ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿಗೆ 26 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡ ಬಳಿಕ ಪಾಕಿಸ್ತಾನದ ವಿರುದ್ಧ ಭಾರತ ಕೆಂಗಣ್ಣು ಬೀರಿದೆ. ಪಾಕಿಸ್ತಾನಕ್ಕೆ ಈ ಬಾರಿ ಸರಿಯಾಗಿಯೇ ಬುದ್ಧಿ ಕಲಿಸಲು ನಿರ್ಧಾರಕ್ಕೆ ಬಂದಿದೆ. ಹೀಗಾಗಿ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುವ ತಯಾರಿಗಳು ಆರಂಭ ಆಗಿವೆ.

ಉತ್ತರ ಪ್ರದೇಶದ ಗಂಗಾ ಎಕ್ಸ್ಪ್ರೆಸ್ ವೇನಲ್ಲಿ ಭಾರತೀಯ ಯುದ್ಧ ವಿಮಾನಗಳನ್ನು ಲ್ಯಾಂಡ್ ಮಾಡುವ ಹಾಗು ಟೇಕ್ ಅಪ್ ಮಾಡುವ ಮೂಲಕ ತುರ್ತು ಪರಿಸ್ಥಿತಿ ಬಂದಾಗ ವಾಯುನೆಲೆ ಹೊರತುಪಡಿಸಿ ದೇಶದ ಹೆದ್ದಾರಿಗಳಲ್ಲೂ ಯುದ್ಧ ವಿಮಾನ ಇಳಿಸುವ ತಯಾರಿ ಮಾಡಿಕೊಂಡಿತ್ತು. ಇದರ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆ ರಾಷ್ಟ್ರದಾದ್ಯಂತ ಅಣಕು ಪ್ರದರ್ಶನಕ್ಕೆ ಸೂಚನೆ ಕೊಟ್ಟಿದೆ.

ಕರ್ನಾಟಕದ ಮೂರು ಸ್ಥಳಗಳನ್ನು ಮಾಕ್ ಡ್ರಿಲ್ಗೆ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ. ಬೆಂಗಳೂರು ನಗರ, ಮಲ್ಲೇಶ್ವರ ಹಾಗು ರಾಯಚೂರಿನಲ್ಲಿ ಅಣಕು ಪ್ರದರ್ಶನ ಮಾಡುವಂತೆ ಸೂಚನೆ ಕೊಡಲಾಗಿದೆ. ಇವತ್ತು ಬೆಂಗಳೂರಿನಲ್ಲಿ ಒಂದು ಕಡೆ ಮಾತ್ರ ಅಣಕು ಪ್ರದರ್ಶನ ನಡೆಸಲು ತಯಾರಿ ಮಾಡಿಕೊಳ್ಳಲಾಗಿದೆ.

ಕೇಂದ್ರ ಸರ್ಕಾರ ಆಯ್ಕೆ ಮಾಡಿರುವ ಪ್ರದೇಶಗಳನ್ನು ವರ್ಗ 01, ವರ್ಗ 02, ವರ್ಗ 03 ಎಂದು ವಿಂಗಡಣೆ ಮಾಡಿದ್ದು, ಇಂದು ಬೆಂಗಳೂರು ನಗರದಲ್ಲಿ ಮಾತ್ರ ಅಣಕು ಪ್ರದರ್ಶನ ನಡೆಯಲಿದ್ದು, ಸಂಜೆ 4 ಗಂಟೆಗೆ ಸೈರನ್ ಹಾಕಲಾಗುತ್ತದೆ. ಹಲಸೂರಿನ ಅಗ್ನಿಶಾಮಕ ಡಿಜಿಪಿ ಕಚೇರಿಯಲ್ಲಿ ಮಾಕ್ ಡ್ರಿಲ್ ನಡೆಯಲಿದೆ ಎಂದು ಅಗ್ನಿಶಾಮಕ ದಳ DGP ಪ್ರಶಾಂತಕುಮಾರ್ ಠಾಕೂರ್ ಹೇಳಿದ್ದಾರೆ.

ಆಪ್ತಮಿತ್ರ ಅನ್ನೋ ವಿಡಿಯೋ ರಿಲೀಸ್ ಮಾಡಿದ್ದು, ದಾಳಿಯನ್ನು ತಡೆಗಟ್ಟುವುದು ಹೇಗೆ ಅನ್ನೋ ಬಗ್ಗೆ ವಿಡಿಯೋದಲ್ಲಿ ಮಾಹಿತಿ ಕೊಡಲಾಗಿದೆ. ರಾತ್ರಿ ವೇಳೆ ಲೈಟ್ ಆಫ್ ಮಾಡಿ, ಕಿಟಕಿಗಳಿಗೆ ಸ್ಕ್ರೀನ್ ಹಾಕಿ. ಅಪಾಯ ಎದುರಾದರೆ ಫಸ್ಟ್ ಏಯ್ಡ್ ಮಾಡಿಕೊಳ್ಳಿ, ರಕ್ತ ಹೋಗುವುದನ್ನು ತಪ್ಪಿಸಿ, ಹೀಗೆ ಹಲವು ಹತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಿಕೊಡಲಾಗಿದೆ.