ಬೀಜಿಂಗ್: ಚೀನಾದಲ್ಲಿ ಓಮಿಕ್ರಾನ್ ಉಪತಳಿ ಬಿಎಫ್.7 ಹಾವಳಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಲೇ ಇದ್ದು, ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಜನ ಪರದಾಡುತ್ತಿದ್ದಾರೆ. ನಿತ್ಯ 10 ಲಕ್ಷದಷ್ಟು ಹೊಸ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿವೆ. ಶಾಂಘೈ, ಬೀಜಿಂಗ್‌ನಂತಹ ನಗರಗಳು ಸಂಪೂರ್ಣ ಸೋಂಕು ಆವೃತಗೊಂಡಿವೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್ ಸೋಂಕಿತರಿಂದ ಎಲ್ಲಾ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ತೀವ್ರ ಉಸಿರಾಟ ಸಮಸ್ಯೆಗೆ ತುತ್ತಾದ ರೋಗಿಗಳಿಗೆ ಐಸಿಯು ಸಿಗುವುದೂ ಕಷ್ಟವಾಗಿದೆ. ಸಾವಿರಾರು ಸೋಂಕಿತರನ್ನು ಆಸ್ಪತ್ರೆಯ ಕಾರಿಡಾರ್‌ಗಳಲ್ಲೇ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚೀನಾದ ಒಂದೇ ಒಂದು ಆಸ್ಪತ್ರೆ ಕೂಡ ಖಾಲಿ ಉಳಿದಿಲ್ಲ. ಎಲ್ಲಾ ಹಾಸಿಗೆಗಳು ಕೋವಿಡ್ ರೋಗಿಗಳಿಂದ ಭರ್ತಿಯಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇಷ್ಟಾದರೂ ಕೋವಿಡ್ ಸೋಂಕಿತರ ಸಾವಿನ ಬಗ್ಗೆ ಚೀನಾ ಸರಕಾರ ನಿಖರ ಮಾಹಿತಿ ನೀಡುತ್ತಿಲ್ಲ. ಬಹುಪಾಲು ಪ್ರಕರಣಗಳನ್ನು ಮುಚ್ಚಿಡಲಾಗುತ್ತಿದ್ದು, ಹೊರ ಜಗತ್ತಿಗೆ ನೈಜ ಸ್ಥಿತಿಯ ಅರಿವಿಲ್ಲದಾಗಿದೆ. ”ಮಾಹಿತಿ ಮುಚ್ಚಿಡುವುದು ಬೇಡ. ಹಂಚಿಕೊಳ್ಳುವುದರಿಂದ ಉಳಿದ ದೇಶಗಳಿಗೆ ಸೋಂಕು ಹರಡುವುದನ್ನು ತಪ್ಪಿಸಬಹುದಾಗಿದೆ. ಸಾವು ಮತ್ತು ಸೋಂಕಿನ ಸಂಖ್ಯೆಯನ್ನು ಖಚಿತವಾಗಿ ತಿಳಿಸಿ,”ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕ ಟೆಡ್ರೋಸ್ ಅಧನೋಮ್ ಘೆಬ್ರೆಯೆಸಸ್ ಚೀನಾ ಸರಕಾರಕ್ಕೆ ಸೂಚನೆ ನೀಡಿದ್ದಾರೆ.
ಭಾರತದಲ್ಲಿ ಕೋವಿಡ್ ಇಳಿಕೆ
ಹೊಸದಿಲ್ಲಿ: ಚೀನಾ, ಅಮೆರಿಕ ಸೇರಿ ಹಲವು ದೇಶಗಳಲ್ಲಿ ಕಂಟಕವಾಗಿರುವ ಓಮಿಕ್ರಾನ್ ಉಪತಳಿಗಳ ಕಾಟ ಸದ್ಯದ ಮಟ್ಟಿಗೆ ಭಾರತವನ್ನು ಕಾಡುವ ಅಪಾಯ ಇಲ್ಲ. ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, ಪಾಸಿಟಿವಿಟಿ ದರವೂ ಕುಸಿದಿದೆ.
ಕಳೆದ 24 ಗಂಟೆ ಅವಧಿಯಲ್ಲಿ 228 ಮಂದಿಗೆ ಸೋಂಕು ತಗುಲಿರುವುದು ದಾಖಲಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,503ಕ್ಕೆ ಇಳಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ನಾಲ್ಕು ಮಂದಿ ಕೋವಿಡ್ ರೋಗಿಗಳು ಮೃತಪಟ್ಟಿದ್ದು, ಒಟ್ಟಾರೆ ಕೋವಿಡ್ ಮರಣ ಸಂಖ್ಯೆ 5,30,714ಕ್ಕೆ ತಲುಪಿದೆ. ಕೇರಳದಲ್ಲಿ ಇಬ್ಬರು ಮೃತಪಟ್ಟಿದ್ದರೆ, ಬಿಹಾರ ಹಾಗೂ ಉತ್ತರಾಖಂಡದಲ್ಲಿ ತಲಾ ಒಬ್ಬರು ಸೋಂಕಿತರು ಬಲಿಯಾಗಿದ್ದಾರೆ.
ದೇಶದಲ್ಲಿ ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ 0.11ರಷ್ಟಿದೆ. ವಾರದ ಪಾಸಿಟಿವಿಟಿ ದರ ಶೇ 0.12ರಷ್ಟು ದಾಖಲಾಗಿದೆ. ಒಟ್ಟಾರೆ ಸೋಂಕಿನಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ ಶೇ 0.01ರಷ್ಟಿದೆ. ರಾಷ್ಟ್ರೀಯ ಕೋವಿಡ್ 19 ಚೇತರಿಕೆ ಪ್ರಮಾಣ ಶೇ 98.80ಗೆ ಏರಿಕೆ ಕಂಡಿದೆ