ಹಾಸನ: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸದಸ್ಯರು ನವದೆಹಲಿಯಲ್ಲಿ ಎಸಿ ರೂಂನಲ್ಲಿ ಕೂತು ನೀರು ಬಿಡಿ ಎಂದು ಕರ್ನಾಟಕಕ್ಕೆ ಆದೇಶ ನೀಡುವುದು ಸರಿಯಲ್ಲ. ಆಯಾ ರಾಜ್ಯಗಳಿಗೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಖುದ್ದು ವೀಕ್ಷಿಸಿದ ನಂತರ ಆದೇಶ ಹೊರಡಿಸಬೇಕಿತ್ತು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಒತ್ತಾಯಿಸಿದರು.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿನಿತ್ಯ 3,500 ನೀರನ್ನು ಹರಿಸಬೇಕು ಎಂದು ಕಾವೇರಿ ಪ್ರಾಧಿಕಾರ ಊಹಾತ್ಮಕವಾಗಿ ಆದೇಶ ನೀಡಿದೆ. ಬರುವ ದಿನಗಳಲ್ಲಿ ಕಾವೇರಿ ಕಣಿವೆ ಜಲಾಶಯಗಳಿಗೆ 12 ಟಿಎಂಸಿ ನೀರು ಹರಿದು ಬರಬಹುದು ಎಂದು ಅದು ಊಹೆ ಮಾಡಿದೆ. ಯಾವ ಆಧಾರದಲ್ಲಿ ಇಂತಹ ಊಹೆಯನ್ನು ಪ್ರಾಧಿಕಾರ ಮಾಡಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಒಂದು ವೇಳೆ ನೀರು ಹರಿದು ಬರದೇ ಇದ್ದರೆ ಕರ್ನಾಟಕದ ಪರಿಸ್ಥಿತಿ ಏನು ಎಂದು ಕಳವಳ ವ್ಯಕ್ತಪಡಿಸಿದರು.

ಆದೇಶ ಹೊರಡಿಸುವ ಮುನ್ನ ಪ್ರಾಧಿಕಾರವು ಕರ್ನಾಟಕದ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಎಷ್ಟು ನೀರಿನ ಸಂಗ್ರಹ ಇದೆ? ಕುಡಿಯುವ ನೀರಿಗೆ ಎಷ್ಟು ನೀರಿನ ಅಗತ್ಯವಿದೆ ಹಾಗೂ ತಮಿಳುನಾಡಿನ ಮೆಟ್ಟೂರು ಮತ್ತು ಭವಾನಿ ಜಲಾಶಯಗಳಲ್ಲಿ ಎಷ್ಟು ನೀರಿನ ಸಂಗ್ರಹ ಇದೆ ಹಾಗೂ ಅಲ್ಲಿನ ಜನರಿಗೆ ಕುಡಿಯುವ ನೀರಿನ ಉದ್ದೇಶ ನೀರು ಬೇಕಿದೆ ಎಂಬ ಅಂಶಗಳ ಬಗ್ಗೆ ಅಣೆಕಟ್ಟೆಗಳಿಗೆ ಭೇಟಿ ನೀಡಿ ಕೂಲಂಕಶವಾಗಿ ಮಾಹಿತಿ ಪಡೆಯಬೇಕಿತ್ತು. ಅದನ್ನು ಮಾಡದೆ ಏಕಪಕ್ಷವಾಗಿ ಆದೇಶ ಹೊರಡಿಸಿ ಕರ್ನಾಟಕದ ಜನರ ಪಾಲಿಗೆ ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಿದೆ. ನಿಮ್ಮ ಆದೇಶವನ್ನು ಪಾಲನೆ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯವು ಪ್ರಾಧಿಕಾರದ ಮುಖಕ್ಕೆ ಹೇಳಬೇಕಾಗಿತ್ತು. ಆದರೆ ಈ ಬಗ್ಗೆ ಅಸಹಾಯಕ ಮೌನ ತಾಳಿರುವುದು ನನಗೆ ಸರಿ ಕಾಣುತ್ತಿಲ್ಲ ಎಂದರು.

ತಮಿಳುನಾಡು ಜನ ಮಾತ್ರ ರೈತರಾ? ಕರ್ನಾಟಕದವರು ರೈತರಲ್ಲವೇ? ನೀರು ಬಿಡಿ ಎಂದು ಹೇಳುವುದಕ್ಕೆ ಪ್ರಾಧಿಕಾರ ಯಾವ ಅಂಶಗಳನ್ನು ಪರಿಗಣಿಸಿದೆ ಎಂಬ ಪ್ರಶ್ನೆ ಉದ್ಭವಿಸಿದೆ. ರಾಜ್ಯದಲ್ಲಿ ಬರದಿಂದ ರೈತರು ತತ್ತರಿಸಿದ್ದಾರೆ. ಕಾವೇರಿ ಕಣಿವೆ ಪ್ರದೇಶದಲ್ಲಿ ಬೆಳೆಗಳು ಒಣಗುತ್ತಿವೆ. ನಮ್ಮ ರೈತರಿಗೇ ನೀರು ಕೊಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಆದರೆ ನೆರೆರಾಜ್ಯಕ್ಕೆ ಹರಿಸಬೇಕು ಎಂದು ಹೇಳಿದರೆ ಹೇಗೆ? ಎಂದು ಪ್ರಶ್ನಿಸಿದರು.

ಕಾವೇರಿ ಜಲಾನಯನ ಪ್ರದೇಶದಲ್ಲಿ ಎಲ್ಲಾ ಜಲಾಶಯಗಳು ಖಾಲಿ ಇವೆ. ಕಾವೇರಿ ಭಾಗದಲ್ಲಿ 54 ಟಿಎಂಸಿಯಷ್ಟು ಮಾತ್ರ ನೀರಿನ ಸಂಗ್ರಹ ಇದೆ. ನಮಲ್ಲಿ ಮಳೆ ಕೊರತೆ ಉಂಟಾಗಿದೆ. ಕೃಷಿ ಬೆಳೆಗಳಿಗೆ ನೀರು ಬಿಡುವುದಿಲ್ಲ ಎಂದು ಈಗಾಗಲೇ ರಾಜ್ಯ ಸರಕಾರ ಘೋಷಣೆ ಮಾಡಿದೆ. ಮುಂದಿನ ಆರು ತಿಂಗಳಲ್ಲಿ ಬೆಂಗಳೂರಿನ ಕುಡಿಯುವ ನೀರಿನ ಉದ್ದೇಶಕ್ಕೆ 30 ಟಿಎಂಸಿ ನೀರಿನ ಅಗತ್ಯವಿದೆ. ಕುಡಿವ ನೀರಿಗೆ ಮೊದಲ ಆದ್ಯತೆ ಎನ್ನುವುದು ಇವರಿಗೆ ಗೊತ್ತಿಲ್ಲವೇ? ತಮಿಳುನಾಡು ಯಾವ ಉದ್ದೇಶಕ್ಕಾಗಿ ನೀರು ಕೇಳುತ್ತಿದೆ ಎಂಬುದನ್ನು ಖುದ್ದಾಗಿ ಪ್ರಾಧಿಕಾರದ ಸದಸ್ಯರು ಪರಿಶೀಲನೆ ನಡೆಸಬೇಕಿತ್ತಲ್ಲವೇ? ರೈತರು ಮತ್ತು ಕನ್ನಡ ಪುರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವುದು ಸರಿ ಇದೆ. ಪ್ರತಿಭಟನೆಗೆ ನಮ್ಮ ಬೆಂಬಲ ಇದೆ ಎಂದರು.

ಕಾವೇರಿ ಪ್ರಾಧಿಕಾರದ ಆದೇಶವನ್ನು ನಾವು ಮೌನವಾಗಿ ಒಪ್ಪಿಕೊಂಡರೆ ಅದು ನಮ್ಮ ದೌರ್ಬಲ್ಯ ಎಂದಾಗುತ್ತದೆ. ಹೀಗಾಗಿ ಮೇಲ್ಮನವಿ ಸಲ್ಲಿಸಲೇ ಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದ ಸಚಿವ ಕುಮಾರಸ್ವಾಮಿ ಅವರು; ಸುಪ್ರೀಂ ಕೋರ್ಟ್’ಗೂ ನಾವು ಮನವಿ ಸಲ್ಲಿಸಬೇಕಾಗುತ್ತದೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿ ರಾಜಕೀಯ ಮಾಡುವ ಅಗತ್ಯವಿಲ್ಲ. ಯಾವುದೇ ಪಕ್ಷದ ಸರ್ಕಾರ ಇರಬಹುದು ಅಥವಾ ಯಾರೇ ಮುಖ್ಯಮಂತ್ರಿ ಆಗಿರಬಹುದು. ನಾವೆಲ್ಲರೂ ರಾಜ್ಯದ ಹಿತಾಸಕ್ತಿಯ ಪರವಾಗಿ ನಿಲ್ಲಬೇಕಾಗುತ್ತದೆ ಎಂದು ಹೇಳಿದರು.

ಅಧಿಕಾರದ ಆದೇಶ ಸಂಪೂರ್ಣ ಅವೈಜ್ಞಾನಿಕ ಎಂಬುದು ನನ್ನ ಅಭಿಪ್ರಾಯ. ನೀರು ಬಿಡಬೇಕು ಬೇಡವೋ ಎಂಬ ಬಗ್ಗೆ ಚರ್ಚೆ ನಡೆಸಲು ಭಾನುವಾರ ಸರ್ವಪಕ್ಷ ಸಭೆ ಕರೆಯಲಾಗಿದೆ. ನಮ್ಮ ಪಕ್ಷ ತಪ್ಪದೇ ಈ ಸಭೆಯಲ್ಲಿ ಪಾಲ್ಗೊಳ್ಳುತ್ತದೆ. ಇಂದಿನಿಂದ ಇಂತಹ ಸಂದರ್ಭ ಎದುರಾದಾಗ ಸರ್ವಪಕ್ಷ ಸಭೆ ಕರೆದು ಪರಿಹಾರವನ್ನು ಕಂಡುಕೊಂಡ ನಿದರ್ಶನಗಳಿವೆ. ನಮ್ಮ ಸರಕಾರ ಕೂಡ ಮುಲಾಜಿಲ್ಲದೆ ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಬೇಕು. ನೀರು ಬಿಡಿ ಎಂದು ಹೇಳಲು ಪರಿಗಣಿಸಿದ ಅಂಶಗಳ ಬಗ್ಗೆ ಸಂಪೂರ್ಣ ಹಾಗೂ ಸರಿಯಾದ ಮಾಹಿತಿಯೊಂದಿಗೆ ವಾದ ಮಂಡಿಸಬೇಕು. ಕಾವೇರಿ ಕಣಿವೆಯಲ್ಲಿ ಸಂಗ್ರಹವಾಗಿರುವ 55 ಟಿಎಂಸಿ ನೀರಿನಲ್ಲಿ 10 ಟಿಎಂಸಿ ನೀರನ್ನು ಡೆಡ್ ಸ್ಟೋರೇಜ್. ಉಳಿದ ನೀರಿನಲ್ಲಿ ಬೆಂಗಳೂರಿಗೆ 30 ಟಿಎಂಸಿ ಬೇಕು. ಪರಿಸರ ಸಂರಕ್ಷಣೆಗೆ 10 ಟಿಎಂಸಿ ನೀರು ಮೀಸಲಾಗಿರಬೇಕು. ಇದೆಲ್ಲವೂ ಪ್ರಾಧಿಕಾರಕ್ಕೆ ಗೊತ್ತಿಲ್ಲವೆ? ಅಥವಾ ರಾಜ್ಯ ಸರ್ಕಾರ ಮಾಹಿತಿ ನೀಡಲಿಲ್ಲವೋ ಎಂಬುದು ಅರ್ಥವಾಗುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.






