ಬೆಂಗಳೂರು: ಕೇಂದ್ರದ ಮಾನದಂಡದ ಆಧಾರದಲ್ಲಿ ರಾಜ್ಯದಲ್ಲಿ ಬರಪೀಡಿತ ಪ್ರದೇಶ ಘೋಷಣೆ ಮಾಡಲಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಶಾಸಕರಾದ ದಿನೇಶ್ ಗೂಳಿಗೌಡ ಅವರು ಹೇಳಿದರು.
ವಿಧಾನಪರಿಷತ್ ನಲ್ಲಿ ಬರ ಕುರಿತ ಚರ್ಚೆ ವೇಳೆ ಮಾತನಾಡಿದ ಅವರು,ಯಾವುದೇ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಿಸಬೇಕಾದರೆ ಕೇಂದ್ರದ ಮಾನದಂಡಗಳು ಆಧಾರವಾಗಿರುತ್ತವೆಯೇ ಹೊರತು ಆಡಳಿತ ಪಕ್ಷದ ಕ್ಷೇತ್ರ ವಿರೋಧ ಪಕ್ಷದ ಕ್ಷೇತ್ರ ಎಂದು ತಾರತಮ್ಯ ಮಾಡಲು ಸಾಧ್ಯವಿಲ್ಲ ಎಂದರು.

ಮಳೆ ಪ್ರಮಾಣ ಶೇಕಡಾವಾರು ಮಳೆ ಕೊರತೆ, ಹವಾಮಾನ ವೈಪರೀತ್ಯ, ಉಪಗ್ರಹ ಚಿತ್ರಗಳು ಹೀಗೆ ನಾನಾ ಮಾನದಂಡಗಳ ಆಧಾರದ ಮೇಲೆ ಬರಪೀಡಿತ ಜಿಲ್ಲೆಗಳನ್ನು ಘೋಷಣೆ ಮಾಡಲಾಗುತ್ತದೆಯೇ ವಿನಃ ಕಾಂಗ್ರೆಸ್, ಬಿಜೆಪಿ ಅಥವಾ ಜೆಡಿಎಸ್ ನವರ ಕ್ಷೇತ್ರ ಎಂದು ಬರ ಘೋಷಣೆ ಮಾಡಲು ಬರುವುದಿಲ್ಲ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಕಳೆದ ವರ್ಷ 1,87,456 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿತ್ತು. 44 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿತ್ತು. ಆದರೆ ಈ ವರ್ಷ 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಕಬ್ಬು ಬೆಳೆಯಲಾಗಿದೆ. ಕಳೆದ ವರ್ಷ ಕಾವೇರಿ ಜಲಾನಯನ ಪ್ರದೇಶದ 4 ಜಲಾಶಯಗಳಿಂದ 341 ಟಿಎಂಸಿ ನೀರು ಹೋಗಿತ್ತು. ಈ ವರ್ಷ ಮಳೆ ಕೊರತೆ ತೀವ್ರವಾಗಿದ್ದು, ಕೇಂದ್ರ ಸರ್ಕಾರದ ಮಾನದಂಡಗಳ ಆಧಾರದ ಮೇಲೆ ಮಂಡ್ಯ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿದೆ ಎಂದು ತಿಳಿಸಿದ್ದಾರೆ.







