ಮುಂದಿನ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಾಧೀಶ ಸ್ಥಾನಕ್ಕೆ ಜಸ್ಟೀಸ್ ಉದಯ್ ಉಮೇಶ್ ಲಲಿತ್ ಹೆಸರನ್ನು ಸಿಜೆಐ ಎನ್ ವಿ ರಮಣ ಅವರು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.
ಬುಧವಾರ ದಿನಾಂಕವಿರುವ ಅಂದರೆ 03.08.2022ರ ಶಿಫಾರಸ್ಸು ಪತ್ರದ ಒಂದು ಪ್ರತಿಯನ್ನು ಎನ್ ವಿ ರಮಣ ಅವರೇ ಖುದ್ದಾಗಿ ಉದಯ್ ಉಮೇಶ್ ಅವರಿಗೆ ತಲುಪಿಸಿದ್ದಾರೆ ಎಂದು ವರದಿಯಾಗಿದೆ.
ಗಮನಿಸಬೇಕಾದ ಅಂಶವೇನೆಂದರೆ, ರಮಣ ಅವರು ನಿವೃತ್ತಿಯಾಗುವ ಮುಂಚೆ ಅವರ ಸ್ಥಾನಕ್ಕೆ ಉತ್ತರಾಧಿಕಾರಿಯನ್ನು ನೇಮಿಸುವಂತೆ ಬುಧವಾರ ರಾತ್ರಿ 9.30ಕ್ಕೆ ಕೇಂದ್ರ ಕಾನೂನು ಸಚಿವಾಲಯದಿಂದ ಮನವಿ ಮಾಡಲಾಗಿತ್ತು. ಈ ಪತ್ರ ಸ್ವೀಕರಿಸುವ ಮೊದಲೇ ಜಸ್ಟೀಸ್ ರಮಣ ಅವರು ತಾವು ಬರೆದಿರುವ ಶಿಫಾರಸು ಪತ್ರವನ್ನು ಜಸ್ಟೀಸ್ ಉದಯ್ ಉಮೇಶ್ ಅವರಿಗೆ ನೀಡಿದ್ದಾರೆ.
ಜಸ್ಟೀಸ್ ರಮಣ ಆಗಸ್ಟ್ 26ರಂದು ನಿವೃತ್ತಿ ಹೊಂದಲಿದ್ದಾರೆ. ಇದರ ಬಳಿಕವಷ್ಟೇ ಅತ್ಯಂತ ಕಡಿಮೆ ಅವಧಿಗೆ ಜಸ್ಟೀಸ್ ಉದಯ್ ಸಿಜೆಐ ಆಗಿ ನೇಮಕವಾಗಲಿದ್ದಾರೆ. ಉದಯ್ ಅವರು ನವೆಂಬರ್ 8, 2022ರಂದು ನಿವೃತ್ತಿ ಹೊಂದಲಿದ್ದಾರೆ.

1983 ಜೂನ್ ತಿಂಗಳಲ್ಲಿ ವಕೀಲ ವೃತ್ತಿ ಆರಂಭಿಸಿದ ಜಸ್ಟೀಸ್ ಉದಯ್ ಆಗಸ್ಟ್ 13, 2014ರಂದು ಸುಪ್ರಿಂ ಕೋರ್ಟ್ ಜಡ್ಜ್ ಆಗಿ ನೇಮಕಗೊಂಡಿದ್ದರು.










