ರಾಜ್ಯ ಬಿಜೆಪಿಯಲ್ಲಿ (Karnataka BJP) ಕಳೆದ ಆರೇಳು ತಿಂಗಳುಗಳಿಂದ ಬಹುತೇಕ ತೆರೆಮರೆಗೆ ಸರಿದಿದ್ದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ (Ex CM B.S Yediyurappa) ಮತ್ತೆ ರಂಗಪ್ರವೇಶದ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ (Bengaluru) ತಮ್ಮ ನಿವಾಸದಲ್ಲಿ ಹುಟ್ಟುಹುಬ್ಬ ಆಚರಿಸಿಕೊಂಡ ಅವರು ಆ ಸಂದರ್ಭದಲ್ಲಿ ಮಾಧ್ಯಮಗಳಿಗೆ ಮಾತನಾಡುತ್ತಾ, ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ರಾಜ್ಯ ಪ್ರವಾಸ (State tour) ಮಾಡುವ ತಮ್ಮ ಮಾತನ್ನು ಪುನರುಚ್ಛರಿಸಿದ್ದಾರೆ. ಮತ್ತೊಮ್ಮೆ ರಾಜ್ಯವನ್ನು ಸುತ್ತುತ್ತೇನೆ. ಪಕ್ಷವನ್ನು ಅಧಿಕಾರಕ್ಕೆ ತರಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಜನ ನಮಗೆ ನಿಶ್ಚಿತವಾಗಿಯೂ ಅಧಿಕಾರದ ಆಶೀರ್ವಾದ ಮಾಡಲಿದ್ದಾರೆ ಎಂಬ ಭರವಸೆ ಇದೆ. ಈ ಕಾಂಗ್ರೆಸ್ (Congress) ನವರ ಬೂಟಾಟಿಕೆ ನಡೆಯೋದಿಲ್ಲ. ವಿಧಾನಮಂಡಲನದ ಬಜೆಟ್ ಅಧಿವೇಶನದ (Budget Session) ನಂತರ ರಾಜ್ಯ ಪ್ರವೇಶ ಆರಂಭಿಸುತ್ತೇನೆ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ!
ಬಿಟ್ ಕಾಯಿನ್ (Bit Coin), ನಲವತ್ತು ಪರ್ಸೆಂಟ್ ಕಮೀಷನ್ ಸೇರಿದಂತೆ ಭಾರೀ ಹಗರಣಗಳ ನಡುವೆ ಕೋಮು ಗಲಭೆ (communal violence) ಮತ್ತು ಸಚಿವ ಈಶ್ವರಪ್ಪ (Eshwarappa) ರಾಷ್ಟ್ರದ್ರೋಹಿ ಹೇಳಿಕೆಗಳ ಹಿನ್ನೆಲೆಯಲ್ಲಿ ಬಿಜೆಪಿಯ ವಿರುದ್ಧದ ಆಡಳಿತ ವಿರೋಧಿ ಅಲೆ ಮಡುಗಟ್ಟುತ್ತಿರುವ ಹೊತ್ತಿನಲ್ಲಿ ಆಪತ್ಬಾಂಧವನಂತೆ ಯಡಿಯೂರಪ್ಪ ಅವರು ಮತ್ತೆ ರಂಗ ಪ್ರವೇಶ ಮಾಡುವ ಮಾತುಗಳನ್ನಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
Also Read : ಸಿದ್ದರಾಮಯ್ಯ- ಯಡಿಯೂರಪ್ಪ ಭೇಟಿ: ಎಚ್ಡಿಕೆ ಹೇಳಿಕೆಯ ಹಿಂದಿನ ಲಾಜಿಕ್ ಏನು?
ಏಕೆಂದರೆ, ಕಳೆದ ಜುಲೈನಲ್ಲಿ ಅವರ ಪದಚ್ಯುತಿಯ ಬಳಿಕ ಕೂಡ ಯಡಿಯೂರಪ್ಪ ರಾಜ್ಯಪ್ರವಾಸ ಮಾಡುವುದಾಗಿಯೂ ಮತ್ತು ರಾಜ್ಯದಲ್ಲಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿಯೂ ಹೇಳಿದ್ದರು. ಅಷ್ಟೇ ಅಲ್ಲ; ಸುಮಾರು ಮೂರು ತಿಂಗಳ ಕಾಲ ನಿರಂತರವಾಗಿ ರಾಜ್ಯ ಪ್ರವಾಸದ ಕುರಿತು ಪದೇಪದೆ ಹೇಳಿಕೆ ನೀಡುತ್ತಲೇ ಇದ್ದರು. ಮತ್ತೊಂದು ಕಡೆ ಯಡಿಯೂರಪ್ಪ ರಾಜ್ಯಪ್ರವಾಸಕ್ಕೆ ತಯಾರಿಗಳು ನಡೆಯುತ್ತಿದ್ದವು ಕೂಡ. ಆದರೆ, ಅವರು ಏಕಾಂಗಿಯಾಗಿ ರಾಜ್ಯಪ್ರವಾಸ ಮಾಡುವುದಕ್ಕೆ ಬಿಜೆಪಿ ವರಿಷ್ಠರು ಅಡ್ಡಗಾಲು ಹಾಕಿದ್ದರು. ಪ್ರವಾಸ ಮಾಡುವುದೇ ಆದರೆ ಪಕ್ಷದ ರಾಜ್ಯ ನಾಯಕರೊಂದಿಗೆ ಸಮಾಲೋಚಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಪಕ್ಷದ ಅಧಿಕೃತ ಕಾರ್ಯಕ್ರಮವಾಗಿ ಮಾಡಲಿ ಎನ್ನುವ ಮೂಲಕ ಅವರು ರಾಜಕೀಯವಾಗಿ ಸಕ್ರಿಯವಾಗಿರುವುದು ಪಕ್ಷಕ್ಕೆ ಅಗತ್ಯವಿಲ್ಲ ಎಂಬ ಸಂದೇಶವನ್ನು ದೆಹಲಿಯ ವರಿಷ್ಠರು ರವಾನಿಸಿದ್ದರು.
ವರಿಷ್ಠರು ತಮ್ಮ ಯೋಜನೆಗೆ ಹಸಿರು ನಿಶಾನೆ ತೋರಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಯಡಿಯೂರಪ್ಪ ಅವರಿಗೆ, ಅವರ ಆಪ್ತರ ಮೇಲೆ ಇಡಿ-ಐಟಿ ದಾಳಿಯ (ED-IT) ಮೂಲಕ ದೆಹಲಿಯ ವರಿಷ್ಠರು (Delhi HIghCommand) ಬೇರೆಯದೇ ಸಂದೇಶ ರವಾನಿಸಿದ್ದರು. ಆ ಸಂದೇಶ ಬರುತ್ತಲೇ ತಮ್ಮ ರಾಜ್ಯಪ್ರವಾಸವನ್ನಷ್ಟೇ ಅಲ್ಲದೆ, ಪಕ್ಷದೊಂದಿಗಿನ ಒಡನಾಟವನ್ನೂ ಮೊಟಕುಗೊಳಿಸಿ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಯಡಿಯೂರಪ್ಪ ತೆರೆಮರೆಗೆ ಸರಿದಿದ್ದರು. ಅಷ್ಟೇ ಅಲ್ಲ, ಅವರ ಪುತ್ರ ಬಿ ವೈ ವಿಜಯೇಂದ್ರ (BS Vijayendra) ಕೂಡ ಪಕ್ಷದೊಳಗೆ ಸಕ್ರಿಯವಾಗಿರಲಿಲ್ಲ.
ಆ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಗೆ ಮುನ್ನ ಯಡಿಯೂರಪ್ಪ ತಮ್ಮ ಬೆಂಬಲಿಗರೊಂದಿಗೆ ಪಕ್ಷ ತೊರೆದು ಹೊಸ ಪ್ರಾದೇಶಿಕ ಪಕ್ಷ ಕಟ್ಟಲಿದ್ದಾರೆ. ಮುಖ್ಯಮಂತ್ರಿಯಾಗಿರುವಾಗಲೇ ಪಕ್ಷದ ಒಂದು ಬಣ ಆರ್ ಎಸ್ ಎಸ್ (RSS) ಹಿನ್ನೆಲೆಯ ವರಿಷ್ಠ ನಾಯಕರೊಬ್ಬರ ಚಿತಾವಣೆಯಿಂದ ತಮ್ಮನ್ನು ಕೆಳಗಿಳಿಸಲು ನಿರಂತರ ಯತ್ನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಆಗಲೇ ಪರ್ಯಾಯ ರಾಜಕೀಯ ವೇದಿಕೆ (Altranative Politics) ಕಟ್ಟುವ ನಿಟ್ಟಿನಲ್ಲಿ ವಿಜಯೇಂದ್ರ ಮೂಲಕ ವೇದಿಕೆ ಸಜ್ಜುಗೊಳಿಸಿದ್ದರು. ಆದರೆ, ಇಡಿ ದಾಳಿ, ಐಟಿ ದಾಳಿ ಮತ್ತು ಪಿಎ ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣದಂತಹ ಅಸ್ತ್ರಗಳನ್ನು ಪ್ರಯೋಗಿಸಿ ಬಿಜೆಪಿ ವರಿಷ್ಠರು ಯಡಿಯೂರಪ್ಪ ಮತ್ತು ವಿಜಯೇಂದ್ರ ವೇಗಕ್ಕೆ ಕಡಿವಾಣ ಹಾಕಿದ್ದರು.
ಆ ಹಿನ್ನೆಲೆಯಲ್ಲಿಯೇ ವರಿಷ್ಠರ ತಂತ್ರಗಳಿಗೆ ಮಣಿದ ಯಡಿಯೂರಪ್ಪ ತೆರೆಮರೆಗೆ ಸರಿದಿದ್ದರು ಮತ್ತು ಪ್ರಾದೇಶಿಕ ಪಕ್ಷ ಕಟ್ಟುವ ನಿಟ್ಟಿನಲ್ಲಿ ಕಾದುನೋಡುವಂತೆ ತಮ್ಮ ಪುತ್ರ ವಿಜಯೇಂದ್ರ ಅವರಿಗೂ ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸಂಪುಟ ಪುನರ್ ರಚನೆಯ ಪ್ರಸ್ತಾಪದ ಮೂಲಕ ಯಡಿಯೂರಪ್ಪ ಬೆಂಬಲಿಗ ಶಾಸಕರು ಬಿಜೆಪಿ ವರಿಷ್ಠರ ಪ್ರತಿಕ್ರಿಯೆ ನೋಡುವ ಪ್ರಯತ್ನ ಮಾಡಿದ್ದರು. ಆ ವೇಳೆ ದೆಹಲಿಗೆ ಭೇಟಿ ನೀಡಿದ್ದ ಬೆಂಬಲಿಗರಿಗೆ ಉತ್ತರಪ್ರದೇಶ (Uttar Pradesh) ಸೇರಿದಂತೆ ಐದು ರಾಜ್ಯಗಳ ಚುನಾವಣೆ ಮುಗಿಯುವವರೆಗೆ ಕಾಯುವಂತೆ ಸೂಚಿಸಿದ್ದರು ಎನ್ನಲಾಗಿದೆ.
ಆ ಹಿನ್ನೆಲೆಯಲ್ಲಿಯೇ ಬಿಟ್ ಕಾಯಿನ್ ಹಗರಣ ಮತ್ತು ಶೇ.40ರಷ್ಟು ಲಂಚದ ವಿಷಯದಲ್ಲಿ ನೇರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರೇ ಕೇಳಿಬಂದಾಗಲಾಗಲೀ, ಅದೇ ವಿಷಯವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ನಿರಂತರ ಆರೋಪಗಳನ್ನು ಮಾಡಿದಾಗಲಾಗಲೀ ಯಡಿಯೂರಪ್ಪ ತುಟಿ ಬಿಚ್ಚಿರಲಿಲ್ಲ. ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಕೆ ಎಸ್ ಈಶ್ವರಪ್ಪ ಹೇಳಿಕೆಯ ವಿಷಯದಲ್ಲಾಗಲೀ, ಅಥವಾ ತಮ್ಮ ತವರು ಜಿಲ್ಲೆಯ ಶಿವಮೊಗ್ಗ (Shivamogga) ಕೋಮುದಳ್ಳುರಿಯಲ್ಲಿ ಹೊತ್ತಿ ಉರಿದ ಬಗ್ಗೆಯಾಗಲೀ, ಸಿಎಂ ಬೊಮ್ಮಾಯಿ ಮತ್ತು ಗೃಹ ಸಚಿವರ ಆಡಳಿತ ವೈಫಲ್ಯದಿಂದಾಗಿ ನಿರಂತರವಾಗಿ ರಾಜ್ಯಾದ್ಯಂತ ಮರುಕಳಿಸುತ್ತಲೇ ಇರುವ ಕಾನೂನು ಮತ್ತು ಸುವ್ಯವಸ್ಥೆಯ ಬಿಕ್ಕಟ್ಟಿನ ಬಗ್ಗೆಯಾಗಲೀ ಯಡಿಯೂರಪ್ಪ ಮಾತನಾಡಿರಲೇ ಇಲ್ಲ!
Also Read : ಹೈಕಮಾಂಡ್ ನಾಯಕರೆದುರು ಸೋತು ಗೆದ್ದ ಯಡಿಯೂರಪ್ಪ!
ಆದರೆ, ಇದೀಗ ದಿಢೀರನೆ ಯಡಿಯೂರಪ್ಪ ರಾಜ್ಯಪ್ರವಾಸದ ಮಾತನಾಡಿದ್ದಾರೆ. ಈ ನಡುವೆ, ಇಷ್ಟು ದಿನ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದ ವಿಜಯೇಂದ್ರ ಮೊನ್ನೆ ತಾನೇ ಶಿವಮೊಗ್ಗದ ಮೃತ ಹರ್ಷನ ಮನೆಗೆ ಭೇಟಿ ಮಾಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಅದಾದ ಬೆನ್ನಲ್ಲೇ ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಮಾತನಾಡಿದ್ದಾರೆ.
ಆದರೆ, ಈ ಬಾರಿ ತಮ್ಮ ಪುತ್ರನ ರಾಜಕೀಯ ಭವಿಷ್ಯ ಭದ್ರ ಮಾಡುವ ನಿಟ್ಟಿನಲ್ಲಿ ನಿಜವಾಗಿಯೂ ಬಿಜೆಪಿಯೊಂದಿಗೆ ಹೆಜ್ಜೆ ಹಾಕಲು ಯೋಚಿಸಿದ್ದಾರೆಯೇ? ಅಥವಾ ಪುತ್ರನ ರಾಜಕೀಯ ಮಹತ್ವಾಕಾಂಕ್ಷೆಯಾದ ಪರ್ಯಾಯ ರಾಜಕೀಯ ವೇದಿಕೆಗೆ ಅಡಿಪಾಯ ಹಾಕಲು ಯೋಜಿಸಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.