ಚೆನ್ನೈ: 2024ರ 17ನೇ ಆವೃತ್ತಿಯ ಚಾಂಪಿಯನ್ ಆಗಿ ಕೆಕೆಆರ್ ಹೊರ ಹೊಮ್ಮಿದೆ.
ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಹೈದರಾಬಾದ್ ವಿರುದ್ಧ ಭರ್ಜರಿ ಜಯ ಸಾಧಿಸಿ, ಟ್ರೋಫಿಗೆ ಮುತ್ತಿಕ್ಕಿದೆ. 3ನೇ ಬಾರಿಗೆ ಫೈನಲ್ ಪ್ರವೇಶಿಸಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡವು 2ನೇ ಬಾರಿಗೆ ರನ್ನರ್ ಅಪ್ ಪ್ರಶಸ್ತಿಗೆ ಸಮಾಧಾನ ಪಟ್ಟುಕೊಳ್ಳುವಂತಾಯಿತು.
2012 ಮತ್ತು 2014ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್ ತಂಡ 10 ವರ್ಷಗಳ ನಂತರ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಲ್ಲದೇ, ಗೌತಮ್ ಗಂಭೀರ್ ಈ ಬಾರಿ ತಂಡದ ಕೋಚ್ ಆಗಿದ್ದ ವೇಳೆ ಟ್ರೋಫಿ ಗೆದ್ದಿರುವುದು ಸಂತಸ ತಂದಂತಾಗಿದೆ. ಹಿಂದೆ ಗೌತಮ್ ಗಂಭೀರ್ ನಾಯರಾಗಿದ್ದ ವೇಳೆ ಕೂಡ ಕೆಕೆಆರ್ ಗೆಲುವು ಸಾಧಿಸಿತ್ತು.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್ 18.3 ಓವರ್ ಗಳಲ್ಲಿ ಕೇವಲ 113 ರನ್ ಗಳಿಸಿತ್ತು. ಅಲ್ಪ ಗುರಿ ಬೆನ್ನಟ್ಟಿದ್ದ ಕೆಕೆಆರ್ ತಂಡ ಕೇವಲ 10.3 ಓವರ್‌ಗಳಲ್ಲೇ 114 ರನ್ ಗಳಿಸಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.