ರಾಜ್ಯ ರಾಜಕೀಯದಲ್ಲಿ ಒಂದು ಕಡೆ ಸಿಂಧಗಿ ಮತ್ತು ಹಾನಗಲ್ ಉಪಚುನಾವಣೆಗಳ ಕಾವು ಏರುತ್ತಿರುವ ಹೊತ್ತಿಗೇ ಮೂರೂ ಪಕ್ಷಗಳ ನಾಯಕರ ನಡುವಿನ ಪರಸ್ಪರ ವಾಕ್ಸಮರ ಕೂಡ ರಂಗೇರಿದೆ.
ಪ್ರತಿ ಚುನಾವಣಾ ಕಣದಲ್ಲಿಯೂ ಆಡಳಿತ ಪಕ್ಷ, ಪ್ರತಿಪಕ್ಷವೆನ್ನದೆ ರಾಜಕೀಯ ಪಕ್ಷಗಳ ನಡುವೆ ಪರಸ್ಪರ ಕೆಸರೆರಚಾಟ, ವಾಗ್ವಾದ, ಆರೋಪ- ಪ್ರತ್ಯಾರೋಪಗಳು ಸಹಜ. ಅಂತಹ ವಾಕ್ಸಮರಗಳು ಸಾಮಾನ್ಯವಾಗಿ ಪರಸ್ಪರ ಪಕ್ಷಗಳ ನೀತಿ, ನಿಲುವುಗಳು, ಸಾಧನೆ, ವೈಫಲ್ಯಗಳ ಮೇಲೆಯೇ ನಿಂತಿರುತ್ತವೆ. ಆದರೆ, ಈ ಬಾರಿಯ ವಿಶೇಷವೆಂದರೆ; ಮೂರೂ ಪಕ್ಷಗಳ ಸಾಧನೆ, ವೈಫಲ್ಯವಾಗಲೀ, ಕಾರ್ಯಕ್ರಮ, ಕಾರ್ಯಸೂಚಿಯಾಗಲೀ ಚುನಾವಣೆಯ ಕಣದಲ್ಲಿ ಸದ್ದುಮಾಡುತ್ತಿಲ್ಲ. ಬದಲಾಗಿ ಆ ಪಕ್ಷಗಳ ನಾಯಕರ ರಾಜಕೀಯ ಓಲಾಟದ ಚರ್ಚೆ ಗರಿಗೆದರಿದೆ.
ಅದರಲ್ಲೂ ಕಳೆದ ಒಂದು ವಾರದಿಂದ “ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ ನಡುವೆ ರಹಸ್ಯ ಭೇಟಿ ನಡೆದಿದೆ. ಆ ಭೇಟಿಯ ಪರಿಣಾಮವಾಗಿಯೇ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ ವೈ ವಿಜಯೇಂದ್ರ ಅವರ ಆಪ್ತರ ಮೇಲೆ ಐಟಿ ದಾಳಿ ನಡೆಸಿದೆ. ಆ ಮೂಲಕ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಅವರ ಹೊಸ ರಾಜಕೀಯ ಸಮೀಕರಣಕ್ಕೆ ಬ್ರೇಕ್ ಹಾಕಲಾಗಿದೆ” ಎಂಬ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರ ಹೊಸ ಬಾಂಬ್ ಭಾರೀ ಸದ್ದು ಮಾಡುತ್ತಿದೆ.

ಆಡಳಿತರೂಢ ಬಿಜೆಪಿಯ ಪಾಲಿಗೆ ಪ್ರತಿಷ್ಠೆಯ ಕಣವಾಗಿರುವ ಮತ್ತು ಲಿಂಗಾಯತ ಸಮುದಾಯದ ಪ್ರಾಬಲ್ಯದ ಕಾರಣಕ್ಕೆ ಪ್ರಚಾರಕ್ಕೆ ಯಡಿಯೂರಪ್ಪ ನೇತೃತ್ವ ಆ ಎರಡೂ ಕಣದಲ್ಲಿ ನಿರ್ಣಾಯಕವಾಗಿರುವ ಹೊತ್ತಲ್ಲೂ, ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರ ಪರಮಾಪ್ತ ಉಮೇಶ್ ಸೇರಿದಂತೆ ಹಲವರ ಮೇಲೆ ಐಟಿ ದಾಳಿ ನಡೆದಿರುವುದು ಸಹಜವಾಗೇ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿ ಹೈಕಮಾಂಡ್ ಈ ಐಟಿ ದಾಳಿಯ ಮೂಲಕ ಯಾವ ಸಂದೇಶವನ್ನು ರವಾನಿಸುತ್ತಿದೆ? ಆ ದಾಳಿಯ ನಿಜವಾದ ಗುರಿ ಯಾರು? ಯಾಕೆ ಚುನಾವಣೆ ಹೊಸ್ತಿಲಲ್ಲಿ ಹೀಗೆ ಯಡಿಯೂರಪ್ಪ ಮತ್ತು ಅವರ ಪುತ್ರರನ್ನು ಪರೋಕ್ಷವಾಗಿ ಹಣಿಯಲಾಗುತ್ತಿದೆ? ಎಂಬ ಚರ್ಚೆಗಳು ಸ್ವತಃ ಬಿಜೆಪಿಯ ವಲಯದಲ್ಲೇ ಕೇಳಿಬಂದಿದ್ದವು.
ಆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿತ್ತು. ಆದರೆ, ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ; ಇಬ್ಬರೂ ಅಂತಹ ಯಾವುದೇ ಭೇಟಿ ನಡೆದಿಲ್ಲ ಮತ್ತು ಹಾಗೆ ಭೇಟಿಯಾಗುವ ಅಗತ್ಯವೂ ತಮಗಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ; ಸಿದ್ದರಾಮಯ್ಯ ಅವರಂತೂ, ಯಡಿಯೂರಪ್ಪ ಅವರನ್ನು ತಾವು ಯಾವುದೇ ರೀತಿಯಲ್ಲಿ ವೈಯಕ್ತಿಕವಾಗಿ ಭೇಟಿಯಾಗಿಲ್ಲ. ರಹಸ್ಯ ಭೇಟಿಯಂತೂ ಇಲ್ಲವೇ ಇಲ್ಲ. ಒಂದು ವೇಳೆ ಕುಮಾರ ಸ್ವಾಮಿ, ತಾವು ಹಾಗೆ ಭೇಟಿಯಾಗಿರುವುದನ್ನು ಸಾಬೀತುಪಡಿಸಿದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದಾರೆ. ಯಡಿಯೂರಪ್ಪ ಕೂಡ ನಾನು ನಂಬಿದ ಪಕ್ಷ ಮತ್ತು ಸಿದ್ಧಾಂತವನ್ನು ಬಿಟ್ಟು ಮತ್ತೊಬ್ಬರನ್ನು ಭೇಟಿ ಮಾಡುವ ಪ್ರಶ್ನೆಯೇ ಇಲ್ಲ. ಕಳೆದ ವರ್ಷದ ತಮ್ಮ ಹುಟ್ಟುಹಬ್ಬದ ಸಮಾರಂಭ ಹೊರತುಪಡಿಸಿ ಸಿದ್ದರಾಮಯ್ಯ ಅವರನ್ನು ಎಂದೂ ಮುಖತಃ ಭೇಟಿಯಾಗಿಲ್ಲ. ಭೇಟಿಯಾಗುವ ಅಗತ್ಯವೂ ತಮಗಿಲ್ಲ ಎಂದು ಹೇಳಿದ್ದಾರೆ.
ಆದರೆ, ಕುಮಾರಸ್ವಾಮಿ, ತಮ್ಮ ಹೇಳಿಕೆಗೆ ಬದ್ಧರಾಗಿದ್ದು ಇಬ್ಬರೂ ಮಾಜಿ ಸಿಎಂಗಳ ಭೇಟಿ ನಿಜ ಮತ್ತು ಡಿಸೆಂಬರ್ ವೇಳೆಗೆ ಹೊಸ ರಾಜಕೀಯ ಪಕ್ಷ ಕಟ್ಟುವ ಕುರಿತು ಇಬ್ಬರೂ ತಂತ್ರಗಾರಿಕೆ ನಡೆಸಿದ್ದರು. ಆದರೆ, ಆ ವಿಷಯ ಬಿಜೆಪಿ ಹೈಕಮಾಂಡಿಗೆ ಗೊತ್ತಾಗಿ ಐಟಿ ದಾಳಿ ಮೂಲಕ ಯಡಿಯೂರಪ್ಪಗೆ ಎಚ್ಚರಿಕೆ ನೀಡಿದ್ದಾರೆ. ಇಲ್ಲವಾದಲ್ಲಿ ಡಿಸೆಂಬರ್ ಹೊತ್ತಿಗೆ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಘಟಿಸಲಿತ್ತು ಎಂದಿದ್ದಾರೆ.

ಮುಸ್ಲಿಂ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿರುವ ಸಿಂಧಗಿ ಮತ್ತು ಹಾನಗಲ್ ಕ್ಷೇತ್ರಗಳಲ್ಲಿ ಜೆಡಿಎಸ್ ಎರಡೂ ಕಡೆ ಮುಸ್ಲಿಂ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ. ಆ ಮೂಲಕ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ಆತಂಕ ತಂದಿದೆ. ಅಭ್ಯರ್ಥಿ ಆಯ್ಕೆ ಮಾತ್ರವಲ್ಲದೆ, ಚುಣಾವಣಾ ಕಣದ ತಂತ್ರಗಾರಿಕೆಯ ವಿಷಯದಲ್ಲಿ ಕೂಡ ಜೆಡಿಎಸ್ ನಾಯಕರು ಹೊಸ ಹೊಸ ದಾಳಗಳನ್ನು ಉರುಳಿಸುತ್ತಿದ್ದಾರೆ. ಆರಂಭದಲ್ಲಿ ಹಿಂದುತ್ವ ವಿರೋಧಿ ಮತಗಳ ಕ್ರೋಡೀಕರಣದ ತಂತ್ರವಾಗಿ ಆರ್ ಎಸ್ ಎಸ್ ಮತ್ತು ಅದರ ಕೋಮುವಾದಿ ರಾಜಕಾರಣ ಕುರಿತು ಎಚ್ ಡಿ ಕುಮಾರಸ್ವಾಮಿ ನಿರಂತರವಾಗಿ ನೇರ ವಾಗ್ದಾಳಿ ನಡೆಸಿದ್ದರು.
ಅದರ ಮುಂದುವರಿದ ಭಾಗವಾಗಿ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ರಹಸ್ಯ ಭೇಟಿ ಮತ್ತು ಹೊಸ ರಾಜಕೀಯ ಪಕ್ಷ ಸ್ಥಾಪನೆಯ ವಿಷಯ ಪ್ರಸ್ತಾಪಿಸುವ ಮೂಲಕ, ಏಕ ಕಾಲಕ್ಕೆ ಸೆಕ್ಯುಲರ್ ಮತ್ತು ಹಿಂದುತ್ವವಾದಿ ಮತಗಳನ್ನು ಛಿದ್ರಗೊಳಿಸುವ ಬಾಣ ಹೂಡಿದ್ದಾರೆ. ಒಂದು ಕಡೆ ಮುಸ್ಲಿಮರು ಮತ್ತು ಇತರ ಸೆಕ್ಯುಲರ್ ಮತದಾರರು ಸಿದ್ದರಾಮಯ್ಯ ಯಡಿಯೂರಪ್ಪ ಜೊತೆ ಕೈಜೋಡಿಸುವ ಊಹೆಯ ಮೇಲೆ ತಮ್ಮ ಆಯ್ಕೆ ಬದಲಾಯಿಸಬಹುದು, ಮತ್ತೊಂದು ಕಡೆ ಸಿದ್ದರಾಮಯ್ಯ ಜೊತೆ ಹೊಸ ಪಕ್ಷ ಕಟ್ಟುವ ತಂತ್ರ ಹೂಡಿರುವ ಯಡಿಯೂರಪ್ಪ ವಿರುದ್ಧ ಕಟ್ಟಾ ಹಿಂದುತ್ವವಾದಿ ಮತಗಳು ದೂರಾಗಬಹುದು ಎಂಬುದು ಎಚ್ಡಿಕೆ ಲೆಕ್ಕಾಚಾರವಿದ್ದಂತಿದೆ.
ಕುಮಾರಸ್ವಾಮಿ ಅವರ ಈ ತಂತ್ರಗಾರಿಕೆಯ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಭೇಟಿಯ ಕುರಿತ ಅವರ ಹೇಳಿಕೆ ನಿಜವಾಗಿಯೂ ಇಬ್ಬರ ನಡುವೆ ನಡೆದ ಭೇಟಿಯ ವಾಸ್ತವಿಕ ನೆಲೆಯ ಮೇಲೆ ನಿಂತಿದೆಯೇ? ಅಥವಾ ಕೇವಲ ಚುನಾವಣಾ ಕಣದಲ್ಲಿ ಗೊಂದಲ ಮೂಡಿಸಿ ಪರಿಸ್ಥಿತಿಯ ಲಾಭ ಪಡೆಯುವ ಒಂದು ಚಾಣಾಕ್ಷ ತಂತ್ರವೇ ಎಂಬುದು ಚರ್ಚೆಯಾಗುತ್ತಿದೆ. ಆದರೆ, ಇಂತಹ ಚರ್ಚೆಯ ಹೊತ್ತಲ್ಲೇ ಎಚ್ಡಿಕೆ ಹೇಳಿಕೆಗೆ ಮತ್ತೊಂದು ಆಯಾಮ ನೀಡಿರುವುದು ಸಿದ್ದರಾಮಯ್ಯ ಪರಮಾಪ್ತರೆಂದೇ ಒಂದು ಕಾಲದಲ್ಲಿ ಗುರುತಿಸಿಕೊಂಡಿದ್ದ ಮತ್ತು ಸದ್ಯ ಜೆಡಿಎಸ್ ಕಡೆ ಮುಖಮಾಡಿರುವ ಹಿರಿಯ ನಾಯಕ ಸಿ ಎಂ ಇಬ್ರಾಹಿಂ ಹೇಳಿಕೆ. “ಸಿದ್ದರಾಮಯ್ಯ, ಯಡಿಯೂರಪ್ಪ ಮತ್ತು ಎಚ್ ಡಿ ದೇವೇಗೌಡರನ್ನು ಒಂದೇ ಕಡೆ ಸೇರಿಸುತ್ತೇನೆ. ಮೂವರೂ ನಾಯಕರನ್ನು ಒಂದೇ ಪಕ್ಷದಲ್ಲಿ ಸೇರಿಸುತ್ತೇನೆ. ಇನ್ನು ಮುಂದೆ ಆ ಮೂವರೂ ನಾಯಕರು ಒಂದೇ ಪಕ್ಷದಲ್ಲಿ ಇರುತ್ತಾರೆ. ಯಾವುದು ಆಗುವುದು ಸಾಧ್ಯವಿಲ್ಲ ಎನ್ನುತ್ತಾರೋ ಅದನ್ನು ನಾನು ಮಾಡಿ ತೋರಿಸುತ್ತೇನೆ” ಎಂದು ಇಬ್ರಾಹಿಂ ಹೇಳಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಅತ್ತ ಬಿಜೆಪಿಯಲ್ಲಿ ಸ್ವತಃ ಬಿ ಎಸ್ ಯಡಿಯೂರಪ್ಪ ಬಹುತೇಕ ಬದಿಗೆ ಸರಿದಂತಾಗಿದೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎನ್ನುವ ಮೂಲಕ ಪಕ್ಷದ ಹೈಕಮಾಂಡ್ ಈಗಾಗಲೇ ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ‘ಪಿಂಕ್ ಸ್ಲಿಪ್’ ನೀಡಿದೆ. ಸ್ವತಃ ಬೊಮ್ಮಾಯಿ ಕೂಡ ಅದೇ ಮಾತನ್ನು ಪುನರುಚ್ಛರಿಸಿದ್ದಾರೆ. ಒಂದು ಕಡೆ ಉಪ ಚುನಾವಣೆಯ ಹೊತ್ತಿನಲ್ಲೇ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರನ್ನು ಗುರಿಯಾಗಿಸಿಕೊಂಡು ಐಟಿ ದಾಳಿ ನಡೆದಿದ್ದರೆ ಮತ್ತೊಂದು ಕಡೆ ವಿಜಯೇಂದ್ರ ಅವರಿಗೆ ಆರಂಭದಲ್ಲಿ ಚುನಾವಣಾ ಉಸ್ತುವಾರಿ ತಂಡದಿಂದಲೇ ಹೊರಗಿಟ್ಟು ನಿರ್ಲಕ್ಷಿಸಲಾಗಿತ್ತು. ಇತ್ತ ಕಾಂಗ್ರೆಸ್ಸಿನಲ್ಲಿ ಕೂಡ ಸಿದ್ದರಾಮಯ್ಯ ಸ್ಥಿತಿ ಬಿಜೆಪಿಯಲ್ಲಿನ ಯಡಿಯೂರಪ್ಪ ಸ್ಥಿತಿಗಿಂತ ಹೆಚ್ಚೇನೂ ಭಿನ್ನವಾಗಿಲ್ಲ. ಒಂದು ಕಡೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮತ್ತೊಂದು ಕಡೆ ದಲಿತ ಸಿಎಂ ಹೆಸರಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಬೆಂಬಲಿಗರ ಹಳೆಯ ಕಾಂಗ್ರೆಸ್ಸಿಗರ ಪಡೆಗಳು ಸಿದ್ದರಾಮಯ್ಯ ಅವರ ಕಾಲೆಳೆಯುವ ಯತ್ನಗಳನ್ನು ಬಿರುಸುಗೊಳಿಸಿವೆ. ತಂತ್ರ, ಪ್ರತಿತಂತ್ರಗಳು ತೆರೆಮರೆಯಲ್ಲಿ ಹಾವುಏಣಿಯ ಆಟವನ್ನು ಚುರುಕುಗೊಳಿಸಿವೆ.

ಇಂತಹ ಹೊತ್ತಲ್ಲಿ ಪ್ರಾದೇಶಿಕ ಪಕ್ಷದ ಕುರಿತ ಚರ್ಚೆಗಳೂ ಗರಿಗೆದರಿವೆ. ಹಾಗಾಗಿ, ಎಚ್ ಡಿ ಕುಮಾರಸ್ವಾಮಿ ಅವರ ಸಿದ್ದರಾಮಯ್ಯ- ಯಡಿಯೂರಪ್ಪ ರಹಸ್ಯ ಭೇಟಿಯ ಹೇಳಿಕೆಯ ಸತ್ಯಾಸತ್ಯತೆಗಳು ಏನೇ ಇರಲಿ; ಸಿಎಂ ಇಬ್ರಾಹಿಂ ಅವರ ಅಚ್ಚರಿಯ ಹೇಳಿಕೆ ನಿಜವಾಗುವುದೇ ಇಲ್ಲವೇ ಎಂಬ ಒಗಟು ಹೇಗೆ ಇರಲಿ; ಇಬ್ಬರೂ ಮಾಜಿ ಸಿಎಂ ಗಳು ತಮ್ಮದೇ ಪಕ್ಷದಲ್ಲಿ ಅಸ್ತಿತ್ವದ ಸವಾಲು ಎದುರಿಸುತ್ತಿದ್ದಾರೆ ಎಂಬುದಂತೂ ನಿಜ. ಆ ಸವಾಲೇ ಅವರನ್ನು ಹೊಸ ಮೈತ್ರಿಗೆ ಪ್ರೇರೇಪಿಸಿರಬಹುದೆ? ಎಂಬುದಂತೂ ಸದ್ಯಕ್ಕೆ ಕುತೂಹಲ ಮೂಡಿಸಿದೆ. ಆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರ ಹೇಳಿಕೆ ಸಂಚಲನ ಮೂಡಿಸಿದ್ದರಲ್ಲಿ ಅಚ್ಚರಿಯೇನಿಲ್ಲ.. ಅಲ್ಲವೆ?