ರಾಜ್ಯದಲ್ಲಿ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಈ ಚುನಾವಣಾ ಸಮರಕ್ಕೆ ಮೂರು ಪಕ್ಷದ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಈಗ ಅಬ್ಬರದ ಪ್ರಚಾರವೊಂದೇ ಬಾಕಿ ಉಳಿದಿದೆ. ಈ ಮಧ್ಯೆ ಉಪಕದನದ ಅಖಾಡದಲ್ಲಿ ಜೆಡಿಎಸ್- ಕಾಂಗ್ರೆಸ್ ನಾಯಕರ ವಾಗ್ಯುದ್ಧ ಆರಂಭವಾಗಿದೆ. ಇತ್ತ ಎರಡು ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರಕ್ಕೆ ಕೇಸರಿ ಪಾಳಯ ಮಾಸ್ಟರ್ ಪ್ಲಾನ್ ಹೆಣೆದಿದೆ.
ಸಿಂದಗಿ, ಹಾನಗಲ್ ವಿಧಾನಸಭಾ ಉಪಚುನಾವಣೆಯ ಅಖಾಡದಲ್ಲಿ ರಾಜಕೀಯ ನಾಯಕರ ಜಟಾಪಟಿ ಶುರುವಾಗಿದೆ. ಪ್ರಚಾರದ ಕಣಕ್ಕೆ ಇಳಿಯುವ ಮುನ್ನವೇ ಪರಸ್ಪರ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ಸಿಂದಗಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ವಿಚಾರವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ವಾಕ್ಸಮರ ಜೋರಾಗಿದೆ. ಏಟು-ಎದುರೇಟಿನ ಮಾತುಗಳಿಗೆ ಸಾಕ್ಷಿಯಾಗಿದೆ.
ಇನ್ನು, ಎಂ.ಸಿ. ಮನಗೂಳಿ ನಿಧನಕ್ಕೂ ಮುನ್ನ ಕಾಂಗ್ರೆಸ್ ನಾಯಕರನ್ನ ಭೇಟಿಯಾಗಿದ್ದರು ಎಂದು ಡಿ.ಕೆ. ಶಿವಕುಮಾರ್ ಹೇಳಿಕೆಗೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಮನುಗುಳಿ ಅವರು ಸಾಯುವ 15 ದಿನ ಮುಂಚೆ ಡಿಕೆಶಿ, ಸಿದ್ದರಾಮಯ್ಯ ಮಡಿಲಿಗೆ ಅವರ ಮಕ್ಕಳನ್ನ ಹಾಕಿ ನೋಡಿಕೊಳ್ಳಿ ಎಂದಿದ್ದರಂತೆ ಎಂದು ವ್ಯಂಗ್ಯವಾಡಿದ್ರು. ಇತ್ತ ಜೆಡಿಎಸ್ ನಾಯಕರ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಟಾಂಗ್ ಕೊಟ್ಟಿದ್ದರು.
ಅತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಪರಸ್ಪರ ಕಿತ್ತಾಟದಲ್ಲಿ ತೊಡಗಿದ್ರೆ, ಇತ್ತ ಬಿಜೆಪಿ ಎರಡು ಕ್ಷೇತ್ರಗಳ ಗೆಲವಿಗಾಗಿ ಭಾರೀ ತಂತ್ರವನ್ನೇ ಹೆಣೆಯುತ್ತಿದೆ. ಮುಂದಿನ ಮೂರು ವಾರ ಹಾನಗಲ್ ಮತ್ತು ಸಿಂದಗಿಯಲ್ಲಿ ಪ್ರಚಾರಕ್ಕೆ ಮೂರು ತಂಡಗಳನ್ನ ರಚನೆ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಮೂರು ತಂಡಗಳು ಉಪಕದನದಲ್ಲಿ ಭರ್ಜರಿ ಕ್ಯಾಂಪೇನ್ ನಡೆಸಲಿವೆ.
ಹಾನಗಲ್, ಸಿಂದಗಿ ಎರಡೂ ಕ್ಷೇತ್ರಗಳಲ್ಲೂ ಅಬ್ಬರದ ಪ್ರಚಾರಕ್ಕೆ ಬಿಜೆಪಿ ತಯಾರಿ ನಡೆಸುತ್ತಿದೆ. ಅಕ್ಟೋಬರ್ 13 ರಿಂದ 28ರವರೆಗೂ ಸತತ ಪ್ರಚಾರಕ್ಕೆ ಸಿದ್ಧವಾಗುತ್ತಿದೆ. ಬಿಜೆಪಿಯಿಂದ ರೆಡಿಯಾಗಿರೋ ಮೂರು ತಂಡಗಳು ನಿರಂತರವಾಗಿ ಪ್ರಚಾರ ನಡೆಸಲಿವೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪರ ಮಾರ್ಗದರ್ಶನ, ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ರ ನೇತೃತ್ವದಲ್ಲಿ ಪ್ರಚಾರ ಕಾರ್ಯ ನಡೆಯಲಿದೆ.
ಸಿಎಂ ನೇತೃತ್ವದ ತಂಡದಲ್ಲಿ ಸಚಿವರಿಂದ ಪ್ರಚಾರ ಕಾರ್ಯ ನಡೆದರೆ, ಯಡಿಯೂರಪ್ಪರ ನೇತೃತ್ವದಲ್ಲಿ ಶಾಸಕರು ಪ್ರಚಾರ ಮಾಡಲಿದ್ದಾರೆ. ಇತ್ತ ಕಟೀಲ್ ನೇತೃತ್ವದಲ್ಲಿ ಪದಾಧಿಕಾರಿಗಳಿಗೆ ಪ್ರಚಾರದ ಹೊಣೆಯನ್ನ ವಹಿಸಲಾಗಿದೆ.

ಎಲ್ಲಾ ಜಾತಿಗಳ ವೋಟ್ ಸೆಳೆಯೋಕೆ ತಂತ್ರ:
ಗಾಣಿಗ (ಲಿಂಗಾಯತರ ಉಪ-ಪಂಗಡ) ಮತದಾರರನ್ನು ಆಕರ್ಷಿಸಲು ಪಕ್ಷವು ಸವದಿ ಅವರನ್ನು ನೇಮಿಸಿದೆ. ಇತರ ಸಮುದಾಯಗಳಿಗೆ ಹೋಲಿಸಿದರೆ ಲಿಂಗಾಯತ ಸಮುದಾಯವು ಮತದಾನದಲ್ಲಿ ಸಿಂಹಪಾಲು ಹೊಂದಿದೆ. ಎಸ್‌ಸಿ ಮತಗಳನ್ನು ಗಳಿಸುವ ಜವಾಬ್ದಾರಿಯನ್ನು ಕಾರಜೋಳ್ ಅವರಿಗೆ ನೀಡಲಾಗಿದೆ.
ಸಿಸಿ ಪಾಟೀಲ್ ಮತ್ತು ಶಶಿಕಲಾ ಜೊಲ್ಲೆ ಲಿಂಗಾಯತ ಮತಗಳನ್ನು, ಈಶ್ವರಪ್ಪ ಮತ್ತು ಬೈರತಿ ಬಸವರಾಜ್ ಅವರನ್ನು ಕುರುಬರ ಮತಗಳಿಗಾಗಿ ಸಜ್ಜುಗೊಳಿಸಿದೆ. ಇದರ ಹೊರತಾಗಿ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಯಡಿಯೂರಪ್ಪ ಪಕ್ಷದ ಸ್ಟಾರ್ ಪ್ರಚಾರಕರಾಗುವ ಸಾಧ್ಯತೆಯಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಸಿಂದಗಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಲಿಂಗಾಯತ ಅಭ್ಯರ್ಥಿಯನ್ನು (ಅಶೋಕ್ ಮನಗೂಳಿ) ಕಣಕ್ಕಿಳಿಸಿದೆ. ಈ ಹಿಂದೆ ಅವರು ಕುರುಬ ಅಥವಾ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಇದರಿಂದ ಖಂಡಿತವಾಗಿಯೂ ಲಿಂಗಾಯತ ಮತಗಳನ್ನು ವಿಭಜಿಸುತ್ತದೆ.