ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ 82 ನೇ ದಿನಕ್ಕೆ ಕಾಲಿಟ್ಟಿದೆ. ರೈತರೊಂದಿಗೆ ಸರ್ಕಾರ ಇದುವರೆಗೂ 11 ಸುತ್ತಿನ ಮಾತುಕತೆ ನಡೆಸಿದೆಯಾದರೂ ಎಲ್ಲವೂ ಮುರಿದು ಬಿದ್ದಿದೆ. ಈ ನಡುವೆ ವಿವಾದಿತ ಕೃಷಿ ಕಾನೂನನ್ನು ಸಮರ್ಥಿಸಿಕೊಂಡು ಅಭಿಯಾನ ನಡೆಸಲು ಸರ್ಕಾರವು 8 ಕೋಟಿ ರೂಗಳನ್ನು ಖರ್ಚು ಮಾಡಿದೆ ಎನ್ನುವ ಅಂಶಗಳು ಬೆಳಕಿಗೆ ಬಂದಿದೆ.
ಪ್ರಸ್ತುತ ಮೊತ್ತವನ್ನು ಸೆಪ್ಟೆಂಬರ್ 2020 ರಿಂದ ಜನವರಿ 2021 ರ ನಡುವೆ ಖರ್ಚು ವಿವಿಧ ಸರ್ಕಾರಿ ಇಲಾಖೆಗಳು ಮಾಡಿವೆ. ಈ ಮೂಲಕ ರೈತರ ಆಂದೋಲನವನ್ನು ಎದುರಿಸಲು ಸರ್ಕಾರ ಭಾರೀ ಕಸರತ್ತು ನಡೆಸುತ್ತಿದ್ದು, ಆದರೆ ಇದು ಯಾವುದು ಫಲಿಸುತ್ತಿಲ್ಲ. ರೈತರ ಹೋರಾಟವು ತೀವ್ರಗೊಳ್ಳುತ್ತಲೆ ಇದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪತ್ರಿಕಾಗೋಷ್ಠಿಗಳು ಸೇರಿದಂತೆ ಮಾಹಿತಿ ಪ್ರಸಾರವನ್ನು ಮಂತ್ರಿಗಳು ಮತ್ತು ಸರ್ಕಾರಿ ಕಾರ್ಯಕರ್ತರು ಮಾಡುತ್ತಿರುವುದನ್ನೂ ಹೊರತುಪಡಿಸಿ, ಕಳೆದ ನಾಲ್ಕೈದು ತಿಂಗಳಲ್ಲಿ ವಿವಿಧ ಮಾಧ್ಯಮ ವೇದಿಕೆಗಳ ಮೂಲಕ ಜಾಹೀರಾತುಗಳಿಗಾಗಿ ಗಣನೀಯ ಮೊತ್ತವನ್ನು ಖರ್ಚು ಮಾಡಲಾಗಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಬ್ಯೂರೋ ಆಫ್ ಔಟ್ರೀಚ್ ಅಂಡ್ ಕಮ್ಯುನಿಕೇಷನ್ (ಬಿಒಸಿ)ಯು ಜಾಹೀರಾತುಗಳಿಗಾಗಿ ಗರಿಷ್ಠ 7.25 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸಂಸತ್ತಿನಲ್ಲಿ ಶುಕ್ರವಾರ ತಿಳಿಸಿದ್ದಾರೆ.
ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ರೈತರು ಮತ್ತು ಇತರೆ ಜನರಿಗೆ ಜಾಗೃತಿ ಮೂಡಿಸಲು ಮುದ್ರಣ ಜಾಹೀರಾತುಗಳನ್ನು ಹಿಂದಿ, ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಯ ಪತ್ರಿಕೆಗಳಲ್ಲಿ ಬಿಒಸಿ ಮೂಲಕ ಪ್ರಕಟಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಎಲೆಕ್ಟ್ರಾನಿಕ್ ಮತ್ತು ಸಾಮಾಜಿಕ ಜಾಲತಾಣ ಪ್ರಚಾರ ಹಾಗೂ ವೆಬಿನಾರ್ಗಳ ಮೂಲಕ ಪ್ರಚಾರಕ್ಕಾಗಿ, ಕೃಷಿ ಕಾನೂನುಗಳ ಕುರಿತು ಪ್ರಚಾರ ಮತ್ತು ಎರಡು ಶೈಕ್ಷಣಿಕ ಚಲನಚಿತ್ರಗಳನ್ನು ನಿರ್ಮಿಸಲು ಸುಮಾರು 68 ಲಕ್ಷ ರೂಗಳನ್ನು ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯು ಖರ್ಚು ಮಾಡಿದೆ. ಅಲ್ಲದೆ, ಮುದ್ರಣ ಜಾಹೀರಾತುಗಳಿಗಾಗಿ ಕ್ರಿಯೇಟಿವ್ ಕಂಟೆಂಟ್ಗಳನ್ನು ರೂಪಿಸಲು 1,50,568 ರೂ.ಗಳನ್ನು ಖರ್ಚು ಮಾಡಲಾಗಿದೆ.