ಲಾಕ್ ಡೌನ್ ಸಮಯದಲ್ಲಿ ನಿರ್ಗತಿಕ ಕುಟುಂಬಗಳ ಒಕ್ಕಲೆಬ್ಬಿಸಲು ನೋಟೀಸ್ ನೀಡಿದ ವೀರಾಜಪೇಟೆ ತಹಶೀಲ್ದಾರ್..!

ಇಡೀ ದೇಶದಲ್ಲಿ ಕೋವಿಡ್ ಸೋಂಕು ದಿನೇ ದಿನೇ ಹರಡುತ್ತಿದೆ. ಜೊತೆಗೆ ನಿತ್ಯವೂ ಸಾವಿನ ಸಂಖ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗುತ್ತಿವೆ.  ರಾಜ್ಯ ಕರೋನಾ ಸೋಂಕಿನ ನಿಯಂತ್ರಣಕ್ಕೆ ಕಟ್ಟುನಿಟ್ಟಿನ  ನಿಯಮ ಜಾರಿ ಮಾಡಿದೆ ಹಾಗು ಸರ್ಕಾರ   ರಾಜ್ಯದಲ್ಲಿ ಕರ್ಫ್ಯೂ ಜಾರಿ ಮಾಡಿ  ಬಿಗಿ   ಕ್ರಮ ಕೈಗೊಂಡಿದೆ. ಯಾರೂ ಕೂಡ ರಸ್ತೆಗೆ ಇಳಿಯದಂತೆ ನೋಡಿಕೊಳ್ಳಬೇಕು ಎಂದು ಇಡೀ ಆಡಳಿತ ವರ್ಗಕ್ಕೆ ಸೂಚನೆ ನೀಡಿದೆ. ಆದರೆ ಕೊಡಗು ಜಿಲ್ಲೆಯ ಅಧಿಕಾರಿಗಳಿಗೆ ಅದೇನಾಗಿದೆಯೋ ಗೊತ್ತಿಲ್ಲ. ವಿರಾಜಪೇಟೆ ತಾಲ್ಲೂಕಿನ ಬಾಳುಗೋಡು ಗ್ರಾಮದ ಸರ್ಕಾರಿ ಪೈಸಾರಿ ಜಾಗದಲ್ಲಿರುವ 21 ಕುಟುಂಬಗಳನ್ನು ಅವರಿರುವ ಶೆಡ್ಗಳಿಂದ ಆಚೆಗೆ ದಬ್ಬಲು ಸಿದ್ಧವಾಗಿದೆ.

 ಬಾಳುಗೋಡಿನ ಸರ್ಕಾರಿ ಜಾಗದಲ್ಲಿ ನಿರ್ಗತಿಕ 21 ಕುಟುಂಬಗಳು ಕಳೆದ ಎರಡು ವರ್ಷಗಳಿಂದ ಶೆಡ್ ಹಾಕಿಕೊಂಡು ಬದುಕು ನಡೆಸುತ್ತಿದ್ದವು. ಆದರೆ ಆ ಜಾಗವನ್ನು ಅಭಿವೃದ್ಧಿಗೊಳಿಸಬೇಕೆಂಬ ನೆಪವೊಡ್ಡಿ ಅಲ್ಲಿನ ತಾಲ್ಲೂಕು ಆಡಳಿತ 21 ಕುಟುಂಬಗಳಿಗೆ ನೋಟಿಸ್ ಜಾರಿ ಮಾಡಿ ಜಾಗ ತೆರವಿಗೆ ಆದೇಶಿಸಿದೆ. ಅಷ್ಟೇ ಅಲ್ಲ ನೋಟಿಸ್ ತಲುಪಿದ 7 ದಿನಗಳ ಒಳಗಾಗಿ ಶೆಡ್ಗಳನ್ನು ತೆರವು ಮಾಡಿ ಜಾಗ ಖಾಲಿ ಮಾಡದಿದ್ದರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ. ಕಾಫಿ ತೋಟದ ಮಾಲೀಕರ ಮನೆಗಳಲ್ಲಿ ಜೀತ ಮಾಡಿಕೊಂಡು ಬದುಕುತ್ತಿದ್ದ ಕುಟುಂಬಗಳು ಸ್ವಂತ ಸೂರು ಹೊಂದಬೇಕೆಂದು ಶೆಡ್ ನಿರ್ಮಿಸಿಕೊಂಡಿದ್ದ ಕನಸು ಭಗ್ನವಾಗಿದೆ. ಆದರೆ ಈ ಲಾಕ್ ಡೌನ್ ಸಮಯದಲ್ಲಿ ಶೆಡ್ ಖಾಲಿ ಮಾಡಿ ಎಲ್ಲಿಗೆ ಹೋಗಬೇಕೆಂದು ಈ 21 ಕುಟುಂಬಗಳು ದಿಕ್ಕು ತೋಚದೆ ಕಂಗಾಲಾಗಿವೆ.

ಮತ್ತೊಂದೆಡೆ  ಬಾಳುಗೋಡು ಆರ್ಜಿ ಗ್ರಾಮ ಪಂಚಾಯಿತಿಯ ಪಿಡಿಓ ಕೂಡ ನೋಟಿಸ್ ಗಳನ್ನು ಜಾರಿ ಮಾಡಿದ ಮರುದಿನವೇ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಐವತ್ತಕ್ಕೂ ಹೆಚ್ಚು ಜನರನ್ನು ಸೇರಿಸಿ ಸಭೆ ಮಾಡಿದ್ದಾರೆ. ನೀವು ಜಾಗ ಖಾಲಿ ಮಾಡಬೇಕು. ಎಲ್ಲಾ ಗ್ರಾಮ ಪಂಚಾಯಿತಿಗಳ ಹಾಗೆ ನಮ್ಮ ಪಂಚಾಯಿತಿಯನ್ನು ಸ್ವಚ್ಛವಾಗಿ ಇಡಬೇಕಾದರೆ ನಾವು ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಲು ಈ ಜಾಗ ಬೇಕು ಎಂದು ಸೂಚನೆ ನೀಡಿದ್ದಾರೆ.

ಈ ಕುರಿತು ವಿರಾಜಪೇಟೆ ತಹಸೀಲ್ದಾರ್ ಯೋಗಾನಂದ್ ಅವರು ನಿವೇಶನ ರಹಿತರಿಗಾಗಿಯೇ ಈ ಸ್ಥಳದಲ್ಲಿ ಬಡಾವಣೆ ಮಾಡಲು ತಯಾರಿದ್ದೇವೆ. ಅವರು ಈ ಜಾಗ ತೆರವು ಮಾಡಿಕೊಟ್ಟಲ್ಲಿ ಮಾತ್ರವೇ ಬಡಾವಣೆ ಅಭಿವೃದ್ಧಿ ಪಡಿಸಲು ಸಾಧ್ಯ ಎಂದಿದ್ದಾರೆ. ಅಷ್ಟಕ್ಕೂ ಲಾಕ್ ಡೌನ್ ಗೂ ಮೊದಲೇ ನಾವು ನೊಟೀಸ್ ನೀಡಿದ್ದೆವು. ಆದರೆ ಈಗ ಲಾಕ್ಡೌನ್ ಇರುವುದರಿಂದ ನಾವು ಸದ್ಯ ತೆರವು ಮಾಡಲು ಹೋಗುವುದಿಲ್ಲ. ಆ ನಂತರವಾದರೂ ಅವರು ಜಾಗ ತೆರವು ಮಾಡಿಕೊಟ್ಟಲ್ಲಿ ಬಡಾವಣೆ ಅಭಿವೃದ್ಧಿ ಮಾಡಿ ನಿರಾಶ್ರಿತರಿಗೆ ನಿವೇಶನ ಹಂಚುತ್ತೇವೆ ಎಂದಿದ್ದಾರೆ. ಆದರೆ ಅಲ್ಲಿರುವ ನಿರಾಶ್ರಿತರು ಮಾತ್ರ ಯಾವುದೇ ಕಾರಣಕ್ಕೂ ನಾವು ಇಲ್ಲಿಂದ ಜಾಗ ಖಾಲಿ ಮಾಡುವುದಿಲ್ಲ. ಒಂದು ವೇಳೆ ಅಧಿಕಾರಿಗಳು ಒತ್ತಾಯಪೂರ್ವಕವಾಗಿ ತೆರವು ಮಾಡಿಸಲು ಮುಂದಾದಲ್ಲಿ ಅವರೇ ನಮ್ಮನ್ನು ಮತ್ತೆ ಜೀತಕ್ಕೆ ಕಳುಹಿಸಲಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಕೊಡಗಿನಲ್ಲಿ ಶ್ರೀಮಂತ ಕಾಫಿ ಬೆಳೆಗಾರರು ನೂರಾರು ಎಕರೆ ಪೈಸಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ತೋಟ ಮಾಡಿಕೊಂಡಿದ್ದಾರೆ. ಅವರನ್ನು ತೆರವುಗೊಳಿಸಿ  ಆದಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿಕೊಡಲು ರಾಜ್ಯ ಸರ್ಕಾರ ಮುಂದಾಗಬೇಕಿದೆ.

ಕೊಡಗು ಜಿಲ್ಲೆಯ  ಪರಿಶಿಷ್ಟ ಪಂಗಡಕ್ಕೆ ಸೇರಿದ ಆದಿವಾಸಿಗಳದ್ದು ಈಗಲೂ ಕೂಡ ಕಷ್ಟಕರವಾದ ಬದುಕು. ಅರಣ್ಯದೊಳಗೇ ಹುಟ್ಟಿ ಬೆಳೆದ ಈ ಕುಟುಂಬಗಳು  ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಅನೇಕ ಕಡೆಗಳಲ್ಲಿ ಅರಣ್ಯ ಅಧಿಕಾರಿಗಳೇ ಅರಣ್ಯದಿಂದ ಒಕ್ಕಲೆಬ್ಬಿಸಿ ಹೊರಗೆ ಕಳಿಸಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯನ್ವಯ ಅರಣ್ಯದೊಳಗೇ ಅವರಿಗೆ ಭೂಮಿ ನೀಡಿ  ನೆಲೆ ಕಲ್ಪಿಸಬೇಕಿತ್ತು. ಆದರೆ  ಎಲ್ಲಾ ಗಿರಿಜನರಿಗೆ ಅವರು ಅರ್ಹರಿದ್ದರೂ ಆ ಸೌಲಭ್ಯ ಸಿಗಲಿಲ್ಲ. ರಾಜ್ಯ ಸರ್ಕಾರ   ಗಿರಿಜನರಿಗೆ ನೀಡುವ ಸೌಲಭ್ಯಗಳೆಲ್ಲ    ಅಧಿಕಾರಿಗಳ ಮೂಲಕವೇ ತಲುಪಬೇಕಿದೆ.  ಆದರೆ ಅವರು  ತಮ್ಮ ಪಾಲಿನ ಕಮಿಷನ್ ಇಲ್ಲದೆ  ಸೌಲಭ್ಯ ಒದಗಿಸುವುದಿಲ್ಲ. ಕೊಡಗಿನ ಗಿರಿಜನ ಹಾಡಿಗಳು ಬಹುತೇಕ ವೀರಾಜಪೇಟೆ ತಾಲ್ಲೂಕಿನಲ್ಲಿಯೇ ಇದ್ದು  ನಾಲ್ಕು ವರ್ಷಗಳ ಹಿಂದೆ ಒಂದು ಸೂರಿಗಾಗಿ  ಆದಿವಾಸಿಗಳು ನಡೆಸಿದ ಹೋರಾಟ ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿಯೇ ಆಗಿತ್ತು.  ಇದಾದ ನಂತರ ಸರ್ಕಾರ ಅವರಿಗೆ ಬಸವನಳ್ಳಿ , ಮದಲಾಪುರದಲ್ಲಿ ಸುಮಾರು 1000 ಮನೆಗಳನ್ನು ಕಟ್ಟಿಸಿಕೊಟ್ಟು ಪುನರ್ವಸತಿ ಕಲ್ಪಿಸಿಕೊಟ್ಟಿದೆ. ಆದರೆ ಇವರಿಗೆ ನೀಡಿರುವ ಅಂಗೈ ಅಗಲದ ಮನೆಗಳು ಕೇವಲ  600 ಚದರ ಅಡಿಗಳಷ್ಟು ಮಾತ್ರಾ ವಿಸ್ತೀರ್ಣವಿದ್ದು ಇದರಲ್ಲಿ ಇವರು ತಮ್ಮ ಸಾಂಪ್ರದಾಯಿಕ ಕಸಬುಗಳಾದ ಕೋಳಿ, ಕುರಿ , ಹಂದಿ ಸಾಕಾಣಿಕೆ ಮಾಡಲು ಸಾಧ್ಯವೇ ಇಲ್ಲ.  ಒಟ್ಟಿನಲ್ಲಿ ಈ ಆದಿವಾಸಿಗಳದ್ದು  ಕಷ್ಟಕರ ಬದುಕು. ಯಾವ ಸರ್ಕಾರವೇ ಅರಿಸಿ ಬರಲಿ ಇವರು ಮಾತ್ರ ಹಾಗೇ ಇರುವುದು ನಾಡಿದ ದುರಂತ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...