ಸಂಪೂರ್ಣ ಭಾರತ ದೇಶ ಹಾಗೂ ಪ್ರಪಂಚವೇ ಕುತೂಹಲದಿಂದ ಕಾಯುತ್ತಿರುವ ಕ್ಷಣ ಸಮೀಪಿಸಿದೆ. ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ 3 ಯೋಜನೆಯು ಬಹುನಿರೀಕ್ಷಿತ ಹಂತಕ್ಕೆ ತಲುಪಿದೆ. ಬುಧವಾರ (ಆಗಸ್ಟ್ 23) ವಿಕ್ರಮ್ ಮತ್ತು ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಲಿದೆ. ಇದು ಕೇವಲ ಬಾಹ್ಯಾಕಾಶ ಸಂಸ್ಥೆ ಮಾತ್ರವಲ್ಲ, ಬಹುಕೋಟಿ ಭಾರತೀಯರ ಕನಸು. ಎಲ್ಲರೂ ಉಸಿರು ಬಿಗಿ ಹಿಡಿದುಕೊಂಡು ವಿಕ್ರಮನು ಚಂದ್ರನ ಅಂಗಳದಲ್ಲಿ ಕಾಲಿರಿಸುವುದಕ್ಕೆ ಕಾತರಿಸಿದ್ದಾರೆ.
ಇಂದು ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ನೌಕೆಯ ವಿಕ್ರಂ ಲ್ಯಾಂಡರ್ ಇಳಿಸುವ ಇಸ್ರೋ ಯೋಜನೆಗೆ ಕ್ಷಣಗಣನೆ.
ಈ ಕಾರ್ಯ ಯಶಸ್ವಿಯಾದರೆ ಚಂದ್ರನ ದಕ್ಷಿಣ ಧ್ರುವಕ್ಕೆ ಭೂಮಿಯಿಂದ ಲಗ್ಗೆ ಇಟ್ಟ ವಿಶ್ವದ ಮೊದಲ ದೇಶ ಎಂಬ ಹಿರಿಮೆ ಭಾರತದ ಪಾಲಾಗಲಿದೆ.
ಇಂದು ವಿಕ್ರಮ್ ಮತ್ತು ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಮೂಲಕ ವಿಶ್ವದಲ್ಲೇ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಚಂದ್ರನ ಮೇಲೆ ಯಶಸ್ವಿಯಾಗಿ ನೌಕೆ ಇಳಿಸಿದ ನಾಲ್ಕನೇ ದೇಶ ಭಾರತ ಎನ್ನಿಸಲಿದೆ.
ಚಂದ್ರಯಾನ 3 ಲ್ಯಾಂಡರ್ ಮಾಡ್ಯೂಲ್ ವಿಕ್ರಮ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಭರವಸೆ ಇದೆ ಎಂದು ಹಿರಿಯ ವಿಜ್ಞಾನಿಗಳು ಹೇಳಿದ್ದಾರೆ. ಬುಧವಾರ ಸಂಜೆ 6 ಗಂಟೆಗೆ ವಿಕ್ರಮನು ಚಂದ್ರನ ಅಂಗಳದಲ್ಲಿ ಪಾದ ಊರಲಿದ್ದಾನೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಅಂತಿಮ ಹಂತದ ಪರಿಶೀಲನೆ ನಡೆಸುತ್ತಿದೆ. ಸೂರ್ಯನು ಚಂದ್ರನ ಮೇಲೆ ಉದಯಿಸಿದ ಕೆಲ ಹೊತ್ತಿನಲ್ಲಿ ವಿಕ್ರಮನು ಕೂಡ ಚಂದ್ರನ ಮೇಲೆ ಉದಯಿಸಲಿದ್ದಾನೆ.
ʼಚಂದ್ರಯಾನ-3 ಯೋಜನೆ ವೇಳಾಪಟ್ಟಿ ನಿಗದಿಯಾಗಿದೆ. ವ್ಯವಸ್ಥೆಗಳು ನಿಯಮಿತವಾಗಿ ತಪಾಸಣೆಗೆ ಒಳಗಾಗುತ್ತಿವೆ. ಸುಗಮ ನೌಕಾಯಾನ ಮುಂದುವರಿಯುತ್ತಿದೆ. ಮಿಷನ್ ಅಪರೇಷನ್ಸ್ ಕಾಂಪ್ಲೆಕ್ಸ್ ಶಕ್ತಿ ಮತ್ತು ಉತ್ಸಾಹದಿಂದ ಝೇಂಕರಿಸಿದೆʼ ಎಂದು ಇಸ್ರೊ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿ ತಿಳಿಸಿದೆ.
2019ರಲ್ಲಿ ಭಾರತದ ಚಂದ್ರಯಾನ-2 ವಿಫಲಗೊಂಡಿತ್ತು. 2019ರ ಸೆಪ್ಟೆಂಬರ್ 7 ರಂದುಇ ನೌಕೆಯು ಚಂದ್ರನ ಮೇಲ್ಮೈಯಲ್ಲಿ ಅಪ್ಪಳಿಸಿತ್ತು. ಅಂದಿನಿಂದ ಅಂದರೆ ಕಳೆದ ನಾಲ್ಕು ವರ್ಷಗಳಿಂದ ವಿಜ್ಞಾನಿಗಳು ಚಂದ್ರಯಾನ-2 ವೈಪಲ್ಯಕ್ಕೆ ಕಾರಣಗಳನ್ನು ವಿಶ್ಲೇಷಿಸಿ ಕೊನೆಯ ಕ್ಷಣದಲ್ಲಿ ಎದುರಾಗುವ ದೋಷಗಳನ್ನು ಸರಿಪಡಿಸಲು ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಅನ್ನು ಬಲಪಡಿಸಿದ್ದಾರೆ. ಅಲ್ಲದೆ ಯೋಜನೆಯು ಯಶಸ್ವಿಯಾಗಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಂಡು ಚಂದ್ರಯಾನ-3 ರನ್ನು ಯಶಸ್ವಿಗೊಳಿಸಲು ಶ್ರಮಿಸಿದ್ದಾರೆ.
ಬ್ಯಾಕಪ್ ಯೋಜನೆಗಳು
ʼಚಂದ್ರಯಾನ-3ರಲ್ಲಿ ತೊಂದರೆ ಉಂಟಾಗಬಹುದಾದ ಎಲ್ಲಾ ಸಾಧ್ಯತೆಗಳನ್ನು ನಾವು ಪರಿಗಣಿಸಿದ್ದೇವೆ, ಮಾತ್ರವಲ್ಲ ಅದಕ್ಕಾಗಿ ಬ್ಯಾಕಪ್ ಯೋಜನೆಯನ್ನು ಸಿದ್ಧಪಡಿಸಿದ್ದೇವೆ. ಇಲ್ಲಿಯವರೆಗೆ ಯೋಜನೆಯ ಎಲ್ಲಾ ಹಂತಗಳು ಯೋಜನೆಯ ಪ್ರಕಾರ ನಡೆದಿವೆ ಮತ್ತು ನಮ್ಮ ಲ್ಯಾಂಡರ್ ವಿಕ್ರಮ್ ನಾಳೆ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಲಿದೆ ಎಂದು ವಿಶ್ವಾಸವಿದೆʼ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ ಹೇಳಿದ್ದಾರೆ.
ಎಲ್ಲಾ ಪರಿಶೀಲನೆಗಳ ನಂತರ ಇಂದು ಸಂಜೆ ಚಂದ್ರಯಾನ 3 ಯೋಜನೆ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಧ್ರುವ ಮೇಲೆ ಇಳಿಯಲಿದೆ. ಮೊದಲು ಲ್ಯಾಂಡರ್ ಸೇಫ್ ಲ್ಯಾಂಡಿಂಗ್ಗಾಗಿ 500m* 500m ಜಾಗ ನಿಗದಿ ಮಾಡಲಾಗಿತ್ತು. ಈಗ ಲ್ಯಾಂಡಿಂಗ್ ಜಾಗದ ವಿಸ್ತಾರವನ್ನು 4km*2.5km ಗೆ ಹೆಚ್ಚಿಸಲಾಗಿದೆ.
ಸಂಜೆ 5.45ರ ಸುಮಾರಿಗೆ ಥ್ರಸ್ಟರ್ಗಳು ಬಾಹ್ಯಾಕಾಶ ನೌಕೆಯ ನಿಯಂತ್ರಿತ ಅವರೋಹಣವನ್ನು ಪ್ರಾರಂಭಿಸಲಿವೆ. ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲ್ಮೈಗೆ ಹತ್ತಿರವಾದಂತೆ ಅದರ ವೇಗವು ಕ್ರಮೇಣ ಕಡಿಮೆಯಾಗುತ್ತದೆ. ಚಂದ್ರಯಾನ 2 ಗೆ ಹೋಲಿಸಿದರೆ ಅದರ ಕಾಲುಗಳನ್ನು ಬಲಶಾಲಿಯಾಗಿ ವಿನ್ಯಾಸಗೊಳಿಸಲಾಗಿದೆ. ಸಂಜೆ 6.04ಕ್ಕೆ ಸರಿಯಾಗಿ ಇದು ಚಂದ್ರನ ಮೇಲೆ ಲ್ಯಾಂಡಿಂಗ್ ಆಗಲಿದೆ.
ರೋವರ್ ಅನ್ನು ಚಂದ್ರನ ಮೇಲೆ ಲ್ಯಾಂಡ್ ಆಗಿ ಅದು ಚಂದ್ರನ ಮೇಲ್ಷ್ಮೈ ಚಿತ್ರಗಳನ್ನು ಕ್ಲಿಕ್ಕಿಸುತ್ತದೆ. ಲ್ಯಾಂಡರ್ ಮತ್ತು ರೋವರ್ ನಡುವೆ ಸಂವಹನವಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇವು ಪರಸ್ಪರ ಚಿತ್ರಗಳನ್ನು ತೆಗೆದುಕೊಳ್ಳುತ್ತವೆ.
ವಿಕ್ರಮ್ ಹಾಗೂ ರೋಮರ್ ಯಶಸ್ವಿ ಲ್ಯಾಂಡಿಂಗ್ಗಾಗಿ ಹಲವು ಬ್ಯಾಕ್ಅಪ್ ಅನ್ನು ಇಸ್ರೋ ಸಿದ್ಧ ಪಡಿಸಿಕೊಂಡು ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಬ್ಯಾಕ್ಅಪ್ ಯೋಜನೆ ವಿವರಗಳನ್ನು ಬಹಿರಂಗ ಪಡಿಸಿಲ್ಲ ಎಂದು ಹಿಂದೂಸ್ತಾನ್ ಟೈಮ್ ವರದಿ ಮಾಡಿದೆ.
ಈ ನಡುವೆ, ಈಗಲೂ ಚಂದ್ರನ ಕಕ್ಷೆಯಲ್ಲಿ ಸುತ್ತುತಿರುವ ಇಸ್ರೋದ ಚಂದ್ರಯಾನ 2 ಆರ್ಬಿಟರ್ ಜೊತೆ, ಚಂದ್ರಯಾನ 3 ವಿಕ್ರಂ ಲ್ಯಾಂಡರ್ ಸಂಪರ್ಕ ಸಾಧಿಸಿದೆ.
ಈ ಕುರಿತು ಇಸ್ರೋ ಟ್ವಿಟ್ ಮಾಡಿ, ಚಂದ್ರಯಾನ 3 ಲ್ಯಾಂಡರ್ ಅನ್ನು ಬಾರೋ ಗೆಳೆಯ ಎಂದು ಚಂದ್ರಯಾನ 2 ಆರ್ಬಿಟರ್ ಸ್ವಾಗತಿಸಿದೆ ಎಂದು ಹೇಳಿದೆ.
ಈಗಾಗಲೇ ಚಂದ್ರನ ಮತ್ತೊಂದು ಬದಿಯ ಫೋಟೋ ತೆಗೆದು ರವಾನಿಸಿರುವ ವಿಕ್ರಂ ಲ್ಯಾಂಡರ್.
ಇಂದು ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಕ್ಷಣಗಳನ್ನು ಇಸ್ರೋ ನೇರಪ್ರಸಾರ ಮಾಡಲಿದೆ.