ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಈ ಬಾರಿಯ ದೆಹಲಿ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಸಾಧ್ಯತೆಗಳಿವೆ.
ಕಳೆದ ಸುಮಾರು ಹತ್ತು ತಿಂಗಳಿನಿಂದ ನಡೆಯುತ್ತಿರುವ ರೈತ ಆಂದೋಲನ ಹಾಗೂ ಲಖೀಂಪುರ ಖೇರಿಯಲ್ಲಿ ನಡೆದಂತಹ ರೈತರ ಹತ್ಯೆಯ ಕುರಿತಾಗಿ ಕ್ಯಾಪ್ಟನ್ ಸಿಂಗ್ ಅವರು ಪ್ರಧಾನಿಯೊಂದಿಗೆ ಚರ್ಚಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ರೈತ ಆಂದೋಲನದಿಂದಾಗಿ ರಾಜ್ಯದಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಪ್ರಧಾನಿಯೊಂದಿಗೆ ಚರ್ಚಿಸಿ, ಕೃಷಿ ಕಾನೂನು ತಿದ್ದುಪಡಿಯನ್ನು ವಾಪಸ್ ಪಡೆಯಲು ಸಿಂಗ್ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿದ್ದಾರೆ ಎಂದು ಹೇಳಲಾಗಿದೆ.
ಲಖೀಂಪುರ ಖೇರಿಯಲ್ಲಿ ನಡೆದ ಘಟನೆಗೆ ಪಂಜಾಬ್’ನಲ್ಲಿ ಪ್ರತಿರೋಧ ಉಂಟಾದರೆ ಪರಿಸ್ಥಿತಿ ಕೈ ಮೀರಿ ಹೋಗುವ ಸಾಧ್ಯತೆಗಳಿವೆ. ಹಾಗಾಗಿ ಈ ಘಟನೆಯ ಹಿಂದಿನ ಪ್ರಮುಖ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಹಾಗೂ ಈ ಘಟನೆಯ ಕುರಿತು ಸಮಗ್ರ ತನಿಖೆಯ ವಿಚಾರವಾಗಿ ಪ್ರಧಾನಿಯೊಂದಿಗೆ ಸಿಂಗ್ ಚರ್ಚೆ ನಡೆಸಲಿದ್ದಾರೆ.
ಕೆಲವು ದಿನಗಳ ಹಿಂದೆ ತಾವು ಕಾಂಗ್ರೆಸ್ ತೊರೆಯುವುದಾಗಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದರು. ಆದರೆ, ಬಿಜೆಪಿ ಸೇರುವುದಿಲ್ಲ ಎಂಬ ವಿಚಾರವನ್ನೂ ಸ್ಪಷ್ಟಪಡಿಸಿದ್ದರು. ಈಗ ದೆಹಲಿ ಭೇಟಿ ನೀಡುತ್ತಿರುವುದು ಸಂಪೂರ್ಣ ರಾಜಕೀಯ ಭೇಟಿಯಾಗಿರಲಿದ್ದು, ಹಲವು ರಾಜಕೀಯ ಮುಖಂಡರನ್ನು ಸಿಂಗ್ ಅವರು ಭೇಟಿಯಾಗಲಿದ್ದಾರೆ.
ಅಮರಿಂದರ್ ಸಿಂಗ್ ಸಿಎಂ ಆಗಿದ್ದ ವೇಳೆ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಮೇಜರ್ ಅಮರ್‌ದೀಪ್ ಸಿಂಗ್ ಅವರು ಕಾಂಗ್ರೆಸ್ ವಿರುದ್ದ ತೀವ್ರವಾಗಿ ಕಿಡಿಕಾರಿದ್ದಾರೆ. ಅಮರೀಂದರ್ ಸಿಂಗ್ ಅವರಿಗೆ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಅಪಮಾನ ಮಾಡಿದೆ. ಇದರ ಪರಿಣಾಮವನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎದುರಿಸಲಿದೆ. ಕಾಂಗ್ರೆಸ್ 16 ಸೀಟುಗಳನ್ನು ಗೆಲ್ಲಲು ಕೂಡಾ ಪರದಾಡಲಿದೆ, ಎಂದಿದ್ದಾರೆ.
“ನಾವು ಸರ್ಕಾರ ರಚಿಸುತ್ತೇವೆ. ಕಾದು ನೋಡಿ. ಕಾಂಗ್ರೆಸ್ ಹೊರತಾಗಿಯೂ ಹಲವಾರು ರಾಜಕೀಯ ಪಕ್ಷಗಳಿವೆ. ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವು ಆಯ್ಕೆಗಳಿವೆ. ನಾವು ವಾಪಸ್ ಬಂದೇ ಬರುತ್ತೇವೆ,” ಎಂದು ಅಮರ್‌ದೀಪ್ ಸಿಂಗ್ ಹೇಳಿದ್ದಾರೆ.
ಇನ್ನು, ಪಂಜಾಬ್’ನಲ್ಲಿ ನೂತನ ಸರ್ಕಾರ ರಚನೆಯಾದ ಬಳಿಕ, ಹಿಂದಿನ ಸಿಎಂನ ಕಾರ್ಯದರ್ಶಿಗಳಿಗೆ, ಸಲಹೆಗಾರರಿಗೆ ನೀಡಿದ್ದ ಭದ್ರತೆಯನ್ನು ಏಕಾಏಕಿ ಹಿಂಪಡೆದಿರುವುದನ್ನು ಖಂಡಿಸಿರುವ ಅಮರ್‌ದೀಪ್ ಸಿಂಗ್, ಇದು ದ್ವೇಷ ರಾಜಕಾರಣ. ಯಾವುದೇ ನೊಟಿಸ್ ನೀಡದೆ ನಮಗೆ ನಿಡಿರುವ ಭದ್ರತೆ ವಾಪಸ್ ಪಡೆಯಲಾಗಿದೆ. ಸದ್ಯಕ್ಕೆ ನಾವು ಕೂಡಾ ಕಾಂಗ್ರೆಸ್ ಭಾಗವಾಗಿಯೇ ಇದ್ದೇವೆ. ನಮ್ಮ ನಾಯಕ ರಾಷ್ಟ್ರಮಟ್ಟದ ನಾಯಕ, ಎಂದು ಅವರು ಹೇಳಿದ್ದಾರೆ.