ನಂಜನಗೂಡಿನಲ್ಲಿ ಪುರಾತನ ದೇವಳವನ್ನು ನೆಲಸಮಗೊಳಿಸಿರುವ ಘಟನೆ ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕಾರಣಿಗಳು ದೇಗುಲ ನೆಲಸಮವನ್ನು ಖಂಡಿಸಿದ್ದಾರೆ.
ಈ ನಡುವೆ ಬಿಜೆಪಿ ಸಂಸದ ಪ್ರತಾಪ ಸಿಂಹ ಕೂಡಾ ದೇಗುಲ ನೆಲಸಮಗೊಳಿಸಿದ್ದನ್ನು ಪ್ರಶ್ನಿಸಿ ಅಖಾಡಕ್ಕಿಳಿದಿದ್ದು, ದೇಗುಲ ಧ್ವಂಸ ಸರಿಯಲ್ಲ, ನೆಲಸಮಗೊಳಿಸಿದ ಅಧಿಕಾರಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮವನ್ನು ತಕ್ಷಣವೇ ಜರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಭಾನುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಪ್ರತಾಪ ಸಿಂಹ, ದೇವಸ್ಥಾನಗಳನ್ನು ಮಸೀದಿ ಚರ್ಚುಗಳೊಂದಿಗೆ ಹೋಲಿಸಬಾರದು. ದೇವಸ್ಥಾನದಲ್ಲಿ ವಿಗ್ರಹವನ್ನು ಪ್ರತಿಷ್ಟಾಪಿಸಿರುತ್ತೇವೆ. ಆದರೆ, ಮಸೀದಿ ಮತ್ತು ಚರ್ಚು ಕೇವಲ ಪ್ರಾರ್ಥನಾ ಮಂದಿರಗಳು, ಹಾಗಾಗಿ ಅವುಗಳನ್ನು ಯಾವಾಗ ಬೇಕಾದರೂ ಒಡೆದು ಹಾಕಬಹುದು ಎಂದು ಅವರು ಹೇಳಿದ್ದಾರೆ.

ಮೈಸೂರಿನ 101 ಗಣಪತಿ ದೇವಾಲಯ ನಮ್ಮ ಪ್ರತೀಕ. ನಾವು ಯಾವುದೇ ವಾಹನ ಖರೀದಿ ಮಾಡಿದರು ಇಲ್ಲಿ ಪೂಜೆ ಮಾಡಿಸುತ್ತೇವೆ. ಇದಕ್ಕೆ ನೋಟಿಸ್ ಕೊಟ್ಟು ನೆಲಸಮ ಮಾಡುತ್ತೇವೆ ಅಂತಾ ಜಿಲ್ಲಾಡಳಿತ ಹೇಳಿದೆ. ಇದರಿಂದ ಧಾರ್ಮಿಕ ಭಾವನೆಗಳಿಗೆ ಘಾಸಿಯಾಗಿದೆ. ಅದಕ್ಕೆ ಪ್ರತಿರೋಧ ವ್ಯಕ್ತವಾಗುತ್ತಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಆದರೆ, ಅಧಿಕಾರಿಗಳು ಕಳ್ಳರಂತೆ ಬೆಳಗಿನ ಜಾವ ಬಂದು ದೇಗುಲ ಒಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೇವಲ ದೇವಾಲಯಗಳನ್ನು ಏಕೆ ಟಾರ್ಗೆಟ್ ಮಾಡ್ತಿದ್ದೀರಿ? ಮಸೀದಿ, ಚರ್ಚ್ಗಳು ಇಲ್ವಾ ಎಂದು ಪ್ರಶ್ನಿಸಿದ ಪ್ರತಾಪ ಸಿಂಹ, 2009 ರಿಂದ ಇದುವರೆಗೂ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕೇಂದ್ರ ಕಟ್ಟಲು ಜಿಲ್ಲಾಡಳಿತ ಅವಕಾಶ ಕೊಟ್ಟಿಲ್ವಾ? ಕ್ಯಾತಮಾರನಹಳ್ಳಿ ಅನಧಿಕೃತವಾಗಿ ಮಸೀದಿ ಬಂತು. ಯಾಕೆ ಜಿಲ್ಲಾಡಳಿತ ತಡೆಯಲಿಲ್ಲ? ಇದು ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಅಲ್ವಾ? 90 ದೇವಾಲಯ ಪಟ್ಟಿ ಮಾಡುವಾಗ ಕೋರ್ಟ್ ನಿರ್ದೇಶದಂತೆ ಜನರ ಅಭಿಪ್ರಾಯ ಕೇಳಿದ್ರಾ? ಎಂದು ಕೇಳಿದ್ದಾರೆ.
ಜಿಲ್ಲಾಡಳಿತಕ್ಕೆ ನಾನು ದಬಾಯಿಸಿದೆ ಅಂತಾರೆ. ನನ್ನ ಧರ್ಮಕ್ಕೆ ಅನ್ಯಾಯವಾದಾಗ ಆಕ್ರೋಶ ಸಹಜ. ಧರ್ಮವನ್ನು ಪ್ರೀತಿಸುವ ಎಲ್ಲರಿಗೂ ಈ ಆಕ್ರೋಶ ಸಹಜ. ಸುಪ್ರೀಂಕೋರ್ಟ್ ಆದೇಶ ಅಂತಾ ಮೈಸೂರು ಜಿಲ್ಲಾಡಳಿತ ಜನರ ದಾರಿ ತಪ್ಪಿಸುತ್ತಿದೆ. ನಾವು ನ್ಯಾಯಾಲಯಕ್ಕೆ ವಿರೋಧವಿಲ್ಲ. ನ್ಯಾಯಾಲಯ ಸೂಚಿಸಿದ ನಿರ್ದೇಶನಗಳನ್ನೆ ಜಿಲ್ಲಾಡಳಿತ ಪಾಲಿಸಿಲ್ಲ. ದೇವರಾಜು ಅರಸು ರಸ್ತೆಯಲ್ಲಿನ ದರ್ಗಾ ಬಗ್ಗೆ ನಾನು ಮಾತಾಡಿದ್ದೆ. ಆ ದರ್ಗಾ ಪಾದಚರಿ ರಸ್ತೆ ಮೇಲಿದೆ. ಅದರಿಂದ ಜನರಿಗೆ ತೊಂದರೆ ಆಗುತ್ತೆ. ಇದನ್ನು ತೆರವು ಮಾಡಲು ಜಿಲ್ಲಾಡಳಿತ ಸಿದ್ಧವಾಗಿಲ್ಲ. ಇದಕ್ಕೆ ನಾನು ತೊಡೆ ನಡುಗುತ್ತಾ ಎಂದು ಕೇಳಿದ್ದೆ. ಜನರಿಗೆ ತೀರಾ ತೊಂದರೆ ಆಗುತ್ತೆ ಅಂದರೆ ಸ್ಥಳಾಂತರ ಮಾಡಿ ಎಂದು ಪ್ರತಾಪ್ ಹೇಳಿದ್ದಾರೆ.
ಅನಧಿಕೃತವಾಗಿ ನಿರ್ಮಿಸಿರುವ ಪ್ರಾರ್ಥನಾ ಮಂದಿರಗಳ ತೆರವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ನಾನು ಮೈಸೂರಿಗೆ ಮಾತ್ರ ಸೀಮಿತಗೊಳಿಸಿ ಮಾತನಾಡುತ್ತಿಲ್ಲ. ಇಡೀ ದೇಶಕ್ಕೆ ಅನ್ವಯವಾಗುವಂತೆ ಮಾತನಾಡುತ್ತಿದ್ದೇನೆ. ಯಾವುದೇ ಪೂರ್ವಾಪರಗಳನ್ನು ಪರಿಶೀಲಿಸದೆ ಏಕಾಏಕಿ ದೇಗುಲಗಳನ್ನು ನೆಲಸಮಗೊಳಿಸುತ್ತಿರುವುದು ಸರಿಯಲ್ಲ.ಇಂತಹ ಘಟನೆಗಳನ್ನು ಯಾವುದೇ ನಾಗರೀಕ ಸಮಾಜ ಒಪ್ಪುವುದಿಲ್ಲ. ಯಾವುದೇ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸುವ ಮುನ್ನಾ ಮೊದಲು ಅಲ್ಲಿನ ಸ್ಥಳೀಯ ನಿವಾಸಿಗಳೊಂದಿಗೆ ಚರ್ಚಿಸಬೇಕು. ಪ್ರಾರ್ಥನಾ ಮಂದಿರವನ್ನು ಉಳಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆಯೇ? ಅಥವಾ ಸ್ಥಳಾಂತರ ಮಾಡಲು ಸಾಧ್ಯವಿದೆಯೇ? ಎಂಬೆಲ್ಲಾ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.ಅನಿವಾರ್ಯ ಪರಿಸ್ಥಿತಿ ಇದ್ದರೆ ಮಾತ್ರ ಅಂತಹ ಪ್ರಾರ್ಥನಾ ಮಂದಿರಗಳನ್ನು ಮಾತ್ರ ಸ್ಥಳೀಯ ನಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ತೆರವುಗೊಳಿಸಬೇಕೇ ಹೊರತು ಜನರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಯಾವುದೇ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸಬಾರದು ಎಂದು ಆಗ್ರಹಿಸಿದ್ದಾರೆ.
Also Read: ದೇಗುಲ ನೆಲಸಮದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ: ನೂತನ ದೇವಸ್ಥಾನ ನಿರ್ಮಿಸುವಂತೆ ಸರ್ಕಾರಕ್ಕೆ ಒತ್ತಾಯ
ರಾಜ್ಯ ಸರ್ಕಾರ ಮತ್ತೊಮ್ಮೆ ದೇವಾಲಯಗಳ ಪಟ್ಟಿ ಪರೀಲನೆ ಮಾಡಬೇಕು. 2010ರ ರಾಜ್ಯ ಸರ್ಕಾರದ ಆದೇಶವನ್ನ ತಕ್ಷಣ ವಾಪಸ್ ಪಡೆಯಬೇಕು.ಮತ್ತೊಮ್ಮೆ ಸುಪ್ರೀಂಕೋರ್ಟ್ ಮುಂದೆ ಪರಿಷ್ಕೃತ ಪಟ್ಟಿ ಸಲ್ಲಿಸಬೇಕು. ಸಾರ್ವಜನಿಕವಾಗಿ ತೊಂದರೆಯಾಗುವ ದೇವಾಲಯ, ಮಸೀದಿ ಹಾಗೂ ಚರ್ಚೆಗಳನ್ನು ಪ್ರತ್ಯೇಕ ಪ್ರಕರಣವಾಗಿ ಪರಿಗಣಿಸಿ ಸ್ಥಳೀಯರೊಂದಿಗೆ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳಿ. ಇಲ್ಲವಾದರೆ ರಾಜ್ಯಾದ್ಯಂತ ದೇವಾಲಯಗಳನ್ನು ಉಳಿಸಿ ಎಂಬ ಅಭಿಯಾನ ಮಾಡಬೇಕಾಗುತ್ತದೆ ಸಂಸದರು ಎಚ್ಚರಿಕೆ ನೀಡಿದ್ದಾರೆ.
ಸಿದ್ದರಾಮಯ್ಯನವರನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಪ್ರತಾಪ ಸಿಂಹ
ನಂಜನಗೂಡು ದೇವಾಲಯ ನೆಲಸಮ ವಿರೋಧಿಸಿ, ನೂತನ ದೇಗುಲ ನಿರ್ಮಿಸುವಂತೆ ಸರ್ಕಾರವನ್ನು ಒತ್ತಾಯಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಸಂಸದ ಪ್ರತಾಪ ಸಿಂಹ ಶ್ಲಾಘಿಸಿದ್ದಾರೆ.
ದೇಗುಲ ನೆಲಸಮಗೊಳಿಸಿದ ವಿಚಾರದಲ್ಲಿ ತಾಲೂಕಾಡಳಿತ, ಜಿಲ್ಲಾಡಳಿತ ತಗಾದೆಗೆ ತೆಗೆದುಕೊಂಡು, ಬದಲಿ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಆಗ್ರಹಿಸಿ ಸಿದ್ದರಾಮಯ್ಯನವರ ಹೇಳಿಕೆಯನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತೇನೆ ಎಂದು ಪ್ರತಾಪ ಸಿಂಹ ಹೇಳಿದ್ದಾರೆ.
ದೇಗುಲ ನೆಲಸಮಗೊಳಿಸಿರುವುದು ಧರ್ಮಸೂಕ್ಷ್ಮ ವಿಚಾರವಾಗಿದ್ದು ಇಂತಹ ನಿರ್ಧಾರ ಕೈಗೊಳ್ಳುವ ಮೊದಲು ಸ್ಥಳೀಯರ ಜೊತೆ ಮಾತುಕತೆ ನಡೆಸಬೇಕಾಗಿತ್ತು. ನ್ಯಾಯಾಲಯದ ಆದೇಶವಿದ್ದರೂ ಅದನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸುವ ಮುನ್ನ ಜಿಲ್ಲಾಡಳಿತ ಪರಿಣಾಮದ ಬಗ್ಗೆ ಯೋಚನೆ ಮಾಡಬೇಕಾಗಿತ್ತು. ಹಿಂದೂ ಧರ್ಮದ ರಕ್ಷಣೆಯನ್ನು ಗುತ್ತಿಗೆ ಪಡೆದವರ ರೀತಿ ಮಾತನಾಡುವ ಬಿಜೆಪಿಗೆ ಇಂತಹ ದುಸ್ಸಾಹಸ ಮಾಡುವ ಮೊದಲು ಹಿಂದುತ್ವ ರಕ್ಷಣೆಯ ನೆನಪಾಗಲಿಲ್ಲವೇ? ಎಂದು ಪ್ರಶ್ನಿಸಿ, ದೇವಸ್ಥಾನ ಕೆಡವಿ ಹಾಕಿದ ಘಟನೆ ಬಗ್ಗೆ ಮುಖ್ಯಮಂತ್ರಿಗಳು ನಿಷ್ಪಕ್ಷಪಾತ ತನಿಖೆ ನಡೆಸಿ ಕಾರಣಕರ್ತ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದರು.