ರಾಜ್ಯದ ಎರಡೂ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಬಂದಾಗಿದೆ. ಸಿಂದಗಿಯಲ್ಲಿ ಬಿಜೆಪಿಗೆ ಸಿಹಿಯಾಗಿದ್ರೆ, ಹಾನಗಲ್ನಲ್ಲಿ ಕಹಿಯ ಅನುಭವವಾಗಿದೆ. ಹೀಗಾಗಿ ಬಿಜೆಪಿ ಹೈ ಕಮಾಂಡ್ ಸೋಲು ಗೆಲುವಿನ ಪರಮಾರ್ಶೆ ಮಾಡಲು ಮುಂದಾಗಿದೆ. ಇದರ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಮತ್ತೆ ದೆಹಲಿ ದಂಡಯಾತ್ರೆಯ ಪ್ಲಾನ್ ಮಾಡಿದ್ದಾರೆ.
ಸಿಂದಗಿ, ಹಾನಗಲ್ ಮಿನಿ ಸಮರದಲ್ಲಿ ಮತದಾರ ಬಿಜೆಪಿಗೆ ಬೇವು-ಬೆಲ್ಲದ ರುಚಿಯನ್ನ ಉಣಬಡಿಸಿದ್ದಾನೆ. ಸಿಂದಗಿಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ರೂ, ಹಾನಗಲ್ ಸೋಲು ಸಿಎಂ ಬೊಮ್ಮಾಯಿಗೆ ವೈಯಕ್ತಿಕವಾಗಿ ಕಾಡುತ್ತಿದೆ. ತವರಲ್ಲೇ ತಮ್ಮ ಅಭ್ಯರ್ಥಿಯನ್ನ ಗೆಲ್ಲಿಸಿಕೊಳ್ಳೋಕೆ ಆಗ್ಲಿಲ್ವಾ ಎಂಬ ಚಿಂತೆಯಲ್ಲಿದ್ದಾರೆ. ಈ ಮಧ್ಯೆ ಬಿಜೆಪಿ ಹೈ ಕಮಾಂಡ್ ಸಿಂದಗಿ ಗೆಲುವು ಮತ್ತು ಹಾನಗಲ್ ಸೋಲಿನ ವರದಿ ನೀಡುವಂತೆ ರಾಜ್ಯ ನಾಯಕರನ್ನ ಕೇಳಿದೆ. ಜೊತೆಗೆ ಪಂಚ ಪ್ರಶ್ನೆಗಳನ್ನೂ ಮುಂದಿಟ್ಟಿದೆ.
ಉತ್ತರ ಕೊಡಿ ಎಂದ ಹೈಕಮಾಂಡ್
ಪ್ರಶ್ನೆ 1: ಸಿಎಂ ತವರು ಜಿಲ್ಲೆಯಲ್ಲಿ ಕಮಲ ಅರಳದಿರಲು ಕಾರಣವೇನು?
ಪ್ರಶ್ನೆ 2: ಸಚಿವದ್ವಯರ ತಂತ್ರವೂ ವರ್ಕ್ಔಟ್ ಆಗದೇ ಇರೋದೇಕೆ?
ಪ್ರಶ್ನೆ 3: 2023ಚುನಾವಣೆಯನ್ನ ಯಾವ ನಂಬಿಕೆ ಮೇಲೆ ಎದುರಿಸುವುದು?
ಪ್ರಶ್ನೆ 4: ಬೊಮ್ಮಾಯಿ ನೇತೃತ್ವ ಎಂದಿದ್ದೇ ಉಲ್ಟಾ ಹೊಡೆಯಲು ಕಾರಣವೇ?
ಪ್ರಶ್ನೆ 5: ಹಾನಗಲ್ನಲ್ಲಿ ಸೋಲಿಗೆ ಪ್ರಮುಖವಾಗಿ ಕಾರಣವಾಗಿದ್ದು ಏನು?
ಸಿಎಂ ತವರು ಜಿಲ್ಲೆಯಲ್ಲಿ ಕಮಲ ಅರಳದಿರಲು ಕಾರಣವೇನು? ಅಂತಾ ಚುನಾವಣಾ ಪ್ರಚಾರ ಮಾಡಿದ್ದ ನಾಯಕರನ್ನ ವರಿಷ್ಠರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಸಚಿವದ್ವಯರ ತಂತ್ರವೂ ವರ್ಕ್ಔಟ್ ಆಗದೇ ಇರೋದೇಕೆ ಕಾರಣವೇನು ಅಂತಾನೂ ಪ್ರಶ್ನಿಸಿದ್ದಾರಂತೆ. ಇನ್ನು 2023ಚುನಾವಣೆಯನ್ನ ಯಾವ ನಂಬಿಕೆ ಮೇಲೆ ನಾವು ಎದುರಿಸಬೇಕು? ಬೊಮ್ಮಾಯಿ ನೇತೃತ್ವ ಎಂದಿದ್ದೇ ಉಲ್ಟಾ ಹೊಡೆಯಲು ಕಾರಣವಾಯಿತಾ ಅಥವಾ ಹಾನಗಲ್ನಲ್ಲಿ ಸೋಲಿಗೆ ಪ್ರಮುಖವಾಗಿ ಕಾರಣವಾಗಿದ್ದು ಏನು? ಎಂಬ ಪ್ರಶ್ನೆಯನ್ನ ಹೈ ಕಮಾಂಡ್ ಕೇಳಿದ್ದು, ಇದಕ್ಕೆ ಉತ್ತರ ನೀಡಿ ಅಂತಾ ಕೇಳಿದೆ ಎನ್ನಲಾಗಿದೆ.
ಇನ್ನು ಉಪಚುನಾವಣೆ ಫಲಿತಾಂಶದ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿ ದಂಡಯಾತ್ರೆಯ ಪ್ಲಾನ್ ಮಾಡಿದ್ದಾರೆ. ನವೆಂಬರ್ 7 ಅಂದ್ರೆ ಇದೇ ಶನಿವಾರ ಸಿಎಂ ದೆಹಲಿಯ ಫ್ಲೈಟ್ ಏರಲಿದ್ದಾರೆ ಎಂದು ತಿಳಿದುಬಂದಿದೆ. ಈ ವೇಳೆ ಹೈಕಮಾಂಡ್ ನಾಯಕರ ಭೇಟಿಯಾಗಿ ಹಲವು ಮಹತ್ವ ವಿಚಾರಗಳ ಬಗ್ಗೆ ಚರ್ಚಿಸೋ ಸಾಧ್ಯತೆ ಇದೆ.
ದೆಹಲಿಯತ್ತ ಸಿಎಂ ಚಿತ್ತ
- ಬೈಎಲೆಕ್ಷನ್ ಮುಗಿದ ಬೆನ್ನಲ್ಲೇ ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ
- ನವೆಂಬರ್ 7ರ ಶನಿವಾರದಂದು ಬೊಮ್ಮಾಯಿ ದೆಹಲಿ ಪ್ರಯಾಣ
- ನವೆಂಬರ್ 7ಕ್ಕೆ ತಾರೀಖಿನಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ
- ಸಭೆಯಲ್ಲಿ ಮೋದಿ, ನಡ್ಡಾ, ಅಮಿತ್ ಶಾ ಸೇರಿದಂತೆ ಹಲವರು ಭಾಗಿ
- ಈ ಮೀಟಿಂಗ್ಗೆ ಆಗಮಿಸಲಿರೋ ಸಿಎಂ ಬಸವರಾಜ್ ಬೊಮ್ಮಾಯಿ
- ದೆಹಲಿ ಭೇಟಿಯ ಸಂದರ್ಭದಲ್ಲಿ ಉಪಚುನಾವಣೆ ಬಗ್ಗೆಯೂ ಚರ್ಚೆ
- ದೆಹಲಿ ನಾಯಕರ ಮುಂದೆ ಸೋಲು ಗೆಲುವಿನ ಲೆಕ್ಕಾಚಾರದ ಮಾತು
- ಖಾಲಿ ಇರುವ ಸಚಿವ ಸ್ಥಾನ ಭರ್ತಿ ಬಗ್ಗೆಯೂ ಪ್ರತ್ಯೇಕ ಚರ್ಚೆ ಸಾಧ್ಯತೆ
ರಾಜ್ಯದ ಎರಡು ಕ್ಷೇತ್ರಗಳ ಬೈಎಲೆಕ್ಷನ್ ಮುಗಿದ ಬೆನ್ನಲ್ಲೇ ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದಾರೆ. ನವೆಂಬರ್ 7ರ ಶನಿವಾರದಂದು ಬೊಮ್ಮಾಯಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇನ್ನು ನವೆಂಬರ್ 7ರಂದೇ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಇದ್ದು, ಈ ಸಭೆಯಲ್ಲಿ ಮೋದಿ, ನಡ್ಡಾ, ಅಮಿತ್ ಶಾ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.
ಈ ಮೀಟಿಂಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಆಗಮಿಸಲಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಉಪಚುನಾವಣೆಯ ಸೋಲು ಗೆಲುವಿನ ಲೆಕ್ಕಾಚಾರದ ಬಗ್ಗೆ ದೆಹಲಿ ನಾಯಕರ ಜೊತೆ ಮಾತನಾಡಲಿದ್ದಾರೆ ಎನ್ನಲಾಗಿದೆ. ಇನ್ನು ಪ್ರಮುಖವಾಗಿ ಖಾಲಿ ಇರುವ ಸಚಿವ ಸ್ಥಾನಗಳ ಭರ್ತಿಯ ಬಗ್ಗೆಯೂ ಸಿಎಂ ಪ್ರತ್ಯೇಕವಾಗಿ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಉಪಚುನಾವಣೆಯ ಸೋಲು ಗೆಲುವಿನ ಬಗ್ಗೆ ಸಿಎಂ ಮಾತನಾಡಿದ್ದಾರೆ. ಸೋಲಾಗಿರೋದರ ಬಗ್ಗೆ ವಿಮರ್ಶೆ ಮಾಡ್ತಾ ಇದ್ದೀವಿ. ಆದ್ರೆ ಇದು ಮುಂದಿನ ಸಾರ್ವತ್ರಿಕ ಚುನಾವಣೆಗೆ ಮಾರ್ಗಸೂಚಿಯಾಗಲ್ಲ ಅಂತಾ ಬೊಮ್ಮಾಯಿ ಹೇಳಿದ್ದಾರೆ.
ಉಪಚುನಾವಣೆಯ ಬಳಿಕ ಸೋಲು ಗೆಲುವಿನ ಪರಾಮರ್ಶೆಯಲ್ಲಿ ಪಕ್ಷಗಳು ತೊಡಗಿವೆ. ಜೊತೆಗೆ ಇದೇ ಫಲಿತಾಂಶದ ಆಧಾರದ ಮೇಲೆ 2023ರ ಚುನಾವಣೆಗೆ ತಂತ್ರಗಳನ್ನೂ ರೂಪಿಸುತ್ತಿವೆ. ಇದೇ ನಿಟ್ಟಿನಲ್ಲಿ ಬಿಜೆಪಿ ಹೈ ಕಮಾಂಡ್ ಮುಂದಡಿ ಇಟ್ಟಿರೋದು ಸದ್ಯದ ಸಂಗತಿ.