ಬ್ರಿಟನ್ ನ ಲೀಸ್ಟರ್ ಶೈರ್ ಪಟ್ಟಣದಲ್ಲಿ ರವಿವಾರ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಮುಸ್ಲಿಂ ಬಾಹುಳ್ಯದ ಬೀದಿಯಲ್ಲಿ ಹಿಂದುತ್ವವಾದಿಗಳಿಂದ ದಿಢೀರ್ ರ್ಯಾಲಿ, ಜೈ ಶ್ರೀರಾಮ್ ಘೋಷಣೆಯು ಪ್ರದೇಶದ ಶಾಂತಿಯನ್ನು ಹಾಳುಗೆಡವಿದೆ. ಪ್ರಚೋದನಕಾರಿ ಘೋಷಣೆ ಬಳಿಕ ಅಲ್ಲಲ್ಲಿ ಹಿಂಸಾಚಾರ ವರದಿಯಾಗಿದ್ದು, ಪೊಲೀಸರ ಕೈ ಮೀರಿದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ.
ಆಗಸ್ಟ್ 28 ರ ಭಾರತ-ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ಬಳಿಕ ಸಂಘರ್ಷ
ಆಗಸ್ಟ್ 28 ರಂದು ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ನಂತರ ಎರಡು ಸಮುದಾಯಗಳ ನಡುವೆ ಉದ್ವಿಗ್ನತೆ ಪ್ರಾರಂಭವಾಗಿದೆ ಎಂದು ವರದಿಗಳು ಹೇಳಿವೆ. ಘಟನೆಯ ನಂತರದ ಬೆಳವಣಿಗೆಗಳನ್ನು ʼಗೊಂದಲಗಳ ಸರಣಿʼ ಎಂದು ಸ್ಥಳೀಯ ಪೊಲೀಸರು ಕರೆದಿದ್ದಾರೆ. ಇದುವರೆಗೂ 27 ಜನರನ್ನು ಬಂಧಿಸಲಾಗಿದೆ. ಶನಿವಾರ ಪೂರ್ವ ಲೀಸೆಸ್ಟರ್ ಪ್ರದೇಶದ ಕೆಲವು ಭಾಗಗಳಲ್ಲಿ ಏಕಾಏಕಿ ಅರಾಜಕತೆ ಕಂಡುಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವೀಡಿಯೊಗಳಲ್ಲಿ ಹಿಂಸಾತ್ಮಕ ಘಟನೆಗಳು ಸೆರೆಯಾಗಿವೆ.
ಕಳೆದೊಂದು ವಾರದಿಂದ ಪ್ರದೇಶದಲ್ಲಿ ಶಾಂತಿ ನೆಲೆಸಿತ್ತು. ಆದರೆ ಶನಿವಾರ ರಾತ್ರಿಯಿಂದ ಮತ್ತೆ ಉದ್ವಿಗ್ನತೆ ಸೃಷ್ಟಿಯಾಗಿದೆ, ಏಕಾಏಕಿ ಯುವಕರ ಗುಂಪೊಂದು ಮೆರವಣಿಗೆ ನಡೆಸಿದ್ದೇ ಪರಿಸ್ಥಿತಿ ಕೈ ಮೀರಲು ಕಾರಣ ಎಂದು ಪಟ್ಟಣ ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಶಾಂತಿಯನ್ನು ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಲೀಸೆಸ್ಟರ್ ಸಂಸದೆ ಕ್ಲೌಡಿಯಾ ವೆಬ್ ಅವರು ಪೊಲೀಸ್ ಸಲಹೆಯನ್ನು ಸ್ವೀಕರಿಸಲು ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು ಜನರನ್ನು ಒತ್ತಾಯಿಸಿದ್ದಾರೆ.
“ಆತ್ಮೀಯ ಲೀಸೆಸ್ಟರ್, ಇದು ಶಾಂತಚಿತ್ತ ಪಡೆಯಬೇಕಾದ ಸಮಯ. ಎಲ್ಲರೂ ಮನೆಗೆ ಹೋಗಬೇಕೆಂದು ನಾನು ಒತ್ತಾಯಿಸುತ್ತೇನೆ. ಸಮುದಾಯ ಸಂಬಂಧಗಳನ್ನು ಸುಧಾರಿಸಲು ನಾವು ನಮ್ಮ ಸಂವಾದವನ್ನು ಬಲಪಡಿಸಬಹುದು. ನಿಮ್ಮ ಕುಟುಂಬವು ನಿಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತದೆ, ದಯವಿಟ್ಟು ಪೋಲೀಸ್ ಸಲಹೆಯನ್ನು ಸ್ವೀಕರಿಸಿ. ಶಾಂತಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಜಗಳಗಳ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗೆ ಪತ್ರ ಬರೆದಿರುವ ಸಂಸದೆ, “ಲೀಸೆಸ್ಟರ್‌ನಲ್ಲಿ ನಾವು ದ್ವೇಷವನ್ನು ಪ್ರಚೋದಿಸದಂತೆ ಜಾಗರೂಕರಾಗಿರುತ್ತೇವೆ, ನಮ್ಮ ಸಮುದಾಯಗಳನ್ನು ಒಟ್ಟುಗೂಡಿಸಲು ಮತ್ತು ಜನಾಂಗ ಮತ್ತು ಧಾರ್ಮಿಕ ಹಿಂಸಾಚಾರವನ್ನು ಕೊನೆಗೊಳಿಸಲು ಶ್ರಮಿಸುತ್ತಿದ್ದೇವೆ. ಲೀಸೆಸ್ಟರ್ ಯುಕೆಯಲ್ಲಿನ ಅತ್ಯಂತ ವೈವಿಧ್ಯಮಯ ನಗರಗಳಲ್ಲಿ ಒಂದಾಗಿದೆ. ನಮ್ಮ ಏಕತೆಯೇ ನಮ್ಮ ಶಕ್ತಿ” ಎಂದು ಟ್ವೀಟ್ ಮಾಡಿ ಪತ್ರದ ಪ್ರತಿಯನ್ನು ಹಂಚಿಕೊಂಡಿದ್ದಾರೆ.
18 ಸೆಪ್ಟೆಂಬರ್ ವರೆಗೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಟ್ಟು 27 ಜನರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಸುದ್ದಿ ಔಟ್ಲೆಟ್ ಲೀಸೆಸ್ಟರ್ ಲೈವ್ ವರದಿ ಮಾಡಿದೆ, ಇದರ ಬಳಿಕ ಆ ಪ್ರದೇಶದಲ್ಲಿ ಪೊಲೀಸರು ಮತ್ತು ಸಮುದಾಯದ ಮುಖಂಡರ ನಡುವೆ ತುರ್ತು ಸಭೆ ನಡೆಸಲಾಗಿದ್ದು, ಉಭಯ ಸಮುದಾಯದ ಮುಖಂಡರು ಶಾಂತವಾಗಿರಲು ಹಾಗೂ ನೆರೆದಿದ್ದ ಜನರು ಮನೆಗೆ ಹೋಗಲು ಕರೆ ನೀಡಿದ್ದಾರೆ.