ಒಂದೆಡೆ ಜಾತಿಗಣತಿಯೆಂದೇ ಪ್ರಸಿದ್ಧವಾಗಿರುವ ಈ ಸಮೀಕ್ಷೆ ವಿಷಯದಲ್ಲಿ ನಾನಾ ರಾಜಕೀಯ ಪಕ್ಷಗಳು ವಿಭಿನ್ನ ನಿಲುವು ತಳೆದಿವೆ. ಜಾತಿ ಗಣತಿ ಆಧರಿಸಿ ಕ್ರಮ ಕೈಗೊಳ್ಳುವಂತೆ ಅನೇಕ ಸಮುದಾಯಗಳ ಸಂಘಟನೆಗಳಿಂದ ಹಕ್ಕೊತ್ತಾಯ ಕೇಳಿ ಬರುತ್ತಿದೆ. ಹಾಗಾಗಿ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಬೀಳುವಂತಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ನಡೆದ ಈ ಜಾತಿಗಣತಿ ಸಮೀಕ್ಷೆಗೆ ಇನ್ನೂ ಬಿಡುಗಡೆ ಭಾಗ್ಯವೇ ಸಿಕ್ಕಿಲ್ಲ. ಇದರ ಬೆನ್ನಿಗೇ ಸಿದ್ದರಾಮಯ್ಯ ಹಾಗೂ ಇತರ ಮುಖಂಡರು ಜಾತಿ ಗಣತಿಯನ್ನು ರಾಜ್ಯ ಸರಕಾರ ಸ್ವೀಕರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ರಾಜ್ಯದಲ್ಲಿ ಲಿಂಗಾಯಿತ ಹಾಗೂ ಒಕ್ಕಲಿಗ ಸಮುದಾಯವರು ಹೆಚ್ಚಾಗಿದ್ದಾರೆ ಎಂಬ ನಂಬಿಕೆ ಇದೆ. ಅದೇ ಕಾರಣಕ್ಕೆ ಈ ಎರಡು ಸಮುದಾಯಗಳು ರಾಜಕೀಯ ಕ್ಷೇತ್ರದಲ್ಲೂ ಹೆಚ್ಚಿನ ಮನ್ನಣೆ ಗಳಿಸಿವೆ. ಹಾಗೆಯೇ ಅಧಿಕಾರ ಹಿಡಿಯುವಲ್ಲಿಯೂ ನಿರ್ಣಾಯಕ ಎನಿಸಿವೆ. ಆದರೀಗ ಹೊಸ ಸಮೀಕ್ಷೆ ವರದಿಯಲ್ಲಿ ಜಾತಿಗಳ ಸಂಖ್ಯಾಬಲ ಏರುಪೇರಾಗಿದೆ ಎನ್ನಲಾಗಿದೆ. ಹಾಗಾಗಿ ವರದಿ ಬಹಿರಂಗವಾದರೆ ರಾಜಕೀಯವಾಗಿ ಹಿನ್ನಡೆ ಉಂಟಾಗುವ ಆತಂಕ ಮೂರು ಪಕ್ಷಗಳನ್ನು ಕಾಡುತ್ತಿದೆ.
ಹೀಗಿರುವಾಗಲೇ ರಾಜ್ಯ ಕಾಂಗ್ರೆಸ್ನಲ್ಲಿ ಜಾತಿ ಗಣತಿ ಸಂಘರ್ಷ ತಾರಕಕ್ಕೇರಿದೆ. ವಿಧಾನಸಭಾ ಅಧಿವೇನದಲ್ಲಿ ರಾಜ್ಯ ಬಿಜೆಪಿ ಸರ್ಕಾರವನ್ನು ಜಾತಿ ಗಣತಿ ಬಿಡುಗಡೆ ಮಾಡಿ ಎಂದು ಒತ್ತಾಯಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಶತಾಯಗತಾಯ ಮುಂದಾಗಿದ್ದಾರೆ. ಹೀಗಿರುವಾಗಲೇ ಇದರ ಸಹವಾಸವೇ ಬೇಡ ಎಂದು ಲಿಂಗಾಯತ ನಾಯಕರು ಅಂತರ ಕಾಯ್ದುಕೊಂಡಿದ್ದಾರೆ. ಕೇವಲ ಕಾಂಗ್ರೆಸ್ ಮಾತ್ರವಲ್ಲ ಜೆಡಿಎಸ್ ಮತ್ತು ಬಿಜೆಪಿಯಲ್ಲೂ ಇದೇ ಪರಿಸ್ಥಿತಿ ಎನ್ನಲಾಗುತ್ತಿದೆ.

ಜಾತಿ ಗಣತಿ ಸಹವಾಸವೇ ಬೇಡ ಎಂದು ಕಾಂಗ್ರೆಸ್ ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ನಾಯಕರು ದಿಢೀರ್ ಮೌನಕ್ಕೆ ಶರಣಾಗಿದ್ದಾರೆ. ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿರುವ ಲಿಂಗಾಯತ ನಾಯಕರು, ಜಾತಿ ಸಮೀಕ್ಷೆ ಬಹಿರಂಗ ವಿಚಾರ ನಮಗ್ಯಾಕೆ ಎಂದು ಅಂತರ ಕಾಯ್ದುಕೊಂಡಿದ್ದಾರೆ.
ಜಾತಿಗಣತಿ ನಡೆಸಿದ್ದೇ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ, ಈ ಕೀರ್ತಿಯೂ ಕಾಂಗ್ರೆಸ್ಸಿಗೆ ಸಲ್ಲುತ್ತದೆ. ಈ ಜಾತಿಗಣತಿಯೂ ರಾಜ್ಯದ ಅಗ್ರಗಣ್ಯ ಜಾತಿಗಳನ್ನು ಕೆರಳಿಸಿದೆ. ಸಿದ್ದರಾಮಯ್ಯ ಸುತ್ತ ಸುತ್ತುತ್ತಿದ್ದ ಕಾಂಗ್ರೆಸ್ನ ಹಲವು ಲಿಂಗಾಯತ ನಾಯಕರು ಈ ವಿಚಾರದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದು ಕಾಂಗ್ರೆಸ್ ಕಥೆ.
ಇನ್ನೊಂದೆಡೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಬಸವರಾಜ್ ಬೊಮ್ಮಾಯಿ ಕೂಡ ನಮಗ್ಯಾಕೇ ಇದರ ಸಹವಾಸ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಲಿಂಗಾಯತ ಸಮುದಾಯದ ಪ್ರಬಲ ನಾಯಕ ಮತ್ತು ಸಭಾಪತಿ ಬಸವರಾಜ್ ಹೊರಟ್ಟಿ ಅವರದ್ದು ಇದೇ ಅಭಿಪ್ರಾಯ. ವೀರಶೈ ಲಿಂಗಾಯತ ಸಮಾಜ ಈ ಜಾತಿಗಣತಿ ವಿರೋಧ ಮಾಡಿದ್ದೇ ತಡ ಮೂರು ಪಕ್ಷದ ಒಂದು ಸಮುದಾಯದ ನಾಯಕರು ಇದರ ಸಹವಾಸವೇ ಬೇಡ ಅನ್ನೋ ನಿಲುವಿಗೆ ಬಂದಿದ್ದಾರೆ.
ಜಾತಿ ಗಣತಿ ಸಿದ್ದರಾಮಯ್ಯ ಅವರ ಕನಸಿನ ಕೂಸು. ಮುಖ್ಯಮಂತ್ರಿಯಾಗುವ ಮೊದಲೂ ಈ ಬಗ್ಗೆ ಅವರು ಒತ್ತಾಯ ಮಾಡುತ್ತ ಬಂದಿದ್ದರು. ಮುಖ್ಯಮಂತ್ರಿಯಾದ ಬಳಿಕ ಈ ಸಮೀಕ್ಷೆಗೆ ಚಾಲನೆ ಕೊಡಿಸಿದ್ದರು. ಮನಸ್ಸು ಮಾಡಿದ್ದರೆ ಅವರ ಅಧಿಕಾರವಧಿಯಲ್ಲೇ ಜಾತಿ ಗಣತಿಗೆ ಸಲ್ಲಬೇಕಾದ ನ್ಯಾಯ ಕೊಡಿಸಬಹುದಿತ್ತು. ಆದರೆ, ಈ ಸಮೀಕ್ಷೆ ಬಹಿರಂಗಗೊಂಡರೆ ರಾಜ್ಯದ ಜಾತಿ ಸಮೀಕರಣದ ಲೆಕ್ಕಾಚಾರವೇ ಬುಡಮೇಲಾಗುವ ಸುಳಿವು ಸಿಕ್ಕಿತ್ತು.

ಪ್ರಬಲ ಸಮುದಾಯಗಳ ಆಕ್ರೋಶಕ್ಕೆ ಗುರಿಯಾಗುವ ಸನ್ನಿವೇಶ ಸೃಷ್ಟಿಯಾಗುತ್ತಿತ್ತು. ಹಾಗಾಗಿ ಈ ಸಮೀಕ್ಷೆಯನ್ನು ವಿಧಿವತ್ತಾಗಿ ಸ್ವೀಕರಿಸಿ ಬಿಡುಗಡೆ ಮಾಡಲು ಅಂದಿನ ಸರಕಾರ ಹಿಂದೇಟು ಹಾಕಿತು ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಜಾತಿ ಗಣತಿಯಲ್ಲಿನ ಅಂಕಿ-ಅಂಶ ಹಲವು ಬಾರಿ ಸೋರಿಕೆಯಾಗಿತ್ತು.
ಲಿಂಗಾಯತ ಒಳ ಸಂಕಟ!
ಕಾರಣ 1 : ಈಗಾಗಲೇ ಲಿಂಗಾಯತ ಸಮುದಾಯದಲ್ಲಿ ಹಲವು ಗೊಂದಲ
ಕಾರಣ 2 : ಪಂಚಮಸಾಲಿ ಮೀಸಲಾತಿ ಹೋರಾಟ ಬಗ್ಗೆ ಸಾಕಷ್ಟು ಚರ್ಚೆ
ಕಾರಣ 3 : ಪಂಚಮಸಾಲಿ ಪ್ರತ್ಯೇಕ ಪೀಠ ಸ್ಥಾಪನೆ ಬಗ್ಗೆ ಚರ್ಚೆ ನಡೀತಿದೆ
ಕಾರಣ 4 : ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಕೈಗೆ ಸಾಕಷ್ಟು ಪೆಟ್ಟು
ಕಾರಣ 5 : ಸಮೀಕ್ಷೆಯಿಂದ ಆಗಬಹುದಾದ ಅನಾಹುತಗಳಿಗ್ಯಾರು ಹೊಣೆ
ಕಾರಣ 6 : ಭವಿಷ್ಯದಲ್ಲಿ ರಾಜಕೀಯವಾಗಿ ಹಿನ್ನಡೆ ಅನುಭವಿಸುವ ಆತಂಕ