ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಹಳಿಗೆ ಮರಳುವುದಕ್ಕೆ ಹರಸಾಹಸ ಮಾಡ್ತಿದೆ ಅದರ ನಡುವೆ ನಾಯಕರ ನಡುವೆ ಬಿಕ್ಕಟ್ಟುಗಳು ಸೃಷ್ಟಿಯಾಗಿವೆ. ಸದಾನಂದಗೌಡರ ರಾಜಕೀಯ ನಿವೃತ್ತಿ ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿಯ ಆಪ್ತ ಮೂಲಗಳ ಪ್ರಕಾರ ಡಿ.ವಿ ಸದಾನಂದಗೌಡರಿಗೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳಲು ಬಿಜೆಪಿ ಹೈಕಮಾಂಡ್ ನಾಯಕರು ಸೂಚಿಸಿದ್ದರು ಎಂದು ಪ್ರತಿಧ್ವನಿ ಈ ಹಿಂದೆ ವರದಿ ಮಾಡಿತ್ತು. ಆ ಬಳಿಕ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕೂಡ ಹೈಕಮಾಂಡ್ ಸೂಚನೆಯಂತೆ ಸದಾನಂದಗೌಡರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂದಿದ್ದರು. ಆದರೆ ಡಿ.ವಿ ಸದಾನಂದಗೌಡರು ಮಾತ್ರ ಈ ಹೇಳಿಕೆಯನ್ನು ಅಲ್ಲಗಳೆದಿದ್ದು, ರಾಜಕೀಯ ನಿವೃತ್ತಿ ವಿಚಾರವಾಗಿ ನಾನು ಯಾರೊಂದಿಗೂ ಮಾತನಾಡಿಲ್ಲ. ಯಾರ ಒತ್ತಡವೂ ಇಲ್ಲ. ನನ್ನ ಸ್ವಯಂ ನಿರ್ಧಾರ ಎಂದಿದ್ದಾರೆ.
ಬಿಎಸ್ವೈ ಹೇಳಿಕೆ ಬೆನ್ನಲ್ಲೇ ಡಿ.ವಿ ಸದಾನಂದಗೌಡರು ಹೇಳಿದ್ದೇನು..?
ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ನಿನ್ನೆ ಸಂಜೆ ನೀಡಿದ್ದ ಹೇಳಿಕೆಗೆ ಇಂದು ಮಾಧ್ಯಮಗಳ ಎದುರು ಮಾತನಾಡಿರುವ ಡಿ.ವಿ ಸದಾನಂದಗೌಡ, ಯಡಿಯೂರಪ್ಪ ಮಾತಿನಿಂದದ ನನ್ನ ಕಣ್ಣಲ್ಲಿ ನೀರು ಬಂತು, ಮನಸ್ಸಿಗೂ ನೋವು ಆಯ್ತು. ಆ ನಂತರ ನಾನು ಅವರ ಜೊತೆ ದೂರವಾಣಿಯಲ್ಲಿ ಮಾತಾಡಿದೆ. ಆ ನಂತರ ನಾನೇ ಸ್ಪಷ್ಟನೆ ಕೊಡ್ತೀನಿ ಅಂತಾ ಮಾಧ್ಯಮಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಚುನಾವಣೆಗೂ ಮುನ್ನ ಆರು ತಿಂಗಳು ಮೊದಲೇ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕೆ.ಎಸ್ ಈಶ್ವರಪ್ಪ, ಬಿ.ಎಸ್ ಯಡಿಯೂರಪ್ಪ ನಿವೃತ್ತಿಯಂತೆ ಪಕ್ಷಕ್ಕೆ ಹಿನ್ನಡೆ ಆಗಬಾರದು ಅನ್ನೋ ಕಾರಣಕ್ಕೆ ಮೊದಲೇ ಬಹಿರಂಗ ಮಾಡಿದ್ದೇನೆ. ನಿವೃತ್ತಿ ಬಗ್ಗೆ ನಾನು ಯಾರ ಜೊತೆಗೆ ಮಾತಾಡಿಲ್ಲ. ನನ್ನ ಪತ್ನಿ ಹಾಗು ಪುತ್ರನ ಜೊತೆಗೆ ಮಾತ್ರ ಚರ್ಚೆ ಮಾಡಿದ್ದೇನೆ. ಮುಜುಗರಕ್ಕೆ ಒಳಗಾಗಿ ನಾನು ಈ ತೀರ್ಮಾನ ಮಾಡಿಲ್ಲ ಎಂದಿದ್ದಾರೆ.
ಸ್ವಂತ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದು ಏನು ಯಡಿಯೂರಪ್ಪ..?
ಹೈಕಮಾಂಡ್ ಸೂಚನೆಯಂತೆ ರಾಜಕೀಯ ನಿವೃತ್ತಿ ಅಂತಾ ಹೇಳಿಕೆ ಕೊಟ್ಟಿದ್ದ ಯಡಿಯೂರಪ್ಪ, ಡಿ.ವಿ ಸದಾನಂದಗೌಡರು ಮಾತನಾಡಿದ್ದ ಬಳಿಕ ಟ್ವಿಟರ್ನಲ್ಲಿ ಸ್ಪಷ್ಟನೆ ನೀಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ನಾನೂ ಸೇರಿದಂತೆ, ಹಿರಿಯರಾದ ಸದಾನಂದಗೌಡರು ಹಾಗು ಎಲ್ಲರೂ ಒಟ್ಟಾಗಿ ದುಡಿಯುತ್ತಿದ್ದೇವೆ. ಯುವಕರು ರಾಜಕೀಯದಲ್ಲಿ ಮುಂದೆ ಬರಬೇಕೆಂದು ಸದಾನಂದಗೌಡ ಅವರು ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದಾರೆ. ಅವರಿಗೆ ಯಾರೂ ಒತ್ತಡ ಹೇರಿಲ್ಲ. ಇಂದು ನಾನು ಹೇಳಿರುವ ಹೇಳಿಕೆಯನ್ನು ಕೆಲ ಮಾಧ್ಯಮಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ. ಅವರು ನಿವೃತ್ತಿ ಘೋಷಿಸಿದರೂ ಸಕ್ರಿಯ ರಾಜಕಾರಣದಲ್ಲಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ 25ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವ ನಿಟ್ಟಿನಲ್ಲಿ ಶ್ರಮಿಸಲಿದ್ದಾರೆ. ಜನರ ಆಶಯದಂತೆ ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗುವ ನಿಟ್ಟಿನಲ್ಲಿ, ಪಕ್ಷ ಸಂಘಟನೆಯ ಕಾರ್ಯದಲ್ಲಿ ನಾವೆಲ್ಲರೂ ಒಂದಾಗಿ ಮುನ್ನಡೆಯುತ್ತಿದ್ದೇವೆ ಎಂದಿದ್ದರು.

ಯಡಿಯೂರಪ್ಪ ಸೇರಿದಂತೆ ಪಕ್ಷಕ್ಕೂ ಗೌಡರ ಟಾಂಗ್..!
ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡುತ್ತಲೇ ಡಿ.ವಿ ಸದಾನಂದಗೌಡ, ಪಕ್ಷ ಹಾಗು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪಗೆ ಟಾಂಗ್ ಕೊಟ್ಟಿದ್ದಾರೆ. ನಾನು ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷ ಸ್ಥಾನವನ್ನು ಅನುಭವಿಸಿದವನು. ಈಗ ನಾನು ಎರಡೂ ಸ್ಥಾನದ ಅಪೇಕ್ಷಿತನೂ ಆಗಿರಲಿಲ್ಲ. ನನಗೆ ಆ ರೀತಿಯ ಆಸೆಗಳು ಇರಲಿಲ್ಲ. ನನ್ನ ರಾಜಕಾರಣದಲ್ಲಿ ಯಾವುದೇ ಆಸೆ ಆಕಾಂಕ್ಷೆಗಳನ್ನು ಇಟ್ಟುಕೊಂಡಿಲ್ಲ. ಪಕ್ಷದಲ್ಲಿ ಎಷ್ಟೋ ಜನರು ಚಾಡಿ ಹೇಳೋರು ಇದ್ದಾರೆ. ಅವರಿಗೆಲ್ಲ ನಾನು ತಲೆಕೆಡಿಸಿಕೊಂಡಿರಲಿಲ್ಲ. ನನ್ನ ಈ ತೀರ್ಮಾನ ಯಾವುದೇ ರೀತಿಯ ಒತ್ತಡ ಇಲ್ಲ, ನನಗೆ ಯಾರೂ ಕೂಡ ಆದೇಶ ಮಾಡಿರಲಿಲ್ಲ. ಕಳೆದ ಬಾರಿ ನಾವು ಗುಂಪುಗಾರಿಕೆಗಳಿಂದ ಸೋತಿದ್ದೇವೆ. ಈಗಲಾದ್ರೂ ನಮ್ಮ ವರಿಷ್ಠರು ಗುಂಪುಗಾರಿಕೆ ನಿಲ್ಲಿಸಬೇಕು. ಬಿ.ಎಲ್ ಸಂತೋಷ್ರನ್ನು ಪಾರ್ಟಿಗೆ ಕರೆತಂದವನೇ ನಾನು. ನಾನು ಅಧ್ಯಕ್ಷರಾಗಿದ್ದಾಗ ಅವರು ಪ್ರಧಾನ ಕಾರ್ಯದರ್ಶಿಗಳಾಗಿ ಕೆಲಸ ಮಾಡಿದ್ದಾರೆ. ಅವರ ಮೇಲೆ ನನಗೆ ಯಾವುದೇ ಕೋಪ ಇಲ್ಲ ಎಂದಿದ್ದಾರೆ.
‘ವಿಪಕ್ಷ ನಾಯಕನ ನೇಮಕ ಮಾಡಿ ಮುಜುಗರ ತಪ್ಪಿಸಿ’
ರಾಜಕೀಯ ನಿವೃತ್ತಿ ಬೆನ್ನಲ್ಲೇ ಮತ್ತೊಮ್ಮೆ ಸಲಹೆ ನೀಡಿರುವ ಡಿ.ವಿ ಸದಾನಂದಗೌಡರು, ಒಕ್ಕಲಿಗ ಸಮಾಜಕ್ಕೆ ಯಾವುದೇ ಕಪ್ಪು ಚುಕ್ಕೆ ಬಾರದ ರೀತಿ ಕೆಲಸ ಮಾಡಿದ್ದೇನೆ. ನಾನು ನಿವೃತ್ತಿ ನಂತರ ಪಕ್ಷದಲ್ಲಿ ಏನು ಗೊಂದಲ ಆಗಿಲ್ಲ. ಆದರೆ ವಿಪಕ್ಷ ನಾಯಕನ ನೇಮಕ ಬೇಗ ಮಾಡಬೇಕು. ಕಾಂಗ್ರೆಸ್ನಿಂದ ಆಗ್ತಿರುವ ಮುಜುಗರ ತಪ್ಪಿಸಬೇಕು ಎಂದಿದ್ದಾರೆ. ನಾನು ಪಕ್ಷಕ್ಕಾಗಿ ದುಡಿಯುತ್ತೇನೆ. ಆದರೆ ನನ್ನನ್ನು ವರಿಷ್ಠರು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಇನ್ಮುಂದೆ ಯಡಿಯೂರಪ್ಪ ಜೊತೆಯಲ್ಲಿ ನಾನು ಕೆಲಸ ಮಾಡುತ್ತೇನೆ. ಹೊಸ ಪ್ರಯೋಗದಿಂದಲೇ ಬಿಜೆಪಿಗೆ ಕಳೆದ ಚುನಾವಣೆಯಲ್ಲಿ ಸೋಲಾಗಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ಆ ರೀತಿ ಆಗಬಾರದು. ಅದಕ್ಕಾಗಿಯೇ ನಾನು ಆರು ತಿಂಗಳ ಮುಂಚೆನೇ ನಿವೃತ್ತಿ ಘೋಷಣೆ ಮಾಡಿದ್ದೇನೆ. ನನ್ನ ಲೋಕಸಭೆ ಕ್ಷೇತ್ರಕ್ಕೆ ನಾಲ್ಕು ತಿಂಗಳ ಮುಂಚೆಯೇ ಅಭ್ಯರ್ಥಿ ಘೋಷಿಸಲಿ. ಆ ಅಭ್ಯರ್ಥಿ ಗೆಲ್ಲಿಸಲು ನಾನು ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ ಅಂತಾನೂ ಡ್ಯಾಮೇಜ್ ಕಂಟ್ರೋಲ್ಗೆ ಯತ್ನಿಸಿದ್ದಾರೆ. ಆದರೂ ನಾಯಕರ ವಿಭಿನ್ನ ಹೇಳಿಕೆ, ಹೈಕಮಾಂಡ್ ನಿರ್ಲಕ್ಷ್ಯ ಬಿಜೆಪಿ ಚುನಾವಣೆಗೆ ತಯಾರಿ ಮಾಡೋದು ಯಾವಾಗ ಎನ್ನುವಂತಾಗಿದೆ..!
ಕೃಷ್ಣಮಣಿ






