ಸರ್ಕಾರದ ವಿವಿಧ ಇಲಾಖೆಗಳಲ್ಲಿ ಜನರಿಗೆ ಉಪಯೋಗವಾಗುವ ಸಾಕಷ್ಟು ಯೋಜನೆಗಳಿವೆ. ಆದರೆ ಸಮನ್ವಯತೆ ಕೊರತೆಯಿಂದಾಗಿ ಸಾರ್ವಜನಿಕರಿಗೆ ಸೇವೆ ಸಿಗುತ್ತಿಲ್ಲ. ಅದಕ್ಕಾಗಿ ರಾಜ್ಯ ಸರ್ಕಾರ 14 ಇಲಾಖೆಗಳ ಸಮನ್ವಯತೆ ಸಾಧಿಸಲು ಐಸಿಸಿಸಿ ಸೆಂಟರ್ ಶುರುಮಾಡಿದೆ.
ಸರ್ಕಾರದ 14 ಇಲಾಖೆಗಳಿಂದ ಒಂದೇ ಸೂರಿನಡಿಯಲ್ಲಿ ಸೇವೆ
ರಾಜಧಾನಿಯ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಖರ್ಚು ಮಾಡಿದರೂ ಜನರಿಗೆ ಏನು ಉಪಯೋಗ ಆಗುತ್ತಿಲ್ಲ. ಇದಕ್ಕೆ ಮೂಲಕಾರಣ ಸಾರ್ವಜನಿಕರಿಗೆ ಸೇವೆ ನೀಡುವ ಸರ್ಕಾರದ ವಿವಿಧ ಇಲಾಖೆಗಳು, ಪ್ರಾಧಿಕಾರಗಳು ಮತ್ತು ಸಂಸ್ಥೆಗಳ ನಡುವಿನ ಸಮನ್ವಯ ಕೊರತೆ. ಹೀಗಾಗಿ, ಎಲ್ಲಾ ಸರ್ಕಾರಿ ಇಲಾಖೆಗಳನ್ನು ಒಂದೇ ವೇದಿಕೆಯಡಿ ತಂದು ಮೇಲ್ವಿಚಾರಣೆ ಮತ್ತು ನಿರ್ವಹಣೆ ಮಾಡಲು ಸರ್ಕಾರ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ವತಿಯಿಂದ ಒಟ್ಟು 40 ಕೋಟಿ ರೂ. ವೆಚ್ಚದಲ್ಲಿ 14 ಇಲಾಖೆಗಳ ಸೇವೆಯನ್ನು ಒಂದೇ ವೇದಿಕೆಯಲ್ಲಿ ತರಲು ಐಸಿಸಿಸಿ ಆರಂಭಕ್ಕೆ ಮುಂದಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಇದರ ನಿರ್ಮಾಣ ಕಾರ್ಯ ಆರಂಭಗೊಂಡು ಈಗ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಪ್ರಾಧಿಕಾರಗಳ ಸೇವೆ, ದೂರುಗಳ ಮೇಲ್ವಿಚಾರಣೆಗೆ ಎಂದೇ ನಿರ್ಮಿಸುತ್ತಿರುವ ಇಂಟಿಗ್ರೇಟೆಡ್ ಕಂಟ್ರೋಲ್ ಮತ್ತು ಕಮಾಂಡ್ ಸೆಂಟರ್ (ಐಸಿಸಿಸಿ) ಕೆಲಸ ಶೇ.95 ಪೂರ್ಣಗೊಂಡಿದ್ದು, ಅಕ್ಟೋಬರ್ನಲ್ಲಿ ಉದ್ಘಾಟನೆಯಾಗುವ ಸಾಧ್ಯತೆ ಇದೆ.
40 ಕೋಟಿ ವೆಚ್ಚದಲ್ಲಿ ನಿರ್ಮಿತವಾದ ಐಸಿಸಿಸಿ ಸೆಂಟರ್
ನಗರದಲ್ಲಿ ಸಾರ್ವಜನಿಕ ಸೇವೆ ನೀಡುವ ಸರ್ಕಾರಿ ಇಲಾಖೆ, ಸಂಸ್ಥೆ ಮತ್ತು ಪ್ರಾಧಿಕಾರಗಳಾದ ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಜಲಮಂಡಳಿ, ಬಿಎಂಟಿಸಿ, ಮೆಟ್ರೋ, ಬಿಟಿಪಿ, ಕೆಎಸ್ಪಿಸಿಬಿ, ಆರೋಗ್ಯ ಇಲಾಖೆ ಸೇರಿ 14 ಇಲಾಖೆಗಳ ಕಾರ್ಯವೈಖರಿ ಮೇಲೆ ನಿಗಾ ವಹಿಸಲಾಗುತ್ತದೆ. ಎಲ್ಲಾ ಇಲಾಖೆಗಳ ಚಟುವಟಿಕೆ, ಸೇವೆಗಳು, ನಿಯಮ ಪಾಲನೆ ಹಾಗೂ ಕೆಲವು ಇಲಾಖೆಗಳಲ್ಲಿ ಎದುರಾಗುವ ತುರ್ತು ಪರಿಸ್ಥಿತಿಗಳ ಬಗ್ಗೆ ಐಸಿಸಿಸಿಯಲ್ಲಿ ಮಾಹಿತಿ ಕ್ರೋಢೀಕರಣ ಆಗಲಿದೆ. ಒಂದು ವೇಳೆ ತುರ್ತು ಪರಿಸ್ಥಿತಿ ಕಂಡುಬಂದಲ್ಲಿ ಪರಿಹಾರಕ್ಕಾಗಿ ಕಾರ್ಯ ಪ್ರವೃತ್ತರಾಗುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಐಸಿಸಿಸಿ ಸಂದೇಶ ರವಾನಿಸುತ್ತದೆ. ವಿವಿಧ ಸರ್ಕಾರಿ ಇಲಾಖೆಗಳ ಜಾಲತಾಣ ಮತ್ತು ಅಪ್ಲಿಕೇಷನ್ಗಳಿಂದ ಸಿಗುವ ಮಾಹಿತಿಯನ್ನು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಮೂಲಕ ಸ್ವೀಕರಿಸಲಿದೆ.
ಐಸಿಸಿಸಿ ಕೇಂದ್ರದಲ್ಲಿ 25 ಕಂಪ್ಯೂಟರ್, ದೊಡ್ಡ ಸ್ಮಾರ್ಟ್ ಪರದೆ ಅಳವಡಿಸಲಾಗುತ್ತದೆ. ಎಲ್ಲ ಇಲಾಖೆಗಳ ಸಿಸಿ ಕ್ಯಾಮರಾ ದೃಶ್ಯಗಳನ್ನು ನೇರವಾಗಿ ವೀಕ್ಷಿಸಬಹುದು. ದಿನದ 24 ಗಂಟೆಯೂ ಕಾರ್ಯನಿರ್ವಹಣೆ ಮಾಡಲಿದ್ದು, 3 ಪಾಳಿಯಲ್ಲಿ ಸಿಬ್ಬಂದಿ ಕೆಲಸ ಮಾಲಿದ್ದಾರೆ. ಐಸಿಸಿಸಿ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ 10 ದಿನಗಳಲ್ಲಿ ಉದ್ಘಾಟನೆಗೆ ಸಿದ್ಧಗೊಳ್ಳಲಿದೆ. ನಂತರ, ಮುಖ್ಯಮಂತ್ರಿ ಅವರಿಂದ ಉದ್ಘಾಟಿಸಿ ನಿಗದಿತ ಸೇವಾ ಕಾರ್ಯ ಆರಂಭವಾಗಲಿದೆ. ಉದಾಹರಣೆಗೆ ಬಿಬಿಎಂಪಿಯ ಆಸ್ತಿ ತೆರಿಗೆ, ಜನನ ಮತ್ತು ಮರಣ ಪ್ರಮಾಣಪತ್ರ, ವ್ಯಾಪಾರ ಪರವಾನಗಿ, ಕಟ್ಟಡ ನಿರ್ಮಾಣ ಪರವಾನಗಿ, ವಿದ್ಯುತ್ ಚಿತಾಗಾರ ಮತ್ತು ಕುಂದುಕೊರತೆ ಸೇರಿ 7 ವಿಭಾಗಗಳ ಸೇವೆಗಳನ್ನು ನೀಡಲು ಏಕೀಕೃತ ನಾಗರಿಕ ಸಂಪರ್ಕ ಪೋರ್ಟಲ್ ಆರಂಭಿಸಲಾಗಿದೆ.
ಪಾಲಿಕೆಯ ಯುಸಿಸಿ ಪೋರ್ಟಲ್ ಮತ್ತು ಸಹಾಯ 2.0 ಆ್ಯಪ್ ಅನ್ನು ಐಸಿಸಿಸಿಗೆ ಜೋಡಣೆ ಮಾಡಲಾಗುತ್ತಿದ್ದು, ಜನರ ದೂರುಗಳನ್ನು ಹಿರಿಯ ಅಧಿಕಾರಿಗಳು ವೀಕ್ಷಿಸಿ ಪರಿಹರಿಸಲು ಸೂಚನೆ ನೀಡಲಿದ್ದಾರೆ. ಇದೇ ರೀತಿ 14 ಇಲಾಖೆಗಳಲ್ಲಿ ಸಾರ್ವಜನಿಕರು ದಾಖಲಿಸಿದ ದೂರುಗಳ ಪರಿಹಾರಕ್ಕೆ ಸೂಕ್ತ ವೇದಿಕೆಯಾಗಿದೆ.