“ಚಂದ್ರಯಾನ 3 ಬಾಹ್ಯಾಕಾಶ ಯೋಜನೆಯು ನವ ಭಾರತದ ಚೈತನ್ಯದ ಸಂಕೇತವೇ ಆಗಿದೆ. ಎಂಥದೇ ಪರಿಸ್ಥಿತಿ ಎದುರಾದರೂ ಹೇಗೆ ಗೆಲುವು ಸಾಧಿಸಬೇಕು ಎಂಬುದನ್ನು ಈ ಅಂತರಿಕ್ಷ ಸಾಹಸಯಾತ್ರೆ ತೋರಿಸಿಕೊಟ್ಟಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ (ಆಗಸ್ಟ್ 27) ಹೇಳಿದ್ದಾರೆ.
ತಮ್ಮ ಮಾಸಿಕ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ‘ಚಂದ್ರಯಾನ-3’ ಯಶಸ್ಸನ್ನು ಅವರು ಮತ್ತೊಮ್ಮೆ ಮೆಲುಕು ಹಾಕಿದರು. “ಭಾರತೀಯ ಮಹಿಳೆಯರಿಗಿರುವ ಶಕ್ತಿಗೆ ಈ ಬಾಹ್ಯಾಕಾಶ ಕಾರ್ಯಕ್ರಮ ಜೀವಂತ ನಿದರ್ಶನವಾಗಿದೆ” ಎಂದು ಹೇಳಿದರು.
“ಅಂತರಿಕ್ಷವನ್ನು ಆದಿ-ಅಂತ್ಯ ಇಲ್ಲದ ಅವಕಾಶ ಎಂದೇ ಪರಿಗಣಿಸಲಾಗುತ್ತದೆ. ಇಂತಹ ಅನಂತ ಆಕಾಶಕ್ಕೆ ಭಾರತದ ಪುತ್ರಿಯರು ಸವಾಲೆಸೆದಿದ್ದಾರೆ. ದೇಶದ ಪುತ್ರಿಯರು ಮಹತ್ವಾಕಾಂಕ್ಷಿಗಳಾದ ಮೇಲೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮುವುದನ್ನು ತಡೆಯುವವರು ಯಾರು” ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
“ಹಲವಾರು ಮಹಿಳಾ ವಿಜ್ಞಾನಿಗಳು, ಎಂಜಿನಿಯರುಗಳು ಈ ಕಾರ್ಯಕ್ರಮದ ಭಾಗವಾಗಿದ್ದರು. ಯೋಜನೆಯ ನಿರ್ದೇಶಕ, ವ್ಯವಸ್ಥಾಪಕ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ” ಎಂದರು.
“ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ ಗಗನನೌಕೆ ಇಳಿದು ನಾಲ್ಕು ದಿನಗಳು ಕಳೆದಿವೆ. ಆದರೆ, ಈ ಬಾಹ್ಯಾಕಾಶ ಯಾತ್ರೆ ಕುರಿತು ನಡೆಯುತ್ತಿರುವ ಚರ್ಚೆಗಳು ಸಾಕಾಗುತ್ತಿಲ್ಲ ಎಂಬಷ್ಟು ಬೃಹತ್ ಯಶಸ್ಸನ್ನು ಇದಾಗಿದೆ” ಎಂದು ತಮ್ಮ ಕವನದ ಕೆಲ ಸಾಲುಗಳನ್ನು ಉಲ್ಲೇಖಿಸಿದರು.