ನಮಗೆ ಬ್ಯಾಂಕ್ಗಳೂ ಸೇರಿದಂತೆ ಸಾರ್ವಜನಿಕ ವಲಯದ ಉದ್ಯಮಗಳ ಅವಶ್ಯಕತೆ ಇದೆ. ಒಂದು ವೇಳೆ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿದರೆ, ಖಾಸಗಿಯವರ ಏಕಸ್ವಾಮ್ಯ ಉಂಟಾಗಬಹುದು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
‘ನವ ಆರ್ಥಿಕತೆ – ಪ್ರಪಂಚದ ಮರುವಿನ್ಯಾಸ’ (new economy – redesign the world) ಎಂಬ ವಿಷಯದ ಕುರಿತು clubhouse.com ನಲ್ಲಿನಡೆದ ಒಂದು ಚರ್ಚಾ ಗುಂಪಿನಲ್ಲಿ ಭಾಗವಹಿಸಿದ್ದ ರಾಜನ್, ಇನ್ನು ಮುಂದೆ ಖಾಸಗಿ ವಲಯದ ಏಕಸ್ವಾಮ್ಯ ಆಗಬಹುದು, ಪ್ರಮುಖ ಮೂಲಸೌಕರ್ಯ ಕ್ಷೇತ್ರಗಳನ್ನು ಸರ್ಕಾರ ಖಾಸಗಿ ವಲಯಕ್ಕೆ ಸಮರ್ಪಕ ನಿಯಂತ್ರಣವಿಲ್ಲದೆ ನೀಡಿದರೆ, ಅದು ಖಾಸಗಿ ವಲಯದ ಏಕಸ್ವಾಮ್ಯ ಆಗಬಹುದು, ಏಕಸ್ವಾಮ್ಯದ ಖಾಸಗಿ ವಲಯವು ಸಾರ್ವಜನಿಕರನ್ನು ಹಿಂಡಬಹುದು ಎಂದು ರಾಜನ್ ಆತಂಕ ವ್ಯಕ್ತಪಡಿಸಿದ್ದಾರೆ.
ಖಾಸಗಿ ವಲಯದಿಂದ ದುರ್ಬಳಕೆ ಆಗಬಾರದು, ಸರ್ಕಾರವು ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಹಿಡಿದಿಡಲು ಒಲವು ತೋರುತ್ತಿದೆ. ಆದರೆ ಪ್ರತಿಭಾವಂತರನ್ನು ನೇಮಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಉತ್ತಮ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕುಳಿತುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಬ್ಯಾಂಕ್ಗಳೇ ಪ್ರಾಯೋಜಿಸಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕ್ ಮ್ಯಾನೇಜ್‌ಮೆಂಟ್ (NIBM) ನಂತಹ ಸಂಸ್ಥೆಗಳಿಂದಲೂ ಬ್ಯಾಂಕ್ಗಳಿಗೆ ನೇಮಿಸಿಕೊಳ್ಳಲು ಸಾಧ್ಯವಿಲ್ಲ. “ನಾವು ಸಾರ್ವಜನಿಕ ಬ್ಯಾಂಕ್ಗಳ ಕೈಕಾಲು ಕಟ್ಟಿ ಹಾಕುತ್ತಿದ್ದೇವೆ. ಸಾರ್ವಜನಿಕ ವಲಯವು ಸ್ವತ್ತುಗಳ ಬಳಕೆ ಏಕೆ ಮಾಡಿಕೊಳ್ಳಬಾರದು ಎಂದು ನನಗೆ ಅರ್ಥವಾಗುತ್ತಿಲ್ಲ, ಖಾಸಗಿ ವಲಯವು ವ್ಯವಸ್ಥೆಯನ್ನು ದುರ್ಬಳಕೆ ಮಾಡದಂತೆ ನಿಬಂಧನೆಗಳು ಮತ್ತು ನಿಯಮಗಳನ್ನು ರೂಪಿಸಲಾಗಿದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು,” ಎಂದು ರಾಜನ್ ಹೇಳಿದ್ದಾರೆ.

“ಇದು ತುಂಬ ಆತಂಕಕಾರಿ ಪರಿಸ್ಥಿತಿ. ನಾವು ಖರ್ಚು ಮಾಡುವುದಿಲ್ಲ ಎಂದು ಹೇಳುವುದು ತಪ್ಪು. ನಿಮಗೆ ಎಲ್ಲಿ ಖರ್ಚು ಬೇಕೋ ಅಲ್ಲಿ ಖರ್ಚು ಮಾಡುವುದು ಮುಖ್ಯ. ಸಂಪನ್ಮೂಲಗಳನ್ನು ಹೆಚ್ಚಿಸುವ ಜತೆಗೆ ಅಗತ್ಯವಿರುವ ಕಡೆ ಖರ್ಚು ಮಾಡುವ ಕಡೆಗೆ ನಿರ್ದೇಶಿಸಬೇಕು. ನಾವು ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯ ಬಗ್ಗೆ ಹೆಚ್ಚು ಖರ್ಚು ಮಾಡಬೇಕಾಗಿದೆ. ಇದು ಖಂಡಿತವಾಗಿಯೂ ಬಹಳ ಸಂಕೀರ್ಣವಾದ ಸಮಸ್ಯೆ. ಮುಂದಿನ ಕೆಲವು ವರ್ಷಗಳಲ್ಲಿ ನಮ್ಮ ಶ್ರಮ ಈ ಕ್ಷೇತ್ರಗಳನ್ನೇ ಕೇಂದ್ರೀಕರಿಸಿರಬೇಕು,” ಎಂದು ರಾಜನ್ ಹೇಳಿದ್ದಾರೆ.
“ಉತ್ತಮ ಆಡಳಿತ ಮತ್ತು ಉತ್ತಮ ನಿಯಮಗಳ ಮೂಲಕ ಖಾಸಗೀಕರಣದಂತೆಯೇ ಸಾರ್ವಜನಿಕ ವಲಯಗಳನ್ನು ನಿರ್ವಹಿಸಬಹುದು ಎಂದು ಹೇಳಿರುವ ಅವರು, ಆರೋಗ್ಯ ಮತ್ತು ಶಿಕ್ಷಣದ ಮೇಲೆ ಸಾಕಷ್ಟು ಗಮನಹರಿಸಿಲ್ಲ ಮತ್ತು ಈ ಕ್ಷೇಥ್ರಗಳ ಮೇಲಿನ ವೆಚ್ಚವನ್ನು ಕಡಿತಗೊಳಿಸಿದ್ದಕ್ಕಾಗಿ ಸರ್ಕಾರವನ್ನು ಟೀಕಿಸಿದ್ದಾರೆ.
“ಹಣ ಎಲ್ಲಿ ಹೋಯಿತು? ಜಿಡಿಪಿಗೆ ನಮ್ಮ ಸಾಲವು ಶೇಕಡಾ 90ಕ್ಕಿಂತ ಹೆಚ್ಚು, ಮತ್ತು ಜನರು ಬಡತನಕ್ಕೆ ಜಾರಿದ್ದಾರೆ ಎಂಬುದಕ್ಕೆ ಪುರಾವೆಗಳಿವೆ. ಜನರ ಸಾಮರ್ಥ್ಯವನ್ನು ಹೆಚ್ಚಿಸಲು, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಗೆ ನಾವು ಹಣವನ್ನು ಖರ್ಚು ಮಾಡುತ್ತೇವೆ ಎಂಬ ಭರವಸೆ ಇತ್ತು. ನಮ್ಮ ಆದ್ಯತೆಗಳನ್ನು ಸರಿಯಾಗಿ ಪಡೆದುಕೊಂಡಿದ್ದೇವೆಯೇ? ಪರಿಸ್ಥಿತಿ ಹದಗೆಡುತ್ತಿವೆ,” ಎಂದು ರಾಜನ್ ಹೇಳಿದ್ದಾರೆ.
ಚರ್ಚೆಯಲ್ಲಿ ಭಾಗವಹಿಸಿದ್ದ ತಮಿಳುನಾಡಿನ ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್, ನಮ್ಮ ಸರ್ಕಾರವು ಖಾಸಗಿ ಹಾಗೂ ಸಹಕಾರಿ ವಲಯದ ಪಾತ್ರವನ್ನು ಗುರುತಿಸುತ್ತದೆ. ಆದರೆ ಸಾರ್ವಜನಿಕ ಸರಕುಗಳು ಮತ್ತು ಸೇವೆಗಳು, ರಸ್ತೆಗಳು, ಮೂಲಸೌಕರ್ಯಗಳು ಸರ್ಕಾರದೊಂದಿಗೆ ಇರಬೇಕು ಎಂದು ಹೇಳಿದ್ದಾರೆ.
“ನಮಗೆ ಬಂಡವಾಳದ ಅಗತ್ಯವಿದೆ, ಹಾಗೂ (ಸಾರ್ವಜನಿಕ ಮತ್ತು ಖಾಸಗಿ ನಡುವೆ) ಜಂಟಿ ಉದ್ಯಮಗಳು ಬೇಕಾಗುತ್ತವೆ. ಏಕೆಂದರೆ ನಾವು ಎರಡೂ ಕಡೆ ಅತ್ಯುತ್ತಮವಾದುದನ್ನು ನೋಡುತ್ತೇವೆ. ಜಾಗತಿಕ ಮತ್ತು ರಾಷ್ಟ್ರೀಯ ಸಹಕಾರದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಸಹ ಕೆಲವು ದಕ್ಷತೆಗಳನ್ನು ತರುತ್ತವೆ. ಆದರೆ ನಾವು ಕೋರ್ ಮತ್ತು ಕಾರ್ಯತಂತ್ರದ ಸ್ವತ್ತುಗಳ ಹಣ ಗಳಿಕೆ ಮತ್ತು ವಿಮಾನ ನಿಲ್ದಾಣಗಳು, ಬಂದರುಗಳು ಮುಂತಾದ ಭದ್ರತೆ-ಸಂಬಂಧಿತ ಸ್ವತ್ತುಗಳನ್ನು ನಗದೀಕರಣ ಮಾಡುವುದನ್ನು ವಿರೋಧಿಸುತ್ತೇವೆ. ನಮ್ಮ ಮುಖ್ಯಮಂತ್ರಿಗಳು (ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್) ಇಂತಹ ಹಣ ಗಳಿಕೆಯ ವಿರುದ್ಧ ಪ್ರಧಾನಿಗೆ ಪತ್ರ ಬರೆದಿದ್ದಾರೆ,” ಎಂದು ತ್ಯಾಗರಾಜನ್ ಹೇಳಿದ್ದಾರೆ.

ಸ್ಯಾಮ್ ಪಿತ್ರೋಡಾ ಮಾತನಾಡಿ, ಖಾಸಗಿ ವ್ಯಕ್ತಿಗಳಿಗೆ ಸಂಪೂರ್ಣ ಮಾರಾಟ ಮಾಡುವ ಬದಲು, ಸರ್ಕಾರವು ಸಾರ್ವಜನಿಕರಿಗೆ ಷೇರು ಮಾರಾಟದ ಮೂಲಕ ತನ್ನ ಹೋಲ್ಡಿಂಗ್ ಅನ್ನು ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ. ಈ ಮಾತಿಗೆ ರಘುರಾಮ್ ರಾಜನ್ ಕೂಡಾ ಒಪ್ಪಿಗೆ ವ್ಯಕ್ತಪಡಿಸಿದ್ದಾರೆ.
“ನಾವು ಆಡಳಿತವನ್ನು ಸುಧಾರಿಸುವತ್ತ ಏಕೆ ಗಮನಹರಿಸಬಾರದು? ಸಾರ್ವಜನಿಕ ಸಮಸ್ಯೆಗಳ ಮೂಲಕ ಖಾಸಗೀಕರಣ ಮಾಡಬಹುದು, ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಬಹುದು. ಈ ರೀತಿ ಐಸಿಐಸಿಐ ಖಾಸಗಿ ಸಂಸ್ಥೆಯಾಗಿದೆ, ಆದರೆ ಇದು ಹೆಚ್ಚಿನ ಪಕ್ಷ ಸಾರ್ವಜನಿಕ ಬ್ಯಾಂಕ್ನಂತೆಯೇ ಆಗಿದೆ,” ಎಂದು ರಾಜನ್ ಹೇಳಿದರು. ಬ್ಯಾಂಕಿಂಗ್‌ನಲ್ಲಿಯೂ ಖಾಸಗಿ ವಲಯಕ್ಕೆ ಸಾಕಷ್ಟು ಪ್ರಮಾಣದ ಸ್ಪರ್ಧೆ ಇದೆ ಎಂದು ಅವರು ಉಲ್ಲೇಖಿಸಿದ್ದಾರೆ.