ಕೋವಿಡ್‌ನಿಂದಾಗಿ ಜನರ ಆರ್ಥಿಕತೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಹಂತಹಂತವಾಗಿ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಬಗ್ಗೆ ಪ್ರತಿಕ್ರಿಯಿಸಿ ಸಚಿವಸಂಪುಟದಲ್ಲಿ ಈ ಬರ್ಗೆ ಚರ್ಚಿಸಲಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸುವುದು, ಬೂಸ್ಟರ್ ಡೋಸ್ ಹೆಚ್ಚಿಸುವುದು,ಐಎಲ್ಐ ಮತ್ತು ಸಾರಿ ಪರೀಕ್ಷೆಗಳನ್ನು ಹೆಚ್ಚಿಸುವುದು, ಮಾಸ್ಕ್ ಗಳ ಧಾರಣೆ, ಒಳಾಂಗಣಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯ ಗಳ ಬಗ್ಗೆ ತಜ್ಞರ ಸಮಿತಿಯೊಂದಿಗೆ ಸಭೆ ನಡೆಸಿ, ಹಂತಹಂತವಾಗಿ ನಿಯಮಗಳನ್ನು ಜಾರಿ ತರಲಾಗುವುದು ಎಂದು ಹೇಳಿದ್ದಾರೆ.
ಹೊಸ ವರ್ಷಕ್ಕೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸುವ ಬಗ್ಗೆ ಉತ್ತರಿಸಿ, ಪ್ರತಿ ಬಾರಿಯಂತೆ ಈ ವರ್ಷವೂ ನಿಯಮಗಳಿದ್ದು, ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ಕೆಲವು ಮಾರ್ಗಸೂಚಿಗಳನ್ನು ಸೇರಿಸಲಾಗುವುದು. ಜನಸಾಮಾನ್ಯರ ದೈನಂದಿನ ಚಟುವಟಿಕೆ, ಆರ್ಥಿಕತೆಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಹಂತಹಂತವಾಗಿ ಜಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಬೆಳಗಾವಿಯಲ್ಲಿನ ಅಧಿವೇಶನ ಫಲಪ್ರದ ಹಾಗೂ ಅರ್ಥಪೂರ್ಣವಾಗಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಉತ್ತರ ಕರ್ನಾಟಕದ ಸಮಸ್ಯೆಗಳು ಮತ್ತುಯೋಜನೆಗಳ ಬಗ್ಗೆ ಸುದೀರ್ಘ ಚರ್ಚೆಯಾಗಬೇಕು. ವಿರೋಧಪಕ್ಷಗಳು ಹತ್ತು ಹಲವಾರು ವಿಷಯಗಳ ಬಗ್ಗೆ ಚರ್ಚಿಸಲಿವೆ. ಯಾವ ವಿಚಾರವೇ ಆಗಲಿ ಚರ್ಚಿಸಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಸೋಮವಾರ ದೆಹಲಿಗೆ ಹೋಗುತ್ತಿದ್ದೇನೆ ಕಳೆದ ಬಾರಿ ಕೆಲವೊಂದು ವಿಷಯಗಳ ಚರ್ಚೆ ಅಪೂರ್ಣವಾಗಿದ್ದರಿಂದ ಪುನ: ಕರೆದಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು ಸಭೆಯನ್ನು ಕರೆದಿದ್ದಾರೆ. ಪಕ್ಷದ ಮುಖಂಡರು, ಕೇಂದ್ರ ಗೃಹ ಸಚಿವರು ಸಭೆಯಲ್ಲಿ ಉಪಸ್ಥಿತರಿದ್ದು, ಚುನಾವಣಾ ತಯಾರಿ, ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಎಲ್ಲ ವಿಚಾರಗಳನ್ನು ಚರ್ಚಿಸಲಾಗುವುದು.
ಈ ಸಭೆಯಲ್ಲಿ ಭಾಗವಹಿಸಿ ನಾಳಿನ ಅಧಿವೇಶನಕ್ಕೆ ವಾಪಸ್ಸು ಬರಲಿದ್ದೇನೆ. ಸಚಿವ ಸಂಪುಟ ವಿಸ್ತರಣೆ, ಖಾಲಿ ಸಚಿವ ಸ್ಥಾನ ಭರ್ತಿ ವಿಚಾರಗಳು ಸಭೆಯಲ್ಲಿ ಚರ್ಚೆಯಾಗಲಿವೆ. ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆಯೂ ಸಂಬಂಧಪಟ್ಟ ಕೇಂದ್ರ ಸಚಿವರನ್ನು ಭೇಟಿ ಮಾಡಲಾಗುವುದು. ಕೇಂದ್ರ ನೀರಾವರಿ ಸಚಿವರ ಭೇಟಿಗೆ ಸಮಯ ಕೇಳಲಾಗಿದ್ದು, ನೀರಾವರಿಯ ನಾಲ್ಕೈದು ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಹೇಳಿದ್ದಾರೆ.





