ರಾಜಕಾರಣಿಗಳ ಒತ್ತಡಕ್ಕೆ ಮಣಿದು ಸರ್ಕಾರಿ ಅಧಿಕಾರಿಗಳು ಕಾನೂನನ್ನೂ ಗಾಳಿಗೆ ತೂರಿ ಎಂತಹ ಆದೇಶವನ್ನಾದರೂ ಹೊರಡಿಸುತ್ತಾರೆ. ಕೆಲವೊಂದು ಪ್ರಕರಣಗಳಲ್ಲಿ ಸಿಕ್ಕಿ ಹಾಕಿಕೊಂಡು ಬಚಾವಾದ ನಿದರ್ಶನಗಳು ನಮ್ಮ ಮುಂದಿವೆ. ಏಕೆಂದರೆ, ಅಂತಹ ಅಧಿಕಾರಿಗಳ ಮೇಲೆ ರಾಜಕಾರಣಿಗಳ ಅಭಯಹಸ್ತ ಇರುತ್ತದೆ.
ಈ ಕಾರಣದಿಂದಲೇ ನ್ಯಾಯಾಲಯಗಳು ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗದ ಮೇಲೊಂದು ಕಣ್ಣಿಟ್ಟಿರುತ್ತವೆ. ಯಾವುದೇ ಕಾರಣಕ್ಕೂ ರಾಜಕಾರಣಿಗಳು ಕಾರ್ಯಾಂಗದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹಲವು ಬಾರಿ ಎಚ್ಚರಿಕೆಯ ಸಂದೇಶಗಳನ್ನೂ ನ್ಯಾಯಾಲಯಗಳು ನೀಡಿವೆ.
ಆದರೆ, ಈ ಆದೇಶಗಳನ್ನು ಬದಿಗೊತ್ತುವ ಅಧಿಕಾರಿಗಳು ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡುತ್ತಿರುತ್ತವೆ. ಇದಕ್ಕೊಂದು ತಾಜಾ ಉದಾಹರಣೆ ಇತ್ತೀಚೆಗೆ ಬಿಬಿಎಂಪಿ ಆಯುಕ್ತರು ಮುಖ್ಯಮಂತ್ರಿಗಳು ಆದೇಶ ನೀಡಿದರು ಎಂಬ ಕಾರಣಕ್ಕೆ ಅವಧಿಗೆ ಮುನ್ನವೇ ಇಂಜಿನಿಯರ್ ಒಬ್ಬರನ್ನು ವರ್ಗಾವಣೆ ಮಾಡಿ ಇಕ್ಕಟ್ಟಿಗೆ ಸಿಕ್ಕಿಕೊಂಡಿದ್ದಾರಷ್ಟೇ ಅಲ್ಲ, ಹೈಕೋರ್ಟಿನಿಂದ ತಪರಾಕಿಯನ್ನೂ ಹಾಕಿಸಿಕೊಂಡಿದ್ದಾರೆ.
ಕೆ.ಎಂ.ವಾಸು ಅವರು ಬಿಬಿಎಂಪಿಯ ಹೆಬ್ಬಾಳ ವಿಭಾಗದಲ್ಲಿ ಕಾರ್ಯಕಾರಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇವರು 2020 ರ ಮಾರ್ಚ್ ವರೆಗೆ ಎರವಲು ಸೇವೆಯಲ್ಲಿ ಇಲ್ಲಿಗೆ ನಿಯೋಜನೆಗೊಂಡಿದ್ದರು. ಆದರೆ, ಅದಕ್ಕೂ ಮುನ್ನವೇ ಮುಖ್ಯಮಂತ್ರಿಗಳ ಕಚೇರಿಯಿಂದ ಬಿಬಿಎಂಪಿಗೆ ಆದೇಶವೊಂದು ಬರುತ್ತದೆ. ವಾಸು ಅವರ ಜಾಗಕ್ಕೆ ಲೋಕೋಪಯೋಗಿ ಇಲಾಖೆಯ ಕಾರ್ಯಕಾರಿ ಇಂಜಿನಿಯರ್ ಜಿ.ಆರ್.ದೇವೇಂದ್ರ ನಾಯಕ್ ಎಂಬುವರನ್ನು ಎರವಲು ಸೇವೆ ಆಧಾರದಲ್ಲಿ ನಿಯೋಜನೆ ಮಾಡುವಂತೆ ಆದೇಶ ನೀಡಲಾಗಿರುತ್ತದೆ. ಈ ಆದೇಶದನ್ವಯ ಬಿಬಿಎಂಪಿ 2019 ರ ಅಕ್ಟೋಬರ್ 24 ರಂದು ವಾಸು ಜಾಗಕ್ಕೆ ದೇವೇಂದ್ರ ನಾಯಕ್ ಅವರನ್ನು ನಿಯೋಜನೆ ಮಾಡಿ ಆದೇಶ ಹೊರಡಿಸುತ್ತದೆ. ಆಗ ವಾಸು ಅವರಿಗೆ ಬೇರೆ ಜಾಗವನ್ನು ತೋರಿಸಿರಲಿಲ್ಲ.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಕೇಂದ್ರ ಸಚಿವರೊಬ್ಬರು ದೇವೇಂದ್ರ ನಾಯಕ್ ಅವರನ್ನು ಬಿಬಿಎಂಪಿ ಹೆಬ್ಬಾಳ ವಿಭಾಗದ ಕಾರ್ಯಕಾರಿ ಇಂಜಿನಿಯರ್ ಹುದ್ದೆಗೆ ನಿಯೋಜನೆ ಮಾಡುವಂತೆ ಶಿಫಾರಸು ಮಾಡಿ ಮುಖ್ಯಮಂತ್ರಿಗೆ ಪತ್ರ ಕಳುಹಿಸಿರುತ್ತಾರೆ. ಕೂಡಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳು ಷರಾ ಬರೆದು ಬಿಬಿಎಂಪಿಗೆ ಕಳುಹಿಸುತ್ತಾರೆ. ಹೇಳಿ ಕೇಳಿ ಮುಖ್ಯಮಂತ್ರಿಗಳು ನೀಡಿರುವ ಆದೇಶವಲ್ಲವೇ? ಇದನ್ನು ತಿರಸ್ಕರಿಸುವಂತಿಲ್ಲ ಎಂಬ ಕಾರಣಕ್ಕೆ ಬಿಬಿಎಂಪಿ ವಾಸು ಅವರನ್ನು ಅವಧಿ ಪೂರ್ವವೇ ವರ್ಗಾವಣೆ ಮಾಡಿ ಆದೇಶ ಹೊರಡಿಸಿರುತ್ತದೆ.
ಬಿಬಿಎಂಪಿಯ ಈ ಕ್ರಮವನ್ನು ಪ್ರಶ್ನಿಸಿ ವಾಸು ಅವರು ಹೈಕೋರ್ಟ್ ಮೆಟ್ಟಿಲೇರಿ ಬಿಬಿಎಂಪಿ, ಬಿಬಿಎಂಪಿಯ ಉಪ ಆಯುಕ್ತ (ಆಡಳಿತ) ಮತ್ತು ದೇವೇಂದ್ರ ನಾಯಕ್ ಅವರನ್ನು ಪಾರ್ಟಿ ಮಾಡಿರುತ್ತಾರೆ.
ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟಿನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು, ಬಿಬಿಎಂಪಿ ಆದೇಶದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೊಂದು ನಿಯಮಾವಳಿಗಳನ್ನು ಉಲ್ಲಂಘಿಸಿ ಮಾಡಿರುವಂತಹ ಅಕ್ರಮ ವರ್ಗಾವಣೆ ಪ್ರಕರಣವಾಗಿದೆ. ಇದು ಭಾರೀ ದಂಡ ವಿಧಿಸಲು ಹೇಳಿ ಮಾಡಿಸಿದ ಪ್ರಕರಣವಾಗಿದೆ. ಆದರೆ, ದಂಡ ವಿಧಿಸಲು ಇಷ್ಟವಿಲ್ಲ. ಆದ್ದರಿಂದ ಇಂತಹ ಅಕ್ರಮ ವರ್ಗಾವಣೆಯನ್ನು ಮಾಡುವುದು ಪುನಾರಾವರ್ತನೆಯಾಗಬಾರದು. ಹಾಗೊಂದು ವೇಳೆ ಆಗಿದ್ದೇ ಆದಲ್ಲಿ ತಕ್ಕ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಇದು ನಿಮಗೆ ಕಡೆಯ ಎಚ್ಚರಿಕೆ ಎಂದು ಭಾವಿಸಿ ಎಂದು ಆದೇಶ ನೀಡಿದ್ದಾರೆ.
ಇಷ್ಟೇ ಅಲ್ಲ. ಬಿಬಿಎಂಪಿ ಮಾಡಿದ್ದ ವರ್ಗಾವಣೆ ಆದೇಶವನ್ನೂ ರದ್ದು ಮಾಡಿ ವಾಸು ಅವರನ್ನು ಮುಂದುವರಿಸಬೇಕೆಂದು ಆದೇಶ ನೀಡಿದ್ದಾರೆ.
ಬಿಬಿಎಂಪಿ ಆಯುಕ್ತರು ಇಂತಹ ವಿಚಾರಗಳಲ್ಲಿ ಕಾರಣಗಳ ನಿಯಮ ಮತ್ತು ನ್ಯಾಯಯುತವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೇ ವಿನಃ ಯಾವುದೇ ಒತ್ತಡಗಳಿಗೆ ಮಣಿಯಬಾರದು. ಇಂತಹ ತಪ್ಪುಗಳು ಮರುಕಳಿಸಬಾರದು ಎಂದೂ ನ್ಯಾಯಮೂರ್ತಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.