
ನ್ಯಾ. ಹೇಮಾ ಸಮಿತಿಯ ವರದಿ ಚಿತ್ರರಂಗದಲ್ಲಿ ಸುಧಾರಣೆಗಳ ಅನಿವಾರ್ಯತೆಯನ್ನು ಒತ್ತಿಹೇಳುತ್ತದೆ
ಕಲೀಸ್ವರಂ ರಾಜ್-ತುಳಸಿ ಕೆ ರಾಜ್
( ಮೂಲ : Reality of reel life ̧ exploitation as a structural problem – Kaleeswaram Raj & Thulasi K Raj ̲- ದ ಹಿಂದೂ 26 ಆಗಸ್ಟ್ 2024)
ಕನ್ನಡಕ್ಕೆ : ನಾ ದಿವಾಕರ
ಆಗಸ್ಟ್ 29ರಂದು ಕೇರಳ ಸರ್ಕಾರ ನೇಮಿಸಿದ್ದ ನ್ಯಾಯಮೂರ್ತಿ ಕೆ. ಹೇಮಾ ಸಮಿತಿಯ ಅಂತಿಮ ವರದಿಯನ್ನು ಈಗ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿದ್ದು ಮಲಯಾಳಿ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಜಟಿಲ ಸವಾಲುಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. 2017ರಲ್ಲಿ ರಚಿಸಲಾದ ನ್ಯಾ. ಕೆ. ಹೇಮಾ ಸಮಿತಿ 2019ರಲ್ಲೇ ತನ್ನ ಅಂತಿಮ ವರದಿಯನ್ನು ಸಲ್ಲಿಸಿತ್ತು. ಕೇರಳದ ಎಲ್ಡಿಎಫ್ ಸರ್ಕಾರ ಈ ವರದಿಯ ಪರಿಷ್ಕೃತ ಆವೃತ್ತಿಯನ್ನು ಈಗ ಸಾರ್ವಜನಿಕರ ಮುಂದಿರಿಸಿದೆ. ನ್ಯಾ. ಹೇಮಾ ವರದಿಯಲ್ಲಿ ದೇಶೀಯ ಭಾಷೆಗಳ ಚಲನಚಿತ್ರರಂಗದಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳನ್ನು ಚರ್ಚಿಸಲಾಗಿದೆಯಾದರೂ, ಇಲ್ಲಿ ಪ್ರಸ್ತಾಪಿಸಲಾಗಿರುವ ವಿಷಯಗಳು ಸೀಮಾತೀತವಾಗಿರುವುದು ಸ್ಪಷ್ಟ.
ನ್ಯಾ. ಹೇಮಾ ವರದಿಯು ಮುಖ್ಯವಾಗಿ ಎರಡು ವಿಷಯಗಳನ್ನು ಪ್ರಸ್ತಾಪಿಸುತ್ತದೆ. ಮೊದಲನೆಯದು ಸಿನೆಮಾ ರಂಗದಲ್ಲಿ ಮಹಿಳೆಯರ ಲೈಂಗಿಕ ಶೋಷಣೆ ಮತ್ತು ದಾಳಿಯನ್ನು ಕುರಿತಾದದ್ದು. ಚಿತ್ರರಂಗದಲ್ಲಿ ಅವಕಾಶ ಪಡೆಯುವ ಸಲುವಾಗಿ ಮಹಿಳೆಯರು ಪುರುಷರ ಲೈಂಗಿಕ ಬಯಕೆಗಳನ್ನು ಪೂರೈಸುವ ಒತ್ತಡ ಎದುರಿಸುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಈ ರೀತಿ ಸಹಕಾರ ನೀಡಲೊಪ್ಪದ ಮಹಿಳಾ ಕಲಾವಿದರು ಬಲಾಢ್ಯರ ಪ್ರಭಾವದಿಂದ ಅವಕಾಶವಂಚಿತರಾಗುವುದನ್ನು ವರದಿ ಪ್ರಸ್ತಾಪಿಸುತ್ತದೆ. ಎರಡನೆಯ ಅಂಶವೆಂದರೆ ಚಲನಚಿತ್ರರಂಗದಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದು ಹಲವು ರೀತಿಯ ತಾರತಮ್ಯಗಳನ್ನು ಎದುರಿಸುತ್ತಿರುವುದು. ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ, ಕೆಲಸದ ಸ್ಥಳಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ಲಿಂಗತ್ವ ಅಸಮಾನತೆಯ ಬಗೆಗಿನ ಚರ್ಚೆಗೆ ಈಗ ಅವಕಾಶ ದೊರೆತಂತಾಗಿದೆ. ಕೊಲ್ಕತ್ತಾದ ಆರ್ಜಿ ಕಾರ್ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಭೀಕರ ಅತ್ಯಾಚಾರ-ಹತ್ಯೆಯ ಹಿನ್ನೆಲೆಯಲ್ಲಿ ಈ ಚರ್ಚೆ ಮತ್ತಷ್ಟು ಕಾವು ಪಡೆದುಕೊಂಡಿದೆ.
ಹಲ್ಲೆಕೋರ ಸಂಸ್ಕೃತಿಯ ಸುತ್ತ
ನ್ಯಾ. ಹೇಮಾ ಸಮಿತಿಯಲ್ಲಿ ವ್ಯಕ್ತಪಡಿಸಲಾಗಿರುವ ಕಾಳಜಿಗಳು ಮನಸ್ಸನ್ನು ಪ್ರಕ್ಷುಬ್ಧಗೊಳಿಸುವಂತಿವೆ. ಆದರೆ ಇದು ಅಚ್ಚರಿಯನ್ನೇನೂ ಉಂಟುಮಾಡುವುದಿಲ್ಲ. ಭಾರತದಂತಹ ಒಂದು ಸಾಂಪ್ರದಾಯಿಕ, ಪಿತೃಪ್ರಧಾನ ಸಮಾಜದಲ್ಲಿ ಮಹಿಳೆಯರು ದಿನನಿತ್ಯ ಎದುರಿಸುವ ಸಮಸ್ಯೆಗಳ ವಿಸ್ತರಣೆಯಾಗಿ ಇದನ್ನು ನೋಡಬಹುದು. ಮಹಿಳೆಯರು ಸಮಾಜದಲ್ಲಿ ಹೇಗೆ ವರ್ತಿಸಬೇಕು, ಅವರಿಂದ ಏನು ನಿರೀಕ್ಷಿಸಲಾಗುತ್ತದೆ ಎಂಬುದರ ಬಗ್ಗೆ ಭಾರತೀಯ ಸಮಾಜದಲ್ಲಿ ಏಕರೀತಿಯ ಅಭಿಪ್ರಾಯವನ್ನು ಪ್ರಚಲಿತಗೊಳಿಸಲಾಗಿದೆ. ಹಾಗಾಗಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ಪ್ರತ್ಯೇಕವಾಗಿ ಚರ್ಚಿಸಲು ಸಾಧ್ಯವಾಗುವುದಿಲ್ಲ. ಈ ದೃಷ್ಟಿಯಿಂದ ನೋಡಿದಾಗ ಅತ್ಯಾಚಾರವನ್ನು ಒಬ್ಬ ದುಷ್ಟ ವ್ಯಕ್ತಿ ಎಸಗಿರುವ ಪಾತಕ ಕೃತ್ಯ ಎಂದು ಪರಿಗಣಿಸಲಾಗುವುದಿಲ್ಲ. ಲೈಂಗಿಕ ಕ್ರಿಯೆಗಳಲ್ಲಿ ಮಹಿಳೆಯ ಸಮ್ಮತಿಯನ್ನು ಅಪ್ರಸ್ತುತ ಎಂದೇ ಪರಿಗಣಿಸುವ ಸಾಮಾಜಿಕ ಧೋರಣೆಯ ಪರಿಣಾಮದಂತೆ ಇದನ್ನು ನೋಡಬೇಕಾಗಿದೆ.

ಲೈಂಗಿಕ ದೌರ್ಜನ್ಯವನ್ನು ವ್ಯಕ್ತಿಗತ ನೆಲೆಯಲ್ಲಿ ನೋಡುವ ದೃಷ್ಟಿಕೋನವು ನಮ್ಮ ಗಮನವನ್ನು ವಾಸ್ತವ ಸನ್ನಿವೇಶದಿಂದ ದೂರಮಾಡುತ್ತದೆ. ಹೆಣ್ಣುಮಕ್ಕಳು ಯಾವ ಉಡುಪು ಧರಿಸಬೇಕು, ಯಾರೊಡನೆ ಸ್ನೇಹ ಬೆಳೆಸಬೇಕು ಎಂಬ ವಿಚಾರಗಳಲ್ಲಿ ವ್ಯಕ್ತಿಗತವಾದ ಆಯ್ಕೆಯನ್ನೇ ಮಹಿಳೆಯಿಂದ ಕಸಿದುಕೊಳ್ಳಲಾಗುತ್ತದೆ. ಈ ಧೋರಣೆಯ ಒಂದು ಕ್ರೂರ ಅಭಿವ್ಯಕ್ತಿಯಾಗಿ ಅತ್ಯಾಚಾರಗಳು ನಡೆಯುತ್ತವೆ. ಇಲ್ಲಿ ಮಹಿಳೆಯನ್ನು ಸ್ವಾಯತ್ತ ವ್ಯಕ್ತಿಯಾಗಿ ಅಥವಾ ಘನತೆಯ ವ್ಯಕ್ತಿಯಾಗಿ ಪರಿಗಣಿಸುವುದೇ ಇಲ್ಲ. ಮಹಿಳೆಯನ್ನು ಭೋಗದ ವಸ್ತುವಿನ ಹಾಗೆ ನೋಡುವ ಸಾಮಾನ್ಯೀಕರಣಗೊಂಡ ದೃಷ್ಟಿಕೋನ, ಲಿಂಗತ್ವದ ಏಕರೂಪಿ ವ್ಯಾಖ್ಯಾನಗಳು ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗಲು ಮುಖ್ಯ ಕಾರಣಗಳಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಯ ಅನುಸಾರ 2022ರಲ್ಲಿ 31,516 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಅಂದರೆ ಪ್ರತಿ 16 ನಿಮಿಷಕ್ಕೆ ಒಂದು ಅತ್ಯಾಚಾರ ನಡೆಯುತ್ತದೆ. ಈ ಮಹಿಳಾ ದೌರ್ಜನ್ಯದ ಮತ್ತೊಂದು ಆಯಾಮವನ್ನು ಕೆಲಸದ ಸ್ಥಳಗಳ ಕಿರುಕುಳಗಳಲ್ಲಿ ಕಾಣಬಹುದು.
ಕೆಲಸದ ಸ್ಥಳಗಳ ಕಿರುಕುಳಕ್ಕೆ ಸಂಬಂಧಿಸಿದಂತೆ “ ವಿಶಾಖ ಮತ್ತಿತರರು Vs ರಾಜಸ್ಥಾನ ಸರ್ಕಾರ-ಇತರರು (1997)” ಮೊಕದ್ದಮೆ ಉಲ್ಲೇಖನೀಯ. ಈ ಮೊಕದ್ದಮೆಯಲ್ಲಿ ಕೆಲಸದ ಸ್ಥಳಗಳಲ್ಲಿ ದುಡಿಯುವ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಈ ಮೊಕದ್ದಮೆಯಲ್ಲಿ ಕೆಲಸದ ಸ್ಥಳಗಳಲ್ಲಿ ಕಿರುಕುಳವನ್ನು ತಡೆಗಟ್ಟುವ ನಿಟ್ಟಿನಲ್ಲಿ, ಸುಪ್ರೀಂಕೋರ್ಟ್ ಹಲವು ಮಾರ್ಗದರ್ಶಕ ನಿಯಮಗಳ ಸರಣಿಯನ್ನು ಸೂಚಿಸಿತ್ತು. ಇದು ಭಾರತದ ನ್ಯಾಯಾಂಗದ ಒಂದು ವಿಶಿಷ್ಟವಾದ ನ್ಯಾಯಿಕ ಶಾಸನ ಎಂದೂ ಹೇಳಬಹುದು. ಈ ನಿಯಮಗಳಲ್ಲಿ ಬಹುಮುಖ್ಯವಾಗಿ ಲೈಂಗಿಕ ಕಿರುಕುಳವನ್ನು ತಡೆಗಟ್ಟುವ ನಿಟ್ಟಿನಲ್ಲಿ ಉದ್ಯೋಗದಾತರ ಕರ್ತವ್ಯಗಳನ್ನು ಸೂಚಿಸಲಾಗಿತ್ತು. ಇದರೊಟ್ಟಿಗೆ ಸಂತ್ರಸ್ತ ವ್ಯಕ್ತಿಗಳ ಕುಂದುಕೊರತೆಗಳನ್ನು ಆಲಿಸಿ ಬಗೆಹರಿಸುವ ಸಲುವಾಗಿ ದೂರು ಪರಿಹಾರ ಕಾರ್ಯವಿಧಾನಗಳನ್ನು ರೂಪಿಸುವಂತೆಯೂ ಹೇಳಲಾಗಿತ್ತು.
ಸುಪ್ರೀಂಕೋರ್ಟ್ ಈ ತೀರ್ಪು ನೀಡಿ 16 ವರ್ಷಗಳ ಅನಂತರ 2013ರಲ್ಲಿ, “ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ 2013” ಜಾರಿಯಾಗಿತ್ತು. ಈ ಶಾಸನದ ಬಹುಮುಖ್ಯ ಅಂಶ ಎಂದರೆ ಸಂತ್ರಸ್ತ ಮಹಿಳೆಯರು ಸಂಪರ್ಕಿಸಬಹುದಾದ ಆಂತರಿಕ ದೂರು ಸಮಿತಿ (Internal Complaints Committee-ICC) ರಚಿಸುವುದು ಎಲ್ಲ ಸಂಸ್ಥೆಗಳಲ್ಲೂ ಕಡ್ಡಾಯ ಮಾಡಲಾಗಿತ್ತು. ಈ ಕಾಯ್ದೆಯ ಸೆಕ್ಷನ್ 2(ಒ) ಅನುಸಾರ ಕೆಲಸದ ಸ್ಥಳವನ್ನು ವಿಶಾಲ ಭೂಮಿಕೆಯಲ್ಲಿ ನಿರ್ವಚಿಸಲಾಗಿದ್ದು ಅದರಲ್ಲಿ ಚಲನಚಿತ್ರರಂಗವನ್ನೂ ಒಳಗೊಳ್ಳಲಾಗಿತ್ತು.

ನ್ಯಾ. ಹೇಮಾ ಸಮಿತಿಯ ವರದಿಯು ಚಲನಚಿತ್ರ ರಂಗದಲ್ಲಿ ಈ ICC ಸೂಕ್ತವಾದದ್ದಲ್ಲ ಎಂದು ಸೂಚಿಸಿದೆ. ಏಕೆಂದರೆ ಕಿರುಕುಳ ನೀಡುವ ವ್ಯಕ್ತಿ ಅಥವಾ ಉದ್ಯೋಗದಾತರು ಈ ಸಮಿತಿಯ ಸದಸ್ಯರ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ಸಿನೆಮಾ ರಂಗದಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಸರ್ಕಾರವು ಪ್ರತ್ಯೇಕ ಸ್ವತಂತ್ರ ವೇದಿಕೆಯೊಂದನ್ನು ಸ್ಥಾಪಿಸುವಂತೆ ನ್ಯಾ. ಹೇಮಾ ಸಮಿತಿಯು ಸಲಹೆ ನೀಡುತ್ತದೆ. ಆದರೆ ಈ ಸಮಸ್ಯೆಯು ಆಂತರಿಕ ದೂರು ಸಮಿತಿ ಎದುರಿಸುವ ಸವಾಲಾಗಿದ್ದು ಇದು ಸಿನೆಮಾ ರಂಗಕ್ಕೆ ಮಾತ್ರವೇ ಸೀಮಿತವಾದದ್ದಲ್ಲ. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಉತ್ತರದಾಯಿತ್ವವನ್ನು ಗುರುತಿಸುವಂತಹ ಹೆಚ್ಚುವರಿ ರಕ್ಷಣಾ ಮಾರ್ಗಗಳನ್ನು ಅನುಸರಿಸುವುದು ಸೂಕ್ತವಾಗಬಹುದು. ಹಾಗಾಗಿ ಸಂಸದೀಯ ಶಾಸನದಲ್ಲಿ ಸೂಚಿಸಿರುವ ದೂರು ಪರಿಹಾರ ಕಾರ್ಯವಿಧಾನದ ಮಾದರಿಯನ್ನೇ ನಗಣ್ಯಗೊಳಿಸುವ ಸೂಚನೆ ಒಪ್ಪುವಂತಹುದಲ್ಲ.
ಅಪರಾಧಗಳ ನೋಂದಣಿ
ಸಮಿತಿಯ ವರದಿಗೆ ಅನುಸಾರವಾಗಿ , ನಡೆದಿರುವ ಅಪರಾಧಿ ಕೃತ್ಯಗಳನ್ನು ದಾಖಲಿಸುವಲ್ಲಿ ಕೊರತೆ ಇರುವುದನ್ನು ಹಲವರು ಪ್ರಶ್ನಿಸಿದ್ದಾರೆ. ತನಿಖೆಯನ್ನು ಏಕೆ ಆದೇಶಿಸಿಲ್ಲ, ಆರೋಪಿಯನ್ನು ಏಕೆ ವಿಚಾರಣೆಗೊಳಪಡಿಸಿ ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಲಾಗಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ಕಾಳಜಿ ವಿವೇಕಯುತವಾದುದು. ಈಗ ಸಲ್ಲಿಸಲಾಗಿರುವ ವರದಿಯು ಪರಿಷ್ಕೃತ ಆವೃತ್ತಿಯಾಗಿದ್ದು, ಇದರಲ್ಲಿ ಸಂತ್ರಸ್ತರ ಹಾಗೂ ಆರೋಪಿಗಳ ಹೆಸರನ್ನು ಬದಲಿಸಲಾಗಿದೆ. ದಾಳಿಗೊಳಗಾದವರ ಗೋಪ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಸಂತ್ರಸ್ತರ ಹೆಸರುಗಳನ್ನು ಮರೆಮಾಚುವುದು ನ್ಯಾಯಯುತವೇ ಆಗಿರುತ್ತದೆ. ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಪರಾಧ ನ್ಯಾಯಶಾಸ್ತ್ರದ ನಿಯಮದ ಅನ್ವಯ ಈ ಪದ್ಧತಿಯನ್ನು ಅನುಸರಿಸಲಾಗುತ್ತದೆ. ತನಿಖೆಯ ಸಂದರ್ಭದಲ್ಲಿ ಮತ್ತು ವಿಚಾರಣೆಯಲ್ಲೂ ಸಹ ಈ ಗೋಪ್ಯತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.

ನಿಪುನ್ ಸಕ್ಷೇನಾ Vs ಭಾರತದ ಒಕ್ಕೂಟ ( 2018) ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣವನ್ನು ಕಾಣಬಹುದು. ಭಾರತೀಯ ದಂಡ ಸಂಹಿತೆ ಸೆಕ್ಷನ್ 228ಎ (IPC) , ಈಗಿನ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 72 ಮತ್ತು 73ರ ಅನ್ವಯ, ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರ ಹೆಸರು ಮತ್ತು ಅಸ್ಮಿತೆಯನ್ನು ಗೋಪ್ಯವಾಗಿಡದೆ ಬಹಿರಂಗಪಡಿಸಿದರೆ ದಂಡ ವಿಧಿಸಬಹುದಾಗಿರುತ್ತದೆ. ಈ ನಿಯಮಗಳು ಬಹುಮಟ್ಟಿಗೆ ಒಂದೇ ಮಾದರಿಯದ್ದಾಗಿರುವುದರಿಂದ ನಿಪುನ್ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಈ ಕ್ಷೇತ್ರದಲ್ಲೂ ಅನ್ವಯವಾಗುತ್ತದೆ. ಈ ತೀರ್ಪಿನಲ್ಲಿ ಸುಪ್ರೀಂಕೋರ್ಟ್, ಸಂತ್ರಸ್ತರನ್ನು ಪ್ರತಿಕೂಲ ತಾರತಮ್ಯಗಳಿಂದ ಮತ್ತು ಭವಿಷ್ಯದಲ್ಲಿ ಮತ್ತಷ್ಟು ಕಿರುಕುಳಗಳಿಂದ ತಪ್ಪಿಸಲು ಈ ನಿಯಮಗಳ ಉದ್ದೇಶವಾಗಿದೆ ಎಂದು ಹೇಳುತ್ತದೆ. ಇದು ನೆಲದ ಕಾನೂನು ಆಗಿರುವುದರಿಂದ ಕೇರಳ ಸರ್ಕಾರವು ಈ ವಿಷಯದಲ್ಲಿ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಬೇಕಿದ್ದು, ಸ್ವತಃ ಸೂಕ್ಷ್ಮತೆಯನ್ನು ರೂಢಿಸಿಕೊಳ್ಳಬೇಕಿದೆ.
ಸಂವಿಧಾನ ಅನುಚ್ಛೇದ 21ರ ಅನ್ವಯ (ಪುಟ್ಟಸ್ವಾಮಿ – 2017) ಗೋಪ್ಯತೆಯ ಹಕ್ಕು ಬದುಕುವ ಹಕ್ಕಿನ ಒಂದು ಅವಿಭಾಜ್ಯ ಅಂಗವಾಗಿರುತ್ತದೆ. ಈ ಗೋಪ್ಯತೆಯನ್ನು ಕಾಪಾಡಲಾಗುತ್ತದೆ ಎಂಬ ಭರವಸೆಯೊಂದಿಗೆ ಹಲವು ಸಂತ್ರಸ್ತರು ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಈ ನಿಟ್ಟಿನಲ್ಲಿ ಒಂದು ಅಪರಾಧ ಮೊಕದ್ದಮೆಯನ್ನು ದಾಖಲಿಸುವ ಹಕ್ಕು ಸಂತ್ರಸ್ತರಿಗೇ ಇರುತ್ತದೆ. ನಮ್ಮ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಸರ್ಕಾರವು ಆರೋಪಿಯ ವಿರುದ್ಧ ಪ್ರಾಸಿಕ್ಯೂಷನ್ ನಡೆಸುತ್ತದೆ ಎನ್ನುವುದು ವಾಸ್ತವವೇ ಆಗಿದ್ದು, ಸಂತ್ರಸ್ತರ ಪರವಾಗಿ ಮೊಕದ್ದಮೆಯನ್ನು ನಿರ್ವಹಿಸಿ ವಾದ ಮಂಡಿಸಲೂ ಸರ್ಕಾರವೇ ಮುಂದಾಗುತ್ತದೆ. ಆದರೆ ಸರ್ಕಾರವು ಅಪರಾಧವನ್ನು ತನಿಖೆಗೊಳಪಡಿಸಿದರೂ ಸಂತ್ರಸ್ತರ ಸಹಕಾರ ಇಲ್ಲದೆ ಅಪರಾಧವನ್ನು ನಿರ್ಧರಿಸುವುದು ಕಷ್ಟಕರವಾಗುತ್ತದೆ.

ಇಲ್ಲಿ ನಾವು ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರು ದೂರು ದಾಖಲಿಸಲು ಏಕೆ ಹಿಂಜರಿಯುತ್ತಾರೆ , ಅದರ ಕಾರಣಗಳೇನು ಎನ್ನುವುದನ್ನು ಗುರುತಿಸಬೇಕಾಗುತ್ತದೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತರನ್ನು, ವಿಶ್ವಾಸದೊಂದಿಗೆ ಬೆಂಬಲಪೂರಕವಾಗಿ ನೋಡುವುದರ ಬದಲು, ಅನುಭೂತಿಯಿಂದ ನೋಡುವ ಅಥವಾ ಕಳಂಕಿತರಾಗಿ ನೋಡುವ ಸಮಾಜದ ವಕ್ರದೃಷ್ಟಿಯೂ ಇಲ್ಲಿ ಮುಖ್ಯವಾಗುತ್ತದೆ. ಹಾಗಾಗಿ ದೌರ್ಜನ್ಯಕ್ಕೊಳಗಾದ ವ್ಯಕ್ತಿ ಅವಶ್ಯವಾಗಿ ದೂರು ದಾಖಲಿಸಬೇಕು ಎಂದು ಅಪೇಕ್ಷಿಸಲು ಈ ಸಮಾಜಕ್ಕೆ ಯಾವುದೇ ನೈತಿಕ ಅರ್ಹತೆ ಇರುವುದಿಲ್ಲ. ಈ ಯಥಾಸ್ಥಿತಿಯನ್ನು ಸೃಷ್ಟಿಸಿರುವುದರಲ್ಲಿ ನಾವು ಸಾಮೂಹಿಕ ಜವಾಬ್ದಾರಿಯನ್ನು ಹೊರಲೇಬೇಕಿದೆ. ಮೇಲಾಗಿ, ಲೈಂಗಿಕ ದೌರ್ಜನ್ಯಗಳ ವಿಚಾರಣಾ ಪ್ರಕ್ರಿಯೆಗಳು ವರ್ಷಗಟ್ಟಳೆ ನಡೆಯುತ್ತವೆ. ಭಾರತದ ನ್ಯಾಯಾಂಗದಲ್ಲಿ ಬಾಕಿ ಇರುವ ಪ್ರಕರಣಗಳ ಪ್ರಮಾಣ ಹೆಚ್ಚಾಗಿರುವುದೂ ಇದಕ್ಕೊಂದು ಕಾರಣ. ನ್ಯಾ. ಹೇಮಾ ಸಮಿತಿಯನ್ನು ರಚಿಸಿದ್ದು ಪ್ರಸಿದ್ಧ ಮಲಯಾಳಿ ನಟನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊರಿಸಿದ ಹಿನ್ನೆಲೆಯಲ್ಲಿ ಎನ್ನುವುದನ್ನು ನೆನಪಿಡಬೇಕಿದೆ. ಈ ಪ್ರಕರಣದ ತನಿಖೆ ಇನ್ನೂ ಪೂರ್ಣವಾಗಿಲ್ಲ. ಸಂತ್ರಸ್ತರಿಗೆ ಆರೋಪಿಗಳ ಕಡೆಯಿಂದ ಪ್ರತೀಕಾರದ ಕ್ರಮಗಳ ಬಗ್ಗೆಯೂ ಆತಂಕ ಇರುತ್ತದೆ. ಅವರಿಗೆ ಕೆಲಸ ನೀಡಲು ನಿರಾಕರಿಸುವುದು, ಸಮಸ್ಯೆ ಸೃಷ್ಟಿಸುವವರು ಎಂದು ಬ್ರ್ಯಾಂಡ್ ಮಾಡುವುದು ಸಹ ಸಾಮಾನ್ಯವಾಗಿ ನಡೆಯುತ್ತಿರುತ್ತದೆ.

ರಚನಾತ್ಮಕ ಸುಧಾರಣೆಗಳು
2017ರಲ್ಲಿ ಹಾರ್ವೆ ವೀನ್ಸ್ಸ್ಟೈನ್ ಎಂಬ ಹಾಲಿವುಡ್ ಚಲನಚಿತ್ರ ನಿರ್ಮಾಪಕನ ವಿರುದ್ಧ ಮಾಡಲಾದ ಆರೋಪಗಳು #ಮಿ ಟೂ ಆಂದೋಲನಕ್ಕೆ ಕಾರಣವಾಗಿದ್ದು ಇದು ಜಾಗತಿಕ ಆಯಾಮವನ್ನು ಪಡೆದುಕೊಂಡಿತ್ತು. ನ್ಯಾ. ಹೇಮಾ ಸಮಿತಿಯಲ್ಲಿ ಗುರುತಿಸಲಾಗಿರುವ ಅಂಶಗಳು ಈಗ ರಚನಾತ್ಮಕ ಸುಧಾರಣೆಗಳಿಗೆ ಎಡೆಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರವು ಪರಿಣಾಮಕಾರಿಯಾಗಿ ಮುಂದಾಳತ್ವ ವಹಿಸಬೇಕಿದೆ. ಚಲನಚಿತ್ರ ಉದ್ದಿಮೆಯಲ್ಲಿ ಮಹಿಳೆಯರು ಎದುರಿಸುವ ಸಂಕಷ್ಟಗಳು, ಅದರಲ್ಲೂ ವಿಶೇಷವಾಗಿ ಮುಖ್ಯ ನಟಿಯರಿಗೆ ಹೋಲಿಸಿದರೆ ಕೆಳಸ್ತರದ ಕಲಾವಿದರು ಎದುರಿಸುವ ಸಮಸ್ಯೆಗಳನ್ನು ಗುರುತಿಸಬೇಕಿದೆ. ಸೂಕ್ತ ಶೌಚಾಲಯಗಳು ಇಲ್ಲದಿರುವುದು, ಪ್ರತಿಕೂಲ ತಾರತಮ್ಯಗಳು ಹೆಚ್ಚಾಗಿರುವುದು ಇವೇ ಮುಂತಾದ ಸಮಸ್ಯೆಗಳನ್ನು ಅಮೂಲಾಗ್ರವಾಗಿ ಪರಿಶೀಲನೆ ಮಾಡುವ ಮೂಲಕ ಪರಿಹಾರೋಪಾಯಗಳನ್ನು ಶೋಧಿಸಬೇಕಿದೆ. ಬಹುಮುಖ್ಯವಾಗಿ, ಕೆಲಸದ ಸ್ಥಳಗಳಲ್ಲಿ ನಡೆಯುವ ತಾರತಮ್ಯಗಳ ವಿರುದ್ಧ ಭಾರತದ ಮಹಿಳೆಯರು ನಡೆಸುತ್ತಿರುವ ಸಂಘರ್ಷಗಳಿಗೆ ಈ ವರದಿ ಮತ್ತಷ್ಟು ಪುಷ್ಟಿ, ಪ್ರೊತ್ಸಾಹ ನೀಡುತ್ತದೆ. ಮಹಿಳೆಯಲ್ಲಿ ಒಂದು ಧೈರ್ಯಶಾಲಿ ಜಾಗೃತಿಯನ್ನು ಮೂಡಿಸುವಲ್ಲಿ ನೆರವಾಗುತ್ತದೆ.