸ್ಥಾನಕ್ಕೆ ಹೋದ್ರು, ರಾಜಕೀಯ ವೈರಾಗ್ಯದ ಬಗ್ಗೆ ಮಾತಾಡಿದ್ರು, ರಾಜೀನಾಮೆಯ ಸುಳಿವನ್ನೂ ಕೊಟ್ರು ಯಾವುದೇ ಪ್ರಯೋಜನವಾಗುತ್ತಿಲ್ಲ. ಬಿಎಸ್‌ವೈ ಮತ್ತು ಬೊಮ್ಮಾಯಿ ಸಂಧಾನ ಮಾಡಿದ್ರೂ ಆನಂದ್ ಸಿಂಗ್ ಮಾತ್ರ ಬಿಜೆಪಿ ಹೈಕಮಾಂಡ್ ಮನೆ ಕದ ತಟ್ಟಿದ್ದಾರೆ.
ಕೇಂದ್ರ ಬಿಜೆಪಿ ನಾಯಕರನ್ನು ಭೇಟಿಯಾಗಿ ನನಗೆ ಪ್ರಬಲ ಖಾತೆ ಕೊಡಿ ಎಂದು ಪಟ್ಟು ಹಿಡಿದರು ಯಾವುದೇ ಪ್ರಯೋಜನವಾಗಿಲ್ಲ, ಹೀಗಿರುವಾಗ ಆನಂದ್ ಸಿಂಗ್ ತನ್ನ ಆಪ್ತರೊಂದಿಗೆ ಮುಂದಿನ ನಡೆ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಹೀಗಾಗಿ ದೆಹಲಿಯಲ್ಲಿದ್ದ ಆನಂದ್ ಸಿಂಗಿಗೆ ಬಸವರಾಜ್ ಬೊಮ್ಮಾಯಿ ಕರೆ ಮಾಡಿ, ಉಪರಾಷ್ಟ್ರಪತಿ ನಿಮ್ಮ ಕ್ಷೇತ್ರಕ್ಕೆ ಬರುತ್ತಿದ್ದಾರೆ. ನೀವು ತಕ್ಷಣ ಕ್ಷೇತ್ರಕ್ಕೆ ಬನ್ನಿ, ಉಪರಾಷ್ಟ್ರಪತಿಗಳ ಅತಿಥಿ ಸತ್ಕಾರ ಮಾಡಿ ಎಂದಿದ್ದರು.
ಬೆಂಗಳೂರಿಗೆ ಬನ್ನಿ, ಇನ್ನೊಂದು ಬಾರಿ ಮಾತಾಡೋಣ, ಅಲ್ಲಿಯವರೆಗೆ 3 ದಿನ ಸುಮ್ಮನಿರಿ ಎಂದಿದ್ದರು. ಅದರಂತೆಯೇ ಕ್ಷೇತ್ರಕ್ಕೆ ಬಂದು ಉಪರಾಷ್ಟ್ರಪತಿಗಳ ಸತ್ಕರಿಸಿದ ಆನಂದ್ ಸಿಂಗ್, ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದರ ನಡುವೆ ಬಳ್ಳಾರಿ ಪ್ರವಾಸದಲ್ಲಿದ್ದ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಗೆ ಪ್ರಯತ್ನಿಸಿದ್ರೂ ಆನಂದ್ ಸಿಂಗ್ ಸಿಗಲಿಲ್ಲ.ಎಲ್ಲಿ ಆನಂದ್ ಸಿಂಗ್ ಬರಲಿಲ್ಲವೇ? ಯಾಕೆ ಇನ್ನೂ ಆನಂದ್ ಸಿಂಗ್ ಸಿಟ್ಟು ತಣ್ಣಗಾಗಿಲ್ಲ ಎಂದು ಬೊಮ್ಮಾಯಿ ಸೋಮಶೇಖರ್ ರೆಡ್ಡಿ ಆಪ್ತರಿಗೆ ವಿಚಾರಿಸಿದ್ದಾರೆ. ನಾನೇ ಖುದ್ದು ಕಾದರೂ ಆನಂದ್ ಸಿಂಗ್ ನನಗೆ ಸಿಕ್ಕಿಲ್ಲ ಯಾಕೆ? ಎಂದು ಪ್ರಶ್ನಿಸಿದ್ದಾರೆ. ಒಂದೆಡೆ ಆನಂದ್ ಸಿಂಗ್ ಈ ಎಲ್ಲಾ ನಡೆಗಳು ಭಾರೀ ಕುತೂಹಲ ಮೂಡಿಸಿದರೆ, ಇನ್ನೊಂದೆಡೆ ಬೊಮ್ಮಾಯಿ ನಮ್ಮೊಂದಿಗೆ ಆನಂದ್ ಸಿಂಗ್ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ.
ಈ ಕಾರಣಕ್ಕೆ ಆನಂದ್ ಸಿಂಗ್ ಮುಂದಿನ ನಡೆಯೇನು ಎಂಬ ಕುರಿತು ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಬೊಮ್ಮಾಯಿ ಕೂಡ ಆನಂದ್ ಸಿಂಗ್ ಮುಂದಿನ ನಡೆ ಬಗ್ಗೆ ತಲೆಕೆಡಸಿಕೊಂಡಿದ್ದಾರೆ. ಆನಂದ್ ಸಿಂಗ್ ಯಾವುದೇ ಗುಟ್ಟು ಬಿಟ್ಟುಕೊಡದ ಕಾರಣ ಎಲ್ಲರಿಗೂ ಭಾರೀ ಟೆನ್ಷನ್ ಶುರುವಾಗಿದೆ.