ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಸರ್ಕಾರಿ ಶಾಲೆ 77 ವರ್ಷಗಳ ನಂತರ ಮಾರಾಟಕ್ಕಿದೆ. ಸರ್ಕಾರಿ ಶಾಲೆಯನ್ನು ಮಾರ್ತಿರೋದು ಕಂದಾಯ ಇಲಾಖೆ. ಹೌದು, ಸರ್ಕಾರಿ ಶಾಲೆಯೊಂದನ್ನು ಮಾರಾಟಕ್ಕಿಟ್ಟು ಜನರ ಕೆಂಗಣ್ಣಿಗೆ ಸರ್ಕಾರ ಈಗ ಗುರಿಯಾಗಿದೆ.
ಸರ್ಕಾರಿ ಶಾಲೆಯನ್ನು ಮಾರಾಟಕ್ಕಿಟ್ಟ ಕಂದಾಯ ಇಲಾಖೆ
ಈ ಸರ್ಕಾರಿ ಶಾಲೆಯಲ್ಲಿ 100 ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಈ ಜಾಗ ಇರೋದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕೆ.ಆರ್ ಮಾರ್ಕೆಟ್ ರೋಡ್ ಸರ್ಕಲ್ ನಲ್ಲಿ. ಸದ್ಯ ಇದು ಈಗ ರಜತಾದ್ರಿ ಕಾಂಫ್ಲೆಕ್ಸ್ ಆಗಿದೆ. 1945ರಲ್ಲಿ ದಾನಿಗಳು ಈ ಜಾಗವನ್ನು ಶಾಲೆಗಾಗಿ ದಾನವಾಗಿ ಕೊಡ್ತಾರೆ. 1945ರಲ್ಲೇ ಸರ್ಕಾರಿ ಫ್ರೌಡಶಾಲೆಯನ್ನು ಆರಂಭಮಾಡಲಾಗುತ್ತೆ. 77 ವರ್ಷಗಳಷ್ಟು ಹಳೆಯದಾದ ಜಾಗ 13, 735 ಚದರಡಿ ವಿಸ್ತೀರ್ಣದಲ್ಲಿದ್ದು, ಸದ್ಯ ಇಲ್ಲಿ 1 ಚದರಡಿಗೆ 40 ಸಾವಿರ ಬೆಲೆ ಬಾಳುತ್ತಿದ್ದು, ಮಾರುಕಟ್ಟೆ ಮೌಲ್ಯ 50 ಕೋಟಿಗೂ ಹೆಚ್ಚು. ಇದೀಗ ಈ ಜಾಗವನ್ನು ಸರ್ಕಾರದ ಕಂದಾಯ ಇಲಾಖೆ ಮಾರಾಟಕ್ಕಿಟ್ಟಿದೆ ಯಾರು ಬೇಕಾದ್ರು ಕೊಳ್ಳಬಹುದು.
ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಶಾಲೆ 77 ವರ್ಷದ ನಂತರ ಸೇಲ್
1979 ರಲ್ಲಿ ರಜತಾ ಎಂಟರ್ ಪ್ರೈಸಸ್ ಶಿಥಿಲಾವಸ್ಥೆಯಲ್ಲಿದ್ದ ಶಾಲೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ಕಟ್ಟಲು ಸರ್ಕಾರದಿಂದ ಈ ಜಾಗವನ್ನು ಲೀಸ್ ಗೆ ಪಡೆದಿತ್ತು. ತಿಂಗಳಿಗೆ 16,350 ರೂ.ಗೆ 26 ವರ್ಷಕ್ಕೆ ಸರ್ಕಾರ ಲೀಸ್‌ಗೆ ಕೊಟ್ಟಿತ್ತು. 2005 ರಲ್ಲಿ ಗುತ್ತಿಗೆ ಅವದಿ ಮುಕ್ತಾಯವಾಗಿದ್ದರಿಂದ ಕೋರ್ಟ್ ಗುತ್ತಿಗೆಯನ್ನ ಕ್ಲೋಸ್ ಮಾಡಿದೆ. ಮತ್ತೆ 2011 ರಲ್ಲಿ ರಜತಾದ್ರಿ ಕಾಂಫ್ಲೆಕ್ಸ್ ಬಾಡಿಗೆದಾರರ ಕ್ಷೇಮಾಭಿವೃದ್ಧಿ ಸಂಘಕ್ಕೆ ತಿಂಗಳಿಗೆ 6.41 ಲಕ್ಷಕ್ಕೆ 10 ವರ್ಷ ಗುತ್ತಿಗೆ ನೀಡಲಾಯಿತು. 2021 ರ ಜೂನ್ ತಿಂಗಳಲ್ಲಿ ಈ ಗುತ್ತಿಗೆ ಅವಧಿಯೂ ಮುಕ್ತಾಯವಾಗಿದೆ. ಸರ್ಕಾರಿ ಶಾಲೆ 2 ನೇ ಫ್ಲೋರ್ ನಲ್ಲಿದ್ದು ಈ ಕಟ್ಟಡದಲ್ಲಿ 141 ಮಳಿಗೆಗಳಿವೆ. ಸರ್ಕಾರಿ ಶಾಲೆ ಜಾಗ ಎಂದು ಧೃಡೀಕರಿಸಲು ಇದ್ದ ದಾಖಲೆಗಳೇ ಸದ್ಯ ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಾಯವಾಗಿದೆ.

ಎಚ್ಚೆತ್ತ ಶಿಕ್ಷಣ ಇಲಾಖೆ ಶಾಲೆ ಮಾರುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟನೆ
ಈ ಬಗ್ಗೆ ಎಚ್ಚೆತ್ತ ಶಿಕ್ಷಣ ಇಲಾಖೆ ದಾನಿಗಳು ನೀಡಿದ ಜಾಗದ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಜಾಗ ಸರ್ಕಾರದ ವಶದಲ್ಲಿದೆ. ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತೆ. ಆ ಜಮೀನು ನಮ್ಮದೇ , ಜಾಗವನ್ನು ಶಿಕ್ಷಣ ಇಲಾಖೆಯ ಹೆಸರಿಗೆ ಖಾತೆ ಮಾಡಲು ಸೂಚಿಸಲಾಗಿದೆ. ಶಿಕ್ಷಣ ಇಲಾಖೆ ವತಿಯಿಂದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಯಾವುದೇ ಕಾರಣಕ್ಕೂ ಮಾರಲ್ಲ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿ ಸ್ಪಷ್ಟಪಡಿಸಿದೆ. ಸರ್ಕಾರಿ ಅಧಿಕಾರಿಗಳ ನಿರ್ಲಕ್ಷದಿಂದ ಸ್ವಾತಂತ್ರ್ಯ ಪೂರ್ವದ ಶಾಲೆ ಖಾಸಗಿಯವರ ಪಾಲಾಗುತ್ತಿತ್ತು. ಇದೀಗ ಶಿಕ್ಷಣ ಇಲಾಖೆ ಎಚ್ಚೆತ್ತು ಉಳಿಸಲು ಮುಂದಾಗಿದೆ.