ಇಂದು ಮುಖ್ಯಮಂತ್ರಿ ಬದಲಾವಣೆಯ ಬಿಜೆಪಿಯ ಬಹುಚರ್ಚಿತ ಗಡುವು ಬಂದಿದೆ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಹೇಳಿದಂತೆ ಇಂದು ದೆಹಲಿಯಿಂದ ಬರಲಿರುವ ಆ ಭಾರೀ ಕುತೂಹಲದ ‘ಸಂದೇಶ’ದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
Also Read: ಸಿಎಂ ಬಿ ಎಸ್ ವೈ ರಾಜಿನಾಮೆ ನೀಡಿದರೆ ವಲಸಿಗ ಸಚಿವರ ಸ್ಥಿತಿ ಅತಂತ್ರ?
ದೆಹಲಿಯ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರಿಗೆ ರವಾನಿಸಲಿದ್ದಾರೆ ಎನ್ನಲಾಗುತ್ತಿರುವ ಆ ಸಂದೇಶ ರಾಜ್ಯ ರಾಜಕಾರಣದ ಭವಿಷ್ಯ ನಿರ್ಧರಿಸಲಿದೆ ಎಂಬ ನಿರೀಕ್ಷೆ ಒಂದು ಕಡೆಯಾದರೆ, ಯಡಿಯೂರಪ್ಪ ಪರ ಲಿಂಗಾಯತ ಲಾಬಿಯ ಭಾಗವಾಗಿ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಮಠಾಧೀಶರ ಸಮಾವೇಶ ರಾಜ್ಯದಿಂದ ದೆಹಲಿಗೆ ಯಾವ ಸಂದೇಶ ರವಾನಿಸಲಿದೆ ಎಂಬ ಕುರಿತ ಕುತೂಹಲ ಕೂಡ ಚರ್ಚೆಗೆ ಗ್ರಾಸವಾಗಿದೆ.
Also Read: ರಾಜ್ಯದಲ್ಲಿ ಉತ್ತರಪ್ರದೇಶ ಮಾದರಿ ಆಡಳಿತಕ್ಕೆ ಆರಂಭವಾಗಿದೆ ಸಿದ್ಧತೆ?
ಈ ನಡುವೆ ಸಿಎಂ ಯಡಿಯೂರಪ್ಪ ಬೆಂಗಳೂರು ನಗರದ ತಮ್ಮ ರೌಂಡ್ಸ್ ಮುಗಿಸಿ ಗಡಿ ಜಿಲ್ಲೆ ಬೆಳಗಾವಿಗೆ ತೆರಳಿದ್ದಾರೆ. ಪ್ರವಾಹಪೀಡಿತ ಪ್ರದೇಶಗಳ ಸಮೀಕ್ಷೆಯಲ್ಲಿ ತೊಡಗಿರುವ ಅವರು, ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಂಕಷ್ಟಕ್ಕೆ ಕಿವಿಯಾಗಿದ್ದಾರೆ. ಆ ಮೂಲಕ ಸಿಎಂ ಯಡಿಯೂರಪ್ಪ ಕಳೆದ ಮೂರ್ನಾಲ್ಕು ದಿನಗಳಿಂದ ಬಿಡುವಿಲ್ಲದೆ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದು, ತಮ್ಮದೇ ಮುಖ್ಯಮಂತ್ರಿ ಕುರ್ಚಿಗೆ ಕುತ್ತು ಬಂದಾಗಲೂ ಕೂಡ ಯಡಿಯೂರಪ್ಪ, ತಮ್ಮ ವೈಯಕ್ತಿಕ ಅಧಿಕಾರ, ಹುದ್ದೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಸಂಕಷ್ಟದಲ್ಲಿರುವ ಜನರ ನಡುವೆ ಇದ್ದರು ಎಂದ ಪ್ರಬಲ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.

Also Read: BJP-RSS ನಾಯಕರುಣಿಸಿದ ಕಹಿಯುಂಡು ಅವರಿಗೆ ಸಿಹಿ ಬಡಿಸಿದ ಯಡಿಯೂರಪ್ಪ!
ಆ ಮೂಲಕ ಎಂಥ ಹೊತ್ತಿನಲ್ಲೂ ರಾಜ್ಯದ ಜನರ ಪರ ಕೆಲಸ ಮಾಡುತ್ತಿರುವ, ವೈಯಕ್ತಿಕ ಅಧಿಕಾರ, ಸ್ಥಾನಮಾನಗಳನ್ನು ಬದಿಗೊತ್ತಿ ಜನರ ಕಷ್ಟಸುಖಗಳಿಗೆ ಸ್ಪಂದಿಸುವ ಜನನಾಯಕ ಯಡಿಯೂರಪ್ಪ ಅವರನ್ನು ನಾಲ್ಕು ಮಂದಿ ಆರ್ ಎಸ್ ಎಸ್ ನವರ ಚಿತಾವಣೆಯಿಂದ, ರಾಜ್ಯದಲ್ಲಿ ಖಟ್ಟರ್ ಹಿಂದುತ್ವವಾದಿಗಳ ಜಂಗಲ್ ರಾಜ್ ಸೃಷ್ಟಿಸುವ ಉದ್ದೇಶದಿಂದ ಒಳ್ಳೆಯ ನಾಯಕನಿಂದ ಅಧಿಕಾರ ಕಿತ್ತುಕೊಳ್ಳಲಾಯಿತು ಎಂಬ ಬಿಜೆಪಿ ಹೈಕಮಾಂಡ್ ವಿರೋಧಿ ಚರ್ಚೆಗೆ ಚಾಲನೆ ನೀಡುವಲ್ಲಿ ಯಡಿಯೂರಪ್ಪ ಅವರ ಈ ವರಸೆಗಳು ಕೆಲಸ ಮಾಡಿವೆ.
Also Read: ಸಿಎಂ ಬಿ ಎಸ್ ವೈ ರಾಜಿನಾಮೆ ನೀಡಿದರೆ ವಲಸಿಗ ಸಚಿವರ ಸ್ಥಿತಿ ಅತಂತ್ರ?
ಈ ನಡುವೆ, ಮಠಾಧೀಶರು, ಧಾರ್ಮಿಕ ವ್ಯಕ್ತಿಗಳು, ಲಿಂಗಾಯತ ಸಮುದಾಯದ ಸಂಘಟನೆಗಳ ಪ್ರಮುಖರು ಮತ್ತು ಕಾಂಗ್ರೆಸ್ ಪಕ್ಷದ ಲಿಂಗಾಯತ ನಾಯಕರು ಹೀಗೆ ಬಿಜೆಪಿ ರಾಜ್ಯ ಘಟಕದ ಹೊರಗಿನ ವಲಯಗಳಿಂದ ವ್ಯಕ್ತವಾಗುತ್ತಿರುವ ಪ್ರತಿರೋಧ ಕೂಡ ಬಿಜೆಪಿಯ ದೆಹಲಿ ವರಿಷ್ಠರನ್ನು ಎದೆಗುಂದಿಸಿದೆ. ಪಕ್ಷದ ರಾಜ್ಯ ಘಟಕದಲ್ಲಿ ಬಹುತೇಕ ವರಿಷ್ಠರ ರಾಗಕ್ಕೆ ಸ್ವರ ಜೋಡಿಸುವ ವಿಧೇಯತೆ ಕಂಡುಬಂದಿದ್ದರೂ, ಪಕ್ಷದಾಚೆಯ ಈ ಪ್ರಭಾವಿ ವಲಯಗಳಲ್ಲಿ ಎದ್ದಿರುವ ಪ್ರತಿರೋಧದ ದನಿ ದೆಹಲಿ ವರಿಷ್ಠರಿಗೆ ಅನಿರೀಕ್ಷಿತವಾಗಿತ್ತು. ಅದರಲ್ಲೂ ಲಿಂಗಾಯತ ಸಮುದಾಯದ ಸಂಘಟನೆಗಳು ಮತ್ತು ಪ್ರತಿ ಪಕ್ಷ ಕಾಂಗ್ರೆಸ್ ಲಿಂಗಾಯತ ನಾಯಕರು ಯಡಿಯೂರಪ್ಪ ಅವರ ಬೆನ್ನಿಗೆ ನಿಂತು ಬಿಜೆಪಿಯನ್ನು ಲಿಂಗಾಯತ ವಿರೋಧಿ ಎಂಬಂತೆ ಬಿಂಬಿಸಲು ಯತ್ನಿಸುತ್ತಿರುವುದು ವರಿಷ್ಠರ ಪಾಲಿಗೆ ಗಂಟಲಿಗಿಳಿಯದ ಬಿಸಿ ತುಪ್ಪದಂತಾಗಿದೆ.
Also Read: ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಮಠೀಯ ವ್ಯವಸ್ಥೆಯ ಸವಾರಿ?
ಹಾಗಾಗಿಯೇ ಯಡಿಯೂರಪ್ಪ ನಿರೀಕ್ಷೆಯಂತೆ ಭಾನುವಾರ ದೆಹಲಿಯಿಂದ ಬರಬೇಕಿದ್ದ ಸಂದೇಶ ಬರದೇ ಹೋಗುವ ಸಾಧ್ಯತೆಗಳೇ ಹೆಚ್ಚಿವೆ. ಅದರಲ್ಲೂ ರಾಜ್ಯದಲ್ಲಿ ಭೀಕರ ಪ್ರವಾಹದ ಹೊತ್ತಲ್ಲಿ ಜನಪರ ಮುಖ್ಯಮಂತ್ರಿಯನ್ನು ಬದಲಾಯಿಸುವ ಮೂಲಕ ಬಿಜೆಪಿ ವರಿಷ್ಠರು ತಾವೆಷ್ಟು ಕರ್ನಾಟಕದ ಜನ ವಿರೋಧಿ ಮನೋಧೋರಣೆ ಹೊಂದಿದ್ದೇವೆ ಎಂಬುದನ್ನು ಮತ್ತೆ ಮತ್ತೆ ಸಾಬೀತು ಮಾಡಿದಂತಾಗುತ್ತದೆ. ಅದು ಪಕ್ಷದ ಮೇಲೆ ಖಂಡಿತವಾಗಿಯೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ಸದ್ಯಕ್ಕೆ ಆಷಾಢ ಕಳೆಯುವ ವರೆಗೆ ಮುಖ್ಯಮಂತ್ರಿ ಬದಲಾವಣೆ ವಿಷಯವನ್ನು ಬದಿಗೆ ಸರಿಸುವ ತೀರ್ಮಾನಕ್ಕೆ ಬಂದಿರುವ ಸಾಧ್ಯತೆ ಇದೆ ಎಂಬ ಮಾತೂ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.
Also Read: ಆಧ್ಯಾತ್ಮ ಮಠೋದ್ಯಮ ಮತ್ತು ಅಧಿಕಾರ ರಾಜಕಾರಣ
ಆದರೆ, ಸಿಎಂ ಯಡಿಯೂರಪ್ಪ ಮಾತ್ರ ಬೆಳಗಾವಿಯಲ್ಲಿ ಮಾತನಾಡುತ್ತಾ, ಇಂದು ಸಂಜೆಯೊಳಗೆ ಹೈಕಮಾಂಡ್ ನಿಂದ ಸಂದೇಶ ಬರುತ್ತದೆ. ಆದರೆ, ಆ ಸಂದೇಶ ಏನು ಎಂಬುದನ್ನು ನಾನು ಈಗ ಹೇಳಲಾಗದು. ಅದು ಬಂದ ಮೇಲೆ ನಿಮಗೂ ಅದೇನು ಎಂಬುದು ಗೊತ್ತಾಗಲಿದೆ ಎನ್ನುವ ಮೂಲಕ ಸಂದೇಶದ ಕುರಿತು ಕುತೂಹಲ ಮೂಡಿಸಿದ್ದಾರೆ. ಆದರೆ, ಸಿಎಂ ಹೇಳಿಕೆಯ ಬಳಿಕವೂ ಅಂತಹ ಸಂದೇಶ ಬರದೇ ಹೋದಲ್ಲಿ, ಅದು ಯಡಿಯೂರಪ್ಪ ಮತ್ತು ಬಿಜೆಪಿ ದೆಹಲಿ ವರಿಷ್ಠರ ನಡುವಿನ ಹಾವು ಏಣಿ ಆಟದ ಸದ್ಯದ ಫಲಿತಾಂಶವಾಗಿ ಕಾಣಲಿದೆ ಮತ್ತು ಅದು ಯಾರ ಮುಖಕ್ಕೆ ಮಸಿ ಬಳಿಯಲಿದೆ ಎಂಬುದು ಮುಂದಿನ ರಾಜ್ಯ ರಾಜಕೀಯದ ದಿಕ್ಕನ್ನು ನಿರ್ಧರಿಸಲಿದೆ ಎನ್ನಲಾಗುತ್ತಿದೆ!
Also Read: ರಾಜಿನಾಮೆ ಕುರಿತು ಬಹಿರಂಗವಾಗಿ ಮುಖ್ಯಮಂತ್ರಿಗಳೇ ಮಾತನಾಡಿದ್ದಾರೆ: ಸಚಿವ ಸಿ.ಪಿ.ಯೋಗೀಶ್ವರ್ ಮಾರ್ಮಿಕ ಹೇಳಿಕೆ
ಶುಕ್ರವಾರ ದಿಢೀರ್ ದೆಹಲಿಗೆ ಭೇಟಿ ನೀಡಿದ್ದ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಅವರಿಗೆ ಈ ಸೂಚನೆ ಸಿಕ್ಕ ಬೆನ್ನಲ್ಲೇ ಮುಖ್ಯಮಂತ್ರಿಗಳು ನೆರೆಪೀಡಿತ ಜಿಲ್ಲೆಗಳ ಪ್ರವಾಹ ಹಮ್ಮಿಕೊಂಡಿದ್ದಾರೆ. ಹಾಗಾಗಿ ಈ ಮೊದಲು ಸಿಎಂ ನಿರೀಕ್ಷಿಸಿದಂತೆ ಭಾನುವಾರ ದೆಹಲಿಯ ಕಡೆಯಿಂದ ಯಾವುದೇ ಸಂದೇಶ ಬರುವ ಸಾಧ್ಯತೆ ಇಲ್ಲ. ಬದಲಾಗಿ ಮಠಾಧೀಶರ ಸಮಾವೇಶದ ಮೂಲಕ ರಾಜ್ಯ ರಾಜಧಾನಿಯಿಂದಲೇ ದೆಹಲಿಗೆ ಪ್ರಬಲ ಸಂದೇಶವೊಂದು ರವಾನೆಯಾಗಲಿದೆ. ಆ ಬಳಿಕ ಬಿಜೆಪಿ ದೆಹಲಿ ವರಿಷ್ಠರ ತೀರ್ಮಾನ ಏನೆಂಬುದು ಈಗ ಉಳಿದಿರುವ ಕುತೂಹಲ ಎನ್ನಲಾಗುತ್ತಿದೆ.