• Home
  • About Us
  • ಕರ್ನಾಟಕ
Wednesday, December 24, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಜಾತಿ ದೌರ್ಜನ್ಯದ ಒಲಿಂಪಿಕ್ ಆಯಾಮ

ನಾ ದಿವಾಕರ by ನಾ ದಿವಾಕರ
August 7, 2021
in ಅಭಿಮತ, ಕ್ರೀಡೆ, ದೇಶ
0
ತಂಡವು ಹೆಚ್ಚು ದಲಿತ ಆಟಗಾರರನ್ನು ಹೊಂದಿದ್ದರಿಂದ ಸೋತಿದೆ!; ಹಾಕಿ ಆಟಗಾರ್ತಿ ವಂದನಾಗೆ ಜಾತಿ ನಿಂದನೆ
Share on WhatsAppShare on FacebookShare on Telegram

ಆತ್ಮನಿರ್ಭರಭಾರತ ಸೂಕ್ಷ್ಮ ಮನುಜ ಸಂವೇದನೆಗಳನ್ನೂ ಕಳೆದುಕೊಂಡು ಬೆತ್ತಲಾಗುತ್ತಿದೆ. ದೇಶದ ರಾಜಧಾನಿಯಲ್ಲಿ ನಡೆಯುವ ಒಂದು ಅತ್ಯಾಚಾರ ಮತ್ತು ಕೊಲೆಗೆ ಸಂತಾಪವನ್ನೂ ಸೂಚಿಸದ ಒಂದು ಸರ್ಕಾರ ಈ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅಧಿಕಾರ ರಾಜಕಾರಣದ ದರ್ಪ ಮತ್ತು ಜಾತಿ ಶ್ರೇಷ್ಠತೆಯ ವ್ಯಸನ ಈ ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಂಸ್ಕೃತಿಕ ರಾಜಕಾರಣದ ಮೂಲಕ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುತ್ತಿದೆ. ರಾಮರಾಜ್ಯದ ಕನಸು ಕಾಣುತ್ತಿರುವ ಭರತಖಂಡ ಇಂದು ಅತ್ಯಾಚಾರಗಳ ಬೃಹತ್ ಸೌಧದಂತೆ ಕಾಣುತ್ತಿದೆ. ಅತ್ಯಾಚಾರ ಎಸಗುವ ವಿಕೃತ ಮನಸುಗಳಿಗಿಂತಲೂ,  ಭೀಭತ್ಸ ದೌರ್ಜನ್ಯಗಳ ಬಗ್ಗೆ ಮೌನ ವಹಿಸುವ ಒಂದು ಬೃಹತ್ ವರ್ಗ ಆಧುನಿಕ ಭಾರತೀಯ ಸಮಾಜದಲ್ಲಿ ತನ್ನ ಪಾರಮ್ಯ ಮೆರೆಯುತ್ತಿದೆ.

ADVERTISEMENT

ನಿರ್ಭಯ ಘಟಿಸಿ ಬಹುತೇಕ ಹತ್ತು ವರ್ಷಗಳೇ ಆಯಿತು. ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯಗಳನ್ನು, ಅತ್ಯಾಚಾರಗಳನ್ನು ತಡೆಗಟ್ಟುವ ಕಠಿಣ ಶಾಸನವನ್ನು ರೂಪಿಸಿ ಹಲವು ವರ್ಷಗಳಾದವು. ವರ್ಮಾ ಆಯೋಗದ ಶಿಫಾರಸುಗಳು ಈ ದೇಶದ ಮಹಿಳೆಯರಲ್ಲಿ ಒಂದು ಭರವಸೆ ಮೂಡಿಸಿದ್ದವು. ಸಂಸತ್ತಿನಲ್ಲಿ ಜಾರಿಗೊಳಿಸಲಾದ ಕಠಿಣ ಕಾನೂನುಗಳು ಮಹಿಳೆಯರಿಗೆ ಘನತೆಯ ಬದುಕು ಸವೆಸಲು ನೆರವಾಗುತ್ತವೆ ಎಂಬ ಆಶಾಭಾವನೆ ಮೂಡಿತ್ತು. ಆದರೆ ಇಲ್ಲ, ಇದು ಭಾರತ. ಸಾಂಪ್ರದಾಯಿಕತೆಯನ್ನೇ ಉಸಿರಾಡುವ, ಸಾಂಸ್ಕೃತಿಕ ಪಾರಮ್ಯವನ್ನೇ ಮೆರೆಸುವ, ಜಾತಿ ಶ್ರೇಷ್ಠತೆಯನ್ನೇ ಇಂದಿಗೂ ಮೈಗೂಡಿಸಿಕೊಂಡಿರುವ ಭಾರತ.

ಕಳೆದ 10 ವರ್ಷಗಳಲ್ಲಿ ಅತ್ಯಾಚಾರ ಪ್ರಕರಣಗಳು ಶೇ 75ರಷ್ಟು ಹೆಚ್ಚಾಗಿದೆ ಎಂದು ಸಂಸತ್ತಿಗೆ ಸಲ್ಲಿಸಲಾದ ಅಧಿಕೃತ ವರದಿಯಲ್ಲೇ ಹೇಳಲಾಗಿದೆ. ಐದು ವರ್ಷಗಳಲ್ಲಿ 1.76 ಲಕ್ಷ ಅತ್ಯಾಚಾರಗಳ ಪ್ರಕರಣಗಳು ವರದಿಯಾಗಿವೆ. ನಿರ್ಭಯಾ ಪ್ರಕರಣದ ನಂತರ ಕೇಂದ್ರ ಸರ್ಕಾರ ಅತ್ಯಾಚಾರ ಸಂತ್ರಸ್ತೆಯರ ಚಿಕಿತ್ಸೆ, ಪ್ರಕರಣಗಳ ತ್ವರಿತ ವಿಚಾರಣೆ ಮತ್ತು ಪರಿಹಾರ  ನೀಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಹತ್ತು ವರ್ಷಗಳಲ್ಲಿ ಅತ್ಯಾಚಾರ ಪ್ರಕರಣಗಳನ್ನು ದಾಖಲಿಸುವ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿರುವುದರಿಂದ ದಾಖಲಾದ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಅಂದರೆ ಮೂಲತಃ ಅತ್ಯಾಚಾರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರಗಳು ಯಾವ ಕ್ರಮ ಕೈಗೊಂಡಿವೆ ಎಂಬ ಸ್ಪಷ್ಟ ಮಾಹಿತಿಯೇ ಇಲ್ಲವಾಗಿದೆ. ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿರುವುದನ್ನೇ ಒಂದು ಸಾಧನೆ ಎಂದು ಹೇಳಿಕೊಳ್ಳಬಹುದೇ ಹೊರತು, ಮತ್ತಾವುದೇ ಯೋಜನಾಬದ್ಧ ಕ್ರಮಗಳು ಸರ್ಕಾರಗಳಿಂದ ಜಾರಿಯಾಗಿಲ್ಲ.

ನಿರ್ಭಯಾ ಭಾರತದ ಆಡಳಿತ ವ್ಯವಸ್ಥೆಯ ಕಣ್ತೆರೆಸಬೇಕಿತ್ತು. ಈ ದೇಶದ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ತಾರತಮ್ಯ ಧೋರಣೆ, ಪೂರ್ವಗ್ರಹಗಳು ಮತ್ತು ಸಮಾಜೋ ಸಾಂಸ್ಕೃತಿಕ ನೆಲೆಗಳಲ್ಲಿ ಇಂದಿಗೂ ಕಂಡುಬರುತ್ತಿರುವ ಬೌದ್ಧಿಕ ನಿಷ್ಕ್ರಿಯತೆಗೆ ನಿರ್ಭಯಾ ಪ್ರಕರಣ ಅಂತ್ಯ ಹಾಡಬೇಕಿತ್ತು. ಆದರೆ ಭಾರತದ ಪುರುಷ ಪ್ರಧಾನ ಸಮಾಜದ ಬೌದ್ಧಿಕ ಪರಂಪರೆಯನ್ನು ಇನ್ನೂ ಗಟ್ಟಿಗೊಳಿಸುವ ಪ್ರಯತ್ನಗಳು ನಡೆಯುತ್ತಿವೆಯೇ ಹೊರತು, ಸುಧಾರಣೆಯ ಛಾಯೆಯೂ ಕಾಣಲಾಗುತ್ತಿಲ್ಲ. ಚಲನಚಿತ್ರಗಳ ಮೂಲಕ, ಮಾಧ್ಯಮಗಳ ಮೂಲಕ ಮತ್ತು ರಾಜಕೀಯ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಪಿತೃಪ್ರಧಾನ ವ್ಯವಸ್ಥೆಯ ಬೇರುಗಳನ್ನು ಗಟ್ಟಿಗೊಳಿಸಲಾಗುತ್ತಿದೆ.

ಹಾಗಾಗಿಯೇ ದೆಹಲಿಯಲ್ಲಿ ಮಸಣದ ಅರ್ಚಕನೊಬ್ಬನ ದುಷ್ಕೃತ್ಯ ಕೇವಲ ಸುದ್ದಿ ಮಾಧ್ಯಮಗಳ ಹೆಡ್‍ಲೈನ್‍ಗಳಾಗಿ ಅಂತ್ಯಕಾಣುತ್ತವೆ. ಆರೋಪಿಯ ಬಂಧನ, ವಿಚಾರಣೆ, ಅಲ್ಪ ಶಿಕ್ಷೆ ಮತ್ತು ಸಂತ್ರಸ್ತೆಯ ಕುಟುಂಬದವರಿಗೆ ಒಂದಿಷ್ಟು ಪರಿಹಾರ ಇವುಗಳಲ್ಲೇ ಆಡಳಿತ ವ್ಯವಸ್ಥೆ ತೃಪ್ತಿಪಟ್ಟುಕೊಳ್ಳುತ್ತದೆ. ದೆಹಲಿಯಲ್ಲಿ ನಡೆದ ಘಟನೆಗೆ ದೇಶದ ಕೇಂದ್ರ ಗೃಹ ಸಚಿವಾಲಯದಿಂದ, ಪ್ರಧಾನಮಂತ್ರಿ ಕಚೇರಿಯಿಂದ ಒಂದಕ್ಷರದ ಸಂತಾಪವೂ ವ್ಯಕ್ತವಾಗದಿರುವುದನ್ನು ನೋಡಿದರೆ ನಮ್ಮ ಆಡಳಿತ ವ್ಯವಸ್ಥೆ ಎಷ್ಟು ನಿರ್ದಯಿಯಾಗಿದೆ, ನಾವು ಎಷ್ಟು ನಿರ್ಲಜ್ಜರಾಗಿದ್ದೇವೆ ಎಂದು ಅರ್ಥವಾಗುತ್ತದೆ. ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿರುವ ಉತ್ತರಪ್ರದೇಶ ನಮಗೆ ಮಾದರಿಯಾದರೆ ಮತ್ತೇನು ಅಪೇಕ್ಷಿಸಲು ಸಾಧ್ಯ, ಅಲ್ಲವೇ ?

ಭಾರತದ ಜಾತಿ ವ್ಯವಸ್ಥೆಯ ವಿಕೃತಿಯನ್ನು ಮತ್ತು ಈ ಸಮಾಜದ ಜಾತಿ ಶ್ರೇಷ್ಠತೆಯ ವ್ಯಸನವನ್ನು ದಲಿತ ಮತ್ತು ಅಲ್ಪಸಂಖ್ಯಾತ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ಪ್ರಕರಣಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಅತ್ಯಂತ ಶೋಷಿತ ವರ್ಗ ಆಗಿರುವ ಮಹಿಳೆಯರು ಎರಡು ಮಜಲುಗಳಲ್ಲಿ ಸಮಾಜದ ಅಟ್ಟಹಾಸಕ್ಕೆ ಬಲಿಯಾಗುತ್ತಿದ್ದಾರೆ, ಪುರುಷ ಸಮಾಜದ ಕಾಮ ವಿಕೃತಿಗೆ ಬಲಿಯಾಗುತ್ತಿದ್ದಾರೆ. ಮಹಿಳೆಯಾಗಿ ಸಾಮುದಾಯಿಕ ಶೋಷಣೆಯನ್ನು ಎದುರಿಸಿದರೆ ದಲಿತ ಮಹಿಳೆಯಾಗಿ ಮೇಲ್ಜಾತಿಯವರ ಜಾತಿ ದೌರ್ಜನ್ಯವನ್ನು ಎದುರಿಸಬೇಕಾಗಿದೆ. ಅಧಿಕಾರ ರಾಜಕಾರಣದಲ್ಲಿ ಮತ್ತು ಸಾಮಾಜಿಕ ಸಂರಚನೆಯ ಆಯಕಟ್ಟಿನ ಜಾಗಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವೇ ಇಲ್ಲದಿರುವುದೂ ಈ ದುಸ್ಥಿತಿಗೆ ಕಾರಣವಾಗಿದೆ.

ದೇಶದ ಉತ್ಪಾದನೆಯಲ್ಲಿ ಅರ್ಧಕ್ಕೂ ಹೆಚ್ಚು ಕೊಡುಗೆ ನೀಡುವ ಮಹಿಳಾ ಸಮುದಾಯ ಅಧಿಕಾರ ರಾಜಕಾರಣದ ಕೇಂದ್ರಗಳಲ್ಲಿ ಪ್ರಾತಿನಿಧ್ಯವೇ ಇಲ್ಲದೆ, ಒಂದೆಡೆ ಊಳಿಗಮಾನ್ಯ ವ್ಯವಸ್ಥೆ ಮತ್ತೊಂದೆಡೆ ಪಿತೃ ಪ್ರಧಾನ ಧೋರಣೆಯ ವಿರುದ್ಧ ಸೆಣಸಾಡಿ ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಾಪಾಡಿಕೊಳ್ಳಬೇಕಿದೆ. ಪ್ರಾತಿನಿಧಿಕವಾಗಿ ಆಡಳಿತ ವ್ಯವಸ್ಥೆಯಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವ ಮಹಿಳಾ ಪ್ರತಿನಿಧಿಗಳು ತಮ್ಮ ವರ್ಗ ಪ್ರಜ್ಞೆಯನ್ನೇ ಮರೆತು, ಅಸ್ಮಿತೆಯ ಹಂಗನ್ನೂ ತೊರೆದು, ಬಂಡವಾಳ ವ್ಯವಸ್ಥೆಯ ಪುರುಷ ಪ್ರಧಾನ ಧೋರಣೆಗೆ ಶರಣಾಗಿರುವುದನ್ನೂ ಭಾರತದ ರಾಜಕಾರಣದಲ್ಲಿ ಕಾಣಬಹುದು. ಹಾಗಾಗಿಯೇ ಕರ್ನಾಟಕದ ಹೊಸ ಸಂಪುಟದಲ್ಲಿರುವ ಏಕೈಕ ಮಹಿಳಾ ಪ್ರಾತಿನಿಧ್ಯ ಕೆಲವೊಮ್ಮೆ ಅಸಂಗತವಾಗಿಬಿಡುತ್ತದೆ.

ದೆಹಲಿಯ ಓರ್ವ ಮಸಣವಾಸಿ ಅರ್ಚಕ 9 ವರ್ಷದ ಹಸುಳೆಯ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿ, ಪೋಷಕರಿಗೆ ಮೃತದೇಹವನ್ನೂ ನೀಡದೆ ತಾನೇ ಸುಟ್ಟುಹಾಕಿಬಿಡುತ್ತಾನೆ. ಉತ್ತರಪ್ರದೇಶದ ಹಥ್ರಾಸ್‍ನಲ್ಲಿ ಪೊಲೀಸರು ಮಾಡಿದಂತೆಯೇ ಇಲ್ಲೊಬ್ಬ ಅರ್ಚಕನೂ ಮಾಡುತ್ತಾನೆ. ಆ ಬಾಲಕಿ ದಲಿತ ಎಂಬ ಅಸ್ಮಿತೆಯ ಪರಿಣಾಮವಾಗಿಯೇ ಸಾರ್ವಜನಿಕ ಸಂಕಥನದ ವಸ್ತುವಾಗದೆ ಮರೆಯಾಗಿಬಿಡುತ್ತಾಳೆ. ಹಥ್ರಾಸ್‍ನಂತೆಯೇ. ಈ ಹೃದಯವಿದ್ರಾವಕ ಭೀಭತ್ಸ ಘಟನೆಯ ಬಗ್ಗೆ ಕೇಂದ್ರದಲ್ಲಿ ಸಚಿವ ಪದವಿ ಹೊಂದಿರುವ ಮಹಿಳಾ ಸಂಸದರೂ ಸಹ ಸೊಲ್ಲೆತ್ತದೆ ನಿರುಮ್ಮಳವಾಗಿರುತ್ತಾರೆ. ಹಥ್ರಾಸ್‍ನಂತೆಯೇ ಇಲ್ಲಿಯೂ ಆಪರಾಧಿಗೆ ಅಧಿಕಾರಸ್ಥರ ಮತ್ತು ಆಡಳಿತ ವ್ಯವಸ್ಥೆಯ ಶ್ರೀರಕ್ಷೆ ಇರುತ್ತದೆ. ಉನ್ನಾವ್‍ನಲ್ಲಿ ಬಲಿಯಾದ 17 ವರ್ಷದ ದಲಿತ ಬಾಲಕಿ, ಕಥುವಾದಲ್ಲಿ ಬಲಿಯಾದ 8 ವರ್ಷದ ಹಸುಳೆ, 29 ವರ್ಷದ ಎರ್ನಾಕುಲಂನ ಜಿಶಾ, ಈ ಎಲ್ಲ ಪ್ರಕರಣಗಳೂ ಜಾತಿ ದೌರ್ಜನ್ಯದ ಕುರುಹುಗಳು.

ಈ ಅಮಾನುಷ ಘಟನೆಗಳ ಬಗ್ಗೆ ನಮ್ಮ ಸಮಾಜದ ಒಂದು ಬೃಹತ್ ವರ್ಗ ದಿವ್ಯಮೌನ ವಹಿಸುವುದು ಭಾರತೀಯ ಸಮಾಜದಲ್ಲಿ ಬೇರೂರಿರುವ ಜಾತಿ ಶ್ರೇಷ್ಠತೆಯ ವ್ಯಸನಕ್ಕೆ ಪ್ರತ್ಯಕ್ಷ ಸಾಕ್ಷಿ. ರೋಚಕ ಸುದ್ದಿಗಳಿಗಾಗಿ ಸದಾ ಹಾತೊರೆಯುವ ಭಾರತದ ವಿದ್ಯುನ್ಮಾನ ಮಾಧ್ಯಮಗಳೂ ಸಹ ಈ ಘಟನೆಗಳನ್ನು ಶ್ರೇಷ್ಠತೆಯ ಮಸೂರದ ಮೂಲಕವೇ ನೋಡುತ್ತವೆ. ಅಲಕ್ಷಿತ ಸಮುದಾಯಗಳು, ಶೋಷಿತ ಸಮುದಾಯಗಳು ದಮನಕ್ಕೊಳಗಾದಾಗ, ಹಿಂಸೆಗೊಳಗಾದಾಗ, ಸಮಾಜದ ವಿಕೃತಿಗಳಿಗೆ ಬಲಿಯಾದಾಗ ಮುಖ್ಯವಾಹಿನಿಯ ಸುದ್ದಿಯಾಗುವುದೇ ಇಲ್ಲ. ದೆಹಲಿಯ ಘಟನೆಯಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ವಿಶ್ವದ ಬೌದ್ಧಿಕ ಬಂಡವಾಳಕ್ಕೆ ಅತ್ಯಮೂಲ್ಯ ಕೊಡುಗೆ ನೀಡುವ ಹೆಗ್ಗಳಿಕೆ ಹೊಂದಿರುವ ಭಾರತೀಯ ಸಮಾಜದ ಬೌದ್ಧಿಕ ದಾರಿದ್ರ್ಯಕ್ಕೆ ಮತ್ತೊಂದು ಸಾಕ್ಷಿ ಒಲಂಪಿಕ್ ಹಾಕಿ ಪಂದ್ಯದಲ್ಲಿ ಮಹತ್ತರ ಸಾಧನೆ ಮಾಡಿರುವ ಭಾರತದ ಮಹಿಳಾ ಹಾಕಿ ತಂಡಕ್ಕೆ ದೊರೆತಿರುವ ಪ್ರತಿಕ್ರಿಯೆ. ಒಲಂಪಿಕ್ ಉಪಾಂತ್ಯ ಪಂದ್ಯದಲ್ಲಿ ದಿಟ್ಟ ಹೋರಾಟದ ಹೊರತಾಗಿಯೂ ಸೋಲು ಅನುಭವಿಸಿರುವ ಮಹಿಳಾ ಹಾಕಿ ತಂಡದ ವೈಫಲ್ಯಕ್ಕೆ ತಂಡದಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿದ್ದುದೇ ಕಾರಣ ಎಂದು ಹರಿದ್ವಾರದ ಕ್ಷುದ್ರ ಮನಸುಗಳು ವಂದನಾ ಕಟಾರಿಯಾ ಮನೆಯ ಮುಂದೆ ಪ್ರದರ್ಶನ ನಡೆಸಿರುವುದು ಶತಮಾನದ ದುರಂತ ಅಲ್ಲವೇ ? ದೆಹಲಿಯ ಮಸಣವಾಸಿ ಅರ್ಚಕನಿಗೂ, ಈ ಕ್ಷುದ್ರ ಮನಸುಗಳಿಗೂ, ಹಥ್ರಾಸ್‍ನ ಪೊಲೀಸರಿಗೂ ವ್ಯತ್ಯಾಸವಾದರೂ ಏನಿದೆ ? ಸಮಾನ ಎಳೆಯೊಂದಿದ್ದರೆ ಅದು, ಪುರುಷ ಪ್ರಧಾನ ಧೋರಣೆ ಮತ್ತು ಜಾತಿ ವ್ಯಸನವಷ್ಟೇ  ಅಲ್ಲವೇ ?

ನಾವು ಈ ಆಧುನಿಕ ಕಾಲಘಟ್ಟದಲ್ಲೂ ಜಾತಿ ಶ್ರೇಷ್ಠತೆಯ ರಾಡಿಯಲ್ಲೇ ಮಿಂದೆದ್ದು ಬದುಕುತ್ತಿದ್ದೇವೆ ಎನಿಸುವುದಿಲ್ಲವೇ ? ದೆಹಲಿಯ ಮಸಣವಾಸಿ ಅರ್ಚಕನ ದುರ್ವರ್ತನೆಯನ್ನು ಖಂಡಿಸುವ ಒಂದೇಒಂದು ಮೇಲ್ಜಾತಿಯ ಧ್ವನಿ ಕೇಳಿಬಂದಿಲ್ಲ. ಅಥವಾ ಹರಿದ್ವಾರದ ಕ್ಷುದ್ರ ಮನಸುಗಳನ್ನು ಖಂಡಿಸುವ ಒಂದಾದರೂ  “ ಹಿಂದುತ್ವದ ”ಧ್ವನಿ ಕೇಳಿಸಿಲ್ಲ. ಪುರುಷರ ಹಾಕಿ ತಂಡಕ್ಕೆ ಖುದ್ದಾಗಿ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸುವ #ಆತ್ಮನಿರ್ಭರಭಾರತದ ಕರ್ಮಯೋಗಿಯಿಂದ ಹರಿದ್ವಾರದ ಕ್ಷುದ್ರ ಮನಸುಗಳನ್ನು ಖಂಡಿಸುವ ಒಂದಕ್ಷರವೂ ಹೊರಬರುವುದಿಲ್ಲ. ಸಹಜವಾಗಿಯೇ  ಮಸಣವಾಸಿ ಅರ್ಚಕನನ್ನು ಖಂಡಿಸಲು ಮನಸ್ಸಾಗುವುದಿಲ್ಲ.

ಇದು ಭಾರತೀಯ ಸಮಾಜದ ಜಾತಿ ಶ್ರೇಷ್ಠತೆಯ ವ್ಯಸನದ ಒಂದು ಪ್ರಾತ್ಯಕ್ಷಿಕೆ. ಇಲ್ಲಿ ಜಾತಿ ಪ್ರಜ್ಞೆ ಗಟ್ಟಿಯಾಗುತ್ತಿರುವಂತೆಯೇ ಶ್ರೇಷ್ಠತೆಯ ವ್ಯಸನವೂ ಗಟ್ಟಿಯಾಗುತ್ತಿದೆ. ಹಾಗೆಯೇ ಸ್ತ್ರೀ ಸಂವೇದನೆಯೂ ಶಿಥಿಲವಾಗುತ್ತಿದೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಅತ್ಯಾಚಾರಗಳು ಸಂಸತ್ತಿನ ಕಡತಗಳಲ್ಲಿ ವರ್ಷಾನುಗಟ್ಟಲೆ ನ್ಯಾಯಕ್ಕಾಗಿ ಹಾತೊರೆಯುತ್ತಾ ಧೂಳು ತಿನ್ನುವ ಹಾಳೆಗಳಾಗಿ ಪರ್ಯವಸಾನಗೊಳ್ಳುತ್ತವೆ. ಅತ್ಯಾಚಾರಿಗಳನ್ನು ರಕ್ಷಿಸಲು ಒಂದು ರಾಜಕೀಯ ವ್ಯವಸ್ಥೆ ಇದೆ. ಸಾಂಸ್ಕೃತಿಕ ಅತ್ಯಾಚಾರಿಗಳ ರಕ್ಷಣೆಗೆ ಆಡಳಿತ ವ್ಯವಸ್ಥೆಯೇ ಬದ್ಧವಾಗಿದೆ. ಏಕೆಂದರೆ ಈ ಸಮಾಜದ ಪಿತೃಪ್ರಧಾನ ಧೋರಣೆಯನ್ನು ಸಂರಕ್ಷಿಸುತ್ತಲೇ ಬಂಡವಾಳಶಾಹಿ ವ್ಯವಸ್ಥೆ ತನ್ನ ಶೋಷಕ ಆಡಳಿತ ನೀತಿಗಳನ್ನು ಅನಾವರಣಗೊಳಿಸುತ್ತಾ ಹೋಗುತ್ತದೆ.

ಈ ಕಾರಣಕ್ಕಾಗಿಯೇ ದೇಶಾದ್ಯಂತ 660 ತ್ವರಿತಗತಿಯ ನ್ಯಾಯಾಲಯಗಳು ಪ್ರತ್ಯೇಕವಾಗಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನೇ ವಿಚಾರಣೆಗೊಳಪಡಿಸಿದ್ದರೂ ಇನ್ನೂ ಲಕ್ಷಾಂತರ ಪ್ರಕರಣಗಳು ಇತ್ಯರ್ಥವಾಗದೆ ಉಳಿದಿವೆ. ರಾಜಕೀಯ ಆಡಳಿತ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಹೇಗೆ ಅಕ್ರಮ ಸಂತಾನಗಳನ್ನು ರಕ್ಷಿಸುತ್ತವೆ ಎನ್ನಲು ಉನ್ನಾವೋ ಪ್ರಕರಣ ಒಂದು ಸ್ಪಷ್ಟ ನಿದರ್ಶನವಾಗಿ ನಮ್ಮೆದುರು ನಿಂತಿದೆ. ಹಥ್ರಾಸ್ ಒಂದು ಪ್ರಾತ್ಯಕ್ಷಿಕೆಯಾಗಿದೆ. ದೆಹಲಿಯ ಬಳಿ ನಂಗ್ಲಿಯ ಮಸಣದಲ್ಲಿ ನಡೆದ ಘಟನೆ ಮತ್ತೊಂದು ಘಟನೆಯಾಗಿ ಮಾತ್ರ ಮರೆಯಾಗಿಬಿಡುತ್ತದೆ.  ನ್ಯಾಯ ವಿತರಣೆಯಾಗುವುದು ಸಾಂಸ್ಥಿಕ ನೆಲೆಯಲ್ಲೇ ಆದರೂ ನ್ಯಾಯ ಪರಿಪಾಲನೆಯಾಗುವುದು ಬೌದ್ಧಿಕ ನೆಲೆಯಲ್ಲಿ ಅಲ್ಲವೇ ? ಈ ಬೌದ್ಧಿಕ ನೆಲೆಯೇ ಶ್ರೇಷ್ಠತೆಯ ವ್ಯಸನಕ್ಕೆ ಬಲಿಯಾಗಿ, ಭ್ರಷ್ಟವಾಗಿದೆ. ಅಧಿಕಾರ ಕೇಂದ್ರಗಳಲ್ಲಿ ವಿರಾಜಮಾನರಾಗಿರುವ ಜನಪ್ರತಿನಿಧಿಗಳಲ್ಲಿ ಮತ್ತು ಸಾಂವಿಧಾನಿಕ ಸಂಸ್ಥೆಗಳಲ್ಲಿ ಮನುಜ ಸೂಕ್ಷ್ಮ ಸಂವೇದನೆ ಇಲ್ಲದೆ ಹೋದರೆ ಸಮಾಜ ಈ ಹಂತವನ್ನು ತಲುಪುವುದು ಸಹಜ ಅಲ್ಲವೇ ?

ನಾವು ಸಂವಿಧಾನವನ್ನು ನಂಬಿದ್ದೇವೆ. ಆದರೆ ಸಾಂವಿಧಾನಿಕ ಆಶಯಗಳನ್ನು ಸಾಕಾರಗೊಳಿಸುವ ಹೊಣೆಗಾರಿಕೆ, ಇಂತಹ ಸೂಕ್ಷ್ಮ ಸಂವೇದನೆಯಿಲ್ಲದ ಪ್ರತಿನಿಧಿಗಳ ಮೇಲೆ ಹೊರಿಸಿದ್ದೇವೆ. ಮನುಸ್ಮೃತಿಯನ್ನು ಖಂಡಿಸುತ್ತೇವೆ. ಆದರೆ ಆಡಳಿತ ವ್ಯವಸ್ಥೆಯಲ್ಲೇ ಆಳವಾಗಿ ಬೇರೂರಿರುವ ಮನುಸ್ಮೃತಿಯ ಬೇರುಗಳನ್ನು ಹೋಗಲಾಡಿಸಲು ವಿಫಲರಾಗಿದ್ದೇವೆ. ಅಂಬೇಡ್ಕರರನ್ನು ಆರಾಧಿಸುತ್ತಲೇ ಮನುಸ್ಮೃತಿಯ ಪರಿಚಾರಕರೊಡನೆ ಕೈಜೋಡಿಸುವ ದ್ವಂದ್ವ ವ್ಯಕ್ತಿತ್ವದ ಜನಪ್ರತಿನಿಧಿಗಳಲ್ಲಿ ನಾವು, ಸಂವಿಧಾನದ ರಕ್ಷಕರನ್ನು ಕಾಣುತ್ತಿದ್ದೇವೆ. ಹಾಗಾಗಿಯೇ ನಮಗೆ ದೆಹಲಿಯ ಎಳೆ ಬಾಲಕಿ, ಕಥುವಾದ ಹಸುಳೆ, ಉನ್ನಾವೋದ ಮಹಿಳೆ, ಹಥ್ರಾಸ್‍ನ ಯುವತಿ ಮತ್ತು ಭಾರತದ ಮಹಿಳಾ ಹಾಕಿ ಪಟುಗಳು ಕೇವಲ ಸಂಕೇತಗಳಾಗಿ ಕಾಣುತ್ತಿದ್ದಾರೆ.

ಜಾತಿ ಶ್ರೇಷ್ಠತೆ ಈ ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯಸನ. ಶೋಷಣೆ , ದೌರ್ಜನ್ಯ ಮತ್ತು ತಾರತಮ್ಯ ಈ ದೇಶದ ಊಳಿಗಮಾನ್ಯ-ಪುರುಷ ಪ್ರಧಾನ ಧೋರಣೆಯ ದ್ಯೋತಕ. ಈ ಎರಡರ ಸಮ್ಮಿಲನವನ್ನು ಇಂದಿನ ಸಮಾಜೋ ರಾಜಕೀಯ ವ್ಯವಸ್ಥೆಯ ಚೌಕಟ್ಟಿನಲ್ಲಿ ಕಾಣುತ್ತಿದ್ದೇವೆ. ಈ ಎರಡೂ ಅನಿಷ್ಟಗಳ ವಿರುದ್ಧ ಹೋರಾಡುವುದು ಸಂವೇದನಾಶೀಲ ಮನಸುಗಳ ಆದ್ಯತೆಯಾಗಬೇಕಿದೆ. ಸಾಂಸ್ಕೃತಿಕ ದೌರ್ಜನ್ಯ, ಆರ್ಥಿಕ ತಾರತಮ್ಯ ಮತ್ತು ಜಾತಿ ಶೋಷಣೆ ಈ ಮೂರೂ ವಿದ್ಯಮಾನಗಳ ವಿರುದ್ಧ ಹೋರಾಡುವ ಒಂದು ಸಂಘಟನಾತ್ಮಕ ಪ್ರಯತ್ನ ಇಂದಿನ ತುರ್ತು. ಇದು ಸೈದ್ಧಾಂತಿಕ ನೆಲೆಯ ವಿಘಟನೆಗಳಿಂದ ಸಾಧ್ಯವಾಗುವುದಿಲ್ಲ. ಬೌದ್ಧಿಕ ನೆಲೆಯ ಸಂಘಟನೆಯ ಮೂಲಕ ಸಾಧ್ಯ. ಈ ನಿಟ್ಟಿನಲ್ಲಿ ಯೋಚಿಸೋಣವೇ ?

Tags: caste polarizationCaste PoliticscasteismOlympicstokyo olympic
Previous Post

ಟೋಕಿಯೋ ಒಲಿಂಪಿಕ್ಸ್: ಫೈನಲ್ನಲ್ಲಿ 23ನೇ ಸ್ಥಾನ ಪಡೆದ ಕರ್ನಾಟಕದ ಈಕ್ವೆಸ್ಟ್ರಿಯನ್ ಫೌಹಾದ್; ಚಿನ್ನಕ್ಕಾಗಿ ಹೋರಾಟ

Next Post

Zameer ಮನೆ ಮೇಲೆ ED ದಾಳಿ: HD Kumaraswamy ಏನನ್ನುತ್ತಾರೆ.?

Related Posts

Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
0

"ಮನಮೋಹನ್ ಸಿಂಗ್ ಅವರು ಅನೇಕ ಅಧ್ಯಯನ ನಡೆಸಿ ನರೇಗಾ ಯೋಜನೆ ಜಾರಿಗೆ ತಂದಿದ್ದರು. ಮೋದಿ ಸರ್ಕಾರ ಇಂತಹ ನಿರ್ಧಾರ ಕೈಗೊಳ್ಳುತ್ತದೆ ಎಂದು ಭಾವಿಸಿರಲಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್...

Read moreDetails

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

December 23, 2025

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

December 23, 2025

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

December 23, 2025
ಚಿನ್ನಸ್ವಾಮಿಯಲ್ಲಿ ಕ್ರಿಕೆಟ್ ಪಂದ್ಯಕ್ಕೆ 17 ಮಾರ್ಗಸೂಚಿ

ಚಿನ್ನಸ್ವಾಮಿಯಲ್ಲಿ ಪಂದ್ಯಾವಳಿಗೆ ರೆಡ್ ಸಿಗ್ನಲ್

December 23, 2025
Next Post

Zameer ಮನೆ ಮೇಲೆ ED ದಾಳಿ: HD Kumaraswamy ಏನನ್ನುತ್ತಾರೆ.?

Please login to join discussion

Recent News

Top Story

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

by ಪ್ರತಿಧ್ವನಿ
December 23, 2025
Top Story

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

by ಪ್ರತಿಧ್ವನಿ
December 23, 2025
Top Story

ಜಾಮೀನು ಅರ್ಜಿ ವಜಾ: ಭೈರತಿ ಬಸವರಾಜುಗೆ ಬಂಧನದ ಭೀತಿ ಶುರು..

by ಪ್ರತಿಧ್ವನಿ
December 23, 2025
Top Story

ಜೀವರಕ್ಷಕ ಪ್ರಶಸ್ತಿ ಸ್ವೀಕರಿಸಿದ ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌

by ಪ್ರತಿಧ್ವನಿ
December 23, 2025
Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!
Top Story

Daily Horoscope: ಇಂದು ಈ ರಾಶಿಗಳ ಯಶಸ್ಸಿನ ಹಾದಿ ಸುಗಮ..!

by ಪ್ರತಿಧ್ವನಿ
December 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಮನರೇಗಾ ಯೋಜನೆ ಹತ್ಯೆ ಮಾಡುತ್ತಿರುವ ಕೇಂದ್ರ : ಡಿಸಿಎಂ ಡಿ.ಕೆ.ಶಿವಕುಮಾರ್

December 23, 2025

ರೈತರ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕು: ಎನ್. ಚಲುವರಾಯಸ್ವಾಮಿ.

December 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada