ಹತ್ರಾಸ್ ಅತ್ಯಾಚಾರ ಮತ್ತು ಹಲ್ಲೆ ಕುರಿತು ಮತ್ತೆ ದ್ವನಿ ಎತ್ತಿರುವ ಅಜಾದ್ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಯೋಗಿ ಆಧಿತ್ಯನಾಥ್ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಕಳೆದ ವರ್ಷ ಸಾಮೂಹಿಕ ಅತ್ಯಾಚಾರ ಮತ್ತು ಹಲ್ಲೆಗೆ ಒಳಗಾದ ಹತ್ರಾಸ್ನ 19 ವರ್ಷದ ಯುವತಿಯ ಕುಟುಂಬಕ್ಕೆ ನೀಡಿದ ಭರವಸೆಯನ್ನು ಈಡೇರಿಸಲು ಉತ್ತರ ಪ್ರದೇಶ ಸರ್ಕಾರ ವಿಫಲವಾದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸುವುದಾಗಿ ಅಜಾದ್ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಂದ್ರಶೇಖರ್ ಆಜಾದ್ ಯೋಗಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.
ಈ ವಾರ ಆರಂಭದಲ್ಲಿ ಹತ್ರಾಸ್ನಲ್ಲಿರುವ ಮಹಿಳೆಯ ಕುಟುಂಬವನ್ನು ಭೇಟಿ ಮಾಡಿದ ಆಜಾದ್, ” ಒಂದು ವರ್ಷದ ಹಿಂದೆ ಸಂತ್ರಸ್ತ ಕುಟುಂಬಕ್ಕೆ ಉದ್ಯೋಗ ಮತ್ತು ವಸತಿ ಸೇರಿದಂತೆ ಹಣಕಾಸಿನ ನೆರವು ನೀಡುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭರವಸೆಗಳು ಕ್ರೂರ ಹಾಸ್ಯವಾಗಿದೆ ” ಎಂದು ಕಿಡಿಕಾರಿದ್ದಾರೆ.
ಆಲಿಗರ್ ವಿಭಾಗೀಯ ಆಯುಕ್ತ ಗೌರವ್ ದಯಾಳ್ ಅವರನ್ನು ಭೇಟಿಯಾದ ಆಜಾದ್, “ಕುಟುಂಬಕ್ಕೆ ಭರವಸೆ ನೀಡಿದ ಸಹಾಯವನ್ನು ಒಂದು ವಾರದೊಳಗೆ ನೀಡಲಾಗುವುದು ಎಂದು ಭರವಸೆ ನೀಡಿದರು.” ಎಂದು ಹೇಳಿದ್ದಾರೆ.

“ಈ ಆಶ್ವಾಸನೆಗಳನ್ನು ಈಡೇರಿಸದಿದ್ದರೆ ಮತ್ತು ಕುಟುಂಬಕ್ಕೆ ನ್ಯಾಯ ನೀಡದಿದ್ದರೆ 10 ದಿನಗಳ ನಂತರ ನಾವು ಆಲಿಗರ್ ವಿಭಾಗೀಯ ಆಯುಕ್ತರ ಕಚೇರಿಯಲ್ಲಿ ಅನಿರ್ದಿಷ್ಟವಧಿ ಧರಣಿಯನ್ನು ಆರಂಭಿಸುತ್ತೇವೆ” ಎಂದು ಚಂದ್ರಶೇಖರ್ ಆಜಾದ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆಲಿಘರ್ “ದಲಿತರಿಗೆ ತುಂಬಾ ಕಷ್ಟಕರವಾದ ಸ್ಥಳವಾಗಿ ಮಾರ್ಪಟ್ಟಿದೆ, ಇದರಿಂದ ಅವರು ಆಲಿಘರ್ನಿಂದ ವಲಸೆ ಹೋಗಬೇಕಾಯಿತು” ಎಂದು ಆಜಾದ್ ಹೇಳಿದ್ದಾರೆ.
20 ವರ್ಷದ ದಲಿತ ಯುವತಿಯನ್ನು ನಾಲ್ಕು ಮೇಲ್ಜಾತಿ ಪುರುಷರಿಂದ ಅತ್ಯಾಚಾರಕ್ಕೊಳಗಾಗಿ ಹತ್ಯೆಗೊಂಡ ಘಟನೆ ನಡೆದು ಸೆಪ್ಟೆಂಬರ್ 14ಕ್ಕೆ ಒಂದು ವರ್ಷವಾಯಿತು. ಹತ್ರಾಸ್ ಜಿಲ್ಲೆಯ ಬೂಲ್ಗರ್ಹೀ ಗ್ರಾಮದಲ್ಲಿ ಸಂದೀಪ್ (20), ಅವರ ಮಾವ ರವಿ (35) ಮತ್ತು ಅವರ ಇಬ್ಬರು ಗೆಳೆಯರು ರಾಮು (26) ಮತ್ತು ಲವ್ ಕುಶ್ (23) ಆ ಯುವತಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಉತ್ತರ ಪ್ರದೇಶದಲ್ಲಿ 2022 ರ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷವು ಯಾವುದೇ ಮೈತ್ರಿ ಮಾಡಿಕೊಳ್ಳುತ್ತದೆಯೇ ಎಂದು ಕೇಳಿದಾಗ, “ಇಲ್ಲಿಯವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಆದರೆ ಬಿಜೆಪಿಯ ಸೋಲನ್ನು ಖಚಿತಪಡಿಸಿಕೊಳ್ಳಲು ಮುಂದೆ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.