ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿರುದ್ದ ಗೆದ್ದು ಬೀಗಿದ್ದಾರೆ ಸಂಸದ ಸುಧಾಕರ್. ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಸುಧಾಕರ್ ಗೆಲುವು ಸಾಧಿಸಿದ್ದಾರೆ. ಆದರೆ ನ್ಯಾಯಾಲಯದಿಂದ ಫಲಿತಾಂಶ ಪ್ರಕಟಿಸಿದಂತೆ ಮಧ್ಯಂತರ ಆದೇಶ ಹೊರಬಿದ್ದ ಹಿನ್ನಲೆಯಲ್ಲಿ ಅಧಿಕೃತವಾಗಿ ಚುನಾವಣಾಧಿಕಾರಿ ಫಲಿತಾಂಶ ಪ್ರಕಟ ಮಾಡಿಲ್ಲ. ಅಧ್ಯಕ್ಷರಾಗಿ ಗಜೇಂದ್ರ ಹಾಗೂ ಉಪಾಧ್ಯಕ್ಷರಾಗಿ ಗ್ಯಾಸ್ ನಾಗರಾಜ್ ಆಯ್ಕೆಯಾಗಿದ್ದಾರೆ. ಬಿಜೆಪಿಯ ಗಜೇಂದ್ರ 19, ನಾಗರಾಜ್ 20 ಮತಗಳನ್ನ ಪಡೆದ್ರೆ, ಕಾಂಗ್ರೆಸ್ನ ಅಂಬರೀಷ್ 16, ಮೀನಾಕ್ಷಿ 15 ಮತ ಪಡೆದುಕೊಂಡಿದ್ದಾರೆ.. ಚುನಾವಣೆ ನಂತರ ಸುಧಾಕರ್ ಹಾಗೂ ಪ್ರದೀಪ್ ಈಶ್ವರ್ ವಾಗ್ವಾದ ಮಾಡಿದ್ದಾರೆ.
ಮಿಸ್ಟರ್ ಎಂಪಿ ನೀನಲ್ಲ ನಿಮ್ಮ ಅಪ್ಪ ಬಂದರೂ ನನ್ನ ಟಚ್ ಮಾಡಕ್ಕಾಗಲ್ಲ. ಸುಧಾಕರ್ ಅಲ್ಲ ಅವರ ಅಪ್ಪ ಬಂದ್ರೂ ನನ್ನ ಮುಟ್ಟಕ್ಕಾಗಲ್ಲ ಎಂದು ಸಂಸದ ಡಾ ಕೆ ಸುಧಾಕರ್‌ಗೆ ಶಾಸಕ ಪ್ರದೀಪ್ ಈಶ್ವರ್ ಸವಾಲ್ ಹಾಕಿದ್ದಾರೆ. ಕೋವಿಡ್ ಕೇಸ್‌ನಲ್ಲಿ ನಿನ್ನನ್ನು ಒಳಗೆ ಕಳುಹಿಸುತ್ತೇನೆ. ‘ಏಯ್ ಸುಧಾಕರ್.. ನೀನೊಬ್ಬ ಕೋವಿಡ್ ಕಳ್ಳ’ ಒಳಗೆ ಕಳುಹಿಸಿಯೇ ತೀರುತ್ತೇನೆ. ನಗರಸಭೆ ಚುನಾವಣೆಯಲ್ಲಿ ಏಳೆಂಟು ಕೋಟಿ ಖರ್ಚು ಮಾಡಿದ್ದಾನೆ. ಕೋವಿಡ್ ವೇಳೆ ಲೂಟಿ ಮಾಡಿರುವ ದುಡ್ಡು ಖರ್ಚು ಮಾಡಿದ್ದಾನೆ. ರಾಜ್ಯ, ದೇಶ ಅಲ್ಲ ನಿಮ್ಮಪ್ಪ ಕೈಯಲ್ಲೂ ನನ್ನ ಕೂದಲು ಮುಟ್ಟಕ್ಕಾಗಲ್ಲ ಎಂದಿದ್ದಾರೆ.
ನಾನು ಮಾನ್ಯ ಪ್ರದೀಪ್ ಈಶ್ವರ್‌ಗೆ ಅಭಾರಿ ಆಗಿರುತ್ತೇನೆ ಎನ್ನುವ ಮೂಲಕ ಚಿಕ್ಕಬಳ್ಳಾಪುರ ಸಂಸದ ಡಾ ಕೆ. ಸುಧಾಕರ್ ವ್ಯಂಗ್ಯವಾಡಿದ್ದಾರೆ. ಶಾಸಕ ಪ್ರದೀಪ್ ಈಶ್ವರ್ ಇದೇ ರೀತಿ ಉಡಾಫೆ ಉತ್ತರ ಕೊಡ್ತಾ ಇರಲಿ. ಅವರು ದ್ವೇಷದ ಬಾಣಗಳು ಬಿಡ್ತಿದ್ರೆ, ನನಗೆ ಕಮಲದ ಹೂವಾಗಿ ನನ್ನ ಕೊರಳಿಗೆ ಬೀಳ್ತಾ ಇರುತ್ತೆ. ಶಾಸಕ ಪ್ರದೀಪ್ ಈಶ್ವರ್ ಮಾತು ಇದೇ ರೀತಿ ಮುಂದುವರಿಯಬೇಕು. ಪ್ರದೀಪ್ ಈಶ್ವರ್ ಡ್ಯಾನ್ಸ್ ಹೀಗೆ ಮಾಡ್ತಾ ಇರಬೇಕು. ಇನ್ನು ಸ್ವಲ್ಪ ಹೆಚ್ಚಿಗೆ ಡ್ಯಾನ್ಸ್ ಮಾಡೋದು ಕಲಿತುಕೊಳ್ಳಲಿ. ಇನ್ನೂ ಮೂರು ವರ್ಷ ಇದೆ, ಏನೆಲ್ಲಾ ಮಾಡಬೇಕು ಅಂದುಕೊಂಡಿದ್ದಾರೆ ಮಾಡಲಿ. ಮುಂದಿನ 3 ವರ್ಷಗಳ ಬಳಿಕ ರಾಜ್ಯ, ದೇಶ ಎಲ್ಲೂ ಇರಲ್ಲ ಎಂದಿದ್ದಾರೆ.