ಕೋವಿಡ್-19 ರೋಗಿಗಳಿಗಾಗಿ ಪ್ರಸ್ತುತ ನೀಡುತ್ತಿರುವ ವೈದ್ಯಕೀಯ ಆಮ್ಲಜನಕ ಪ್ರಮಾಣವನ್ನು ಹೆಚ್ಚಿಸಬೇಕೆಂದು ಕೇಳಿರುವ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಕೇಂದ್ರ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಗಿದೆ.
ಕರ್ನಾಟಕದ ಜನತೆಯನ್ನು ಸಂಕಟಕ್ಕೆ ದೂಡಲು ಸಾಧ್ಯವಿಲ್ಲವೆಂದು ಹೇಳಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರದ ಮೇಲ್ಮನವಿಯನ್ನು ತಳ್ಳಿ ಹಾಕಿದೆ.
ಕರ್ನಾಟಕ ಹೈಕೋರ್ಟ್ ಆದೇಶವು ಕಾಳಜಿಯುತವಾದದ್ದು ಹಾಗೂ ಕೇಂದ್ರ ಸರ್ಕಾರದ ಅರ್ಜಿಯನ್ನು ಮುಂದುವರೆಸಲು ನಮಗೆ ಯಾವುದೇ ಕಾರಣಗಳು ಇಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಕರ್ನಾಟಕಕ್ಕೆ ದಿನನಿತ್ಯ ಪೂರೈಸುವ ಆಮ್ಲಜನಕವನ್ನು 1200 ಮೆಟ್ರಿಕ್ ಟನ್‌ಗಳಿಗೆ ಏರಿಸಬೇಕೆಂದು ಕರ್ನಾಟಕ ಹೈ ಕೋರ್ಟ್ ಆದೇಶಿಸಿತ್ತು. ಆದರೆ ಈ ಪ್ರಮಾಣದ ಆಮ್ಲಜನಕ ಪೂರೈಸಲು ಸಾಧ್ಯವಿಲ್ಲವೆಂದು, ಹಾಗಾಗಿ ಈ ಆದೇಶವನ್ನು ತುರ್ತಾಗಿ ತಡೆಹಿಡಿಯಬೇಕೆಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿತ್ತು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕರ್ನಾಟಕಕ್ಕೆ 965 ಮೆಟ್ರಿಕ್ ಟನ್ ಆಮ್ಲಜನಕವನ್ನು ಪೂರೈಸಲಾಗುತ್ತಿದೆ. ಕರ್ನಾಟಕ ಹೈಕೋರ್ಟ್‌ನ ಆದೇಶಕ್ಕೆ ಯಾವುದೇ ತಾರ್ಕಿಕತೆಯಿಲ್ಲ, ಹಾಗೂ ಇದು ದೇಶಾದ್ಯಂತ ಆಮ್ಲಜನಕದ ನಿರ್ವಹಣೆ ಮತ್ತು ವಿತರಣೆಯಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ ಎಂದು ವಾದ ಮಾಡಿದ್ದರು.
“ಪ್ರತಿ ಹೈಕೋರ್ಟ್‌ಗಳೂ ಹೀಗೆ ಆದೇಶಗಳನ್ನು ಹೊರಡಿಸಲು ಪ್ರಾರಂಭಿಸಿದರೆ ಅದು ಕಾರ್ಯಸಾಧ್ಯವಾಗುವುದಿಲ್ಲ” ಎಂದು ಕೇಂದ್ರ ವಾದಿಸಿತ್ತು.
ಮದ್ರಾಸ್, ತೆಲಂಗಾಣ ಹಾಗೂ ಇತರ ಹೈಕೋರ್‌ಟ್‌ಗಳೂ ಈ ವಿಷಯವನ್ನು ಪರಿಶೀಲಿಸುತ್ತಿವೆ. ಹೈಕೋರ್ಟ್‌ಗಳು ರಾಜ್ಯಗಳಿಗೆ ಆಮ್ಲಜನಕ ಪೂರೈಸಲಿ, ನಮ್ಮ ಬಳಿ ಆಮ್ಲಜನಕ ಪ್ರಮಾಣ ಕಡಿಮೆ ಇದೆ. ಕೇಂದ್ರ ಸರ್ಕಾರ ಕರ್ನಾಟಕದೊಂದಿಗೆ ಕುಳಿತು ಸಮಸ್ಯೆ ಬಗೆ ಹರಿಸಲು ತಯಾರಿದೆ ಎಂದು ಮೆಹ್ತಾ ವಾದ ಮಾಡಿದ್ದರು.
ಅದಾಗ್ಯೂ, ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ʼಕರ್ನಾಟಕದಲ್ಲಿ 3.95 ಲಕ್ಷಕ್ಕೂ ಅಧಿಕ ಪ್ರಕರಣಗಳಿವೆ. 1700 ಮೆಟ್ರಿಕ್ ಟನ್‌ಗಳಿಗೆ ಕರ್ನಾಟಕ ಬೇಡಿಕೆ ಇಟ್ಟಿದೆ. ಕನಿಷ್ಟ 1100 ಮೆಟ್ರಿಕ್ ಟನ್ ಆಮ್ಲಜನಕದ ಅಗತ್ಯತೆ ಅಲ್ಲಿದೆ ಎಂದು ಹೇಳಿದ್ದಾರೆ.