ಹಾವೇರಿ ಜಿಲ್ಲೆ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇನ್ನೂ ದಿನಾಂಕವೇ ನಿಗದಿಯಾಗಿಲ್ಲ. ಈ ಮೊದಲೇ ರಾಜಕೀಯ ಬಿರುಗಾಳಿ ಬೀಸುತ್ತಿದೆ. ಕಾಂಗ್ರೆಸ್‌ನಲ್ಲಿ ಈಗಲೇ ಟಿಕೆಟ್‌ಗಾಗಿ ಕಚ್ಚಾಟ ಶುರುವಾಗಿದೆ. ಇನ್ನೊಂದೆಡೆ ಬಿಜೆಪಿ ನಡೆ ನಿಗೂಢವಾಗಿದೆ. ಜೆಡಿಎಸ್ ಈಗಾಗಲೇ ಅಭ್ಯರ್ಥಿ ಘೋಷಣೆ ಮಾಡಿದ್ದು, ಎಲ್ಲ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ.
ಸಿ.ಎಂ ಉದಾಸಿಯವರ ನಿಧನದಿಂದಾಗಿ ತೆರವಾದ ಶಾಸಕ ಸ್ಥಾನಕ್ಕೆ ಹಲವು ಲೆಕ್ಕಾಚಾರಗಳು ಹರಿದಾಡುತ್ತಿದೆ. ಆರು ತಿಂಗಳೊಳಗಾಗಿ ಆಯೋಗ ಚುನಾವಣೆ ನಡೆಸಬೇಕಿದೆ. ಹಾಗಾಗಿ ಸದ್ಯದಲ್ಲೇ ಯಾವಾಗ ಬೇಕಾದರೂ ಚುನಾವನೆ ಘೋಷಣೆಯಾಗಬಹುದು. ಹೀಗಿರುವಾಗಲೇ ಕಾಂಗ್ರೆಸ್ ಮಾಜಿ ಸಚಿವ ಮನೋಹರ ತಹಶೀಲ್ದಾರ್ ಮತ್ತು ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಶ್ರೀನಿವಾಸ ನಡುವೆ ಭಾರೀ ಪೈಪೋಟಿ ನಡೆದಿದೆ.

ಹಾನಗಲ್ ಕ್ಷೇತ್ರ ಸಿ.ಎಂ ಉದಾಸಿಯವರ ಭದ್ರಕೋಟೆ. ಇದುವರೆಗೂ ಬೇರಾರೂ ಆಕಾಂಕ್ಷಿಗಳು ಪೈಪೋಟಿ ನಡೆಸಲು ಸಾಧ್ಯವಾಗಿರಲಿಲ್ಲ. ಆದರೀಗ, ಇವರ ನಿಧನದ ನಂತರ ಬಿಜೆಪಿ ಅಭ್ಯರ್ಥಿ ಯಾರು ಎಂಬ ಚರ್ಚೆ ಶುರುವಾಗಿದೆ.
ಸಿ.ಎಂ. ಉದಾಸಿಯವರ ನಿಧನದ ಅನುಕಂಪದ ಹಿನ್ನೆಲೆ ಕುಟುಂಬದವರಿಗೇ ಅವಕಾಶ ನೀಡಬಹುದು. ಹಾಗಾಗಿ ಸಂಸದ ಶಿವಕುಮಾರ ಉದಾಸಿಯವರನ್ನು ರಾಜ್ಯ ರಾಜಕಾರಣಕ್ಕೆ ತರುವ ಆಲೋಚನೆಗಳು ಬಿಜೆಪಿ ನಾಯಕರಿಗಿದೆ. ಲೋಕಸಭೆ ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿ ಇದೆ. ಈಗಲೇ ಶಿವಕುಮಾರ ಉದಾಸಿಯವರನ್ನು ವಿಧಾನಸಭೆಗೆ ಕಳುಹಿಸಿದರೆ ಲೋಕಸಭಾ ಕ್ಷೇತ್ರಕ್ಕೆ ಮತ್ತೆ ಉಪಚುನಾವಣೆ ನಡೆಸಬೇಕಾಗುತ್ತದೆ. ರಾಜ್ಯ ರಾಜಕಾರಣಕ್ಕೆ ಶಿವಕುಮಾರ ಉದಾಸಿ ಬರುವರೇ ಎಂಬುದು ಯಕ್ಷ ಪ್ರಶ್ನೆ. ಉದಾಸಿ ಕುಟುಂಬ ಬಿಟ್ಟರೆ ಬೇರೆಯವರಿಗಾದರೆ ಯಾರಿಗೆ ಮಣೆ ಹಾಕಬಹುದು ಎಂಬ ಸುಳಿವು ಸಿಗುತ್ತಿಲ್ಲ.
ಇನ್ನೊಂದೆಡೆ ಬಿಜೆಪಿಯಲ್ಲಿ ಎಬಿವಿಪಿ ಮೂಲಕ ರಾಜಕೀಯ ನೆಲೆ ಕಂಡುಕೊಂಡ ಭೋಜರಾಜ ಕರೂದಿ ಪಕ್ಷ ಈ ಬಾರಿ ನನಗೆ ಅಭ್ಯರ್ಥಿಯಾಗುವ ಅವಕಾಶ ನೀಡುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. ಸಂಘಟನೆ, ಸಂಘ ಪರಿವಾರದ ಆಶೀರ್ವಾದದಿಂದ ಅವಕಾಶ ಸಿಕ್ಕರೂ ಸಿಗಬಹುದು ಎನ್ನಲಾಗುತ್ತಿದೆ.

ಈ ಮಧ್ಯೆ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಷ್ಠೆ ಕಣವಾಗಿ ಸ್ವೀಕರಿಸಿದ್ದಾರಂತೆ. ಹಾಗಾಗಿಯೇ ಕಾಂಗ್ರೆಸ್ ಟಿಕೆಟ್ಗಾಗಿ ಕಿತ್ತಾಡುತ್ತಿದ್ದ ಮಾಜಿ ಸಚಿವ ಮನೋಹರ ತಹಶೀಲ್ದಾರ್ ಮತ್ತು ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಶ್ರೀನಿವಾಸ ಫುಲ್ ಸೈಲೆಂಟ್ ಆಗಿದ್ದಾರೆ.
ಈಗ ಸಿಎಂ ಬಸವರಾಜ್ ಬೊಮ್ಮಾಯಿ ಹಾನಗಲ್ ಕ್ಷೇತ್ರದ ಉಪಚುನಾವಣೆಯನ್ನು ಸೀರಿಯಸ್ಸಗಾಗಿ ಪರಿಗಣಿಸಿದ್ದಾರೆ. ಬಸವರಾಜ್ ಬೊಮ್ಮಾಯಿ ಸಿಎಂ ಆದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ ಇದು. ಅಲ್ಲದೇ ತವರು ಜಿಲ್ಲೆಯದ್ದು ಬೇರೆ. ಆದ್ದರಿಂದ ನಾವು ಚುನಾವಣೆಯಲ್ಲಿ ಗೆಲ್ಲೋದು ಡೌಟು ಎಂದು ಕಾಂಗ್ರೆಸ್ ನಾಯಕರು ಫುಲ್ ಸೈಲೆಂಟ್ ಆಗಿದ್ದಾರೆ. ಬೊಮ್ಮಾಯಿ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲು ಹಲವು ಕಾರಣಗಳು ಹೀಗಿವೆ.
- ಬಸವರಾಜ್ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ ಕ್ಷೇತ್ರದ ಪಕ್ಕದಲ್ಲೇ ಇದೆ ಹಾನಗಲ್
- ಬೊಮ್ಮಾಯಿ ತಮ್ಮ ಸ್ವಂತ ಕ್ಷೇತ್ರದಂತೆ ಪರಿಗಣಿಸಿ ಉಪ ಚುನಾವಣೆ ಎದುರಿಸಲು ಮುಂದಾಗಿದ್ದಾರೆ
- ಹಾನಗಲ್ ಕ್ಷೇತ್ರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ತವರು ಜಿಲ್ಲೆಯ ಕ್ಷೇತ್ರ
- ತಮ್ಮ ತವರು ಜಿಲ್ಲೆಯ ಚುನಾವಣೆ ಸಿಎಂ ಪಾಲಿಗೆ ಪ್ರತಿಷ್ಠೆಯೇ ಹೌದು
- ಹಾನಗಲ್ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಉದಾಸಿಯವರನ್ನು ಪರಮ ಗುರು ಎಂದೇ ಆರಾಧಿಸುವ ಬಸವರಾಜ್ ಬೊಮ್ಮಾಯಿ
- ಹಾನಗಲ್ ಉಪಚುನಾವಣೆಯನ್ನು ಭಾವನಾತ್ಮಕವಾಗಿಯೂ ಗೆಲ್ಲಲೇಬೇಕಾದ ಯುದ್ಧವಾಗಿ ಪರಿಗಣಿಸಿದ್ದಾರೆ.
- ಬಸವರಾಜ್ ಬೊಮ್ಮಾಯಿಯವರ ರಾಜಕೀಯ ಏಳಿಗೆಯಲ್ಲಿ ಉದಾಸಿಯವರ ಪಾತ್ರವೂ ಇದೆ
- ಈ ಉಪಚುನಾವಣೆ ಗೆಲ್ಲುವ ಮೂಲಕ ಗುರುಗಳ ಋಣ ತೀರಿಸುವ ಸಂಕಲ್ಪ ಬೊಮ್ಮಾಯಿ ಅವರದ್ದು




