ಬೆಂಗಳೂರು : ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಜಲಮಂಡಳಿ ಚೀಫ್ ಅಕೌಟೆಂಟ್ ಪ್ರಶಾಂತ್ ಮಾಡಾಳು ಕರ್ನಾಟಕ ಸಾಬೂನು ಮಾರ್ಜಕ ಕಾರ್ಖಾನೆ ನಿಯಮಿತಕ್ಕೆ ಕೆಮಿಕಲ್ ಪೂರೈಸುವ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಪ್ರಶಾಂತ್ ಮಾಡಾಳು ಲೋಕಾಯುಕ್ತ ಬಲೆಗೆ ಬಿದ್ದಿದ್ದರು.
ಈ ವಿಚಾರವಾಗಿ ಇಂದು ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ , ಈ ಪ್ರಕರಣದ ಸಂಬಂಧ ಸಮಗ್ರ ತನಿಖೆ ನಡೆಯಲಿದೆ. ಭ್ರಷ್ಟಾಚಾರವನ್ನು ನಿಯಂತ್ರಣ ಮಾಡಲೆಂದೇ ಲೋಕಾಯುಕ್ತಕ್ಕೆ ಮರುಜೀವ ನೀಡಲಾಗಿದೆ. ಯಾರನ್ನೂ ರಕ್ಷಿಸುವ ಮಾತೇ ಇಲ್ಲ. ಈ ಪ್ರಕರಣದಲ್ಲಿ ಯಾರೂ ಮಧ್ಯಪ್ರವೇಶ ಮಾಡುತ್ತಿಲ್ಲ. ಕಾನೂನು ಚೌಕಟ್ಟಿನ ಅಡಿಯಲ್ಲಿ ಸಮಗ್ರ ತನಿಖೆ ನಡೆಯಲಿದೆ. ಸಿಎಂ ಬೊಮ್ಮಾಯಿಯೇ ಈ ಪ್ರಕರಣದ ಸಮಗ್ರ ತನಿಖೆಗೆ ಸೂಚನೆ ನೀಡಿದ ಮೇಲೆ ನಾವು ಅದರ ಬಗ್ಗೆ ಮಾತನಾಡುವುದೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಕೆಎಸ್ಡಿಎಲ್ ಟೆಂಡರ್ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಎಸಗಲು ಹೊರಟಿದ್ದ ಪ್ರಶಾಂತ್ ಮಾಡಾಳ್ ಸೇರಿದಂತೆ ಐವರಿಗೆ ಬೆಂಗಳೂರಿನ ಲೋಕಾಯುಕ್ತ ನ್ಯಾಯಾಲಯ ಶುಕ್ರವಾರ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಕೆಎಸ್ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪ್ರಶಾಂತ್ ಮಾಡಾಳು ನಿವಾಸದಲ್ಲಿ ಸಿಕ್ಕಿರುವ 7 ಕೋಟಿ ರೂಪಾಯಿ ನಗದು ಸಂಬಂಧ ಇದೀಗ ತನಿಖೆ ನಡೆಯುತ್ತಿದೆ.