“ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಈಗಾಗಲೇ ಬಿಜೆಪಿಯವರು ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ನಾವು ಮಾಹಿತಿ ನೀಡಲು ಮುಂದಾದರೆ ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವಾಗಿದೆ. ವಿವರ ನೀಡುವಷ್ಟು ಮಾಹಿತಿ ನಮ್ಮ ಬಳಿ ಇಲ್ಲವಾಗಿದೆ. ಪಕ್ಷದ ವತಿಯಿಂದ ಎಲ್ಲಾ ವಿವರಗಳನ್ನೊಳಗೊಂಡ ಕರಪತ್ರ ಸಿದ್ಧಪಡಿಸಿಕೊಟ್ಟರೆ ನಾವೂ ಹೋರಾಟ ಮಾಡಲು ಸಹಕಾರಿಯಾಗುತ್ತದೆ”.
– ಇದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಭಾಗಿಯಾಗಿರುವ ಜನ ಸಾಮಾನ್ಯರ ಮಾತಲ್ಲ. ಬೆಂಗಳೂರು ನಗರದ ಕಾಂಗ್ರೆಸ್ ಶಾಸಕಿ ಸೌಮ್ಯರೆಡ್ಡಿ ಸೇರಿದಂತೆ ಕಾಂಗ್ರೆಸ್ಸಿನ ಕೆಲವು ಮುಖಂಡರ ಪ್ರತಿಕ್ರಿಯೆ. ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಪಕ್ಷದ ಮುಖಂಡರಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವೇಳೆ ಸಭೆಯಲ್ಲಿದ್ದ ಅನೇಕರು ಇದೇ ರೀತಿಯ ಅಭಿಪ್ರಾಯ ಹೊರಹಾಕಿದ್ದರು. ಈ ಹೇಳಿಕೆ ಗಮನಿಸಿದಾಗ, ಇದುವರೆಗೆ ತಿದ್ದುಪಡಿ ಕಾಯ್ದೆ ಕುರಿತು ಯಾವುದೇ ಮಾಹಿತಿ ಇಲ್ಲದೆ ಕಾಂಗ್ರೆಸ್ ಹೋರಾಟ ನಡೆಸಿತೇ ಎಂಬ ಪ್ರಶ್ನೆ ಮೂಡುವುದು ಸಹಜ.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ಕ್ರಮವನ್ನು, ಸಣ್ಣ ಮನಸ್ಸಿನ ಧರ್ಮಾಂಧರ ಕೃತ್ಯ. ಇದು ಭಾರತದ ಸಂವಿಧಾನದ ಮೇಲಿನ ದಾಳಿ. ಇದನ್ನು ಬೆಂಬಲಿಸಿದರೆ ದೇಶದ ಬುಡವನ್ನೇ ಅಲ್ಲಾಡಿಸುವ ಕೃತ್ಯಕ್ಕೆ ಸಹಕಾರ ನೀಡಿದಂತೆ ಎಂದೆಲ್ಲಾ ಕಿಡಿ ಕಾರಿ ದೇಶಾದ್ಯಂತ ಈ ಕಾಯ್ದೆ ವಿರುದ್ಧ ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ಶಾಸಕರೊಬ್ಬರು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಿ ಒಂದು ತಿಂಗಳು ಕಳೆದ ಮೇಲೆ ಈ ರೀತಿ ಪ್ರತಿಕ್ರಯಿಸುತ್ತಾರೆ ಎಂದರೆ ಹಾಗಿದ್ದರೆ ಕಾಂಗ್ರೆಸ್ ನಡೆಸುತ್ತಿರುವ ಹೋರಾಟ ನಿಜವಾಗಿಯೂ ರಾಜಕೀಯ ಪ್ರೇರಿತ ಮತ್ತು ವೋಟ್ ಬ್ಯಾಂಕ್ ರಾಜಕಾರಣವೇ ಎಂಬ ಅನುಮಾನವೂ ಮೂಡುತ್ತದೆ. ಅಷ್ಟೇ ಅಲ್ಲ, ಈ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಸಮರ ಸಾರಿರುವ ಆಡಳಿತಾರೂಢ ಬಿಜೆಪಿಗೂ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ ಹುನ್ನಾರ ನಡೆಸುತ್ತಿದೆ ಎಂಬುದನ್ನು ಸಾಬೀತುಪಡಿಸಲು ಹೊಸ ಅಸ್ತ್ರ ಸಿಕ್ಕಿದಂತಾಗಿದೆ.
ಪೂರ್ವಸಿದ್ಧತೆ ಇಲ್ಲದೆ ಹೋರಾಟಕ್ಕಿಳಿದದ್ದು ಮುಳುವಾಗುತ್ತಿದೆಯೇ
ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಸಂಸತ್ತಿನಲ್ಲಿ ಅಂಗೀಕಾರ ಸಿಕ್ಕಿ ಅದು ಕಾಯ್ದೆಯಾಗಿ ಜಾರಿಗೊಳ್ಳುವ ಮುನ್ನವೇ ದೇಶಾದ್ಯಂತ ಅದರ ವಿರುದ್ಧ ಹೋರಾಟ ಆರಂಭವಾಗಿತ್ತು. ಮುಸ್ಲಿಂ ಧರ್ಮೀಯರು ಬಹುಸಂಖ್ಯೆಯಲ್ಲಿರುವ ನೆರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನಗಳ ಮುಸ್ಲಿಂಮೇತರ ನಿರಾಶ್ರಿತರಿಗೆ, ಅಲ್ಲಿ ಧಾರ್ಮಿಕ ಹಿಂಸೆ ಮತ್ತು ಕಿರುಕುಳಕ್ಕೆ ಒಳಗಾಗಿ ಜೀವನ ನಡೆಸಲು ಸಾಧ್ಯವಾಗದೆ ಭಾರತಕ್ಕೆ ಆಶ್ರಯ ಕಂಡುಕೊಂಡು ಬಂದಿರುವ ನಾಗರಿಕರಿಗೆ ಭಾರತದ ಪೌರತ್ವ ನೀಡುವ ಕಾಯ್ದೆ ಇದಾಗಿದ್ದು, ಜಾರಿಯಾದರೆ ನಮ್ಮ ಭಾಗದಲ್ಲಿ ಅಕ್ರಮ ವಲಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತದೆ ಎಂಬುದು ಅಲ್ಲಿನವರ ಆತಂಕವಾಗಿತ್ತು. ಆದರೆ, 2014ರ ಡಿಸೆಂಬರ್ 31ರ ಮುನ್ನ ಬಂದಿರುವ ಮತ್ತು ಈ ಹಿಂದಿನ 6 ವರ್ಷ ಭಾರತದಲ್ಲಿ ನೆಲೆಸಿದ್ದವರಿಗೆ ಮಾತ್ರ ಪೌರತ್ವ ಸಿಗುತ್ತದೆ ಎಂಬ ಕಾಯ್ದೆಯ ಅಂಶ ಸ್ಪಷ್ಟವಾದ ಮೇಲೆ ಮತ್ತು ಈಶಾನ್ಯ ಭಾಗದ ನಾಲ್ಕು ರಾಜ್ಯಗಳನ್ನು ಕಾಯ್ದೆಯಿಂದ ಹೊರಗಿಟ್ಟ ಮೇಲೆ ಆ ಭಾಗದಲ್ಲಿ ಪ್ರತಿಭಟನೆ ನಿಂತಿತ್ತು. ಆದರೆ, ದೇಶದ ಉಳಿದೆಡೆ ಪ್ರತಿಭಟನೆಗಳು ತೀವ್ರಗೊಂಡವು. ಅದರಲ್ಲೂ ಮುಸ್ಲಿಂ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಿಶೇಷವೆಂದರೆ ಇಂತಹ ಪ್ರತಿಭಟನೆಗಳು ತೀವ್ರ ಸ್ವರೂಪಕ್ಕೆ ತಿರುಗಿ ಹಿಂಸಾರೂಪ ಪಡೆದಿದ್ದು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ. ಇಂತಹ ಪ್ರತಿಭಟನೆಗಳನ್ನು ದಂಡ ಪ್ರಯೋಗದ ಮೂಲಕ ಅವುಗಳನ್ನು ಹತ್ತಿಕ್ಕಿದ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ಆಂದೋಲನಗಳು ಶುರುವಾದವು. ಕಾಯ್ದೆ ಪರ ಜನಜಾಗೃತಿ ಮೂಡಿಸುವ ಕೆಲಸಗಳು ತೀವ್ರಗೊಂಡವು.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರ ಪ್ರಮುಖ ವಾದ ಎಂದರೆ, ಇದು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುತ್ತದೆ. ಹೀಗಾಗಿ ಇದು ಭಾರತದ ಸಂವಿಧಾನದ ಜಾತ್ಯತೀತತೆಯ ಮೂಲ ಆಶಯ ಮತ್ತು ತತ್ವಗಳಿಗೆ ವಿರುದ್ಧವಾಗಿದೆ. ಕಾನೂನಿನ ಮುಂದೆ ಎಲ್ಲಾ ಧರ್ಮದವರೂ ಸಮಾನರು ಎಂಬ ಸಂವಿಧಾನದ 14ನೇ ವಿಧಿಯನ್ನು ಈ ಕಾಯ್ದೆ ಉಲ್ಲಂಘಿಸುತ್ತದೆ ಎಂಬುದು. ಈ ವಾದ ಒಪ್ಪತಕ್ಕಂತಹದ್ದೆ. ಆದರೆ, ಈ ಅಂಶವನ್ನೇ ಇಟ್ಟುಕೊಂಡು ಬಿಜೆಪಿ ಕಾಯ್ದೆ ಪರ ಜನಜಾಗೃತಿ ಮೂಡಿಸುತ್ತಿದೆ. ಭಾರತೀಯ ಸಂವಿಧಾನ ಇರುವುದು ಭಾರತೀಯ ಪೌರರಿಗೆ. ಹೊರ ರಾಷ್ಟ್ರಗಳಿಂದ ಅಕ್ರಮವಾಗಿ ಬಂದಿರುವವರಿಗೆ ಸಂವಿಧಾನ ಅನ್ವಯವಾಗುವುದಿಲ್ಲ. ಅಷ್ಟಕ್ಕೂ ಈ ಕಾಯ್ದೆಯಿಂದ ಭಾರತೀಯ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ವಿವರಿಸುವ ಕೆಲಸವನ್ನು ಬಿಜೆಪಿ ನಾಯಕರು, ಅದರಲ್ಲೂ ಸಂಘ ಪರಿವಾರ ಮೂಲದ ನಾಯಕರು ಮಾಡುತ್ತಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನೇ ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಆಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್ಸಿಗೆ ಪ್ರಸ್ತುತ ಆತಂಕ ತಂದಿರುವುದು ಬಿಜೆಪಿಯ ಇಂತಹ ವಾದಗಳು. ಹೋರಾಟ ಆರಂಭಿಸುವಾಗ ಅದಕ್ಕೆ ಪೂರಕವಾದ ಸಿದ್ಧತೆ ಮಾಡಿಕೊಳ್ಳದೆ, ಕಾಯ್ದೆ ವಿರೋಧಿಸಲು ಇರುವ ಕಾರಣಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳದೆ ಮತ್ತು ಕಾರ್ಯಕರ್ತರಿಗೂ ತಿಳಿಸದೆ ಮಾಡಿದ ತಪ್ಪಿಗೆ ಕಾಂಗ್ರೆಸ್ ಈಗ ಪಾಠ ಕಲಿಯುವಂತಾಗಿದೆ. ಬಿಜೆಪಿ ನಡೆಸುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಪರ ಜಾಗೃತಿಗೆ ಉತ್ತಮ ಸ್ಪಂದನೆ ಸಿಗುತ್ತಿದ್ದು, ವಿರೋಧಿ ಹೋರಾಟದ ಕಾವು ಇಳಿಮುಖವಾಗುತ್ತಿದೆ.
ಏಕೆಂದರೆ, ಕಾಯ್ದೆ ವಿರೋಧಿಸುತ್ತಿರುವ ಕಾಂಗ್ರೆಸ್ ನಾಯಕರು ಹೇಳುವುದು, ಈ ಕಾನೂನಿನಿಂದ ಮುಸ್ಲಿಮರು ದೇಶ ಬಿಡಬೇಕಾಗುತ್ತದೆ. ಕೇವಲ ಮುಸ್ಲಿಮರಿಗಷ್ಟೇ ಅಲ್ಲ, ಆದಿವಾಸಿಗಳು, ದಲಿತರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಸಾಕಷ್ಟು ಮಂದಿಗೆ ಪೌರತ್ವ ಸಿಗುವುದಿಲ್ಲ ಎಂದು. ಬಿಜೆಪಿಯ ಜನಜಾಗೃತಿ ಕಾರ್ಯಕ್ರಮಗಳ ಬಳಿಕ ಜನರೂ ಕಾಂಗ್ರೆಸ್ ನವರಲ್ಲಿ ವಿರೋಧಕ್ಕೆ ಸ್ಪಷ್ಟ ಕಾರಣಗಳೇನು ಎಂದು ಪ್ರಶ್ನಿಸುತ್ತಿದ್ದಾರೆ. ಈ ಕಾಯ್ದೆ ಭಾರತೀಯ ಮುಸ್ಲಿ ವಿರೋಧಿ ಹೇಗಾಗುತ್ತದೆ ಕಾಯ್ದೆ ಜಾರಿಯಾದರೆ ಭಾರತೀಯ ಮುಸ್ಲಿಮರಿಗೆ ಆಗುವ ತೊಂದರೆಗಳೇನು ಎಂಬ ಬಗ್ಗೆ ವಿವರ ಕೇಳುತ್ತಿದ್ದಾರೆ.
ಸಿಎಎ ಜತೆಗೆ ಎನ್ಆರ್ ಸಿ ಸೇರಿಸಿ ಹೋರಾಟಕ್ಕೆ ಮುಂದಾದ ಕಾಂಗ್ರೆಸ್
ಇದರ ಮಧ್ಯೆಯೂ ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟಗಲು ಮುಂದುವರಿಯುತ್ತಿದೆಯಾದರೂ ಅವುಗಳಲ್ಲಿ ಬಹುತೇಕವು ಕಾಂಗ್ರೆಸ್ ಮತ್ತು ಎಡಪಕ್ಷಗಳ ನೇತೃತ್ವದಲ್ಲಿ ನಡೆಯುವಂತಹದ್ದು. ಹಾಗಿದ್ದರೂ ಅವುಗಳಿಗೆ ಜನ ಸೇರುವುದು ಕಡಿಮೆಯಾಗುತ್ತಿದೆ. ಇದಕ್ಕೆ ಉದಾಹರಣೆ ಮಂಗಳೂರಿನಲ್ಲಿ ನಡೆದ ಪೌರತ್ವ ತಿದ್ದುಪಡಿ ಹೋರಾಟ. ಮುಸ್ಲಿಂ ಸಂಘಟನೆಗಳು ಈ ಹೋರಾಟಕ್ಕೆ ಕರೆ ನೀಡಿದ್ದರೂ ಇದರಲ್ಲಿ ಭಾಗವಹಿಸಿದ್ದ ಬಹುತೇಕರು ನೆರೆಯ ಕೇರಳದವರು. ಇಂತಹ ಕಾರಣಗಳಿಂದಾಗಿಯೇ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಇದೀಗ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜಾಗೃತಿ ಮೂಡಿಸುವ ಕೆಲಸಕ್ಕೆ ಇಳಿದಿದೆ.
ಆದರೆ, ಈ ತಿದ್ದುಪಡಿ ಕಾಯ್ದೆ ಭಾರತೀಯ ಮುಸ್ಲಿಮರ ವಿರೋಧಿ. ಭಾರತೀಯ ಮುಸ್ಲಿಮರ ಪೌರತ್ವಕ್ಕೆ ಹೇಗೆ ಧಕ್ಕೆಯಾಗುತ್ತದೆ ಎಂಬುದನ್ನು ಸಾಬೀತುಪಡಿಸಲು ಅದರಿಂದ ಸಾಧ್ಯವಾಗುತ್ತಿಲ್ಲ. ಇದಕ್ಕೆ ಪೂರಕ ಮಾಹಿತಿ ಪಕ್ಷದ ನಾಯಕರಲ್ಲೂ ಇಲ್ಲ. ಅದಕ್ಕಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಜತೆಗೆ ರಾಷ್ಟ್ರಿಯ ಪೌರತ್ವ ನೋಂದಣಿ ವಿಚಾರವನ್ನು ಸೇರಿಸಿ ಹೋರಾಟ ನಡೆಸಲು ತೀರ್ಮಾನಿಸಿದೆ. ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಯಾದರೆ ತಾವು ಭಾರತೀಯ ಪೌರರು ಎಂಬುದಕ್ಕೆ ಜನರೇ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಈ ದಾಖಲೆಗಳನ್ನು ಒದಗಿಸದಿದ್ದರೆ ಪೌರತ್ವ ರದ್ದಾಗುತ್ತದೆ. ಇದು ಎಲ್ಲಾ ಧರ್ಮದವರಿಗೂ ಅನ್ವಯವಾಗುತ್ತದೆ. ದೇಶದ ಪೌರರು ಅಲ್ಲ ಎಂದಾದರೆ ಅವರನ್ನು ಗಡೀಪಾರು ಮಾಡಲಾಗುತ್ತದೆ. ಮುಸ್ಲಿಮರ ಜತೆಗೆ ಆದಿವಾಸಿಗಳು, ದಲಿತರು ಕೂಡ ತಮ್ಮ ಕುಟುಂಬದ ದಾಖಲೆಗಳನ್ನು ಹೊಂದಿಲ್ಲ. ಹೀಗಾಗಿ ಆ ಸಮುದಾಯದವರೂ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ತೊಂದರೆಗೊಳಗಾಗುತ್ತಾರೆ ಎಂದು ಹೇಳುತ್ತಿದೆ. ಈ ಹೋರಾಟವನ್ನಾದರೂ ಸೂಕ್ತ ಸಿದ್ಧತೆಯೊಂದಿಗೆ ಮುಂದುವರಿಸಿದರೆ ಕಾಂಗ್ರೆಸ್ ಗುರಿ ಸಾಧಿಸಬಹುದು. ಅಲ್ಲದೇ ಇದ್ದಲ್ಲಿ ಮತ್ತೊಮ್ಮೆ ಮುಜುಗರಕ್ಕೆ ಒಳಗಾಗುವುದು ತಪ್ಪುವುದಿಲ್ಲ.