ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನಾಂಕ ಘೋಷಣೆಯಾಗಿದೆ. ಹೀಗಾಗಿ ರಾಜಕೀಯ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಮತದಾರರನ್ನು ಸೆಳೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೊಸದೊಂದು ಬಾಂಬ್ ಸಿಡಿಸಿದ್ದು ರಾಜ್ಯ ರಾಜಕಾರಣದಲ್ಲಿ ಸಂಚಲನವನ್ನೇ ಮೂಡಿಸಿದೆ.
ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯರಿಗೆ ವರುಣಾ ಕ್ಷೇತ್ರವನ್ನು ನೀಡಿದೆ. ಸಿದ್ದರಾಮಯ್ಯ ಕೂಡ ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದಾರೆ. ಈ ಎಲ್ಲದರ ನಡುವೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಿದ್ದರಾಮಯ್ಯ ವಿರುದ್ಧ ಬಿ.ವೈ ವಿಜಯೇಂದ್ರರನ್ನು ವರುಣಾ ಕ್ಷೇತ್ರದಲ್ಲಿ ಕಣಕ್ಕಿಳಿಸುವ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಬಲಿಷ್ಠ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದ್ದೇವೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ವಿರುದ್ಧ ಬಿ.ವೈ ವಿಜಯೇಂದ್ರ ಸ್ಪರ್ಧೆಯನ್ನು ಅಲ್ಲಗೆಳೆಯುವಂತಿಲ್ಲ ಎಂದು ಹೇಳಿದ್ದು ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಸಂಚಲನವನ್ನು ಸೃಷ್ಟಿಸಿದೆ.
ಕಳೆದ ಬಾರಿಯೂ ವರುಣದಲ್ಲಿ ಬಿ.ವೈ ವಿಜಯೇಂದ್ರ ಸ್ಪರ್ಧಿಸಲು ಉತ್ಸುಕರಾಗಿದ್ದರು. ಆದರೆ ಕೊನೆ ಕ್ಷಣದಲ್ಲಿ ವರುಣ ಕ್ಷೇತ್ರದ ಟಿಕೆಟ್ ವಿಜಯೇಂದ್ರ ಕೈ ತಪ್ಪಿ ಹೋಗಿತ್ತು. ಆದರೆ ಈ ಬಾರಿ ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿಯಾಗಿ ವಿಜಯೇಂದ್ರ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.