ಕೇಂದ್ರ ಸರ್ಕಾರ ಜಾರಿಗೆ ತರಲುದ್ದೇಶಿಸಿರುವ ಪೌರತ್ವ ಕಾನೂನಿನ ವಿರುದ್ಧ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ಸಂಸ್ಥೆಗಳ ಪೋರ್ಟಲ್ ಗಳು ಮತ್ತು ಫೇಸ್ ಬುಕ್ ನಲ್ಲಿ ಪ್ರಕಟಿಸಲಾಗಿರುವ ಎಲ್ಲಾ ಪ್ರಕಟಣೆಗಳನ್ನು ಕೂಡಲೇ ತೆಗೆದುಹಾಕುವಂತೆ ಕಲ್ಕತ್ತಾ ಹೈಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ತಾಕೀತು ಮಾಡಿದೆ.
ಈ ಬಗ್ಗೆ ರಿಟ್ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು ಕೇಂದ್ರ ಸರ್ಕಾರದ ಕಾನೂನಿನ ವಿರುದ್ಧವಾದ ಪ್ರಕಟಣೆಗಳನ್ನು ಪ್ರಕಟಿಸಿದ್ದ ಸರ್ಕಾರದ ಪೋರ್ಟಲ್ ಮತ್ತು ಫೇಸ್ ಬುಕ್ ಖಾತೆಗಳನ್ನು ಉಲ್ಲೇಖ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ತೊಟ್ಟಹಿಲ್ ಬಿ. ರಾಧಾಕೃಷ್ಣನ್ ಮತ್ತು ನ್ಯಾ. ಅರಿಜಿತ್ ಬ್ಯಾನರ್ಜಿ ಅವರಿದ್ದ ಪೀಠವು ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ಸರ್ಕಾರದ ಪರ ವಕೀಲರು ಇಂತಹ ಪ್ರಕಟಣೆಗಳನ್ನು ತೆಗೆದುಹಾಕಲಾಗಿದೆ ಎಂದು ಕೋರ್ಟಿಗೆ ಮಾಹಿತಿ ನೀಡಿದರು.
ಇಂತಹ ವಿಚಾರಗಳಿಗೆ ಸಂಬಂಧಿಸಿದಂತೆ ಸರ್ಕಾರದ ಖರ್ಚಿನಲ್ಲಿ ಈ ರೀತಿಯ ಪ್ರಕಟಣೆಗಳನ್ನು ಪ್ರಕಟಿಸಲು ಅವಕಾಶವಿದೆಯೇ ಇಲ್ಲವೇ ಅಥವಾ ಇಂತಹ ಪ್ರಕಟಣೆಗಳಿಗಾಗಿ ಸರ್ಕಾರಿ ಯಂತ್ರವನ್ನು ಬಳಸಿಕೊಳ್ಳಬಹುದೇ ಅಥವಾ ಇಲ್ಲವೇ ಎಂಬುದು ಕಾನೂನು ವಿಚಾರವಾಗಿದೆಯಾದ್ದರಿಂದ ಈ ವಿಚಾರವನ್ನು ಕಾನೂನು ಇಲಾಖೆಗೆ ಬಿಡುತ್ತೇವೆ. ಆದರೆ, ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ಸಂಸ್ಥೆಗಳ ಪೋರ್ಟಲ್ ಮತ್ತು ಫೇಸ್ ಬುಕ್ ಸೈಟ್ ಗಳಲ್ಲಿ ಪ್ರಕಟಿಸಲಾಗಿರುವ ಪ್ರಕಟಣೆಗಳನ್ನು ತೆಗೆದುಹಾಕಬೇಕೆಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕೇಂದ್ರ ಸರ್ಕಾರದ ಕಾನೂನನ್ನು ಜಾರಿಗೆ ತರಬೇಕಾದದ್ದು ಒಂದು ರಾಜ್ಯದ ಮುಖ್ಯಮಂತ್ರಿ ಮತ್ತು ಆಡಳಿತ ವ್ಯವಸ್ಥೆಯ ಮುಖ್ಯಸ್ಥನ ಕರ್ತವ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈ ವಿಚಾರದಲ್ಲಿ ಪ್ರತಿಕ್ರಿಯೆ ಅಥವಾ ಹೇಳಿಕೆ ನೀಡಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗೆ ಅವಕಾಶವಿಲ್ಲ. ಅಲ್ಲದೇ ಸಂವಿಧಾನವನ್ನು ಜಾರಿಗೆ ತರುವುದು ಮತ್ತು ಕಾನೂನನ್ನು ರಾಜ್ಯದಲ್ಲಿ ಜಾರಿಗೆ ತರುವುದೂ ಸಹ ಇವರಿಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಎಲ್ಲಾ ಪ್ರಕಟಣೆಗಳನ್ನು ತೆಗೆದುಹಾಕುವಂತೆ ಆದೇಶ ನೀಡಿದೆ.
ಇದೇ ವೇಳೆ ಮುಂಜಾಗ್ರತಾ ಕ್ರಮವಾಗಿ ಅಹಿತಕರ ಘಟನೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಇಂಟರ್ನೆಟ್ ಅನ್ನು ಕೆಲ ಸಮಯದವರಗೆ ಸ್ಥಗಿತಗೊಳಿಸಲಾಗಿತ್ತು. ಪರಿಸ್ಥಿತಿ ತಿಳಿಯಾಗಿರುವ ಹಿನ್ನೆಲೆಯಲ್ಲಿ ಇಂಟರ್ನೆಟ್ ಸೌಲಭ್ಯವನ್ನು ಪುನಾರಂಭಿಸಲಾಗಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಾಲಯವು ಇಂತಹ ನಿರ್ಬಂಧಗಳು ದೀರ್ಘಾವಧಿವರೆಗೆ ಮುಂದುವರಿಯಲು ಸಾಧ್ಯವಿಲ್ಲ. ಆಯಾಯ ಕಾಲಕ್ಕೆ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರತಿಭಟನೆ ನಡೆದ ಸಂದರ್ಭದಲ್ಲಿ ದುಷ್ಕರ್ಮಿಗಳು ರೈಲ್ವೆ ನಿಲ್ದಾಣಗಳು ಮತ್ತು ರೈಲುಗಳಿಗೆ ಸಾಕಷ್ಟು ಹಾನಿ ಮಾಡಿದ್ದರು. ಈ ವಿಚಾರವನ್ನು ಪ್ರಸ್ತಾಪಿಸಿದ ನ್ಯಾಯಪೀಠವು, ಪ್ರತಿಭಟನೆಯಿಂದ ಎಷ್ಟು ಪ್ರಮಾಣದಲ್ಲಿ ಹಾನಿಯಿಂದ ಇಲಾಖೆಗೆ ಎಷ್ಟು ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎಂಬುದರ ಬಗ್ಗೆ ವಿವರವಾದ ವರದಿ ನೀಡುವಂತೆ ರೈಲ್ವೆ ಇಲಾಖೆಗೆ ನಿರ್ದೇಶನ ನೀಡಿದೆ.