ತನ್ನ Measure for Measure ನಾಟಕದಲ್ಲಿ ಶೇಕ್ಸ್‌ಪಿಯರ್ ಏಂಜೆಲೋ ಮೂಲಕ ಕೇಳುವ ಸುಸಂಗತವಾದ “ ಪ್ರಲೋಭಕರು (Tempter) ಅಥವಾ ಪ್ರಲೋಭಿತರು (Tempted) ಇಬ್ಬರ ಪೈಕಿ ಯಾರು ಹೆಚ್ಚು ಅಪರಾಧ ಮಾಡುತ್ತಾರೆ ” ಎಂಬ ಪ್ರಶ್ನೆ ಇಂದಿಗೂ ಪ್ರಸ್ತುತ ಎನಿಸುತ್ತದೆ. ರಾಜದ್ರೋಹ ಕಾಯ್ದೆಯನ್ನು ಕುರಿತ ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್ , ಹಿಂಸೆಯನ್ನು ಪ್ರಚೋದಿಸುವವರೇ ಅಪರಾಧಿಯಾಗುತ್ತಾರೆ ಎಂದು ಸ್ಪಷ್ಟವಾಗಿ ಹೇಳಿದೆ. ಆದುದರಿಂದ ಪ್ರಲೋಭಕರು ಹೆಚ್ಚು ಅಪರಾಧ ಮಾಡುವವರಾಗುತ್ತಾರೆ. ಇಂದಿನ ಕಾನೂನು ವ್ಯಾಖ್ಯಾನದಲ್ಲಿ ಪ್ರಚೋದನೆ ಇದೆಯೋ ಇಲ್ಲವೋ ಎನ್ನುವುದು ಅಪ್ರಸ್ತುತವಾಗಿ, ಅಧಿಕಾರದಲ್ಲಿರುವವರಿಗೆ ಒಬ್ಬರ ಅಭಿಪ್ರಾಯ ಅಥವಾ ಟ್ವೀಟ್ ಸರಿಗಾಣದಿದ್ದರೆ ರಾಜದ್ರೋಹದ ಆರೋಪ ಹೊರಿಸುವುದು ಸಾಮಾನ್ಯವಾಗಿ ಹೋಗಿದೆ.
ಆದರೆ ರಾಷ್ಟ್ರೀಯ ಪಕ್ಷದ ಪ್ರಭಾವಶಾಲಿ ವಕ್ತಾರೆಯೊಬ್ಬರು ಪ್ರವಾದಿ ಮೊಹಮದ್ ಕುರಿತು ಅವಮಾನಕರ ಹೇಳಿಕೆಯನ್ನು ನೀಡಿದಾಗ ಕಾನೂನು ಪ್ರಕ್ರಿಯೆ ಸಂಕೀರ್ಣವಾಗಿಬಿಡುತ್ತದೆ. ಹೊಸ ಕಾನೂನು ಪ್ರಲೋಭಕರ ಪ್ರಚೋದನೆಯನ್ನು ಬದಿಗೊತ್ತಿ ಪ್ರಲೋಭಿತರನ್ನು ಅಪರಾಧಿಯಾಗಿ ಗುರುತಿಸುತ್ತದೆ. ಈ ತಪ್ಪಿತಸ್ಥರನ್ನು ವಿಚಾರಣೆಗೊಳಪಡಿಸುವವರು ನ್ಯಾಯಾಧೀಶರೂ ಆಗಿರುತ್ತಾರೆ, ನ್ಯಾಯದರ್ಶಿಯೂ ಆಗಿರುತ್ತಾರೆ, ನ್ಯಾಯ ನೆರವೇರಕರೂ ಆಗಿರುತ್ತಾರೆ. ಸಹಜವಾಗಿಯೇ ಡಬಲ್ ಇಂಜಿನ್ ಶಿಕ್ಷೆ ವಿಧಿಸಲಾಗುತ್ತದೆ. ತತ್ಪರಿಣಾಮ ನಿಷ್ಪ್ರಮಾಣಿತವಾಗಿ ಪ್ರತೀಕಾರದ ಕ್ರಮವಾಗಿ ಅವರ ವಸತಿಯನ್ನು ಧ್ವಂಸ ಮಾಡಲಾಗುತ್ತದೆ. ಇದನ್ನೇ ಈಗ ಬುಲ್ಡೋಜರ್ ನ್ಯಾಯ ಎಂದು ಕರೆಯಲಾಗುತ್ತಿದೆ. ನಾನು ಇದನ್ನು ಬುಲ್ಡೋಜರ್ ಅನ್ಯಾಯ ಎಂದೇ ಭಾವಿಸುತ್ತೇನೆ.
ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಭಾರತೀಯ ದಂಡ ಸಂಹಿತೆಯಲ್ಲಿ ಸಾಕಷ್ಟು ನಿಯಮಗಳಿವೆ ಆದರೆ ಪ್ರಲೋಭಕರಾದವರು ಪ್ರಭಾವಶಾಲಿಯಾಗಿದ್ದರೆ ಅಥವಾ ಉನ್ನತ ಮಟ್ಟದ ಸಂಪರ್ಕ ಹೊಂದಿರುವವರಾದರೆ ಕಾನೂನು ಅನ್ವಯವಾಗುವುದಿಲ್ಲ. ಹಾಗಾಗಿಯೇ ಗೋಲಿ ಮಾರೋ ಎಂಬ ಕರೆಯನ್ನೂ ಅಲಕ್ಷಿಸಲಾಗುತ್ತದೆ. ಅವಿವೇಕದ ಗುಂಪು ಥಳಿತ ಪ್ರಕರಣಗಳಲ್ಲಿ ಆರೋಪಿಗಳಿಗೆ ಹಾರ ತುರಾಯಿಗಳ ಸನ್ಮಾನ ಲಭ್ಯವಾಗುತ್ತದೆ. ನರಮೇಧಕ್ಕೆ ಕರೆ ನೀಡುವುದೂ ಸಹ ಕೇವಲ ಒಂದು ಅನಿಷ್ಟ ಎನಿಸಿಕೊಂಡುಬಿಡುತ್ತದೆ. ಈ ವಾತಾವರಣದಲ್ಲಿ ಪ್ರವಾದಿ ಮೊಹಮದ್ ಕುರಿತ ಅವಹೇಳನಕಾರಿ ಹೇಳಿಕೆಯೊಂದಕ್ಕೆ ಕೇವಲ ಮೃದು ಶಿಕ್ಷೆ ನೀಡುವುದು ಅಚ್ಚರಿ ಮೂಡಿಸುವುದೇ ?
ಇದೇ ಸೂಕ್ತ ಶಿಕ್ಷೆ ಎಂದೇ ಭಾವಿಸುವುದಾದರೆ, ದೇಶಾದ್ಯಂತ ಸಾವಿರಾರು ಜನರು ಪ್ರತಿರೋಧ ವ್ಯಕ್ತಪಡಿಸುವುದು ತಮ್ಮ ಮೂಲಭೂತ ಹಕ್ಕು ಎಂದು ಭಾವಿಸುವುದು ಸಹಜವೇ ಆಗಿರುತ್ತದೆ. ಅತಿ ಕ್ಷುಲ್ಲಕ ಎನ್ನಬಹುದಾದ ಅಪರಾಧಗಳನ್ನು ಮಾಡಿದವರೂ ಸಹ ಅವರ ವಿರುದ್ಧ ರಾಜದ್ರೋಹದ ಆರೋಪ ಹೊರಿಸುವುದನ್ನು ಎದುರಿಸಬೇಕಾಗಿದೆ. ಇನ್ನೂ ಕೆಲವು ಅದೃಷ್ಟಹೀನರು ಭಯೋತ್ಪಾದನಾ ನಿಗ್ರಹ ಕಾನೂನುಗಳನ್ನು, ಯುಎಪಿಎ ಮುಂತಾದ ಕರಾಳ ಶಾಸನಗಳನ್ನು ಎದುರಿಸಬೇಕಾಗುತ್ತದೆ. ದುರದೃಷ್ಟವಂತರು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್‌ಎ) ಅಥವಾ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಶಿಕ್ಷೆಗೊಳಗಾಗಿ ಜೈಲು ಸೇರಬೇಕಾಗುತ್ತದೆ.
ಯಾವುದೇ ಒಂದು ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರದಲ್ಲಿ ತೊಡಗುವ ಸಾಂವಿಧಾನಿಕ ಹಕ್ಕು ಇದೆಯೇ ? ಖಂಡಿತವಾಗಿಯೂ ಇರುವುದಿಲ್ಲ. ಭಾರತದ ಸಂವಿಧಾನವು ಕೇವಲ ಶಸ್ತ್ರರಹಿತ ಶಾಂತಿಯುತ ಪ್ರತಿಭಟನೆಗೆ ಮಾತ್ರವೇ ಅವಕಾಶ ನೀಡುತ್ತದೆ. ಕಲ್ಲುಗಳನ್ನು, ಇಟ್ಟಿಗೆಗಳನ್ನು ಶಸ್ತ್ರಾಸ್ತ್ರಗಳಂತೆ ಬಳಸುವುದನ್ನೂ ಸಹ ಸಮ್ಮತಿಸುವುದಿಲ್ಲ. ಕಾರಣ ಏನೇ ಇರಲಿ, ಯಾವುದೇ ಪರಿಸ್ಥಿತಿಯಲ್ಲಾದರೂ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸೆಯನ್ನು ಸಮರ್ಥಿಸಲಾಗುವುದಿಲ್ಲ. ಪ್ರಲೋಭಕರಿಗೆ ನೀಡುವ ಅಲ್ಪ ಪ್ರಮಾಣದ ಶಿಕ್ಷೆ ಪ್ರಲೋಭಿತರನ್ನು ರಕ್ಷಿಸಬೇಕೆಂದೇನಿಲ್ಲ.
ಆದರೆ ಸಾಮಾನ್ಯವಾಗಿ ಹೇಳುವಂತೆ ಹಿಂಸೆಯಿಂದ ಹಿಂಸೆಯೇ ಸೃಷ್ಟಿಯಾಗುತ್ತದೆ. ಹಾಗಾಗಿ ಪ್ರಭುತ್ವವು ಹಿಂಸಾತ್ಮಕ ಪ್ರತಿಭಟನಕಾರರ ಮೇಲೆ ಕಠೋರವಾಗಿಯೇ ಪ್ರಹಾರ ನಡೆಸುತ್ತದೆ. ಸರ್ಕಾರಗಳು ತಮ್ಮ ಆಡಳಿತ ಯಂತ್ರವನ್ನು ಬಳಸಿಕೊಂಡು ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಭಾಗವಹಿಸಿದವರ ಮನೆಗಳನ್ನು ಧ್ವಂಸಗೊಳಿಸಲು ಬುಲ್ಡೋಜರ್ ಬಳಸುತ್ತವೆ. ಈ ನಿಟ್ಟಿನಲ್ಲಿ ಆಡಳಿತ ಯಂತ್ರವು ಕಾನೂನಾತ್ಮಕವಾಗಿಯೇ ಪ್ರತಿಭಟನಕಾರರನ್ನು ಗುರುತಿಸಿ ಅವರಿಗೆ ಪಾಠ ಕಲಿಸಲು ನಿರ್ಧರಿಸುತ್ತದೆ. 1984ರಲ್ಲಿ ಇಂದಿರಾಗಾಂಧಿ ಹತ್ಯೆಯ ನಂತರದಲ್ಲಿ ಇದೇ ತಂತ್ರವನ್ನೇ ಬಳಸಿದ್ದುದನ್ನು ಇಲ್ಲಿ ಸ್ಮರಿಸಬಹುದು. ಆಗ ಅದನ್ನು ನರಮೇಧ ಎಂದು ಕರೆಯಲಾಗಿತ್ತು, ಈಗ “ ಪಾಠ ಕಲಿಸುವುದು ” ಎನ್ನಲಾಗುತ್ತದೆ.
ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವವರಲ್ಲಿ ಕೆಲವರಿಗೆ ಸ್ವಂತ ಮನೆ ಅಥವಾ ಮಳಿಗೆ ಇರುತ್ತದೆ. ಅನೇಕರಿಗೆ ಇರುವುದಿಲ್ಲ. ಉತ್ತರಪ್ರದೇಶದ ಪ್ರಯಾಗರಾಜ್ ಜಿಲ್ಲೆಯ ಜಾವೆದ್ ಮೊಹಮ್ಮದ್ ತಮ್ಮ ಪತ್ನಿಯ ಹೆಸರಿನಲ್ಲಿದ್ದ ಮನೆಯನ್ನು ಹೊಂದಿದ್ದರು. ಹಾಗಾಗಿ ಪಾಠ ಕಲಿಸುವ ನಿಟ್ಟಿನಲ್ಲಿ ಮೊದಲು ಆತನನ್ನು ಬಂಧಿಸಲಾಯಿತು ನಂತರ ಆಕೆಯ ಮನೆಯನ್ನು ಸಂವಿಧಾನವನ್ನು ಉಲ್ಲಂಘಿಸಿಯೇ ಧ್ವಂಸ ಮಾಡಲಾಯಿತು. ವಿಪರ್ಯಾಸವೆಂದರೆ ಉತ್ತರಪ್ರದೇಶದ ಎರಡು ಪ್ರಕರಣಗಳಲ್ಲೇ ಸುಪ್ರೀಂಕೋರ್ಟ್ ಸೂರು ಹೊಂದಿರುವುದನ್ನು ಮೂಲಭೂತ ಹಕ್ಕು ಎಂದು ಹೇಳಿದೆ. ಉತ್ತರಪ್ರದೇಶ ಆವಾಸ್ ವಿಕಾಸ್ ಪರಿಷತ್ ಮತ್ತು ಫ್ರೆಂಡ್ಸ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಲಿಮಿಟೆಡ್ (1996) ಪ್ರಕರಣದಲ್ಲಿ ಸುಪ್ರೀಂಕೋರ್ಟ್ “ ಸೂರು ಹೊಂದುವ ಹಕ್ಕು ಮೂಲಭೂತ ಹಕ್ಕು ಆಗಿರುತ್ತದೆ, ಇದು ಸಂವಿಧಾನ ಪರಿಚ್ಚೇದ 19(1)ಇ ಅನ್ವಯ ನೀಡಲಾಗಿರುವ ವಸತಿಯ ಹಕ್ಕನ್ನು ಎತ್ತಿಹಿಡಿಯುತ್ತದೆ ಮತ್ತು ಸಂವಿಧಾನದ ಪರಿಚ್ಚೇದ 21ರ ಅನ್ವಯ ಬದುಕುವ ಹಕ್ಕನ್ನು ಎತ್ತಿಹಿಡಿಯುತ್ತದೆ ” ಎಂದು ಹೇಳಿದೆ.
ಮತ್ತೊಂದು, ಚಮೇಲಿ ಸಿಂಗ್ ಮತ್ತು ಉತ್ತರಪ್ರದೇಶ ಸರ್ಕಾರ (1996) ಪ್ರಕರಣದಲ್ಲಿ ಸುಪ್ರೀಂಕೋರ್ಟ್ “ ಬದುಕುವ ಹಕ್ಕು ಪ್ರತಿಪಾದಿಸುವ ಸಲುವಾಗಿ ಸೂರಿನ ಹಕ್ಕನ್ನು ಅತ್ಯವಶ್ಯವಾಗಿ ಬಳಸುವುದು ಮೂಲಭೂತ ಹಕ್ಕನ್ನು ಖಾತರಿಪಡಿಸಿದಂತೆಯೇ ಆಗುತ್ತದೆ ” ಎಂದು ಹೇಳಿದೆ. ಯಾವುದೇ ಸ್ವಂತ ಮನೆಯನ್ನು ಹೊಂದಿರುವ ಯಾವುದೇ ಸಂಬಂಧಿಕರನ್ನು ಹೊಂದಿರದ ಆರೋಪಿಗಳು ಅಮಾಯಕರಂತೆ ಪೊಲೀಸ್ ಠಾಣೆಯಲ್ಲೇ ಲಾಠಿ ಏಟುಗಳನ್ನು ತಿನ್ನಬೇಕಾಗುತ್ತದೆ. ಉತ್ತರಪ್ರದೇಶದ ಶಹರಾನ್‌ಪುರದ ಠಾಣೆಯೊಂದರಲ್ಲಿನ ಈ ದೃಶ್ಯ ಈಗಾಗಲೇ ವೈರಲ್ ಆಗಿದೆ. ಈ ಸಾಂವಿಧಾನಿಕ ಉಲ್ಲಂಘನೆಯನ್ನು ಸರ್ಕಾರ ಹೇಗೆ ಸಮರ್ಥಿಸಿಕೊಳ್ಳುತ್ತದೆ ? ಜಾವೆದ್ ಅವರ ಮನೆ ಅಕ್ರಮವಾಗಿ ನಿರ್ಮಿಸಲಾಗಿದ್ದು ಅದನ್ನು ಧ್ವಂಸಗೊಳಿಸುವುದಾಗಿ ನೋಟಿಸ್ ಜಾರಿ ಮಾಡಲಾಗಿತ್ತು (ಅಥವಾ ಮನೆಯ ಗೋಡೆಯ ಮೇಲೆ ಅಂಟಿಸಲಾಗಿತ್ತು), ಕಾನೂನು ಪ್ರಕಾರ ವಿಚಾರಣೆಯ ಅವಕಾಶವನ್ನು ಅವರು ಬಳಸಿಕೊಳ್ಳಲಿಲ್ಲ ಎಂದು ಸರ್ಕಾರ ಸಮಜಾಯಿಷಿ ನೀಡಿದೆ. ಈ ಮಾತುಗಳನ್ನು ನಂಬುವುದು ಹಲವು ಕಾರಣಗಳಿಗಾಗಿ ಕಷ್ಟವಾಗುತ್ತದೆ.
ಮೊದಲನೆಯದಾಗಿ, ಈ ಅಕ್ರಮ ಕಟ್ಟಡಕ್ಕಾಗಿಯೇ ಸರ್ಕಾರವು ಜಾವೆದ್ ಅವರಿಂದ ತೆರಿಗೆ ಸಂಗ್ರಹ ಮಾಡಿದೆ. ಹಾಗಾದರೆ ಕಟ್ಟಡ ನಿರ್ಮಾಣದ ಅಕ್ರಮವನ್ನು ಸಕ್ರಮಗೊಳಿಸಲಾಗಿದೆಯೇ ? ಇಲ್ಲವಾದಲ್ಲಿ, ಈ ಅಕ್ರಮವನ್ನು ಮುಂದುವರೆಸುವಲ್ಲಿ ಮತ್ತು ಅದರಿಂದ ಆದಾಯವನ್ನೂ ಗಳಿಸುವಲ್ಲಿ ಸರ್ಕಾರದ ಪಾತ್ರ ಇದೆಯೇ ? ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆಯೇ ?
ಎರಡನೆಯದಾಗಿ, ಯಾವುದೇ ರೀತಿಯ ತುರ್ತು, ಜರೂರು ಇಲ್ಲದಿರುವ ಸಂದರ್ಭಗಳಲ್ಲಿ ಸರ್ಕಾರ ಕೈಗೊಳ್ಳುವ ಯಾವುದೇ ಕ್ರಮವು ನ್ಯಾಯಯುತವಾಗಿ, ನ್ಯಾಯಪರವಾಗಿ, ಸೂಕ್ತ ನಿರ್ದೇಶನಗಳೊಂದಿಗೆ ಜಾರಿಯಾಗಬೇಕು ಎನ್ನುವುದು ಸ್ವೀಕೃತವಾಗಿರುವ ನಿಯಮ. ಹಾಗಾಗಿ ಜಾವೆದ್ ಅವರಿಗೆ ವಿಚಾರಣೆಗೆ ಹಾಜರಾಗಲು ಮತ್ತೊಂದು ಅವಕಾಶ ನೀಡಬೇಕಿತ್ತು. ಅವರು ಊರಿನಲ್ಲಿ ಇಲ್ಲದೆ ಹೋಗಿರಬಹುದು ಅಥವಾ ಅಸೌಖ್ಯವಾಗಿರಬಹುದು. ಜಾವೆದ್ ಅವರಿಗೆ ಮತ್ತೊಂದು ಅವಕಾಶ ಏಕೆ ನೀಡಲಿಲ್ಲ ?
ಮೂರನೆಯದಾಗಿ, ಜಾವೆದ್ ಅವರ ಮನೆಯನ್ನು ಸರ್ಕಾರಿ ರಜಾದಿನವಾದ ಭಾನುವಾರದಂದು ಧ್ವಂಸ ಮಾಡಲಾಗಿದೆ. ಎನ್‌ಎಸ್‌ಎ ಪ್ರಕರಣಗಳಲ್ಲೂ ಸಹ, ನಿರೋಧಕ ಬಂಧನದ ವಿರುದ್ಧ ಸಲ್ಲಿಸಲಾಗುವ ಅರ್ಜಿಯನ್ನು ಸುಪ್ರೀಂಕೋರ್ಟ್ ಭಾನುವಾರದಂದು ಪುರಸ್ಕರಿಸುವುದಿಲ್ಲ. ಒಂದು ವೇಳೆ ಸರ್ಕಾರವು ಭಾನುವಾರದಂದೂ ಕಾರ್ಯನಿರ್ವಹಿಸುತ್ತದೆ ಎಂದಾದರೂ, ಸರ್ಕಾರ ವ್ಯಾವಹಾರಿಕವಾಗಿದ್ದಲ್ಲಿ, ಸರ್ಕಾರಿ ರಜೆಯ ಸೌಲಭ್ಯವನ್ನು ಜಾವೆದ್ ಅವರಿಗೆ ಏಕೆ ಒದಗಿಸಬಾರದಿತ್ತು ?
ನಾಲ್ಕನೆಯದಾಗಿ, ಮನೆಯನ್ನು ಧ್ವಂಸಗೊಳಿಸುವ ಆದೇಶವನ್ನು ಮನೆಯ ಗೋಡೆಯ ಮೇಲೆ ಶನಿವಾರ ರಾತ್ರಿ ಅಂಟಿಸಲಾಗುತ್ತದೆ. ಭಾನುವಾರ ಮುಂಜಾನೆಯೇ ಧ್ವಂಸ ಮಾಡಲಾಗಿದೆ. ಅಂದರೆ ಜಾವೆದ್‌ಗಾಗಲೀ, ಅವರ ಪತ್ನಿಗಾಗಲೀ ಧ್ವಂಸ ಕಾರ್ಯಾಚರಣೆಯ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅಥವಾ ಮೇಲ್ಮನವಿ ಸಲ್ಲಿಸಲು ಸಮಯಾವಕಾಶವನ್ನೂ ನೀಡಲಾಗಿಲ್ಲ. ಇದು ನ್ಯಾಯಯುತವೇ ? ನ್ಯಾಯ ಸಮ್ಮತವೇ ?
ಐದನೆಯದಾಗಿ ಉತ್ತರ ಪ್ರದೇಶದ ಪೊಲೀಸರು ಇಬ್ಬರು ದೆಹಲಿ ನಿವಾಸಿಗಳನ್ನು ಕಾನೂನುಬಾಹಿರವಾಗಿ ಬಂಧಿಸಿ ಕರೆದೊಯ್ದು ಎರಡು ತಿಂಗಳ ಕಾಲ ಯಾವುದೇ ಆರೋಪಗಳನ್ನೂ ಹೊರಿಸದೆ ನ್ಯಾಯಾಂಗ ಬಂಧನದಲ್ಲಿರುವಂತೆ ಮಾಡಿರುವ ಒಂದು ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಉತ್ತರಪ್ರದೇಶದ ಪೊಲೀಸ್ ಅಧಿಕಾರಿಗಳು ನ್ಯಾಯಾಲಯದ ಮುಂದೆ ಸುಳ್ಳು ಹೇಳಿಕೆಗಳನ್ನು ದಾಖಲಿಸಿದ್ದರೆಂದೂ, ವಿಶೇಷ ತನಿಖಾ ತಂಡದ ವಿಚಾರಣೆಯ ಸಂದರ್ಭದಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದರೆಂದೂ ಉತ್ತರಪ್ರದೇಶದ ಅಡ್ವೋಕೇಟ್ ಜನರಲ್ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದರು. ದೆಹಲಿ ಹೈಕೋರ್ಟ್ ಈ ಪ್ರಕರಣವನ್ನು ವಜಾಗೊಳಿಸಿತ್ತು (ಟೀನು ಮತ್ತು ಎನ್‌ಸಿಟಿ ದೆಹಲಿ ಸರ್ಕಾರ) 2022. ನಿಸ್ಸಂದೇಹವಾಗಿಯೂ ಉತ್ತರ ಪ್ರದೇಶದ ಪೊಲೀಸರು ಇಂತಹ ಪ್ರಕರಣಗಳಿಗೆ ಸಾಕ್ಷಿಯಾಗಿದ್ದಾರೆ. ಜಾವೆದ್ ಅವರ ಪ್ರಕರಣವೂ ಸಹ ಇದೇ ರೀತಿ ಕಲ್ಪಿತವಾಗಿರುವ ಸಾಧ್ಯತೆಗಳಿವೆ. ವಿಷಾದದಿಂದ ಹೇಳಬಹುದಾದುದೇನೆಂದರೆ, ಧ್ವಂಸ ಕಾರ್ಯಾಚರಣೆ ಪ್ರತೀಕಾರದ ಕ್ರಮವೇ ಆಗಿದ್ದು ಇದು ಕಾನೂನಿನ ವಾಸ್ತವಿಕ ದುರುದ್ದೇಶವೇ ಆಗಿದೆ.
ಇದಕ್ಕೆ ಪರಿಹಾರವೇನು ? ಪ್ರಪ್ರಥಮವಾಗಿ ಸರ್ಕಾರವು ಜಾವೇದ್‌ಗೆ ತನ್ನ ಮನೆಯನ್ನು ಪುನರ್ ನಿರ್ಮಿಸಲು ನೆರವು ನೀಡಬೇಕು. ಎರಡನೆಯದಾಗಿ ಅವರ ಮತ್ತು ಕುಟುಂಬದವರ ಮಾನಸಿಕ ಕ್ಷೋಭೆಗೆ ಸೂಕ್ತ ಪರಿಹಾರ ನೀಡಬೇಕು. ಮೂರನೆಯದಾಗಿ ಈ ಘಟನೆಗೆ ಕಾರಣವಾದ ಎಲ್ಲ ಹಂತದ ಅಧಿಕಾರಿಗಳನ್ನು ಉತ್ತರದಾಯಿಯನ್ನಾಗಿ (Accountable) ಮಾಡಿ ಅವರಿಗೆ ತಕ್ಕ ಪಾಠ ಕಲಿಸುವಂತಹ ಶಿಕ್ಷೆ ನೀಡಬೇಕು. ಭಾರತದಲ್ಲಿ ಉತ್ತರದಾಯಿತ್ವದ (Accoountability) ನ್ಯಾಯವ್ಯವಸ್ಥೆ ಬೇರೂರಬೇಕಿದೆ. ದಂಡಾಭಯ ಸಂಸ್ಕೃತಿಯನ್ನು ಕೊನೆಗಾಣಿಸಬೇಕು. ನಾಲ್ಕನೆಯದಾಗಿ, ಯಾವುದೇ ಕೆಟ್ಟದ್ದನ್ನು ನೋಡದ, ಕೆಟ್ಟದ್ದನ್ನು ಆಲಿಸದ, ಒಳ್ಳೆಯ ಕೆಲಸವನ್ನೂ ಮಾಡದ ಉತ್ತರಪ್ರದೇಶದ ಮಾನವ ಹಕ್ಕುಗಳ ಆಯೋಗವನ್ನು ರದ್ದುಪಡಿಸಬೇಕು.
ಅಂತಿಮವಾಗಿ : ಪ್ರಲೋಭಕರು ತಮ್ಮ ಧ್ಯೇಯ ಸಾಧಿಸಲು ಸಾಧ್ಯವಾಗಿದೆ. ಪ್ರಲೋಭಿತರು ತಮ್ಮ ಅವಸ್ಥೆಗೆ ತಾವೇ ವಿಷಾದಿಸಬೇಕಿದೆ.
ಮೂಲ : ಮದನ್ ಬಿ ಲೋಕುರ್
Bulldozer injustice to teach a lesson
ದ ಹಿಂದೂ 17-06-22
ಅನುವಾದ : ನಾ ದಿವಾಕರ