ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಸಾರ್ವಜನಿಕ ಆಸ್ತಿ ನಗದೀಕರಣ(ಎನ್ ಎಂಪಿ) ಮೂಲಕ ಬರೋಬ್ಬರಿ ಆರು ಲಕ್ಷ ಕೋಟಿ ರೂ. ಆದಾಯ ಕ್ರೋಡೀಕರಣ ಯೋಜನೆ ಘೋಷಿಸಿದ ಬೆನ್ನಲ್ಲೇ ಆ ಮಹಾತ್ವಾಕಾಂಕ್ಷಿ ಯೋಜನೆಯ ಸಾಧಕ-ಬಾಧಕಗಳ ಕುರಿತ ರಾಷ್ಟ್ರೀಯ ಮಟ್ಟದ ಚರ್ಚೆ ಗರಿಗೆದರಿದೆ.
ದೇಶದ ಸಾರ್ವಜನಿಕ ಸ್ವತ್ತುಗಳ ಖಾಸಗೀಕರಣದ ಅತಿ ತರಾತುರಿಯ ಇಂತಹ ಯೋಜನೆಗಳು ಬಿಜೆಪಿಯ ಉದ್ಯಮಪರ ನೀತಿ, ಖಾಸಗೀಕರಣ ನೀತಿಯ ಜರೂರು ಅನುಷ್ಠಾನದ ಧಾವಂತದ ಕ್ರಮಗಳು. ದೇಶದ ಜನಸಾಮಾನ್ಯರ ಪಾಲಿಗೆ ಇಂತಹ ಕ್ರಮಗಳು ಈಗಾಗಲೇ ದುರ್ಬರವಾಗಿರುವ ಜೀವನವನ್ನು ಮತ್ತಷ್ಟು ದುರ್ಬರಗೊಳಿಸಲಿವೆ. ಮುಖ್ಯವಾಗಿ ಜನರ ಆಸ್ತಿಯನ್ನು ಬಿಜೆಪಿಯ ಆಪ್ತ ಉದ್ಯಮಿಗಳಿಗೆ ದಯಪಾಲಿಸಲು ಮೆಗಾ ಯೋಜನೆ ಇದು ಎಂಬ ಟೀಕೆಗಳೂ ಕೇಳಿಬಂದಿವೆ. ಆ ಹಿನ್ನೆಲೆಯಲ್ಲೇ ಈಗಾಗಲೇ ದೇಶದ ಸಾರ್ವಜನಿಕ ಉದ್ದಿಮೆಗಳ ನೌಕರರು, ಕಾರ್ಮಿಕರು, ಸಾಮಾಜಿಕ ಮತ್ತು ರಾಜಕೀಯ ವಲಯದಿಂದಲೂ ಎನ್ ಎಂಪಿ ಗೆ ಪ್ರಬಲ ವಿರೋಧ ವ್ಯಕ್ತವಾಗತೊಡಗಿದೆ.
ಆ ಹಿನ್ನೆಲೆಯಲ್ಲಿ ಜಾಗತೀಕರಣೋತ್ತರ ಭಾರತದ ಆರ್ಥಿಕ ನೀತಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ದೇಶದ ಹಲವು ಮಾಜಿ ಹಣಕಾಸು ಸಚಿವರು, ಸಲಹೆಗಾರರು, ಆರ್ಥಿಕ ತಜ್ಞರು ಈ ಯೋಜನೆಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬ ಕುತೂಹಲ ಸಹಜ. ಅದರಲ್ಲೂ ದೇಶ ಕಂಡ ಅಪರೂಪದ ಆರ್ಥಿಕ ತಜ್ಞರಲ್ಲಿ ಒಬ್ಬರಾದ ಮತ್ತು ಸುದೀರ್ಘ ಅವಧಿಗೆ ದೇಶದ ವಿತ್ತ ಸಚಿವರಾಗಿ ಆರ್ಥಿಕ ಪ್ರಗತಿಯ ದಿಕ್ಕುದೆಸೆ ನಿರ್ಧರಿಸುವಲ್ಲಿ ನಿರ್ಣಾಯಕರಾಗಿರುವ ಪಿ ಚಿದಂಬರಂ ಅವರು ಎನ್ ಎಂಪಿ ಕುರಿತು ‘ದ ವೈರ್’ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಆಡಿರುವ ಮಾತುಗಳು ಗಮನಾರ್ಹ.
ಮುಖ್ಯವಾಗಿ ಈಗಾಗಲೇ ಬಳಕೆಯಲ್ಲಿರುವ ರೈಲ್ವೆ, ವಿಮಾನ, ಕಲ್ಲಿದ್ದಲು, ವಿದ್ಯುತ್, ರಸ್ತೆ ಸಾರಿಗೆಯಂತಹ ವಲಯಗಳ ಮೂಲಸೌಕರ್ಯಗಳನ್ನು ಖಾಸಗಿಯವರಿಗೆ ಲೀಸ್ ಗೆ ನೀಡುವುದು ಮತ್ತು ಒಂದು ನಿರ್ದಿಷ್ಟ ಅವಧಿಯ ಬಳಿಕ ಅವುಗಳನ್ನು ವಾಪಸು ಪಡೆಯುವುದು ಎಂಬುದು ಮೋದಿ ಸರ್ಕಾರದ ಈ ಯೋಜನೆಯ ಮೂಲ ಆಶಯ. ಆದರೆ, ಸರ್ಕಾರ ಹೇಳುವ ಈ ಆಶಯ ಅದು ಹೇಳುವಷ್ಟು ಸರಳವೂ ಅಲ್ಲ; ಪಾರದರ್ಶಕವೂ ಅಲ್ಲ ಎಂಬುದು ಖಾಸಗೀಕರಣದ ವ್ಯವಹಾರಗಳನ್ನು ಬಲ್ಲವರಿಗೆ ತಿಳಿಯದ ಸಂಗತಿಯೇನಲ್ಲ.

ದೇಶದ ಸಾರ್ವಜನಿಕ ಸ್ವಾಮ್ಯದ ಉದ್ದಿಮೆ, ಮೂಲಸೌಕರ್ಯ ಸ್ವತ್ತುಗಳು ಅಸಮರ್ಥ ನಿರ್ವಹಣೆ, ಭ್ರಷ್ಟಾಚಾರ, ಸ್ವಜನಪಕ್ಷಪಾತದಂತಹ ಕಾರಣಗಳಿಂದ ನಷ್ಟದಲ್ಲಿವೆ ಎಂಬುದನ್ನು ಮುಂದೆ ಮಾಡಿ, ಬಿಜೆಪಿ ಸರ್ಕಾರ ತನ್ನ ಎಂದಿನ ಖಾಸಗೀ ಉದ್ಯಮಿಪರ ನೀತಿಯನ್ನು ಸಮರ್ಥಿಸಿಕೊಳ್ಳುತ್ತಿದೆ. ಆ ಹಿನ್ನೆಲೆಯಲ್ಲಿ ಪಿ ಚಿದಂಬರಂ, ಸಾರ್ವಜನಿಕ ವಲಯ ಯಾವಾಗಲೂ ವೈಫಲ್ಯಕ್ಕೆ ದಾರಿ, ಖಾಸಗೀ ವಲಯ ಸದಾ ಯಶೋಗಾಥೆಯ ನಿದರ್ಶನ ಎಂಬ ಕಲ್ಪನೆ ಭಾರತದ ಮಟ್ಟಿಗೆ ಪೂರ್ವಾಗ್ರಹದಂತೆ ಬೆಳೆದುಬಂದಿದೆ. ಆದರೆ, ವಾಸ್ತವವಾಗಿ ಅದು ಹಾಗಲ್ಲ. ವಸೂಲಾದ ಸಾಲದ(ಎನ್ ಪಿಎಸ್) ಭಾರೀ ಹೊರೆ ಏರುತ್ತಿರುವುದು ಮತ್ತು ಅದರಲ್ಲಿ ಹೆಚ್ಚಿನ ಪಾಲು ಯಾರದಿದೆ ಎಂಬುದನ್ನು ಗಮನಿಸಿದರೆ ದೇಶದ ಖಾಸಗೀ ವಲಯದ ಯಶೋಗಾಥೆಯ ಕಥೆಗಳು ಎಷ್ಟು ನಿಜ ಮತ್ತು ಎಷ್ಟು ಭ್ರಮೆ ಎಂಬುದು ಯಾರಿಗಾದರೂ ಅರಿವಿಗೆ ಬರಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅದರಲ್ಲೂ ಮೂಲಸೌಕರ್ಯ ವಲಯದ ವಿಷಯದಲ್ಲಿ ಖಾಸಗೀ ನಿರ್ವಹಣೆಯ ಯಶಸ್ಸಿನ ಕೆಲವು ನಿದರ್ಶನಗಳಿದ್ದರೂ, ಅದೇ ಹೊತ್ತಿಗೆ ಆ ವಲಯದ ಸಾರ್ವಜನಿಕ ವಲಯದ ನಿರ್ವಹಣೆಯನ್ನು ಸಾರಾಸಗಟಾಗಿ ಅಸಮರ್ಥ ಎಂದು ತಳ್ಳಿಹಾಕಲಾಗದು. ಇದು ಎನ್ ಎಂಪಿ ಕುರಿತ ಬಿಜೆಪಿಯ ಮೂಲ ಚಿಂತನೆಯಲ್ಲಿ ಇರುವ ಲೋಪ ಎಂದು ಪಿಸಿ ವಿವರಿಸಿದ್ದಾರೆ.
ಇನ್ನು ದೇಶದ ರೈಲ್ವೆ, ವಿಮಾನ, ಕಲ್ಲಿದ್ದಲು, ವಿದ್ಯುತ್ ಮುಂತಾದ ಬೃಹತ್ ವಲಯಗಳನ್ನು ಖಾಸಗಿಯವರಿಗೆ ತೆರೆಯಲು ಮುಂದಾಗಿರುವ ಈ ಸರ್ಕಾರಕ್ಕೆ, ಆ ವಲಯಗಳಲ್ಲಿ ಬೃಹತ್ ಹೂಡಿಕೆ ಮಾಡುವ ಖಾಸಗಿ ಸಂಸ್ಥೆಗಳು ಯಾವುವು? ಎಂಬ ಬಗ್ಗೆ ಸ್ಪಷ್ಟತೆ ಇದ್ದೇ ಇದೆ. ಈಗಾಗಲೇ ಟೆಲಿಕಾಂ ವಲಯದಲ್ಲಿ ಆದಂತೆಯೇ ಜನಸಾಮಾನ್ಯರ ಬಳಕೆಯ ಈ ವಲಯಗಳಲ್ಲೂ ದೇಶದ ಒಬ್ಬಿಬ್ಬರು ಉದ್ಯಮಿಗಳು ಮಾತ್ರ ಹೂಡಿಕೆ ಮಾಡಬಹುದು. ಅಥವಾ ಒಂದಿಬ್ಬರು ವಿದೇಶಿ ಹೂಡಿಕೆದಾರರೂ ಹೂಡಿಕೆ ಮಾಡಬಹುದು. ಆದರೆ, ಅಂತಿಮವಾಗಿ ಆ ಮೂಲಕ ಆ ವಲಯಗಳು ಬೆರಳೆಣಿಕೆಯ ಮತ್ತು ಆಳುವ ಸರ್ಕಾರದ ಆಪ್ತ ಉದ್ಯಮಿಗಳ ಏಕಸ್ವಾಮ್ಯದ ಪಾರಮ್ಯಕ್ಕೆ ಕಾರಣವಾಗಲಿದೆ. ಹಾಗಾಗಿ, ಅದರ ಪರಿಣಾಮವಾಗಿ ಸಾರಿಗೆ, ವಿದ್ಯುತ್ ನಂತಹ ಅಗತ್ಯ ಮೂಲ ಸೌಕರ್ಯಗಳು ದುಬಾರಿಯಾಗಲಿವೆ. ಜನಸಾಮಾನ್ಯರ ಬದುಕನ್ನು ಇನ್ನಷ್ಟು ದುರ್ಬರಗೊಳಿಸಲಿವೆ ಎಂದು ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

ಈಗಲೂ ಟೆಲಿಕಾಂ ವಲಯವನ್ನು ಕೂಡ ಎನ್ ಎಂಪಿ ಗೆ ತೆರೆಯುವುದಾಗಿ ಹೇಳಲಾಗಿದೆ. ಅದೇ ವಲಯವನ್ನು ಉದಾಹರಣೆಗೆ ತೆಗೆದುಕೊಂಡರೆ, ಟೆಲಿಕಾಂ ಟವರ್ ಮತ್ತು ಫೈಬರ್ ಮುಂತಾದ ಆಸ್ತಿಯನ್ನು ಲೀಸ್ ಪಡೆಯಲು ಮುಂದೆ ಬರುವ ದೇಶದ ಉದ್ಯಮಿಗಳು ಯಾರಿರಬಹುದು? ಈಗಾಗಲೇ ಆ ವಲಯದಲ್ಲಿ ಏಕಸ್ವಾಮ್ಯ ಹೊಂದಿರುವ ಇಬ್ಬರು ಉದ್ಯಮಿಗಳಲ್ಲಿ ಒಬ್ಬರು ತಾನೆ? ಅಥವಾ ಆ ಉದ್ದಿಮೆ ಸಮೂಹದಲ್ಲೇ ಒಂದು ಸಮೂಹ ತಾನೆ?. ಇದೇ ಸಂಪೂರ್ಣ ಏಕಸ್ವಾಮ್ಯ ಎಂಬುದು. ಅದರ ಪರಿಣಾಮ ಏನು ಎಂಬುದನ್ನು ಈಗಾಗಲೇ ದೇಶದ ಟೆಲಿಕಾಂ ಗ್ರಾಹಕರ ಅನುಭವಕ್ಕೆ ಬರತೊಡಗಿದೆ. ಇನ್ನು ವಿದ್ಯುತ್ ವಲಯದಲ್ಲಿ ಕೂಡ ಇದೇ ಪುನರಾವರ್ತನೆಯಾಗಲಿದೆ. ಏಕೆಂದರೆ ಆ ವಲಯದಲ್ಲಿ ಕೂಡ ಹೂಡಿಕೆ ಮಾಡುವರು ಅದೇ ಇಬ್ಬರ ಪೈಕಿ ಒಬ್ಬರಾಗಿರುತ್ತಾರೆ. ಹಾಗೇ ಇಂತಹ ಏಕಸ್ವಾಮ್ಯವನ್ನು ತಡೆಯುವ ಯಾವುದಾದರೂ ವ್ಯವಸ್ಥೆ ಎನ್ ಎಂಪಿಯಲ್ಲಿ ಇದೆಯೇ? ಎಂಬುದು ಪ್ರಶ್ನೆ. ಅಂತಹ ಯಾವ ವ್ಯವಸ್ಥೆಯನ್ನೂ ತನ್ನ ನೀತಿಯಲ್ಲಿ ಅಳವಡಿಸಿಕೊಂಡಿಲ್ಲ ಎಂಬುದು ಕೂಡ ಸರ್ಕಾರದ ಅಂತಿಮ ಉದ್ದೇಶದ ಸೂಚಕ ಎಂಬುದು ಹಿರಿಯ ಕಾಂಗ್ರೆಸ್ ನಾಯಕ ಚಿದಂಬರಂ ವಿಶ್ಲೇಷಣೆ.
ಇನ್ನು ಎನ್ ಎಂಪಿ ಅಡಿಯಲ್ಲಿ ಖಾಸಗಿ ಉದ್ಯಮಿಗೆ ಸಾರ್ವಜನಿಕ ವಲಯದ ಮೂಲಸೌಕರ್ಯವನ್ನು ವಹಿಸಿದ ಮೇಲೆ, 20-25 ವರ್ಷ ಆ ಆಸ್ತಿಯ ಬಳಕೆಯಾಗುತ್ತದೆ ಎಂದಾದರೆ, ಆ ಅವಧಿಯಲ್ಲಿ ಆ ಆಸ್ತಿಯ ಸವಕಳಿ(ಡಿಪ್ರಿಸಿಯೇಷನ್) ನಷ್ಟದ ಕುರಿತು ಎಂಎನ್ ಪಿ ವ್ಯವಸ್ಥೆಯಲ್ಲಿ ಏನು ನೀತಿ ಇದೆ? ನೀವು ನೀಡುವಾಗ ಇದ್ದ ಸ್ಥಿತಿಯಲ್ಲೇ ಆ ಆಸ್ತಿಯನ್ನು ಹಿಂತಿಗುತ್ತದೆ ಎಂಬುದನ್ನು ಖಾತರಿಪಡಿಸಲು ಯಾವ ಕ್ರಮಗಳನ್ನು ಕೈಗೊಳ್ಳುತ್ತೀರಿ? ಆ ಆಸ್ತಿಯ ಮಾಲೀಕರು ಸರ್ಕಾರವೇ ಆಗಿರುತ್ತದೆ. ಹಾಗಾಗಿ ಅದು ನಿರ್ದಿಷ್ಟ ಅವಧಿಯ ಬಳಿಕ ನಮಗೇ ಮರಳಿ ಬರುತ್ತದೆ. ಎನ್ ಎಂಪಿ ಎಂಬುದು ಆಸ್ತಿಯ ಸಾರಾಸಗಟು ಮಾರಾಟವಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದರೆ, ನೀವು ಪಡೆಯುವ ಆ ಆಸ್ತಿ ಯಾವ ಸ್ವರೂಪದಲ್ಲಿರುತ್ತದೆ? ನೀವು ಕೊಡುವಾಗ ಇದ್ದ ಆಸ್ತಿಯೇ ಮತ್ತೆ ಯಥಾ ಸ್ಥಿತಿಯಲ್ಲಿ ನಿಮಗೆ ಮರಳಿ ಸಿಗುವುದೇ? ಎಂಬುದಕ್ಕೆ ಹಣಕಾಸು ಸಚಿವೆ ಸ್ಪಷ್ಟನೆ ಕೊಡಬೇಕಿದೆ ಎಂದೂ ಪಿಸಿ ಸವಾಲು ಹಾಕಿದ್ದಾರೆ.
ಸವಕಳಿ ತಡೆಯುವ ನಿಟ್ಟಿನಲ್ಲಿ ಸವಕಳಿ ನಿಧಿಯನ್ನು ಎನ್ ಎಂಪಿಯ ಭಾಗವಾಗಿ ಪರಿಗಣಿಸಬೇಕು ಮತ್ತು ಸಾರ್ವಜನಿಕ ಆಸ್ತಿ ಪಡೆಯುವ ಖಾಸಗೀ ಕಂಪನಿಗಳು ಆಸ್ತಿಯನ್ನು ಸುಸ್ಥಿತಿಯಲ್ಲಿರುವಂತೆ ನಿರ್ವಹಣೆ ಮಾಡಲು ಆ ನಿಧಿಯನ್ನು ಬಳಕೆಮಾಡುವುದು ಕಡ್ಡಾಯವಾಗಬೇಕು. ಆಗ ಮಾತ್ರ ಸಾರ್ವಜನಿಕ ಆಸ್ತಿಯ ಸವಕಳಿ ಮತ್ತು ದುರುಪಯೋಗ ತಡೆಯುವುದು ಸಾಧ್ಯ ಎಂಬುದು ಆ ವಿಷಯದಲ್ಲಿ ಚಿದಂಬರಂ ನೀಡಿರುವ ಸಲಹೆ.
ಎನ್ ಎಂಪಿಯ ಮತ್ತೊಂದು ದೊಡ್ಡ ಆತಂಕ ಇರುವುದು, ಈ ವ್ಯವಸ್ಥೆ ದೇಶದ ಜನಸಾಮಾನ್ಯರ ಮೇಲೆ ಹೇರಲಿರುವ ದುಬಾರಿ ದಿನಗಳ ಹೊರೆ. ಈಗಾಗಲೇ ಮೋದಿ ಸರ್ಕಾರದ ನೀತಿಗಳಿಂದಾಗಿ ಮತ್ತು ಕರೋನಾ ಸಾಂಕ್ರಾಮಿಕದ ದಾಳಿಯಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಜನಸಾಮಾನ್ಯರ ಪಾಲಿಗೆ ಇನ್ನಷ್ಟು ದುಬಾರಿ ದಿನಗಳನ್ನು ಈ ಹೊಸ ಯೋಜನೆ ಕೊಡುಗೆ ನೀಡಲಿದೆ. ಏಕೆಂದರೆ ಮೂಲಭೂತವಾಗಿ ಬೃಹತ್ ಸಾರ್ವಜನಿಕ ವಲಯದಲ್ಲಿ ಹೂಡಿಕೆ ಮಾಡುವ ಸಾಮರ್ಥ್ಯ ಇರುವುದು ದೇಶದ ಒಂದಿಬ್ಬರು ಉದ್ಯಮಿಗಳಿಗೆ ಮಾತ್ರ. ಹಾಗಾಗಿ ಸಹಜವಾಗೇ ಅದು ಏಕಸ್ವಾಮ್ಯಕ್ಕೆ ದಾರಿಮಾಡಲಿದೆ ಮತ್ತು ಪರಿಣಾಮಗಾಗಿ ಮೂಲಸೌಕರ್ಯ ಬಳಕೆಯ ಬೆಲೆಯು ಸರ್ಕಾರದ ನಿಯಂತ್ರಣದಿಂದ ಹೊರಗುಳಿಯಲಿದೆ ಮತ್ತು ಆ ಬೆಲೆ ನಿಗದಿಯು ಸಂಪೂರ್ಣ ಖಾಸಗಿ ಕಂಪನಿಗಳ ವಿವೇಚನೆಗೆ ಬಿಟ್ಟ ಸಂಗತಿಯಾಗುತ್ತದೆ. ಈಗಿರುವ ಎನ್ ಎಂಪಿಯಲ್ಲಿ ಅಂತಹ ಬೆಲೆ ಏರಿಕೆಯನ್ನು, ದುಬಾರಿ ದರವನ್ನು ತಡೆಯುವ ಯಾವುದೇ ನಿಯಂತ್ರಣ ವ್ಯವಸ್ಥೆಯನ್ನೂ ಅಳವಡಿಸಿಲ್ಲ. ಇಂಥ ಸ್ಥಿತಿಯಲ್ಲಿ ಒಂದು ವೇಳೆ ರೈಲ್ವೆಯಂತಹ ಬಡವರ ಸಾರಿಗೆ ವ್ಯವಸ್ಥೆ ಸಂಪೂರ್ಣ ಏಕವ್ಯಕ್ತಿ ಏಕಸ್ವಾಮ್ಯಕ್ಕೆ ಒಳಗಾದರೆ ಪರಿಸ್ಥಿತಿ ಏನಾಗಬಹುದು ಎಂಬುದು ಆತಂಕದ ಸಂಗತಿ ಎಂದು ಚಿದಂಬರಂ ವ್ಯಕ್ತಪಡಿಸಿದ್ದಾರೆ.
ಬ್ರಿಟನ್, ಫ್ರಾನ್ಸ್, ಇಟಲಿ ಮತ್ತು ಜರ್ಮನಿಯಲ್ಲಿ ಯಶಸ್ವಿಯಾಗಿ ಮತ್ತು ಸಮರ್ಥವಾಗಿ ರೈಲ್ವೆ ಮೂಲಸೌಕರ್ಯಗಳನ್ನು ನಿರ್ವಹಿಸುತ್ತಿರುವಾಗ, ಜಗತ್ತಿನ ಅತಿದೊಡ್ಡ ರೈಲ್ವೆ ಜಾಲ ಹೊಂದಿರುವ ಭಾರತದಲ್ಲಿ ಆ ಕಾರ್ಯವನ್ನು ಯಾಕೆ ಮಾಡಲಾಗದು ಎಂಬುದು ಚಿದಂಬರಂ ಪ್ರಶ್ನೆ.

ಹಾಗೇ ಇಡೀ ಈ ಎನ್ ಎಂಪಿ ಯೋಜನೆಯ ಹಿಂದಿನ ಸರ್ಕಾರದ ಚಿಂತನೆಗೆ ಪ್ರೇರಣೆ ಏನು ಎಂದು ಪ್ರಶ್ನಿಸಿರುವ ಅವರು, ಈಗಾಗಲೇ ದೇಶದ ವಿಮಾನ, ಬಂದರು ಮತ್ತಿತರ ಮೂಲಸೌಕರ್ಯ ವ್ಯವಸ್ಥೆಗಳನ್ನು ಒಂದೊಂದಾಗಿ ಬಹಳ ಚಾಣಾಕ್ಷತನದಿಂದ ತಮ್ಮ ಆಪ್ತ ಉದ್ಯಮಿಗಳಿಗೆ ಮಾರಾಟ ಮಾಡುವ ಮೂಲಕ ಮೋದಿಯವರ ಸರ್ಕಾರದ ಪ್ರೇರಣೆ ಏನು ಎಂಬುದು ಬಯಲಾಗಿದೆ. ಈ ಸರ್ಕಾರದ ಈವರೆಗಿನ ಟ್ರ್ಯಾಕ್ ರೆಕಾರ್ಡ್ ಮೇಲೆ ಹೇಳುವುದೇ ಆದರೆ, ಅದರ ಈ ಇತಿಹಾಸಕ್ಕಿಂತ ಭವಿಷ್ಯವೇನೂ ಭಿನ್ನವಾಗಿರಲಾರದು ಎಂದೂ ಹೇಳಿದ್ದಾರೆ.
ಹಾಗೇ ಎನ್ ಎಂಪಿ ಮೂಲಕ ಸರ್ಕಾರ ಮಾರಾಟಕ್ಕಿಡುತ್ತಿರುವ ದೇಶದ ಸಾರ್ವಜನಿಕ ವಲಯದ ಮೂಲಸೌಕರ್ಯದ ಮೇಲೆ ಹೂಡಿಕೆ ಮಾಡಲು ದೇಶದ ಉದ್ಯಮಿಗಳಲ್ಲಿ ಒಬ್ಬಿಬ್ಬರನ್ನು ಹೊರತುಪಡಿಸಿದರೆ ಉಳಿದಂತೆ ಬಹುತೇಕ ವಿದೇಶಿ ಹೂಡಿಕೆದಾರರು ಮುಂದೆ ಬರಲಿದ್ದಾರೆ. ಅಂತಹ ಸಾಮರ್ಥ್ಯ ಕೂಡ ಅವರಿಗೇ ಇರುವುದು. ಹಾಗಾಗಿ ಅಂತಿಮವಾಗಿ ಈ ಯೋಜನೆ ದೇಶದ ಸಾರ್ವಜನಿಕ ವಲಯದ ಆಸ್ತಿ ವಿದೇಶಿಯರ ಪಾಲಾಗುವಂತೆ ಮಾಡಲಿದೆ ಎಂದೂ ಹೇಳಿದ್ದಾರೆ. ಹಾಗೇ ಈ ವಲಯಗಳಲ್ಲಿ ಈಗಾಗಲೇ ಇರುವ ಸಿಬ್ಬಂದಿಯ ಉದ್ಯೋಗ ಖಾತರಿ ಬಗ್ಗೆ ಎನ್ ಎಂಪಿ ವ್ಯವಸ್ಥೆಯಲ್ಲಿ ಯಾವ ಖಾತರಿಯನ್ನು ನೀಡಲಾಗಿದೆ ಎಂದೂ ಪ್ರಶ್ನಿಸಿದ್ದಾರೆ.