• Home
  • About Us
  • ಕರ್ನಾಟಕ
Sunday, January 18, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಚಿತ್ರರಂಗದ ವಾಸ್ತವತೆಯೂ ರಚನಾತ್ಮಕ ಸಮಸ್ಯೆಗಳೂ

ನಾ ದಿವಾಕರ by ನಾ ದಿವಾಕರ
August 28, 2024
in Top Story, ಕರ್ನಾಟಕ, ವಾಣಿಜ್ಯ, ವಿಶೇಷ, ಶೋಧ, ಸಿನಿಮಾ
0
ಚಿತ್ರರಂಗದ ವಾಸ್ತವತೆಯೂ ರಚನಾತ್ಮಕ ಸಮಸ್ಯೆಗಳೂ
Share on WhatsAppShare on FacebookShare on Telegram


ADVERTISEMENT

ನ್ಯಾ. ಹೇಮಾ ಸಮಿತಿಯ ವರದಿ ಚಿತ್ರರಂಗದಲ್ಲಿ ಸುಧಾರಣೆಗಳ ಅನಿವಾರ್ಯತೆಯನ್ನು ಒತ್ತಿಹೇಳುತ್ತದೆ
ಕಲೀಸ್ವರಂ ರಾಜ್-ತುಳಸಿ ಕೆ ರಾಜ್‌
( ಮೂಲ : Reality of reel life ̧ exploitation as a structural problem – Kaleeswaram Raj & Thulasi K Raj ̲- ದ ಹಿಂದೂ 26 ಆಗಸ್ಟ್‌ 2024)
ಕನ್ನಡಕ್ಕೆ : ನಾ ದಿವಾಕರ
ಆಗಸ್ಟ್‌ 29ರಂದು ಕೇರಳ ಸರ್ಕಾರ ನೇಮಿಸಿದ್ದ ನ್ಯಾಯಮೂರ್ತಿ ಕೆ. ಹೇಮಾ ಸಮಿತಿಯ ಅಂತಿಮ ವರದಿಯನ್ನು ಈಗ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿದ್ದು ಮಲಯಾಳಿ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಜಟಿಲ ಸವಾಲುಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 2017ರಲ್ಲಿ ರಚಿಸಲಾದ ನ್ಯಾ. ಕೆ. ಹೇಮಾ ಸಮಿತಿ 2019ರಲ್ಲೇ ತನ್ನ ಅಂತಿಮ ವರದಿಯನ್ನು ಸಲ್ಲಿಸಿತ್ತು. ಕೇರಳದ ಎಲ್‌ಡಿಎಫ್‌ ಸರ್ಕಾರ ಈ ವರದಿಯ ಪರಿಷ್ಕೃತ ಆವೃತ್ತಿಯನ್ನು ಈಗ ಸಾರ್ವಜನಿಕರ ಮುಂದಿರಿಸಿದೆ. ನ್ಯಾ. ಹೇಮಾ ವರದಿಯಲ್ಲಿ ದೇಶೀಯ ಭಾಷೆಗಳ ಚಲನಚಿತ್ರರಂಗದಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳನ್ನು ಚರ್ಚಿಸಲಾಗಿದೆಯಾದರೂ, ಇಲ್ಲಿ ಪ್ರಸ್ತಾಪಿಸಲಾಗಿರುವ ವಿಷಯಗಳು ಸೀಮಾತೀತವಾಗಿರುವುದು ಸ್ಪಷ್ಟ.
ನ್ಯಾ. ಹೇಮಾ ವರದಿಯು ಮುಖ್ಯವಾಗಿ ಎರಡು ವಿಷಯಗಳನ್ನು ಪ್ರಸ್ತಾಪಿಸುತ್ತದೆ. ಮೊದಲನೆಯದು ಸಿನೆಮಾ ರಂಗದಲ್ಲಿ ಮಹಿಳೆಯರ ಲೈಂಗಿಕ ಶೋಷಣೆ ಮತ್ತು ದಾಳಿಯನ್ನು ಕುರಿತಾದದ್ದು. ಚಿತ್ರರಂಗದಲ್ಲಿ ಅವಕಾಶ ಪಡೆಯುವ ಸಲುವಾಗಿ ಮಹಿಳೆಯರು ಪುರುಷರ ಲೈಂಗಿಕ ಬಯಕೆಗಳನ್ನು ಪೂರೈಸುವ ಒತ್ತಡ ಎದುರಿಸುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಈ ರೀತಿ ಸಹಕಾರ ನೀಡಲೊಪ್ಪದ ಮಹಿಳಾ ಕಲಾವಿದರು ಬಲಾಢ್ಯರ ಪ್ರಭಾವದಿಂದ ಅವಕಾಶವಂಚಿತರಾಗುವುದನ್ನು ವರದಿ ಪ್ರಸ್ತಾಪಿಸುತ್ತದೆ. ಎರಡನೆಯ ಅಂಶವೆಂದರೆ ಚಲನಚಿತ್ರರಂಗದಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದು ಹಲವು ರೀತಿಯ ತಾರತಮ್ಯಗಳನ್ನು ಎದುರಿಸುತ್ತಿರುವುದು. ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ, ಕೆಲಸದ ಸ್ಥಳಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಲಿಂಗತ್ವ ಅಸಮಾನತೆಯ ಬಗೆಗಿನ ಚರ್ಚೆಗೆ ಈಗ ಅವಕಾಶ ದೊರೆತಂತಾಗಿದೆ. ಕೊಲ್ಕತ್ತಾದ ಆರ್‌ಜಿ ಕಾರ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಭೀಕರ ಅತ್ಯಾಚಾರ-ಹತ್ಯೆಯ ಹಿನ್ನೆಲೆಯಲ್ಲಿ ಈ ಚರ್ಚೆ ಮತ್ತಷ್ಟು ಕಾವು ಪಡೆದುಕೊಂಡಿದೆ.
ಹಲ್ಲೆಕೋರ ಸಂಸ್ಕೃತಿಯ ಸುತ್ತ
ನ್ಯಾ. ಹೇಮಾ ಸಮಿತಿಯಲ್ಲಿ ವ್ಯಕ್ತಪಡಿಸಲಾಗಿರುವ ಕಾಳಜಿಗಳು ಮನಸ್ಸನ್ನು ಪ್ರಕ್ಷುಬ್ಧಗೊಳಿಸುವಂತಿವೆ. ಆದರೆ ಇದು ಅಚ್ಚರಿಯನ್ನೇನೂ ಉಂಟುಮಾಡುವುದಿಲ್ಲ. ಭಾರತದಂತಹ ಒಂದು ಸಾಂಪ್ರದಾಯಿಕ, ಪಿತೃಪ್ರಧಾನ ಸಮಾಜದಲ್ಲಿ ಮಹಿಳೆಯರು ದಿನನಿತ್ಯ ಎದುರಿಸುವ ಸಮಸ್ಯೆಗಳ ವಿಸ್ತರಣೆಯಾಗಿ ಇದನ್ನು ನೋಡಬಹುದು. ಮಹಿಳೆಯರು ಸಮಾಜದಲ್ಲಿ ಹೇಗೆ ವರ್ತಿಸಬೇಕು, ಅವರಿಂದ ಏನು ನಿರೀಕ್ಷಿಸಲಾಗುತ್ತದೆ ಎಂಬುದರ ಬಗ್ಗೆ ಭಾರತೀಯ ಸಮಾಜದಲ್ಲಿ ಏಕರೀತಿಯ ಅಭಿಪ್ರಾಯವನ್ನು ಪ್ರಚಲಿತಗೊಳಿಸಲಾಗಿದೆ. ಹಾಗಾಗಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ಪ್ರತ್ಯೇಕವಾಗಿ ಚರ್ಚಿಸಲು ಸಾಧ್ಯವಾಗುವುದಿಲ್ಲ. ಈ ದೃಷ್ಟಿಯಿಂದ ನೋಡಿದಾಗ ಅತ್ಯಾಚಾರವನ್ನು ಒಬ್ಬ ದುಷ್ಟ ವ್ಯಕ್ತಿ ಎಸಗಿರುವ ಪಾತಕ ಕೃತ್ಯ ಎಂದು ಪರಿಗಣಿಸಲಾಗುವುದಿಲ್ಲ. ಲೈಂಗಿಕ ಕ್ರಿಯೆಗಳಲ್ಲಿ ಮಹಿಳೆಯ ಸಮ್ಮತಿಯನ್ನು ಅಪ್ರಸ್ತುತ ಎಂದೇ ಪರಿಗಣಿಸುವ ಸಾಮಾಜಿಕ ಧೋರಣೆಯ ಪರಿಣಾಮದಂತೆ ಇದನ್ನು ನೋಡಬೇಕಾಗಿದೆ.


ಲೈಂಗಿಕ ದೌರ್ಜನ್ಯವನ್ನು ವ್ಯಕ್ತಿಗತ ನೆಲೆಯಲ್ಲಿ ನೋಡುವ ದೃಷ್ಟಿಕೋನವು ನಮ್ಮ ಗಮನವನ್ನು ವಾಸ್ತವ ಸನ್ನಿವೇಶದಿಂದ ದೂರಮಾಡುತ್ತದೆ. ಹೆಣ್ಣುಮಕ್ಕಳು ಯಾವ ಉಡುಪು ಧರಿಸಬೇಕು, ಯಾರೊಡನೆ ಸ್ನೇಹ ಬೆಳೆಸಬೇಕು ಎಂಬ ವಿಚಾರಗಳಲ್ಲಿ ವ್ಯಕ್ತಿಗತವಾದ ಆಯ್ಕೆಯನ್ನೇ ಮಹಿಳೆಯಿಂದ ಕಸಿದುಕೊಳ್ಳಲಾಗುತ್ತದೆ. ಈ ಧೋರಣೆಯ ಒಂದು ಕ್ರೂರ ಅಭಿವ್ಯಕ್ತಿಯಾಗಿ ಅತ್ಯಾಚಾರಗಳು ನಡೆಯುತ್ತವೆ. ಇಲ್ಲಿ ಮಹಿಳೆಯನ್ನು ಸ್ವಾಯತ್ತ ವ್ಯಕ್ತಿಯಾಗಿ ಅಥವಾ ಘನತೆಯ ವ್ಯಕ್ತಿಯಾಗಿ ಪರಿಗಣಿಸುವುದೇ ಇಲ್ಲ. ಮಹಿಳೆಯನ್ನು ಭೋಗದ ವಸ್ತುವಿನ ಹಾಗೆ ನೋಡುವ ಸಾಮಾನ್ಯೀಕರಣಗೊಂಡ ದೃಷ್ಟಿಕೋನ, ಲಿಂಗತ್ವದ ಏಕರೂಪಿ ವ್ಯಾಖ್ಯಾನಗಳು ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಲು ಮುಖ್ಯ ಕಾರಣಗಳಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಯ ಅನುಸಾರ 2022ರಲ್ಲಿ 31,516 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಅಂದರೆ ಪ್ರತಿ 16 ನಿಮಿಷಕ್ಕೆ ಒಂದು ಅತ್ಯಾಚಾರ ನಡೆಯುತ್ತದೆ. ಈ ಮಹಿಳಾ ದೌರ್ಜನ್ಯದ ಮತ್ತೊಂದು ಆಯಾಮವನ್ನು ಕೆಲಸದ ಸ್ಥಳಗಳ ಕಿರುಕುಳಗಳಲ್ಲಿ ಕಾಣಬಹುದು.
ಕೆಲಸದ ಸ್ಥಳಗಳ ಕಿರುಕುಳಕ್ಕೆ ಸಂಬಂಧಿಸಿದಂತೆ “ ವಿಶಾಖ ಮತ್ತಿತರರು Vs ರಾಜಸ್ಥಾನ ಸರ್ಕಾರ-ಇತರರು (1997)” ಮೊಕದ್ದಮೆ ಉಲ್ಲೇಖನೀಯ. ಈ ಮೊಕದ್ದಮೆಯಲ್ಲಿ ಕೆಲಸದ ಸ್ಥಳಗಳಲ್ಲಿ ದುಡಿಯುವ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ಮೊಕದ್ದಮೆಯಲ್ಲಿ ಕೆಲಸದ ಸ್ಥಳಗಳಲ್ಲಿ ಕಿರುಕುಳವನ್ನು ತಡೆಗಟ್ಟುವ ನಿಟ್ಟಿನಲ್ಲಿ, ಸುಪ್ರೀಂಕೋರ್ಟ್‌ ಹಲವು ಮಾರ್ಗದರ್ಶಕ ನಿಯಮಗಳ ಸರಣಿಯನ್ನು ಸೂಚಿಸಿತ್ತು. ಇದು ಭಾರತದ ನ್ಯಾಯಾಂಗದ ಒಂದು ವಿಶಿಷ್ಟವಾದ ನ್ಯಾಯಿಕ ಶಾಸನ ಎಂದೂ ಹೇಳಬಹುದು. ಈ ನಿಯಮಗಳಲ್ಲಿ ಬಹುಮುಖ್ಯವಾಗಿ ಲೈಂಗಿಕ ಕಿರುಕುಳವನ್ನು ತಡೆಗಟ್ಟುವ ನಿಟ್ಟಿನಲ್ಲಿ ಉದ್ಯೋಗದಾತರ ಕರ್ತವ್ಯಗಳನ್ನು ಸೂಚಿಸಲಾಗಿತ್ತು. ಇದರೊಟ್ಟಿಗೆ ಸಂತ್ರಸ್ತ ವ್ಯಕ್ತಿಗಳ ಕುಂದುಕೊರತೆಗಳನ್ನು ಆಲಿಸಿ ಬಗೆಹರಿಸುವ ಸಲುವಾಗಿ ದೂರು ಪರಿಹಾರ ಕಾರ್ಯವಿಧಾನಗಳನ್ನು ರೂಪಿಸುವಂತೆಯೂ ಹೇಳಲಾಗಿತ್ತು.
ಸುಪ್ರೀಂಕೋರ್ಟ್‌ ಈ ತೀರ್ಪು ನೀಡಿ 16 ವರ್ಷಗಳ ಅನಂತರ 2013ರಲ್ಲಿ, “ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ 2013” ಜಾರಿಯಾಗಿತ್ತು. ಈ ಶಾಸನದ ಬಹುಮುಖ್ಯ ಅಂಶ ಎಂದರೆ ಸಂತ್ರಸ್ತ ಮಹಿಳೆಯರು ಸಂಪರ್ಕಿಸಬಹುದಾದ ಆಂತರಿಕ ದೂರು ಸಮಿತಿ (Internal Complaints Committee-ICC) ರಚಿಸುವುದು ಎಲ್ಲ ಸಂಸ್ಥೆಗಳಲ್ಲೂ ಕಡ್ಡಾಯ ಮಾಡಲಾಗಿತ್ತು. ಈ ಕಾಯ್ದೆಯ ಸೆಕ್ಷನ್‌ 2(ಒ) ಅನುಸಾರ ಕೆಲಸದ ಸ್ಥಳವನ್ನು ವಿಶಾಲ ಭೂಮಿಕೆಯಲ್ಲಿ ನಿರ್ವಚಿಸಲಾಗಿದ್ದು ಅದರಲ್ಲಿ ಚಲನಚಿತ್ರರಂಗವನ್ನೂ ಒಳಗೊಳ್ಳಲಾಗಿತ್ತು.


ನ್ಯಾ. ಹೇಮಾ ಸಮಿತಿಯ ವರದಿಯು ಚಲನಚಿತ್ರ ರಂಗದಲ್ಲಿ ಈ ICC ಸೂಕ್ತವಾದದ್ದಲ್ಲ ಎಂದು ಸೂಚಿಸಿದೆ. ಏಕೆಂದರೆ ಕಿರುಕುಳ ನೀಡುವ ವ್ಯಕ್ತಿ ಅಥವಾ ಉದ್ಯೋಗದಾತರು ಈ ಸಮಿತಿಯ ಸದಸ್ಯರ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ಸಿನೆಮಾ ರಂಗದಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಸರ್ಕಾರವು ಪ್ರತ್ಯೇಕ ಸ್ವತಂತ್ರ ವೇದಿಕೆಯೊಂದನ್ನು ಸ್ಥಾಪಿಸುವಂತೆ ನ್ಯಾ. ಹೇಮಾ ಸಮಿತಿಯು ಸಲಹೆ ನೀಡುತ್ತದೆ. ಆದರೆ ಈ ಸಮಸ್ಯೆಯು ಆಂತರಿಕ ದೂರು ಸಮಿತಿ ಎದುರಿಸುವ ಸವಾಲಾಗಿದ್ದು ಇದು ಸಿನೆಮಾ ರಂಗಕ್ಕೆ ಮಾತ್ರವೇ ಸೀಮಿತವಾದದ್ದಲ್ಲ. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಉತ್ತರದಾಯಿತ್ವವನ್ನು ಗುರುತಿಸುವಂತಹ ಹೆಚ್ಚುವರಿ ರಕ್ಷಣಾ ಮಾರ್ಗಗಳನ್ನು ಅನುಸರಿಸುವುದು ಸೂಕ್ತವಾಗಬಹುದು. ಹಾಗಾಗಿ ಸಂಸದೀಯ ಶಾಸನದಲ್ಲಿ ಸೂಚಿಸಿರುವ ದೂರು ಪರಿಹಾರ ಕಾರ್ಯವಿಧಾನದ ಮಾದರಿಯನ್ನೇ ನಗಣ್ಯಗೊಳಿಸುವ ಸೂಚನೆ ಒಪ್ಪುವಂತಹುದಲ್ಲ.
ಅಪರಾಧಗಳ ನೋಂದಣಿ
ಸಮಿತಿಯ ವರದಿಗೆ ಅನುಸಾರವಾಗಿ , ನಡೆದಿರುವ ಅಪರಾಧಿ ಕೃತ್ಯಗಳನ್ನು ದಾಖಲಿಸುವಲ್ಲಿ ಕೊರತೆ ಇರುವುದನ್ನು ಹಲವರು ಪ್ರಶ್ನಿಸಿದ್ದಾರೆ. ತನಿಖೆಯನ್ನು ಏಕೆ ಆದೇಶಿಸಿಲ್ಲ, ಆರೋಪಿಯನ್ನು ಏಕೆ ವಿಚಾರಣೆಗೊಳಪಡಿಸಿ ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಲಾಗಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ಕಾಳಜಿ ವಿವೇಕಯುತವಾದುದು. ಈಗ ಸಲ್ಲಿಸಲಾಗಿರುವ ವರದಿಯು ಪರಿಷ್ಕೃತ ಆವೃತ್ತಿಯಾಗಿದ್ದು, ಇದರಲ್ಲಿ ಸಂತ್ರಸ್ತರ ಹಾಗೂ ಆರೋಪಿಗಳ ಹೆಸರನ್ನು ಬದಲಿಸಲಾಗಿದೆ. ದಾಳಿಗೊಳಗಾದವರ ಗೋಪ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಸಂತ್ರಸ್ತರ ಹೆಸರುಗಳನ್ನು ಮರೆಮಾಚುವುದು ನ್ಯಾಯಯುತವೇ ಆಗಿರುತ್ತದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಪರಾಧ ನ್ಯಾಯಶಾಸ್ತ್ರದ ನಿಯಮದ ಅನ್ವಯ ಈ ಪದ್ಧತಿಯನ್ನು ಅನುಸರಿಸಲಾಗುತ್ತದೆ. ತನಿಖೆಯ ಸಂದರ್ಭದಲ್ಲಿ ಮತ್ತು ವಿಚಾರಣೆಯಲ್ಲೂ ಸಹ ಈ ಗೋಪ್ಯತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.


ನಿಪುನ್‌ ಸಕ್ಷೇನಾ Vs ಭಾರತದ ಒಕ್ಕೂಟ ( 2018) ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣವನ್ನು ಕಾಣಬಹುದು. ಭಾರತೀಯ ದಂಡ ಸಂಹಿತೆ ಸೆಕ್ಷನ್‌ 228ಎ (IPC) , ಈಗಿನ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 72 ಮತ್ತು 73ರ ಅನ್ವಯ, ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರ ಹೆಸರು ಮತ್ತು ಅಸ್ಮಿತೆಯನ್ನು ಗೋಪ್ಯವಾಗಿಡದೆ ಬಹಿರಂಗಪಡಿಸಿದರೆ ದಂಡ ವಿಧಿಸಬಹುದಾಗಿರುತ್ತದೆ. ಈ ನಿಯಮಗಳು ಬಹುಮಟ್ಟಿಗೆ ಒಂದೇ ಮಾದರಿಯದ್ದಾಗಿರುವುದರಿಂದ ನಿಪುನ್‌ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್‌ ನೀಡಿದ ತೀರ್ಪು ಈ ಕ್ಷೇತ್ರದಲ್ಲೂ ಅನ್ವಯವಾಗುತ್ತದೆ. ಈ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌, ಸಂತ್ರಸ್ತರನ್ನು ಪ್ರತಿಕೂಲ ತಾರತಮ್ಯಗಳಿಂದ ಮತ್ತು ಭವಿಷ್ಯದಲ್ಲಿ ಮತ್ತಷ್ಟು ಕಿರುಕುಳಗಳಿಂದ ತಪ್ಪಿಸಲು ಈ ನಿಯಮಗಳ ಉದ್ದೇಶವಾಗಿದೆ ಎಂದು ಹೇಳುತ್ತದೆ. ಇದು ನೆಲದ ಕಾನೂನು ಆಗಿರುವುದರಿಂದ ಕೇರಳ ಸರ್ಕಾರವು ಈ ವಿಷಯದಲ್ಲಿ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಬೇಕಿದ್ದು, ಸ್ವತಃ ಸೂಕ್ಷ್ಮತೆಯನ್ನು ರೂಢಿಸಿಕೊಳ್ಳಬೇಕಿದೆ.

ಸಂವಿಧಾನ ಅನುಚ್ಛೇದ 21ರ ಅನ್ವಯ (ಪುಟ್ಟಸ್ವಾಮಿ – 2017) ಗೋಪ್ಯತೆಯ ಹಕ್ಕು ಬದುಕುವ ಹಕ್ಕಿನ ಒಂದು ಅವಿಭಾಜ್ಯ ಅಂಗವಾಗಿರುತ್ತದೆ. ಈ ಗೋಪ್ಯತೆಯನ್ನು ಕಾಪಾಡಲಾಗುತ್ತದೆ ಎಂಬ ಭರವಸೆಯೊಂದಿಗೆ ಹಲವು ಸಂತ್ರಸ್ತರು ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಈ ನಿಟ್ಟಿನಲ್ಲಿ ಒಂದು ಅಪರಾಧ ಮೊಕದ್ದಮೆಯನ್ನು ದಾಖಲಿಸುವ ಹಕ್ಕು ಸಂತ್ರಸ್ತರಿಗೇ ಇರುತ್ತದೆ. ನಮ್ಮ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಸರ್ಕಾರವು ಆರೋಪಿಯ ವಿರುದ್ಧ ಪ್ರಾಸಿಕ್ಯೂಷನ್‌ ನಡೆಸುತ್ತದೆ ಎನ್ನುವುದು ವಾಸ್ತವವೇ ಆಗಿದ್ದು, ಸಂತ್ರಸ್ತರ ಪರವಾಗಿ ಮೊಕದ್ದಮೆಯನ್ನು ನಿರ್ವಹಿಸಿ ವಾದ ಮಂಡಿಸಲೂ ಸರ್ಕಾರವೇ ಮುಂದಾಗುತ್ತದೆ. ಆದರೆ ಸರ್ಕಾರವು ಅಪರಾಧವನ್ನು ತನಿಖೆಗೊಳಪಡಿಸಿದರೂ ಸಂತ್ರಸ್ತರ ಸಹಕಾರ ಇಲ್ಲದೆ ಅಪರಾಧವನ್ನು ನಿರ್ಧರಿಸುವುದು ಕಷ್ಟಕರವಾಗುತ್ತದೆ.


ಇಲ್ಲಿ ನಾವು ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರು ದೂರು ದಾಖಲಿಸಲು ಏಕೆ ಹಿಂಜರಿಯುತ್ತಾರೆ , ಅದರ ಕಾರಣಗಳೇನು ಎನ್ನುವುದನ್ನು ಗುರುತಿಸಬೇಕಾಗುತ್ತದೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರನ್ನು, ವಿಶ್ವಾಸದೊಂದಿಗೆ ಬೆಂಬಲಪೂರಕವಾಗಿ ನೋಡುವುದರ ಬದಲು, ಅನುಭೂತಿಯಿಂದ ನೋಡುವ ಅಥವಾ ಕಳಂಕಿತರಾಗಿ ನೋಡುವ ಸಮಾಜದ ವಕ್ರದೃಷ್ಟಿಯೂ ಇಲ್ಲಿ ಮುಖ್ಯವಾಗುತ್ತದೆ. ಹಾಗಾಗಿ ದೌರ್ಜನ್ಯಕ್ಕೊಳಗಾದ ವ್ಯಕ್ತಿ ಅವಶ್ಯವಾಗಿ ದೂರು ದಾಖಲಿಸಬೇಕು ಎಂದು ಅಪೇಕ್ಷಿಸಲು ಈ ಸಮಾಜಕ್ಕೆ ಯಾವುದೇ ನೈತಿಕ ಅರ್ಹತೆ ಇರುವುದಿಲ್ಲ. ಈ ಯಥಾಸ್ಥಿತಿಯನ್ನು ಸೃಷ್ಟಿಸಿರುವುದರಲ್ಲಿ ನಾವು ಸಾಮೂಹಿಕ ಜವಾಬ್ದಾರಿಯನ್ನು ಹೊರಲೇಬೇಕಿದೆ. ಮೇಲಾಗಿ, ಲೈಂಗಿಕ ದೌರ್ಜನ್ಯಗಳ ವಿಚಾರಣಾ ಪ್ರಕ್ರಿಯೆಗಳು ವರ್ಷಗಟ್ಟಳೆ ನಡೆಯುತ್ತವೆ. ಭಾರತದ ನ್ಯಾಯಾಂಗದಲ್ಲಿ ಬಾಕಿ ಇರುವ ಪ್ರಕರಣಗಳ ಪ್ರಮಾಣ ಹೆಚ್ಚಾಗಿರುವುದೂ ಇದಕ್ಕೊಂದು ಕಾರಣ. ನ್ಯಾ. ಹೇಮಾ ಸಮಿತಿಯನ್ನು ರಚಿಸಿದ್ದು ಪ್ರಸಿದ್ಧ ಮಲಯಾಳಿ ನಟನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊರಿಸಿದ ಹಿನ್ನೆಲೆಯಲ್ಲಿ ಎನ್ನುವುದನ್ನು ನೆನಪಿಡಬೇಕಿದೆ. ಈ ಪ್ರಕರಣದ ತನಿಖೆ ಇನ್ನೂ ಪೂರ್ಣವಾಗಿಲ್ಲ. ಸಂತ್ರಸ್ತರಿಗೆ ಆರೋಪಿಗಳ ಕಡೆಯಿಂದ ಪ್ರತೀಕಾರದ ಕ್ರಮಗಳ ಬಗ್ಗೆಯೂ ಆತಂಕ ಇರುತ್ತದೆ. ಅವರಿಗೆ ಕೆಲಸ ನೀಡಲು ನಿರಾಕರಿಸುವುದು, ಸಮಸ್ಯೆ ಸೃಷ್ಟಿಸುವವರು ಎಂದು ಬ್ರ್ಯಾಂಡ್‌ ಮಾಡುವುದು ಸಹ ಸಾಮಾನ್ಯವಾಗಿ ನಡೆಯುತ್ತಿರುತ್ತದೆ.


ರಚನಾತ್ಮಕ ಸುಧಾರಣೆಗಳು
2017ರಲ್ಲಿ ಹಾರ್ವೆ ವೀನ್ಸ್‌ಸ್ಟೈನ್‌ ಎಂಬ ಹಾಲಿವುಡ್‌ ಚಲನಚಿತ್ರ ನಿರ್ಮಾಪಕನ ವಿರುದ್ಧ ಮಾಡಲಾದ ಆರೋಪಗಳು #ಮಿ ಟೂ ಆಂದೋಲನಕ್ಕೆ ಕಾರಣವಾಗಿದ್ದು ಇದು ಜಾಗತಿಕ ಆಯಾಮವನ್ನು ಪಡೆದುಕೊಂಡಿತ್ತು. ನ್ಯಾ. ಹೇಮಾ ಸಮಿತಿಯಲ್ಲಿ ಗುರುತಿಸಲಾಗಿರುವ ಅಂಶಗಳು ಈಗ ರಚನಾತ್ಮಕ ಸುಧಾರಣೆಗಳಿಗೆ ಎಡೆಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರವು ಪರಿಣಾಮಕಾರಿಯಾಗಿ ಮುಂದಾಳತ್ವ ವಹಿಸಬೇಕಿದೆ. ಚಲನಚಿತ್ರ ಉದ್ದಿಮೆಯಲ್ಲಿ ಮಹಿಳೆಯರು ಎದುರಿಸುವ ಸಂಕಷ್ಟಗಳು, ಅದರಲ್ಲೂ ವಿಶೇಷವಾಗಿ ಮುಖ್ಯ ನಟಿಯರಿಗೆ ಹೋಲಿಸಿದರೆ ಕೆಳಸ್ತರದ ಕಲಾವಿದರು ಎದುರಿಸುವ ಸಮಸ್ಯೆಗಳನ್ನು ಗುರುತಿಸಬೇಕಿದೆ. ಸೂಕ್ತ ಶೌಚಾಲಯಗಳು ಇಲ್ಲದಿರುವುದು, ಪ್ರತಿಕೂಲ ತಾರತಮ್ಯಗಳು ಹೆಚ್ಚಾಗಿರುವುದು ಇವೇ ಮುಂತಾದ ಸಮಸ್ಯೆಗಳನ್ನು ಅಮೂಲಾಗ್ರವಾಗಿ ಪರಿಶೀಲನೆ ಮಾಡುವ ಮೂಲಕ ಪರಿಹಾರೋಪಾಯಗಳನ್ನು ಶೋಧಿಸಬೇಕಿದೆ. ಬಹುಮುಖ್ಯವಾಗಿ, ಕೆಲಸದ ಸ್ಥಳಗಳಲ್ಲಿ ನಡೆಯುವ ತಾರತಮ್ಯಗಳ ವಿರುದ್ಧ ಭಾರತದ ಮಹಿಳೆಯರು ನಡೆಸುತ್ತಿರುವ ಸಂಘರ್ಷಗಳಿಗೆ ಈ ವರದಿ ಮತ್ತಷ್ಟು ಪುಷ್ಟಿ, ಪ್ರೊತ್ಸಾಹ ನೀಡುತ್ತದೆ. ಮಹಿಳೆಯಲ್ಲಿ ಒಂದು ಧೈರ್ಯಶಾಲಿ ಜಾಗೃತಿಯನ್ನು ಮೂಡಿಸುವಲ್ಲಿ ನೆರವಾಗುತ್ತದೆ.

Tags: best south indian directors in indian film industrybollywood vs south indian film industrycomparison of south indian film industrycomparison of south indian industryfilm industry in indiaindian film industryno 1 film industry in south indiasouth film industry comparisonsouth indian film industrysouth indian film industry comparisonsouth indian industry comparisonsouth indian movieswhich south indian film industry is best
Previous Post

ಈ ವಾರ ತೆರೆಗೆ ಪ್ರಮೋದ್ ಶೆಟ್ಟಿ ಅಭಿನಯದ “ಲಾಫಿಂಗ್ ಬುದ್ಧ

Next Post

ರಾಜ್ಯಪಾಲರಿಗೆ ದೂರು ಕೊಟ್ಟ ಸ್ನೇಹಮಹಿ ಕೃಷ್ಣ ಬ್ಯಾಗ್ರೌಂಡ್‌ ಬಿಚ್ಚಿಟ್ಟ ಲಕ್ಷ್ಮಣ್

Related Posts

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”
ಕರ್ನಾಟಕ

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

by ಪ್ರತಿಧ್ವನಿ
January 18, 2026
0

ಮೈಸೂರು: ವರುಣಾ ಕ್ಷೇತ್ರವನ್ನು ಮೇಲ್ಮನೆ ಸದಸ್ಯರು ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದು, ನನ್ನ ಗೈರು ಹಾಜರಿಯಲ್ಲಿ ಕ್ಷೇತ್ರದ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ ಎಂದು ಸಿಎಂ‌ ಸಿದ್ದರಾಮಯ್ಯ ಹೇಳಿದರು....

Read moreDetails
“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

“ಅಬಕಾರಿ ಲೈಸೆನ್ಸ್‌ಗೆ ಲಂಚ ಇದೊಂದು ಪ್ಯಾಕೇಜ್‌ ಡೀಲ್‌, ತಿಮ್ಮಾಪುರ ರಾಜೀನಾಮೆವರೆಗೂ ನಾವು ಹೋರಾಡ್ತೀವಿ”

January 18, 2026
ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

ಅಬಕಾರಿ ಇಲಾಖೆಯಲ್ಲಿ 3,542 ಕೋಟಿ ಭ್ರಷ್ಟಾಚಾರ :‌ ಸಿದ್ದು ಸರ್ಕಾರದ ವಿರುದ್ಧ ಛಲವಾದಿ ಹೊಸ ಬಾಂಬ್..!

January 18, 2026
“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

“ಮಂಥ್ಲಿ ಮಂತ್ರಿ ಆರ್.ಬಿ.ತಿಮ್ಮಾಪೂರ‌” : ಲಂಚ ಹಗರಣದ ವಿರುದ್ಧ ಸಿಡಿದೆದ್ದ ಬಿಜೆಪಿ, ಜೆಡಿಎಸ್

January 18, 2026
ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

ಲೋಕಸಭಾ ಎಲೆಕ್ಷನ್‌ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ

January 18, 2026
Next Post

ರಾಜ್ಯಪಾಲರಿಗೆ ದೂರು ಕೊಟ್ಟ ಸ್ನೇಹಮಹಿ ಕೃಷ್ಣ ಬ್ಯಾಗ್ರೌಂಡ್‌ ಬಿಚ್ಚಿಟ್ಟ ಲಕ್ಷ್ಮಣ್

Recent News

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ
Top Story

ಕತೆಯಲ್ಲ ಕಥನವಲ್ಲ ದುರಂತ ವಾಸ್ತವ

by ನಾ ದಿವಾಕರ
January 18, 2026
Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!
Top Story

Daily Horoscope: ಇಂದು ಅಪರೂಪದ ಅದೃಷ್ಟ ಸಿಗುವ ರಾಶಿಗಳಿವು..!

by ಪ್ರತಿಧ್ವನಿ
January 18, 2026
BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ
Top Story

BBK 12: ಬಿಗ್‌ ಬಾಸ್‌ ಇತಿಹಾಸದಲ್ಲೇ ಅಪರೂಪದ ದಾಖಲೆಗಳ ಸರದಾರನಾದ ಗಿಲ್ಲಿ ನಟ

by ಪ್ರತಿಧ್ವನಿ
January 17, 2026
Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
Top Story

Vande Bharat Express: ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ

by ಪ್ರತಿಧ್ವನಿ
January 17, 2026
BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?
Top Story

BBK 12: ಇಂದು ಬಿಗ್‌ ಬಾಸ್‌ ಫಿನಾಲೆ ದಿಢೀರ್‌ ರದ್ದು: ಕಾರಣವೇನು?

by ಪ್ರತಿಧ್ವನಿ
January 17, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕುಂದಾಪುರ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ಸಂತೋಷ್‌ ಲಾಡ್‌

ಗಿಗ್‌ ಕಾರ್ಮಿಕರ ಸುರಕ್ಷತೆಯ ಬಗ್ಗೆ ಸಚಿವ ಲಾಡ್‌ ಕಳವಳ : 10 ನಿಮಿಷದ ಡೆಲಿವರಿ ಸ್ಥಗಿತದ ಕಾರ್ಮಿಕರ ಬೇಡಿಕೆಗೆ ಸ್ಪಂದನೆ

January 18, 2026
“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

“ನನ್ನ ಅನುಪಸ್ಥಿಯಲ್ಲಿ ಜನರ ಕಷ್ಟ, ಸುಖಗಳನ್ನು ಆಲಿಸುವವರು ಡಾ.ಯತೀಂದ್ರ”

January 18, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada